ಬೆಂಗಳೂರು: ರಾಜ್ಯದ ಮಲೆನಾಡು, ಉತರ ಒಳನಾಡು ಸೇರಿದಂತೆ ಕೆಲವೆಡೆ ಗುಡುಗು- ಸಿಡಿಲಿನ ಭರ್ಜರಿ ಮಳೆಯಾಗುತ್ತಿದೆ. ಪರಿಣಾಮ ಸಿಡಿಲಿಗೆ ಇಬ್ಬರು ಬಲಿಯಾಗಿರುವ ಘಟನೆ ನಡೆದಿದೆ.
ಬೀದರ್ ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿದ್ದಾರೆ. ಬೀದರ್ ತಾಲೂಕಿನ ಬರೂರ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಮಹಿಳೆ ಪುಷ್ಪಲತಾ ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮಳೆಯಿಂದ ರಕ್ಷಿಸಿಕೊಳ್ಳಲು ಮರದಡಿ ಕುಳಿತ ಸಂದರ್ಭದಲ್ಲಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಶಿವಮೊಗ್ಗ ತಾಲೂಕಿನ ಹರಮಘಟ್ಟ ಗ್ರಾಮದಲ್ಲಿ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಈ ವೇಳೆ ಸಿಡಿಲು ಬಡಿದು ರಾಕೇಶ್ ಎಂಬ ಯುವಕ ಸಾವನ್ನಪ್ಪಿದ್ದಾರೆ. ಇವರು ತೋಟದಲ್ಲಿ ಕೆಲಸ ಮುಗಿಸಿಕೊಂಡು ಮರಳಿ ಹೋಗುತ್ತಿದ್ದರು ಎನ್ನಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅಲ್ಲದೇ, ರಾಜ್ಯದ ಹಲವೆಡೆ ಮುಂದಿನ 3 ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಕೊಡಗು, ಚಿತ್ರದುರ್ಗ, ಹಾಸನ, ರಾಯಚೂರು ಜಿಲ್ಲೆಗಳಲ್ಲಿ ಕೂಡ ವ್ಯಾಪಕ ಮಳೆಯಾಗಿದೆ.
ಬೆಂಗಳೂರಿನಲ್ಲಿ ಕೂಡ ಶುಕ್ರವಾರ ಮಳೆಯಾಗಿದೆ. ಕೆಂಗೇರಿ, ದೊಡ್ಡಬಳ್ಳಾಪುರ, ನೆಲಮಂಗಲ ಸೇರಿದಂತೆ ಸುತ್ತಮುತ್ತ ಪ್ರದೇಶದಲ್ಲಿ ಮಳೆಯಾಗಿದೆ. ಹಲವೆಡೆ ಜನ- ಜೀವನ ಅಸ್ತವ್ಯಸ್ಥವಾಗಿದೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೂ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದ್ದರಿಂದಾಗಿ ಜನರು ಎಚ್ಚರಿಕೆಯಿಂದರಬೇಕಾಗಿದೆ.