ಮಹತ್ವಾಕಾಂಕ್ಷೆಯ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಮಳೆ ನಿಂತ ಮೇಲೆ ಪ್ರಾರಂಭಿಸಲಾಗುವುದು. ಶೀಘ್ರದಲ್ಲೇ ಕಾರ್ಯಕ್ರಮದ ದಿನಾಂಕ ನಿಗದಿ ಮಾಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದ್ದಾರೆ.
ಜೆಪಿ ನಗರದ ತಮ್ಮ ನಿವಾಸಲ್ಲಿ ಪತ್ನಿ ಹಾಗೂ ಶಾಸಕಿ ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ, ಸೊಸೆ ಹಾಗೂ ಮೊಮ್ಮಗನ ಜೊತೆ ಗಣೇಶನ ಪೂಜೆ ನೆರವೇರಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಳೆ ನಿಂತ ಮೇಲೆ ಸರಿಯಾದ ಮೂಹೂರ್ತ ನಿಗದಿ ಮಾಡಿ ಪಂಚರತ್ನ ಕಾರ್ಯಕ್ರಮ ಪ್ರಾರಂಭ ಮಾಡುತ್ತೇವೆ ಎಂದು ತಿಳಿಸಿದರು.
ಮುಂದಿನ ತಿಂಗಳು ಪಿತೃಪಕ್ಷ, ದಸರಾ ಇದೆ. ಒಮ್ಮೆ ಪ್ರಾರಂಭ ಮಾಡಿದರೆ 120-130 ಕ್ಷೇತ್ರದಲ್ಲಿ ಮಾಡುತ್ತೇವೆ. ಹೀಗಾಗಿ ಸರಿಯಾದ ಸಮಯ ನೋಡಿಕೊಂಡು ಪ್ರಾರಂಭಿಸುವುದಾಗಿ ಹೇಳಿದ ಅವರು, ಪ್ರವಾಸದ ವೇಳೆ ಗ್ರಾಮ ವಾಸ್ತವ್ಯ ಮಾಡುತ್ತೇನೆ. ಅಲ್ಲದೆ ಗ್ರಾಮ ವಾಸ್ತವ್ಯದಲ್ಲಿ 14-15 ಕಾರ್ಯಕ್ರಮಗಳು ಇರಲಿವೆ ಎಂದರು.
ರಾಮನಗರ ಮಳೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ ಅವರು, ಮುಖ್ಯಮಂತ್ರಿಗಳು ರಾಮನಗರಕ್ಕೆ ಭೇಟಿ ನೀಡಿದ್ದರು. ಅವರಿಗೆ ನಿಜವಾದ ಸಮಸ್ಯೆ ಅರಿವಾಗಿದೆ. ಎಲ್ಲವನ್ನು ಅರಿತಿದ್ದಾರೆ. ಎನ್ ಡಿ ಆರ್ ಎಫ್ ನಿಯಮದಂತೆ ಪರಿಹಾರ ಕೊಟ್ಟರೆ ಅಲ್ಲಿ ಸಮಸ್ಯೆ ಪರಿಹಾರ ಆಗುವುದಿಲ್ಲ. ಹೀಗಾಗಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲು ಮನವಿ ಮಾಡಿದ್ದೇನೆ ಎಂದು ಹೇಳಿದರು.
ರೇಷ್ಮೆ ನೂಲು ಸರ್ವ ನಾಶ ಆಗಿದೆ. ಮೂಲಭೂತ ಸೌಕರ್ಯಗಳು ಹಾಳಾಗಿವೆ, ಮನೆಗಳು ಬಿದ್ದಿವೆ. ಅದಕ್ಕೆ ದೊಡ್ಡ ಪರಿಹಾರ ಕೊಡಬೇಕಾಗಿದೆ. ಸಿಎಂ ಪರಿಹಾರ ಕೊಡುವ ಭರವಸೆ ನೀಡಿದ್ದಾರೆ. ಆದಷ್ಟು ಬೇಗ ಪರಿಹಾರ ಕೊಡಬೇಕು. ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಅವರು ಸರಕಾರವನ್ನು ಒತ್ತಾಯಿಸಿದರು.
ಹಬ್ಬದ ಸಂದರ್ಭದಲ್ಲಿ ನಾಡಿಗೆ ಬಂದಿರುವ ದೊಡ್ಡಮಟ್ಟದ ಆಪತ್ತಿನಿಂದ. ದೊಡ್ಡಮಟ್ಟದ ಅನಾಹುತಗಳಾಗಿವೆ. ಮತ್ತೊಂದೆಡೆ ಸಮಾಜದಲ್ಲಿ ಸಂಘರ್ಷ ವಾತಾವರಣ ಉಂಟು ಮಾಡಲು ಕೆಲ ಶಕ್ತಿಗಳು ಪ್ರಯತ್ನ ಮಾಡುತ್ತಿರುವುದು ಕಂಡಿದ್ದೇವೆ. ಈ ಎರಡು ವಿಚಾರದಲ್ಲಿ ಭಗವಂತ ಸಮಾಜದಲ್ಲಿ ಶಾಂತಿ ನೆಲಿಸುವ ರೀತಿಯಲ್ಲಿ ಗಣೇಶನ ಅನುಗ್ರಹ ದೊರಕಲಿ ಎಂದು ಅವರು ಪ್ರಾರ್ಥಿಸಿದರು.