ಇಂತಹದೊಂದು ಪ್ರಶ್ನೆ ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್ ಪಾಳಯದಲ್ಲಿ ಕೇಳಿ ಬರೋದಕ್ಕೆ ಪ್ರಾರಂಭವಾಗಿದೆ. ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಲೋಕಸಭೆ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಈಗಾಗ್ಲೆ ಚಿಕ್ಕಬಳ್ಳಾಪುರದಲ್ಲಿ ಕಾರ್ಯ ಪ್ರರಾಂಭ ಮಾಡಿದ್ದಾರೆ. ಇದಕ್ಕಾಗಿ ಹೊಸದಾಗಿ ಕಚೇರಿ ಕೂಡ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಈಗ ಕಾಂಗ್ರೆಸ್ನ ಮಗದೊಬ್ಬ ಟಿಕೆಟ್ ಆಕಾಂಕ್ಷಿ ಹಾಗೂ ಎಐಸಿಸಿ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಆಗಿರುವ ರಕ್ಷಾ ರಾಮಯ್ಯ ಕೂಡ ಚಿಕ್ಕಬಳ್ಳಾಪುರದಲ್ಲಿ ಕಚೇರಿ ಆರಂಭಿಸಲು ಮುಂದಾಗಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರುತ್ತಿವೆ.
ಕೇವಲ ಕಚೇರಿಯಷ್ಟೇ ಅಲ್ಲ ಲೋಕಸಭೆ ಚುನಾವಣೆಯನ್ನ ದೃಷ್ಟಿಯಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೂ ಹೆಜ್ಜೆ ಇಡಲು ಈ ಇಬ್ಬರು ನಾಯಕರು ಮುಂದಾಗಿದ್ದಾರೆ. ಇದೇ ಕಾರಣದಿಂದಾಗಿ ರಕ್ಷಾ ರಾಮಯ್ಯ ಆಷಾಢ ಕಳೆದ ನಂತರದಲ್ಲಿ ಚಿಕ್ಕಬಳ್ಳಾಪುರದಲ್ಲಿ ನೂತನ ಜನಸಂಪರ್ಕ ಕಚೇರಿ ಆರಂಭಿಸಲು ಎಲ್ಲಾ ರೀತಿಯಾದ ತಯಾರಿಗಳನ್ನ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಇನ್ನು ಈ ಹಿಂದಿನ ವಿಧಾನಸಭೆ ಚುನಾವಣೆ ಸಮಯದಲ್ಲಿಯೇ ರಕ್ಷಾ ರಾಮಯ್ಯಗೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಯುವ ಕಾಂಗ್ರೆಸ್ ಉಸ್ತುವಾರಿ ನೀಡಲಾಗಿತ್ತು. ರಕ್ಷಾ ಅವರ ಪ್ರಬಲವಾದ ರಾಜಕೀಯದ ನಿಲುವುಗಳು ಪಕ್ಷಕ್ಕೆ ಲಾಭ ತಂದುಕೊಡುತ್ತಿವೆ ಎಂಬ ಮಾತುಗಳು ಪಕ್ಷದ ಒಳಗೆ ಕೇಳಿ ಬರುತ್ತಿವೆ.
ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು ಎಂಟೂ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನ ಗೆಲ್ಲಿಸೋದಕ್ಕೆ ಹಲವು ರಣತಂತ್ರಗಳನ್ನ ಹೂಡಿದ್ದರ ಜೊತೆಗೆ, ವಿಶೇಷವಾಗಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನ ವಹಿಸಿದ್ದಾರೆ ಹೀಗಾಗಿ ಅವರ ಜನಪ್ರಿಯತೆ ಕೂಡ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ತಕ್ಕ ಮಟ್ಟಿಗೆ ಇದೆ.

ಈ ಹಿಂದೆ ಅಂದ್ರೆ 2009ರ ಲೋಕಸಭಾ ಚುನಾವಣೆಯಲ್ಲಿ ಎಂ.ಆರ್.ಸೀತಾರಾಂ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಪಕ್ಷದ ಒಳ ರಾಜಕೀಯದಿಂದಾಗಿ ಎಂ.ವೀರಪ್ಪ ಮೊಯಿಲಿ ಅಖಾಡಕ್ಕೆ ಇಳಿದಿದ್ರು, ಇದಾದ ಬಳಿಕ ಎರಡು ಬಾರಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ವೀರಪ್ಪ ಮೊಯಿಲಿ, 2019ರ ಚುನಾವಣೆಯಲ್ಲಿ ಸೋಲು ಅನುಭವಿಸುವ ಮೂಲಕ ಆಘಾತವನ್ನ ಎದುರಿಸಿದ್ದರು
ಎಂ.ಆರ್.ಸೀತಾರಾಂ ಅವರು ತಮ್ಮ ಪುತ್ರ ರಕ್ಷಾ ರಾಮಯ್ಯಗೆ ಲೋಕಸಭೆ ಟಿಕೆಟ್ ನೀಡುವಂತೆ ವರಿಷ್ಠರ ಬಳಿ ಪಟ್ಟು ಹಿಡಿಯುವ ಸಾಧ್ಯತೆ ಹೆಚ್ಚಿದೆ. ಅದರಲ್ಲೂ ಈ ಹಿಂದೆ 2009ರಲ್ಲಿ ಟಿಕೆಟ್ನಿಂದ ಎಂ.ಆರ್ ಸೀತಾರಾಂ ಅವರು ಟಿಕೆಟ್ನಿಂದ ವಂಚಿತರಾಗಿದ್ರು, ಜೊತೆಗೆ, 2019ರಲ್ಲಿ ವೀರಪ್ಪ ಮೊಯಿಲಿ ಅವರ ಹೀನಾಯ ಸೋಲು ಕೂಡ ರಕ್ಷಾ ರಾಮಯ್ಯ ಅವರಿಗೆ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆ ಕೂಡ ಇದೆ.
ಇನ್ನು ಈ ಹಿಂದಿನಿಂದಲೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೇಲೆ ಎಂ.ಆರ್.ಸೀತಾರಾಂ ದೃಷ್ಟಿ ನೆಟ್ಟಿದ್ದಾರೆ. ಈ ಬಾರಿ ಪುತ್ರನಿಗೆ ಟಿಕೆಟ್ ಕೇಳುವುದು ಖಚಿತವಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ ಎನಿಸಿರುವ ವೀರಪ್ಪ ಮೊಯಿಲಿ ಅವರಿಗೆ ಸೆಡ್ಡು ಹೊಡೆಯುವ ಸಾಧ್ಯತೆ ದಟ್ಟವಾಗಿದೆ. ಕಾಂಗ್ರೆಸ್ ಟಿಕೆಟ್ಗೆ ಪೈಪೋಟಿ ಎದುರಾಗುವ ಸಾಧ್ಯತೆಯೂ ಇದೆ. ಒಂದು ವೇಳೆ ಈ ಬಾರಿ ರಕ್ಷಾ ರಾಮಯ್ಯ ಅವರಿಗೆ ಕಾಂಗ್ರೆಸ್ ಟಿಕೆಟ್ ಕೊಡದೆ ಹೋದರೆ ಬಂಡಾಯ ಏಳುವ ಸಾಧ್ಯತೆ ಕೂಡ ಇದೆ ಹೀಗಾಗಿ ಕಾಂಗ್ರೆಸ್ನ ನಾಯಕರು ಇದನ್ನ ಯಾವ ರೀತಿಯಲ್ಲಿ ನಿಭಾಯಿಸಲಿದ್ದಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.
ಇನ್ನು ಒಂದು ಹಂತದಲ್ಲಿ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವಿ ನಾಯಕ ಎಂದು ವೀರಪ್ಪ ಮೊಯಿಲಿ ಕರೆಯಿಸಿಕೊಂಡಿದ್ದರು, ಆದ್ರೆ ಅವರ ಈ ಹಿಂದಿನ ಸೋಲು ಅವರಿಗೆ ಕಂಟಕವಾಗುವ ಸಾಧ್ಯತೆ ಕೂಡ ಇದೆ. ಜೊತೆಗೆ ಇತ್ತೀಚೆಗೆ ಪಕ್ಷದ ಚಟುವಟಿಕೆಗಳಲ್ಲಿ ಕೂಡ ಮುಂಚುಣಿಯಲ್ಲಿ ಕಾಣಿಸಿಕೊಳ್ಳುತ್ತಿರುವುದು ತೀರ ಕಡಿಮೆಯಾಗಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದೆ ಇದ್ದಂತಹ ವರ್ಚಸ್ಸು ಈಗ ವೀರಪ್ಪ ಮೊಯಿಲಿಗೆ ಇಲ್ಲ ಎಂದು ಕೆಲ ಮುಖಂಡರುಗಳೇ ಹೇಳುತ್ತಿದ್ದಾರೆ. ಹೀಗಾಗಿ ಈ ಬಾರಿ ವೀರಪ್ಪ ಮೊಯಿಲಿ ಒಂದಷ್ಟು ಸಂಕಷ್ಟಕ್ಕೆ ಸಿಲುಕಿಕೊಳ್ಳುವುದರಲ್ಲಿ ಯಾವುದೇ ರೀತಿಯಾದ ಅನುಮಾನವಿಲ್ಲ.