ಬಿಬಿಎಂಪಿ ಹಾಗೂ ಕಂದಾಯ ಇಲಾಖೆಯವರು ಪಾಲಿಸಿರೋದು ದ್ವಂದ್ವ ನೀತಿ ಅನ್ನೋದು ಮೊದಲಿನಿಂದಲೂ ಗೊತ್ತಿರೋ ಸತ್ಯವೇ. ಆದ್ರೆ ಇತ್ತೀಚಿಗಂತೂ ಸಾಕ್ಷಿ ಸಮೇತ ಅವರ ದ್ವಂದ್ವ ನಿಲುವು ಸಾಬೀತಾಗ್ತಿವೆ. ಇದಕ್ಕೆ ಹೊಸ ನಿದರ್ಶನ ಅಂದ್ರೆ, ಮಹದೇವಪುರದಲ್ಲಿರೋ ರೈನ್‌ಬೋ ಡ್ರೈವ್ ಒತ್ತುವರಿ ವಿಚಾರ.
ಕೆಟ್ಟ ಮೇಲೆ ಬುದ್ದಿ ಕಲಿತ ರೈನ್‌ಬೋ ಡ್ರೈವ್ !!
ಸೆಪ್ಟೆಂಬರ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ಮಹದೇವಪುರದ ರೈನ್‌ಬೋ ಡ್ರೈವ್ ಅಕ್ಷರಶಃ ಈಜುಕೊಳವಾಗಿತ್ತು. 3 ರಿಂದ 4 ಅಡಿ ನೀರು ಈ ಲೇಔಟ್‌ನಲ್ಲಿ ನಿಲ್ಲೋದಕ್ಕೆ ರಾಜಕಾಲುವೆ ಒತ್ತುವರಿಯೇ ಕಾರಣ ಅನ್ನೋದು ಸರ್ವೇಯಲ್ಲೂ ಸಾಬೀತಾಗಿತ್ತು. ಸುಮಾರು 30 ಅಡಿಯ ರಾಜಕಾಲುವೆಯನ್ನು ಕೇವಲ 3 ಅಡಿಗೆ ಇಳಿಸಲಾಗಿತ್ತು. ಉಳಿದ ಜಾಗವನ್ನು ಕಬಳಿಸಿಕೊಂಡು ತನ್ನ ಅನುಕೂಲಕ್ಕೆ ಲೇಔಟ್ ರೆಡಿಮಾಡಿಕೊಳ್ಳಲಾಗಿತ್ತು. ಅಕ್ರಮವಾಗಿ ಒತ್ತುವರಿ ಮಾಡಲಾಗಿರುವ ಜಾಗವನ್ನು ತೆರವು ಮಾಡುವ ವಿಚಾರವಾಗಿ ರೈನ್‌ಬೋ ಡ್ರೈವ್‌ಗೆ ನೊಟೀಸ್ ನೀಡಿದ್ದ ಕಂದಾಯ ಇಲಾಖೆಯ ಗಡುವು ನಿನ್ನೆಗೆ ಅಂತ್ಯವಾಗಿದೆ.
ಇಂದು ತೆರವು ಮಾಡಬೇಕಿದ್ದ ಸರ್ಕಾರಿ ಇಲಾಖೆಗಳು ಗಪ್‌ಚುಪ್ ಆಗಿದೆ. ಯಾಕಂದ್ರೆ ತಮ್ಮ ಸ್ವಂತ ಹಣದಲ್ಲೇ ನಾವೇ ತೆರವನ್ನು ಮಾಡಿಕೊಳ್ತೇವೆ. ಒತ್ತುವರಿಯಾಗಿರೋ ರಾಜಕಾಲವೆಯನ್ನು ನಾವೇ ಸರಿಪಡಿಸಿಕೊಳ್ತೇವೆ. ಬಿಬಿಎಂಪಿ ಹಾಗು ಕಂದಾಯ ಇಲಾಖೆಯ ನಿಯಮಗಳನ್ನು ಪಾಲಿಸುತ್ತೇವೆ ಅಂತ ರೈನ್‌ಬೋ ಡ್ರೈವ್ ನಿವಾಸಿಗಳು ಮನವಿ ಮಾಡಿದ್ರಂತೆ. ಇನ್ನು, ಇದು ಕಾನೂನಾತ್ಮಕವಾಗಿ ಸಾಧ್ಯವೇ ಅಂತ ನೊಟೀಸ್ ಜಾರಿಗೊಳಿಸಿದ್ದ ತಹಶೀಲ್ದಾರ್‌ರನ್ನು ಪ್ರಶ್ನಿಸಿದ್ರೆ ಅವರು ಹೇಳೋದು ಹೀಗೆ.

ಕಂದಾಯ ಇಲಾಖೆ ನೋಟಿಸ್ ನಾಟಕಕ್ಕೆ ಹೊಸ ತಿರುವು!
ಸೆಪ್ಟೆಂಬರ್ 12ರಂದು ಒಂದು ವಾರದ ಗಡುವು ಕೊಟ್ಟು ನೊಟೀಸ್ ಜಾರಿಗೊಳಿಸಲಾಗಿತ್ತು. ನಿನ್ನೆಗೆ ಅಂದ್ರೆ ಸೆಪ್ಟೆಂಬರ್ 18ಕ್ಕೆ ಗಡುವು ಮುಗಿದಿತ್ತು. ಇನ್ನೂ ಯಾಕೆ ತೆರವು ಮಾಡಿಲ್ಲ ಅಂತ ಬೆಂಗಳೂರು ಪೂರ್ವ ತಾಲೂಕಿನ ತಹಶೀಲ್ದಾರ್ ಅಜಿತ್ ರೈರನ್ನು ಪ್ರಶ್ನಿಸಿದ್ರೆ, ಕೇಸ್ ಈಗ ಕೋರ್ಟ್ ಮೆಟ್ಟಿಲೇರಿದೆ. ನಾವು ನಮ್ಮ ಕೆಲಸ ಮಾಡೋದು ಗೊತ್ತಿದೆ. ನೀವು ಆತಂಕಕ್ಕೆ ಒಳಗಾಗಬೇಡಿ ಅಂತ ಮಾಧ್ಯಮಗಳ ಮುಂದೆ ಹೀರೋಯಿಸಂ ಪ್ರದರ್ಶಿಸಿದ್ರು.
ಒಪ್ಪಂದವೇ? ಒತ್ತಡವೇ? ಅಥವಾ ಲೆಕ್ಕಾಚಾರವೇ?
ಬಡವರ ಮನೆಗಳನ್ನು ಮುಲಾಜಿಲ್ಲದೇ ಕೆಡವೋ ಅಧಿಕಾರಿಗಳು, ಶ್ರೀಮಂತರ ಹಾಗೂ ಪ್ರಭಾವಿಗಳ ವಿಚಾರಕ್ಕೆ ಬಂದಾಗ ಮಾತ್ರ 10 ಹೆಜ್ಜೆ ಹಿಂದೆಯೇ ಇರ್ತಾರೆ. ಒಂದು ಶ್ರೀಮಂತರ ಒತ್ತಡ ಇರಬಹುದು ಅಥವಾ ಒಪ್ಪಂದ ಆಗಿರಬಹುದು ಅನ್ನೋ ಸಾರ್ವಜನಿಕರ ಅಭಿಪ್ರಾಯ ಅಕ್ಷರಶಃ ನಿಜ ಎನಿಸುವಂತೆ ವರ್ತಿಸುತ್ತಿದ್ದಾರೆ ಈಗ.