ಎಡಗೈಯಲ್ಲಿ ಕೊಟ್ಟಂತೆ ಮಾಡಿ, ಬಲಗೈಯಲ್ಲಿ ಕಿತ್ತುಕೊಳ್ಳುವ ಆಡಳಿತ ವ್ಯವಸ್ಥೆಯ ಧೋರಣೆ ಕೃಷಿಕರ ವಿಷಯದಲ್ಲಂತೂ ಮತ್ತೆ ಮತ್ತೆ ಬಯಲಾಗುತ್ತಲೇ ಇದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಎಂದು ಕೆಲವು ರೈತರ ಖಾತೆಗೆ ಕಂತಿನ ಮೇಲೆ ಆರು ಸಾವಿರ ರೂಪಾಯಿಯಷ್ಟು ಬಿಡಿಗಾಸು ವರ್ಗಾವಣೆ ಮಾಡಿ, ಅವರ ಲಕ್ಷಾಂತರ ರೂಪಾಯಿ ನಷ್ಟವನ್ನು ನಾಜೂಕಾಗಿ ಮರೆಮಾಚುವ ಸರ್ಕಾರದ ಹುನ್ನಾರಗಳಿಗೆ ಈ ಬಾರಿಯ ಕೊಯ್ಲು ಹಂಗಾಮಿನ ಅಕಾಲಿಕ ಮಳೆ ಬಯಲು ಮಾಡಿದೆ.
ಕೃಷಿ ಮತ್ತು ರೈತಾಪಿ ಬದುಕಿನ ತಳಮಟ್ಟದ ಜ್ಞಾನವೇ ಇಲ್ಲದೆ ಎಸಿ ಕಚೇರಿಗಳಲ್ಲಿ ಕೂತು ಅಧಿಕಾರಶಾಹಿ ರೂಪಿಸುವ ನೀತಿ-ನಿಯಮಗಳು ಹೇಗೆ ರೈತರ ತಲೆಯ ಮೇಲೆ ಚಪ್ಪಡಿ ಎಳೆಯುತ್ತಿವೆ ಎಂಬುದಕ್ಕೆ ಮಳೆ ಹಾನಿ ಪರಿಹಾರದ ಕುರಿತು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ(ಎನ್ ಡಿಆರ್ ಎಫ್) ಮತ್ತು ರಾಜ್ಯ ವಿಪತ್ತು ಪರಿಹಾರ ನಿಧಿ(ಎಸ್ ಡಿಆರ್ ಎಫ್) ಹೊಂದಿರುವ ಮೂರ್ಖತನದ ನಿಯಮಾವಳಿಗಳೇ ನಿದರ್ಶನ.
ಬೆಳೆ ಪರಿಹಾರ ಮಾನದಂಡಗಳ ಪ್ರಕಾರ, ಯಾವುದೇ ಬೆಳೆ ಶೇ.33ಕ್ಕಿಂತ ಅಧಿಕ ಪ್ರಮಾಣದಲ್ಲಿ ನಾಶವಾಗಿದ್ದರೆ, ಆಗ ಆ ಬೆಳೆಗೆ ಮಳೆಯಾಶ್ರಿತ ವಾರ್ಷಿಕ ಬೆಳೆಗೆ ರೂ.6,800 ಮತ್ತು ನೀರಾವರಿ ವಾರ್ಷಿಕ ಬೆಳೆಗೆ13,500 ಪರಿಹಾರ ನೀಡಲು ಅವಕಾಶವಿದೆ. ಬಹುವಾರ್ಷಿಕ ಬೆಳೆಗೆ 18,000 ರೂ. ಪರಿಹಾರ ನಿಗದಿ ಮಾಡಲಾಗಿದೆ. ಇದು ಪ್ರತಿ ಹೆಕ್ಟೇರಿಗೆ ನಿಗದಿ ಮಾಡಿರುವ ಪರಿಹಾರ ಎಂಬುದು ರೈತರ ಶ್ರಮ ಮತ್ತು ಬೆಳೆಗೆ ಹಾಕುವ ಬಂಡವಾಳವನ್ನು ಸರ್ಕಾರ ಎಷ್ಟು ನಿಕೃಷ್ಟವಾಗಿ ಕಾಣುತ್ತದೆ ಎಂಬುದಕ್ಕೆ ಸಾಕ್ಷಿ. ಒಂದು ಹೆಕ್ಟೇರ್ ಪ್ರದೇಶದಲ್ಲಿ ರೋಗರುಜಿನ ಬರದೇ ಹೋದಲ್ಲಿ, ಮಳೆ ಸಕಾಲಿಕವಾಗಿ ಬಿದ್ದಲ್ಲಿ, ಒಬ್ಬ ರೈತ ಬೆಳೆಯಬಹುದಾದ ಕನಿಷ್ಟ 30 ಕ್ವಿಂಟಾಲ್ ಭತ್ತಕ್ಕೆ ಇವತ್ತಿನ ದರದಲ್ಲಿ 60 ಸಾವಿರ ರೂಪಾಯಿ ಆದಾಯ ಗಳಿಸಬಹುದು. ಆದರೆ, ಅದೇ ಬೆಳೆ ಮಳೆಯಿಂದಾಗಿ ಸಂಪೂರ್ಣ ಹಾನಿಯಾದಲ್ಲಿ ಆತನಿಗೆ ಸಿಗುವುದು ಸರ್ಕಾರದಿಂದ ಕೇವಲ 6 ಸಾವಿರ ರೂಪಾಯಿ ಬಿಡಿಗಾಸಿನ ಪರಿಹಾರ! ಆ ಆರು ಸಾವಿರ ರೂಪಾಯಿ ಆತನ ಒಂದು ದಿನದ ನಾಟಿಯ ಹೂಟಿಯ ಕರ್ಚು ಕೂಡ ನೀಗಿಸಲಾರದು!
ಪರಿಹಾರ ಮೊತ್ತ ನಿಗದಿಯ ವಿಷಯದಲ್ಲಿ ಇಂತಹ ಹೇಯ ಅನ್ಯಾಯ ಒಂದು ಕಡೆಯಾದರೆ, ಮತ್ತೊಂದು ಕಡೆ ಯಾವ ಸ್ವರೂಪದ ಹಾನಿಗೆ ಪರಿಹಾರ ನೀಡಬಹುದು ಎಂಬ ಕುರಿತ ಮಾರ್ಗಸೂಚಿಯ ನಿಬಂಧನೆಗಳು ಖಡಾಖಂಡಿತವಾಗಿ ರೈತ ವಿರೋಧಿ ಧೋರಣೆಗೆ ಕಟುಸಾಕ್ಷಿಗಳಾಗಿವೆ. ಈ ಬಾರಿಯ ಸುಗ್ಗಿ ಶುರುವಾತಿನ ನಿರಂತರ ಚಂಡಮಾರುತಗಳು ಭತ್ತ, ಮೆಕ್ಕೆಜೋಳ, ಬಿಳಿಜೋಳ, ರಾಗಿ, ಸೂರ್ಯಕಾಂತಿ, ಶೇಂಗಾ ಮುಂತಾದ ಹಲವು ಮುಂಗಾರು ಬೆಳೆಗಳನ್ನು ಮಣ್ಣುಪಾಲು ಮಾಡಿದೆ. ಆ ಪೈಕಿ ಬಹುತೇಕ ಬೆಳೆ ಹೊಲದಲ್ಲಿ ಕೊಯ್ಲು ಮಾಡಿ ಮಾಗಲು ಹಾಕಿದ ಮೇಲೆ ನೀರು ನಿಂತು ಕೊಳೆತುಹೋಗಿದ್ದರೆ, ಮತ್ತಷ್ಟು ಕಣದಲ್ಲಿ ತಂದು ರಾಶಿ ಮಾಡಿದ ಮೇಲೆ ಕೊಳೆತು, ಮುಗ್ಗಲು ಬಂದು ನಾಶವಾಗಿದೆ.
ಆದರೆ, ಇಂತಹ ಹೊತ್ತಲ್ಲಿ ವರ್ಷದ ದುಡಿಮೆ ಕಳೆದುಕೊಂಡು ಕಂಗೆಟ್ಟಿರುವ ರೈತರ ನೆರವಿಗೆ ಧಾವಿಸಬೇಕಾದ ಕೇಂದ್ರ ಮತ್ತು ರಾಜ್ಯದ ವಿಪತ್ತು ಪರಿಹಾರ ನಿಧಿಗಳು, ನಿಯಮಗಳ ಕೊಕ್ಕೆ ಹಾಕಿ ಅವರನ್ನು ವಂಚಿಸುತ್ತಿವೆ. ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಮಾನದಂಡಗಳಪ್ರಕಾರ, ಹೊಲದಲ್ಲಿ ಇರುವ ಬೆಳೆ ನಾಶವಾದಲ್ಲಿ ಮಾತ್ರ ನಿಗದಿತ ಪರಿಹಾರ ನೀಡಲು ಅವಕಾಶವಿದೆಯೇ ವಿನಃ, ಒಮ್ಮೆ ಹೊಲದ ಬೆಳೆಯಲ್ಲಿ ಕೊಯ್ಲು ಮಾಡಿದ ಬಳಿಕ ಅದನ್ನು ಕಣಕ್ಕೆ ಅಥವಾ ಮನೆಗೆ ಸಾಗಿಸಿದ ಮೇಲೆ ಹಾನಿಯಾದಲ್ಲಿ ಅದಕ್ಕೆ ಬಿಡಿಗಾಸಿನ ಪರಿಹಾರ ನೀಡಲೂ ಅವಕಾಶವಿಲ್ಲ!
ರಾಜ್ಯದಾದ್ಯಂತ ಎಡಬಿಡದೆ ಸುರಿದ ಮಳೆಯಿಂದಾಗಿ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರಮಾಣದಲ್ಲಿ ಸುಮಾರು 25 ಲಕ್ಷ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೊಯ್ಲಿಗೆ ಬಂದಿದ್ದ ಬೆಳೆ ನಾಶವಾಗಿದೆ. ಭತ್ತ, ಜೋಳ, ರಾಗಿ, ಸೂರ್ಯಕಾಂತಿ, ಕಡಲೆ, ಶೇಂಗಾ ಸೇರಿದಂತೆ ಹತ್ತಾರು ಆಹಾರ ಮತ್ತು ಎಣ್ಣೆಕಾಳು ಬೆಳೆಗಳು, ಅಡಿಕೆ, ಶುಂಠಿಯಂತಹ ವಾಣಿಜ್ಯ ಬೆಳೆಗಳು ನಾಶವಾಗಿವೆ. ಆ ಪೈಕಿ ಬಹುತೇಕ ಬೆಳೆ ನಾಶವಾಗಿರುವುದು ಕೊಯ್ಲಿನ ನಂತರ, ಹೊಲದಲ್ಲಿ ಮಾಗಲು ಬಿಟ್ಟಾಗ, ಇಲ್ಲವೇ ಕಣದಲ್ಲಿ ರಾಶಿ ಮಾಡಿರುವಾಗ.
ಇಂತಹ ಪರಿಸ್ಥಿತಿಯಲ್ಲಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ ರೈತರಿಗೆ ಕೃಷಿ ಇಲಾಖೆ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಇಷ್ಟು ದಿನ ಬುಟ್ಟಿಯಲ್ಲಿದ್ದ ಈ ರೈತ ವಿರೋಧಿ ಮಾನದಂಡದ ಹಾವು ಬಿಟ್ಟು ಬೆಚ್ಚಿಬೀಳಿಸಿದ್ದಾರೆ.
ಸರ್ಕಾರದ ಇಂತಹ ಮೂರ್ಖತನದ ನಿಯಮಾವಳಿ ಕುರಿತು ಗ್ರಾಮೀಣ ಕೃಷಿ ಮತ್ತು ಜನಜೀವನ ಪರಿಣಿತ, ಚಿಂತಕ ಸುರೇಶ್ ಕಂಜರ್ಪಣೆ, “ಸರ್ಕಾರದ ಪರಿಹಾರ ಮಾನದಂಡದಲ್ಲಿ ಕಟಾವಾದ ಬೆಳೆಗೆ ಪರಿಹಾರ ಕೊಡುವ ನಿಯಮವಿಲ್ಲವಂತೆ. ಈ ಅಧಿಕಾರಿ/ ವಿಜ್ಞಾನಿ ವರ್ಗ ಎಂಥಾ ಮೂರ್ಖ, ದುಷ್ಟರೆಂದರೆ ಅವರಿಗೆ ಈ ಕಟಾವು ಮಾಡಿ ಹೊಲದಲ್ಲಿ ಮಾಗಲು ಬಿಡುವ ಕೃಷಿ ಸಂಪ್ರದಾಯದ ಅರಿವೇ ಇಲ್ಲ. ಕಟಾವು ಮಾಡಿ ಹಾಗೇ ಮಾಗಲು ಬಿಟ್ಟಾಗ ಕಾಂಡದ ಅಷ್ಟಿಷ್ಟು ಪೋಶಕಾಂಶ ಧಾನ್ಯವನ್ನು ಗಟ್ಟಿಗೊಳಿಸಿ ಪೋಶಕಾಂಶವನ್ನು ಸಾಂದ್ರೀಕರಿಸಲು ನೆರವಾಗುತ್ತದೆ. ಕಾಳು ಮಾಗುವ ಪ್ರಕ್ರಿಯೆ ಇದು. ಇಂಥಾ ಧಾನ್ಯ ಉತ್ಕೃಷ್ಟ. ಆಧುನಿಕ ಹಾರ್ವೆಸ್ಟರುಗಳು ಕಟಾವು ಮಾಡಿ ತಕ್ಷಣ ಹುಲ್ಲು, ಧಾನ್ಯ ಬೇರ್ಪಡಿಸಿ ರಾಶಿ ಹಾಕುತ್ತವೆ. ಆದರೆ ಈ ಧಾನ್ಯಗಳ ಪೋಶಕಾಂಶದ ಸಾಂದ್ರತೆ ಮತ್ತು ಬಾಳಿಕೆ ಅಷ್ಟಕ್ಕಷ್ಟೇ. ನಮ್ಮ ಸಾಂಪ್ರದಾಯಿಕ ವಿಧಾನದಲ್ಲಿರುವ ವೈಜ್ಞಾನಿಕತೆಯನ್ನುತ್ವರಿತ ಕಟಾವು- ಸಂಗ್ರಹದ ಆಧುನಿಕ ತಂತ್ರಜ್ಞಾನ ಅಂಚಿಗೆ ಸರಿಸಿದೆ. ರೈತರು ಈ ಮಾಗಲು ಬಿಡುವ ತಂತ್ರಜ್ಞಾನ ಬಳಸುತ್ತಿದ್ದಾಗ ಈ ಬಾರಿ ಬಂದಂಥಾ ರಾಕ್ಷಸೀ ಪ್ರಾಕೃತಿಕ ವಿಕೋಪ ಒದಗಿರಲಿಲ್ಲ. ಈ ಬಾರಿಯ ಮಳೆ ರೈತರನ್ನು ಸಂಕಷ್ಟಕ್ಕೀಡಾಗಿಸಿದ್ದಲ್ಲದೇ ಸರ್ಕಾರದ ಕುರುಡು ದೃಷ್ಟಿಯನ್ನೂ ಅನಾವರಣಗೊಳಿಸಿದೆ. ಕಟಾವು ಅಂದರೆ ತಕ್ಷಣದ ಕಾಳು ಸಂಗ್ರಹದ ತಂತ್ರಜ್ಞಾನ ಎಂದು ಸರ್ಕಾರವನ್ನು ಆಧುನಿಕ ತಂತ್ರಜ್ಞಾನ ಪ್ರೇರಿತ ಕೃಷಿ ವಿಜ್ಞಾನ ನಂಬಿಸಿದಂತಿದೆ. ಇದು ಅನಾಹುತಕಾರಿ” ಎನ್ನುತ್ತಾರೆ.
ಹಾಗೇ ಇಂತಹ ಅವೈಜ್ಞಾನಿಕ ಮಾನದಂಡವೂ ಸೇರಿದಂತೆ ಓಬಿರಾಯನ ಕಾಲದ ಇಡೀ ಎನ್ ಡಿಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಮಾರ್ಗಸೂಚಿಯನ್ನು ವಾಪಸ್ ಪಡೆದು, ಈ ಕಾಲಕ್ಕೆ ತಕ್ಕಂತೆ ರೈತರಿಗೆ ಅನುಕೂಲಕರವಾಗಿ ಅದನ್ನು ಮಾರ್ಪಡಿಸಬೇಕು ಎಂದು ಒತ್ತಾಯಿಸುವ ರಾಜ್ಯ ರೈತ ಸಂಘದ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್, “ರೈತನನ್ನು, ರೈತನ ಕೃಷಿ ಪದ್ಧತಿಯನ್ನು ಅರ್ಥಮಾಡಿಕೊಳ್ಳುವಲ್ಲಿ ರಾಜಕಾರಣಿಗಳು ಮತ್ತು ಆಡಳಿತ ವರ್ಗ ಎಷ್ಟು ನಿಷ್ಕಾಳಜಿ ವಹಿಸುತ್ತಿವೆ ಎಂಬುದಕ್ಕೆ ಈ ನಾಚಿಕೆಗೇಡಿನ ಮಾನದಂಡವೇ ಉದಾಹರಣೆ. ಶಾಸಕರು, ಅಧಿಕಾರಿಗಳು ವರ್ಷಕ್ಕೆರಡು ಬಾರಿ ತಮ್ಮ ವೇತನ, ಭತ್ಯೆ ಹೆಚ್ಚಿಸಿಕೊಳ್ಳುತ್ತಾರೆ. ಆದರೆ, ರೈತರ ಬೆಳೆನಷ್ಟ ಪರಿಹಾರದ ವಿಷಯದಲ್ಲಿ ಓಬಿರಾಯನ ಕಾಲದ ಮಾನದಂಡಗಳನ್ನೇ ಯಥಾ ಮುಂದುವರಿಸಿಕೊಂಡು ಬರಲಾಗುತ್ತಿದೆ ಯಾಕೆ? ಅಷ್ಟಕ್ಕೂ ಕೇಂದ್ರದ ನಿಯಮ ಏನೇ ಹೇಳಲಿ, ವಾಸ್ತವ ಪರಿಸ್ಥಿತಿ ಗಮನಿಸಿ ನ್ಯಾಯಯುತ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಅವಕಾಶವಿದೆ. ಸರ್ಕಾರ ಮೊದಲು ಎಲ್ಲಾ ರೀತಿಯ ಬೆಳೆ ಹಾನಿ ಸಮೀಕ್ಷೆ ನಡೆಸಿ ಪರಿಹಾರ ಬಿಡುಗಡೆ ಮಾಡಬೇಕು” ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದೇ ಮಾತನ್ನು ಪುನರುಚ್ಛರಿಸಿದ ರೈತ ಸಂಘದ ಮತ್ತೊಬ್ಬ ಹಿರಿಯ ನಾಯಕ ಎಚ್ ಆರ್ ಬಸವರಾಜಪ್ಪ, “ ಕೊಯ್ಲು ನಂತರದ ಹಾನಿಗೂ ಪರಿಹಾರ ನೀಡಲು ಅವಕಾಶವಾಗುವಂತೆ ಮತ್ತು ಈಗಿನ ಬಿಡಿಗಾಸಿನ ಪರಿಹಾರದ ಬದಲು ಎಕರೆಗೆ ಕನಿಷ್ಟ 25 ಸಾವಿರ ರೂ. ಪರಿಹಾರ ನೀಡುವಂತೆ ವಿಪತ್ತು ಪರಿಹಾರ ನಿಯಮಾವಳಿಗಳನ್ನು ಬದಲಾಯಿಸಬೇಕು. ಈಗಾಗಲೇ ರಾಜ್ಯ ಕೃಷಿ ಬೆಲೆ ಆಯೋಗ ಕೂಡ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಬೇಕು ಎಂದು ಶಿಫಾರಸು ಮಾಡಿದೆ. ಹಾಗಾಗಿ ಹೊಲ, ಕಣ, ಮನೆ ಎಂದು ಬೇಧ ಮಾಡದೆ, ರೈತನ ಬೆವರಿನ ಫಸಲು ಎಲ್ಲೇ ಹಾನಿಗೊಳಗಾದರೂ ಅದಕ್ಕೆ ನ್ಯಾಯಯುತ ಕನಿಷ್ಟ ಪರಿಹಾರ ನೀಡುವುದು ಸರ್ಕಾರದ ಹೊಣೆಗಾರಿಕೆ“ ಎಂದು ಆಗ್ರಹಿಸಿದ್ದಾರೆ.
ಈ ನಡುವೆ, ಎನ್ ಡಿ ಆರ್ ಎಫ್ ಮತ್ತು ಎಸ್ ಡಿಆರ್ ಎಫ್ ಮಾರ್ಗಸೂಚಿಗಳಲ್ಲಿ ತೀರಾ ನಾಚಿಕೆಗೇಡಿನ ಇಂತಹ ಮಾನದಂಡಗಳು ದಶಕಗಳಿಂದ ಜಾರಿಯಲ್ಲಿದ್ದರೂ, ರಾಜ್ಯದ ಯಾವೊಬ್ಬ ಸಂಸದರಾಗಲೀ, ಶಾಸಕರಾಗಲೀ ಈ ಬಗ್ಗೆ ಸರ್ಕಾರಗಳ ಗಮನ ಸೆಳೆದಿಲ್ಲ ಮತ್ತು ಅಂತಹ ರೈತ ವಿರೋಧಿ ಹೇಯ ಮಾನದಂಡಗಳ ವಿರುದ್ಧ ದನಿ ಎತ್ತಿಲ್ಲ ಎಂಬುದು ರಾಜಕೀಯ ನಾಯಕರಿಗೆ ಕೃಷಿ ಮತ್ತು ಕೃಷಿಕರ ಕುರಿತು ಇರುವ ಕಾಳಜಿಗೆ ನಿದರ್ಶನ.