ರಾಜ್ಯಸಭಾ ಚುನಾವಣೆಗೆ ಇನ್ನೂ ಒಂದು ವಾರ ಬಾಕಿ ಇರುವಾಗಲೇ ರಾಜಕೀಯ ಗರಿಗೆದರಿದೆ. ಸಾಮರ್ಥ್ಯಕ್ಕೆ ತಕ್ಕಂತೆ ಸುಲಭವಾಗಿ ಗೆಲ್ಲುವ ಅಭ್ಯರ್ಥಿಗಳ ಜೊತೆ ಹೆಚ್ಚುವರಿ ಒಂದು ಸ್ಥಾನದ ಮೇಲೆ ರಾಷ್ಟ್ರೀಯ ಪಕ್ಷಗಳು ಕಣ್ಣು ಹಾಕಿರುವುದರಿಂದ ಹಗ್ಗಜಗ್ಗಾಟ ಶುರುವಾಗಿದೆ.
ರಾಜ್ಯಸಭಾ ಚುನಾವಣೆಗೆ ಈಗಾಗಲೇ 122 ಮತಗಳನ್ನು ಹೊಂದಿರುವ ಬಿಜೆಪಿ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್, ನಟ ಜಗ್ಗೇಶ್ ಅಲ್ಲದೇ ಲೆಹರ್ ಸಿಂಗ್ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ಜೈರಾಮ್ ರಮೇಶ್ ಮತ್ತು ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಿಳಸಿದರೆ ಜೆಡಿಎಸ್ ಕುಪ್ಪೆಂದ್ರ ರೆಡ್ಡಿ ಅವರನ್ನು ಅಖಾಡಕ್ಕಿಳಿಸಿದೆ.
ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳು ಬೇಕಾಗಿವೆ. ಬಿಜೆಪಿ ಬಳಿ ಎರಡು ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡ ನಂತರ 32 ಹೆಚ್ಚುವರಿ ಮತಗಳನ್ನು ಹೊಂದಿದೆ. ಕಾಂಗ್ರೆಸ್ ಒಬ್ಬ ಅಭ್ಯರ್ಥಿ ಗೆದ್ದ ನಂತರ 25 ಮತಗಳನ್ನು ಹೆಚ್ಚುವರಿಯಾಗಿ ಹೊಂದಿದೆ. ಜೆಡಿಎಸ್ ಕಣಕ್ಕಿಳಿಸಿರುವ ಒಬ್ಬ ಅಭ್ಯರ್ಥಿ ಗೆಲುವಿಗೆ ಬೇಕಾದ 45 ಮತಗಳನ್ನೂ ಹೊಂದಿಲ್ಲ. 32 ಮತಗಳನ್ನು ಹೊಂದಿದ್ದರೂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಬೆಂಬಲದೊಂದಿಗೆ ಗೆಲ್ಲುವ ಕಸರತ್ತು ಆರಂಭಿಸಿದೆ.
ಜೆಡಿಎಸ್ ಕುಪ್ಪೆಂದ್ರ ರೆಡ್ಡಿ ಗೆಲುವಿಗಾಗಿ ಕಾಂಗ್ರೆಸ್ ಬೆಂಬಲ ಪಡೆಯಲು ಕಸರತ್ತು ನಡೆಸಿದೆ. ಆದರೆ ಕಾಂಗ್ರೆಸ್ ತನ್ನ ಎರಡನೇ ಅಭ್ಯರ್ಥಿ ಗೆಲುವಿಗೆ ತಂತ್ರಗಾರಿಕೆ ಹೆಣೆಯುತ್ತಿದ್ದರೆ, ಬಿಜೆಪಿ ಈ ಎರಡೂ ಪಕ್ಷಗಳ ಮತದಾರರನ್ನು ಸೆಳೆದು ಅಡ್ಡಮತದಾನದ ಲಾಭದೊಂದಿಗೆ ಮೂರನೇ ಅಭ್ಯರ್ಥಿಯನ್ನೂ ಗೆಲ್ಲಿಸಿಕೊಳ್ಳಲು ತೆರೆಮರೆಯ ಕಸರತ್ತು ನಡೆಸಿದೆ.
ಒಂದು ಕಡೆ ಜೆಡಿಎಸ್ ಮತ್ತು ಕಾಂಗ್ರೆಸ್ ಪರಸ್ಪರ ಆರೋಪ- ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದರೂ ಚುನಾವಣೆ ಬಂದಾಗ ಕೋಮುವಾದಿ ಪಕ್ಷ ಬಿಜೆಪಿಯನ್ನು ಹೊರಗಿಡಲು ಕೈ ಜೋಡಿಸಲು ಮುಂದಾಗುತ್ತಿವೆ. ಈ ಬಾರಿ ರಾಜ್ಯಸಭೆ ಚುನಾವಣೆಯಲ್ಲೂ ಈ ತಂತ್ರಗಾರಿಕೆ ಕೈ ಹಿಡಿಯುತ್ತಾ ಎಂಬುದು ಕುತೂಹಲ ಮೂಡಿಸಿದೆ.
ಮತ್ತೊಂದೆಡೆ ಮುಂಬವರು ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಗೆ ಆಪರೇಷನ್ ಕಮಲ ಆರಂಭಿಸಿರುವ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನ ಮತಗಳನ್ನು ಸೆಳೆಯಲು ಪ್ರಯತ್ನಿಸುತ್ತಿದ್ದು, ಮೂರನೇ ಅಭ್ಯರ್ಥಿಯೂ ಗೆದ್ದೇ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸುತ್ತಿದೆ.
ಅಖಾಡಕ್ಕಿಳಿದ ಮಲ್ಲಿಕಾರ್ಜುನ ಖರ್ಗೆ!
ಈ ಬಾರಿ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ರಾಜ್ಯಸಭಾ ಚುನಾವಣೆಯ ಹೊಣೆ ಹೊರುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ರಾಜ್ಯ ರಾಜಕಾರಣದಿಂದ ದೂರ ಸರಿದಿದ್ದ ಮಲ್ಲಿಕಾರ್ಜುನ ಖರ್ಗೆ ಅಖಾಡಕ್ಕೆ ಇಳಿಯುತ್ತಿದ್ದಂತೆ ಚುನಾವಣೆ ಮತ್ತಷ್ಟು ರಂಗುಪಡೆದಿದೆ.
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮಲ್ಲಿಕಾರ್ಜುನ ಖರ್ಗೆ ಮುತುವರ್ಜಿ ವಹಿಸಿರುವುದರಿಂದ ಹಿಂದೆ ಕಾರಣ ನಿಗೂಢವಾಗಿದೆ. ಸಾಮಾನ್ಯವಾಗಿ ಚುನಾವಣೆ ಹಿಂದಿನ ದಿನ ವಿಪ್ ಜಾರಿ ಮಾಡಲಾಗುತ್ತದೆ. ಆದರೆ ಕಾಂಗ್ರೆಸ್ ೭ ದಿನ ಮುಂಚಿತವಾಗಿ ವಿಪ್ ಜಾರಿ ಮತ್ತಷ್ಟು ಅಚ್ಚರಿ ಮೂಡಿಸಿದೆ.
ಒಂದು ಸ್ಥಾನದ ಮೇಲೆ ದೇವೇಗೌಡರ ಕಣ್ಣು!
ಪದೇಪದೇ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೆಲಸ ಮಾಡಿಸಿಕೊಳ್ಳುವ ಜೊತೆಗೆ ಹೊಗುಳುತ್ತಿರುವ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಚುನಾವಣೆ ಬಂದಾಗ ಸೋನಿಯಾ ಗಾಂಧಿಗೆ ಕರೆ ಮಾಡಿ ಓಲೈಸುವ ಪ್ರಯತ್ನ ಮಾಡುವುದು ಹೊಸದೇನಲ್ಲ. ಅದೇ ತಂತ್ರವನ್ನು ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲೂ ಪ್ರಯೋಗಿಸಿದ್ದಾರೆ.
ವಿಶೇಷ ಅಂದರೆ ರಾಜ್ಯಸಭಾ ಚುನಾವಣೆ ಹತ್ತಿರದಲ್ಲಿರುವಾಗ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿದೇಶ ಪ್ರವಾಸದಲ್ಲಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅದರಲ್ಲೂ ಸಿದ್ದರಾಮಯ್ಯ ವಿರುದ್ಧ ಟ್ವೀಟರ್ ನಲ್ಲಿ ಏಕವಚನದಲ್ಲಿ ನಿಂದಿಸಿದ್ದ ಕುಮಾರಸ್ವಾಮಿ ವಿದೇಶಕ್ಕೆ ಹಾರಿದರೆ, ಇತ್ತ ಜೆಡಿಎಸ್ ಮುಖಂಡರು ಸಿದ್ದರಾಮಯ್ಯ ಮನೆಗೆ ಹೋಗಿ ಅವರ ಕಾಲಿಗೆ ಬಿದ್ದಿದ್ದು ಮತ್ತಷ್ಟು ಅಚ್ಚರಿ ಮೂಡಿಸಿದೆ.
ಇಬ್ಬರ ಜಗಳ ಮೂರನೇಯವನಿಗೆ ಲಾಭ ಎಂಬ ಮಾತಿದೆ. ಆದರೆ ಮೂವರ ನಡುವಿನ ಜಗಳದಲ್ಲಿ ಯಾರಿಗೆ ಲಾಭ ಎಂಬುದು ರಾಜ್ಯಸಭಾ ಚುನಾವಣೆಯ ಫಲಿತಾಂಶ ಅವಲಂಬಿಸಿದೆ. ಈ ಚುನಾವಣೆಯಿಂದ ವೈಯಕ್ತಿಕವಾಗಿ ಯಾವ ಪಕ್ಷಕ್ಕೂ ಲಾಭವಿಲ್ಲದೇ ಇದ್ದರೂ ರಾಜ್ಯಸಭೆಯಲ್ಲಿ ತಮ್ಮ ಪ್ರಾತಿನಿಧ್ಯ ಹೆಚ್ಚಿಸಿಕೊಳ್ಳಲು ತಂತ್ರಗಾರಿಕೆಯಲ್ಲಿ ಮೂರು ಪಕ್ಷಗಳು ತೊಡಗಿರುವುದು ಜನರಿಗೆ ಮನರಂಜನೆ ನೀಡುತ್ತಿದೆ.