ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆ ಆಗ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ 5 ದಿನಗಳಿಂದ ನಿರಂತರ ಮಳೆ ಬೀಳುತ್ತಿದ್ದು, ಇಷ್ಟು ದಿನ ಸೂರ್ಯನ ತಾಪದಿಂದ ಬಸವಳಿದಿದ್ದ ಜನರು ಹಾಗು ಪ್ರವಾಸಿಗರು ಸಂತಸಗೊಂಡಿದ್ದಾರೆ. ತಲಕಾವೇರಿಯ ಭಾಗಮಂಡಲ ಸೇರಿದಂತೆ ಜಿಲ್ಲೆಯಾದ್ಯಂತ ಮಳೆ ಬೀಳುತ್ತಿದ್ದು, KRS ಡ್ಯಾಂಗೂ ನೀರು ಹರಿದು ಬರುವ ನಿರೀಕ್ಷೆ ಮೂಡಿಸಿದೆ. ಪ್ರವಾಸಿಗರು ಮಳೆಯಲ್ಲಿ ಕುಣೀದು ಎಂಜಾಯ್ ಮಾಡ್ತಿದ್ದಾರೆ. ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ ಮಳೆ 20.15 ಮಿ.ಮೀ. ಮಳೆಯಾಗಿದೆ.
ಮಲೆನಾಡು ಶಿವಮೊಗ್ಗದಲ್ಲೂ ಧಾರಾಕಾರ ಮಳೆಗೆ ಮಲೆನಾಡ ಜನಜೀವನ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ, ರಿಪ್ಪನ್‌ಪೇಟೆ ವ್ಯಾಪ್ತಿಯಲ್ಲಿ ಭಾರಿ ಮಳೆ ಆಗ್ತಿದೆ. ನಿನ್ನೆ ರಾತ್ರಿ ಒಂದು ಗಂಟೆಗಳಿಗೂ ಹೆಚ್ಚು ಕಾಲ ಮಳೆ ಅಬ್ಬರಿಸಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ಮನೆಯಿಂದ ಹೊರಬರಲಾಗದ ಪರಿಸ್ಥಿತಿ ನಿರ್ಮಾಣ ಆಗಿದೆ. ಗುಡುಗು, ಸಿಡಿಲ ಆರ್ಭಟದೊಂದಿಗೆ ಭಾರಿ ವರ್ಷಧಾರೆ ಆಗಿದೆ. ಭಾರಿ ಮಳೆಗೆ ಸಿಲುಕಿದ ವಾಹನ ಸವಾರರ ಪರದಾಡಿದ್ದಾರೆ. ನಿರಂತರ ಮಳೆಯಿಂದ ವಿದ್ಯುತ್ ಸಂಪರ್ಕ ಕೂಡ ಸ್ಥಗಿತಗೊಂಡಿದೆ.
ಮೈಸೂರಲ್ಲಿ ಬಿಸಿಲಿನ ಬೇಗೆಗೆ ತಂಪೆರೆದಿದ್ದಾನೆ ಮಳೆರಾಯ. ಮುಸ್ಸಂಜೆ ವೇಳೆಗೆ ಶುರುವಾದ ಜಿಟಿ ಜಿಟಿ ಮಳೆ ಕೆಲವು ಗಂಟೆಗಳ ಕಾಲ ಸುರಿದ ಮಳೆ ಜನರಿಗೆ ಖುಷಿ ತಂದಿದೆ. ಇನ್ನು ಚಾಮರಾಜನಗರ ಜಿಲ್ಲೆಯಲ್ಲೂ ಮಳೆಯಾಗ್ತಿದ್ದು, ಗುಂಡ್ಲುಪೇಟೆ ಭಾಗದ ಹಲವೆಡೆ ಭಾರೀ ಮಳೆಯಾಗಿದೆ. ಮಳೆ ನೀರು ಜಮೀನುಗಳಿಗೆ ನುಗ್ಗಿದ ಪರಿಣಾಮ ಗುಂಡ್ಲುಪೇಟೆ ತಾಲೂಕಿನ ವಿವಿಧೆಡೆ ಈರುಳ್ಳಿ, ಅರಿಶಿನ ಬೆಳೆ ನಾಶವಾಗಿದೆ. ಮಳೆ ಬಂದಿದ್ರಿಂದ ಒಂದೆಡೆ ರೈತರಿಗೆ ಖುಷಿ ಆಗಿದ್ರೆ, ಮತ್ತೊಂದೆಡೆ ರೈತರಲ್ಲಿ ಕಣ್ಣೀರು ತರಿಸಿದ್ದಾನೆ ಮಳೆರಾಯ.
ತುಮಕೂರಿನಲ್ಲಿ ಧಾರಾಕಾರ ಮಳೆ ಆಗಿದೆ. ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ನಿಟ್ಟೂರು, ಸೇರಿದಂತೆ ಹಲವು ಕಡೆಗಳಲ್ಲಿ ಧಾರಾಕಾರ ಮಳೆಯಾಗಿದೆ. ಮಳೆಗೆ ಸಿಲುಕಿ ವಾಹನ ಸವಾರರು ಪರದಾಡಿದ್ದಾರೆ. ಭಾರೀ ಮಳೆಯಿಂದ ರೈತರಲ್ಲಿ ಮೊಗದಲ್ಲಿ ಮಂದಹಾಸ ಮೂಡಿದೆ. ಅತ್ತ ಕೋಟೆನಾಡು ಚಿತ್ರದುರ್ಗದಲ್ಲಿ ವರುಣನ ಆರ್ಭಟ ಜೋರಾಗಿದೆ. ಬಿಸಿಲ ತಾಪದಲ್ಲಿ ಬೆಂದಿದ್ದ ಭೂಮಿಗೆ ತಂಪೆರೆದಿದ್ದಾನೆ ಮಳೆರಾಯ. ಭಾರಿ ಮಳೆಯಿಂದ ತುಂಬಿ ಹರಿದಿವೆ ರಸ್ತೆ, ಚರಂಡಿಗಳು.