ಬೆಂಗಳೂರು: ರಾಜ್ಯಕ್ಕೆ ಮಳೆರಾಯ ಎಂಟ್ರಿ ಕೊಟ್ಟಿದ್ದಾನೆ. ಹಲವೆಡೆ ಭರ್ಜರಿಯಾಗಿ ಮಳೆಯಾಗುತ್ತಿದ್ದು, ಹವಾಮಾನ ಇಲಾಖೆ ಇಂದು ಹಾಗೂ ನಾಳೆ ಕೂಡ ವ್ಯಾಪಕ ಮಳೆಯಾಗುವ ಕುರಿತು ಮುನ್ಸೂಚನೆ ನೀಡಿದೆ.
![](https://pratidhvani.com/wp-content/uploads/2024/04/rain-weather.webp)
ಶನಿವಾರ ಸುರಿದ ಭಾರೀ ಮಳೆಗೆ ರಾಜ್ಯದಲ್ಲಿ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ ಸಿಡಿಲಿಗೆ ಬಾಲಕ ಸಾವನ್ನಪ್ಪಿದ್ದರೆ, ವಿಜಯನಗರದಲ್ಲಿ ಮನೆ ಮೇಲ್ಛಾವಣಿ ಕುಸಿದು ಮಹಿಳೆ ಸಾವನ್ನಪ್ಪಿದ್ದಾರೆ. ಇಂದು ಕೂಡ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಕರಾವಳಿಯ ಎಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಭಾಗಕ್ಕೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
![](https://pratidhvani.com/wp-content/uploads/2024/04/karnatakarain-2-1713583040.webp)
ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅಲ್ಲದೇ, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ತುಮಕೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಮಂಡ್ಯ, ಮೈಸೂರು, ಕೋಲಾರ, ರಾಮನಗರ, ವಿಜಯನಗರ ಜಿಲ್ಲೆಗಳಿಗೆ ಕೂಡ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ. ಈ ಪ್ರದೇಶಗಳಲ್ಲಿ ಗುಡುಗು- ಸಿಡಿಲಿನ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ.