ಕಳೆದ ಹಲವು ವರ್ಷಗಳಿಂದಲೂ ಮುಂಗಾರು ಮಳೆ ಕರ್ನಾಟಕದಾದ್ಯಂತ ಜನಜೀವನವನ್ನು ಅಸ್ತವ್ಯಸ್ತಗೊಳಿಸುತ್ತಿದೆ. ನಿಸರ್ಗದ ಸ್ವಾಭಾವಿಕ ಪ್ರಕ್ರಿಯೆಯಾಗಿ ಸಂಭವಿಸುವ ಮುಂಗಾರು ಮತ್ತು ಹಿಂಗಾರು ಮಳೆಯ ಪ್ರಮಾಣವನ್ನು, ಮಳೆಯಿಂದ ಅಪಾಯಕ್ಕೊಳಗಾಬಹುದಾದ ಪ್ರದೇಶಗಳನ್ನು ಮತ್ತು ಹಾನಿಯನ್ನು ಮುಂಚಿತವಾಗಿಯೇ ಊಹಿಸುವ ಅತ್ಯುನ್ನತ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ನಮ್ಮ ಆಡಳಿತ ವ್ಯವಸ್ಥೆಯಲ್ಲಿ, ಪದೇ ಪದೇ ಮಳೆಯಿಂದ ಹಾನಿಗೊಳಗಾಗುವ ಆಸ್ತಿಪಾಸ್ತಿಗಳು, ಕೃಷಿ ಭೂಮಿ, ಬೆಳೆದುನಿಂತ ಬೆಳೆ ಮತ್ತು ಗುಡ್ಡಗಾಡು ಪ್ರದೇಶಗಳ ನಿವಾಸಿಗಳ ಬದುಕು ಪ್ರತಿ ವರ್ಷವೂ ಹೆಚ್ಚಾಗುತ್ತಿರುವುದು ಶೋಚನೀಯ ಎನಿಸುತ್ತದೆ. ಹವಾಮಾನ ಮುನ್ಸೂಚನೆಯನ್ನು ನೀಡುವ ಇಲಾಖೆಗಳು ದಕ್ಷತೆಯಿಂದ ಕಾರ್ಯ ನಿರ್ವಹಿಸಿ, ಜಲಾನಯನ ಪ್ರದೇಶಗಳಲ್ಲಿ, ಬೆಟ್ಟಗಳ ತಪ್ಪಲಿನಲ್ಲಿ ವಾಸಿಸುವವರಿಗೆ ಮತ್ತು ನದಿ ಪಾತ್ರಗಳ ಸಮೀಪ ನೆಲೆಸಿರುವವರಿಗೆ ಮುನ್ನೆಚ್ಚರಿಕೆಯನ್ನು ನೀಡುತ್ತಲೇ ಇದ್ದರೂ, ಈ ಮುಂಜಾಗ್ರತಾ ಕ್ರಮಗಳನ್ನು ಶಿಸ್ತುಬದ್ಧವಾಗಿ ಕೈಗೊಳ್ಳುವುದರಲ್ಲಿ ನಮ್ಮ ಆಡಳಿತ ವ್ಯವಸ್ಥೆ ವಿಫಲವಾಗುತ್ತಿರುವುದು ಢಾಳಾಗಿ ಕಾಣುತ್ತದೆ.
ಮನುಷ್ಯ ಮತ್ತು ಜಾನುವಾರುಗಳನ್ನೂ ಒಳಗೊಂಡಂತೆ ಚರಾಚರ ಜೀವಿಗಳಿಗೆ ವರದಾನವಾಗಬೇಕಾದ ಮಳೆ ಪ್ರಳಯಾಂತಕವಾಗಿ ಪರಿಣಮಿಸುವುದು, ನಿಸರ್ಗ ದೋಷ ಎನ್ನಲಾಗುವುದಿಲ್ಲ. ಮಾನವ ಸಮಾಜ ನಿಸರ್ಗದ ಒಡಲನ್ನು ಬರಿದುಮಾಡುವುದು ಹೇಗೆ ಎಂದು ಅರಿತಿದೆ, ನಿಸರ್ಗವನ್ನು ಮಾರುಕಟ್ಟೆಯಲ್ಲಿಟ್ಟು ಬಂಡವಾಳವನ್ನು ಶೇಖರಿಸುವ ಕಲೆಯನ್ನೂ ಕಲಿತಿದೆ, ನಿಸರ್ಗದೊಡಲಲ್ಲಿರುವ ಸಕಲ ಸಂಪನ್ಮೂಲಗಳನ್ನೂ ಹೊರತೆಗೆದು ತನ್ನ ʼ ಅಭ್ಯುದಯ ʼ ಮತ್ತು ʼ ಅಭಿವೃದ್ಧಿʼಯ ಸೌಧಗಳನ್ನು ನಿರ್ಮಿಸುವ ಕಲೆಯನ್ನೂ ಕಲಿತಿದೆ. ಆದರೆ ಶತಮಾನಗಳು ಕಳೆದರೂ ನಿಸರ್ಗದೊಡನೆ ಅನುಸಂಧಾನ ಮಾಡುವ ಕೌಶಲ ಮಾನವ ಸಮಾಜಕ್ಕೆ ಸಿದ್ಧಿಸಿಲ್ಲ. ಹಾಗಾಗಿಯೇ ಬಂಡವಾಳದಾಹ ಮತ್ತು ಲಾಭಕೋರತನವನ್ನೇ ಮೈಗೂಡಿಸಿಕೊಂಡಿರುವ ಬಂಡವಾಳಶಾಹಿ ವ್ಯವಸ್ಥೆಯ ಮಾನವ ಸಮಾಜ, ನಿಸರ್ಗದೊಡನೆ ಮುಖಾಮುಖಿಯಾಗುತ್ತಾ, ತನ್ನ ಭವಿಷ್ಯವನ್ನೇ ಕಡೆಗಣಿಸಿ, ವರ್ತಮಾನದ ಐಷಾರಾಮಿ ಬದುಕಿಗಾಗಿ ಸಕಲ ಸಂಪನ್ಮೂಲಗಳನ್ನೂ ಬಿಕರಿ ಮಾಡುತ್ತಿದೆ. ಇದರ ಪ್ರತಿಫಲವನ್ನು ಅತಿವೃಷ್ಟಿಯ ಸಂದರ್ಭದಲ್ಲಿ, ಬರಗಾಲ-ಕ್ಷಾಮದ ಸಂದರ್ಭದಲ್ಲಿ ಅನುಭವಿಸುತ್ತಲೇ ಬಂದಿದ್ದೇವೆ.
ಮಳೆಗಾಲ ಎಂದರೆ ನಿಸರ್ಗ ಜೀವಿಗಳಿಗೆ ವರದಾನವಾಗಬೇಕು. ಪ್ರಾಣಿ ಪಕ್ಷಿಗಳಿಗೆ, ಜಾನುವಾರುಗಳಿಗೆ, ವ್ಯವಸಾಯವನ್ನೇ ನಂಬಿ ಬದುಕುವ ಕೋಟ್ಯಂತರ ಜನತೆಗೆ ಮತ್ತು ನಗರಗಳಲ್ಲಿ ವಾಸಿಸುವ ಹಿತವಲಯದ ಜನರಿಗೆ ನಿಸರ್ಗ ಒದಗಿಸುವ ಒಂದು ಸವಲತ್ತು ಕಾಲಕಾಲಕ್ಕೆ ನಾವು ಕಾಣುವ ಮಳೆ. ಕಳೆದ ಐವತ್ತು ವರ್ಷಗಳಲ್ಲಿ ಕೆಲವು ಸಮಯವಾದರೂ ಮಳೆಯಿಲ್ಲದೆ, ಒಣಗಿದ ವೃಕ್ಷಗಳ ನಡುವೆ, ಸುರುಟಿಹೋದ ಬೆಳೆಗಳ ನಡುವೆ, ಆಹಾರ ಕ್ಷಾಮವನ್ನು ಸಮಾಜ ಎದುರಿಸಿದೆ. ಕುಡಿಯುವ ನೀರಿಲ್ಲದೆ ಜಾನುವಾರುಗಳು ಸಂಕಷ್ಟ ಅನುಭವಿಸಿರುವುದನ್ನು ನೋಡಿದ್ದೇವೆ. ಒಣಹವೆಯ ಪ್ರದೇಶಗಳಲ್ಲಿ ಒಣಗಿದ ಭೂಮಿಯಲ್ಲಿ ತಲೆಯ ಮೇಲೆ ಕೈಹೊತ್ತು ಕುಳಿತ ರೈತನ ಚಿತ್ರಗಳು ನಮ್ಮ ಕಣ್ಮುಂದೆ ಸಾಗುವುದನ್ನು ಕಂಡಿದ್ದೇವೆ. ಕುಡಿಯುವ ನೀರಿಗಾಗಿ ಮೈಲಿಗಟ್ಟಲೆ ನಡೆಯುವ ಅಸಹಾಯಕ ಜನರನ್ನು ಕಂಡಿದ್ದೇವೆ. ಹಾಗೆಯೇ “ ಮಹಾಸ್ಫೋಟ, ಮೇಘಸ್ಫೋಟ, ಕುಂಭದ್ರೋಣ , ರಣಭೀಕರ, ಅಬ್ಬರಿಸಿ-ಬೊಬ್ಬಿರಿಯುವ ವರುಣ “ ಹೀಗೆ ಹಲವು ವಿಶೇಷಣಗಳನ್ನು ಹೊತ್ತು (ಕನ್ನಡದ ಸುದ್ದಿಮನೆಗಳು ಒಂದು ನಿಘಂಟನ್ನೇ ಸಿದ್ಧಪಡಿಸಿವೆ ) ಧರೆಗೆ ಅಪ್ಪಳಿಸುವ ಅತಿವೃಷ್ಟಿಯೂ ಸಹ ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲಿ ತನ್ನ ಬಲಪ್ರದರ್ಶನ ಮಾಡುತ್ತಲೇ ಬಂದಿದೆ. ಈ ವರ್ಷವೂ ಇದೇ ಕತೆ ಮರುಕಳಿಸಿದೆ.
ನಮ್ಮ ಆಡಳಿತಾರೂಢ ಸರ್ಕಾರಗಳು ಅಂಕಿಅಂಶಗಳನ್ನು ಅದ್ಭುತವಾಗಿ ಸಂಗ್ರಹಿಸುತ್ತವೆ. ಮಳೆಯ ಹಾನಿಯಿಂದ ಎಷ್ಟು ಬೆಳೆ ನಾಶವಾಗಿದೆ, ಎಷ್ಟು ಜಾನುವಾರುಗಳು ಸತ್ತಿವೆ, ಎಷ್ಟು ಜನ ಬಲಿಯಾಗಿದ್ದಾರೆ, ಎಷ್ಟು ಮನೆಗಳು ಕುಸಿದಿವೆ, ಎಷ್ಟು ಕಡೆ ಗುಡ್ಡಗಳು ಕುಸಿದಿವೆ, ಸೇತುವೆಗಳು ಭಗ್ನವಾಗಿವೆ, ರಸ್ತೆಗಳಲ್ಲಿ ಕಂದಕಗಳು ಸೃಷ್ಟಿಯಾಗಿವೆ ಹೀಗೆ ಪುಂಖಾನುಪುಂಖವಾಗಿ ಹೊರಬೀಳುವ ದತ್ತಾಂಶಗಳ ಬೆನ್ನಲ್ಲೇ ಸತ್ತವರಿಗೆ, ಮನೆ ಕಳೆದುಕೊಂಡವರಿಗೆ, ಬೆಳೆ ನಷ್ಟ ಅನುಭವಿಸಿದವರಿಗೆ ಪರಿಹಾರದ ಹಣ ನೀಡಲು ಚೆಕ್ಕುಗಳು ಸಿದ್ಧವಾಗುತ್ತಿರುತ್ತವೆ. ವಾಯುವಿಹಾರದಂತೆ ಒಮ್ಮೆ ಪ್ರವಾಹಪೀಡಿತ ಅಥವಾ ಮಳೆ ಪೀಡಿತ ಪ್ರದೇಶಗಳಿಗೆ ವೈಮಾನಿಕ ಭೇಟಿ ನೀಡುವ ಮೂಲಕ ದೂರದಿಂದಲೇ ಹಾನಿಯನ್ನು ಅಳೆಯುವ ಮಾಪಕಗಳನ್ನೂ ಸರ್ಕಾರಗಳು ಹೊಂದಿರುವುದರಿಂದ, ಅಂದಾಜುಗಳ ಪಟ್ಟಿ ಸಿದ್ಧವಾಗುತ್ತಲೇ ಇರುತ್ತದೆ. ಸತ್ತವರಿಗೆ ಕಂಬನಿ, ಸಂತ್ರಸ್ತರಿಗೆ ಸಾಂತ್ವನ, ಉಳಿದವರಿಗೆ ಸಂತಾಪಗಳ ಸಾಹಿತ್ಯಕ ಸಾಲುಗಳು ಹವಾನಿಯಂತ್ರಿತ ಕೊಠಡಿಗಳಲ್ಲಿ ಗೂಗಲ್ಡಾಕ್ಗಳಲ್ಲಿ ಸಿದ್ಧವಾಗುತ್ತವೆ.
ಈ ವರ್ಷವೂ ಕರ್ನಾಟಕದಲ್ಲಿ ಮುಂಗಾರು ಅಪಾರ ಹಾನಿ ಉಂಟುಮಾಡುತ್ತಿದೆ. ಎಲ್ಲ ಜಲಾಶಯಗಳೂ ಭರ್ತಿಯಾಗಿವೆ. ದಶಕಗಳಿಂದ ಖಾಲಿಯಾಗಿದ್ದ ಕೆರೆಕಟ್ಟೆಗಳು ತುಂಬಿಹರಿಯುತ್ತಿವೆ. ಸರ್ಕಾರದ ಅಧಿಕೃತ ಅಂಕಿಅಂಶಗಳ ಪ್ರಕಾರ ಈ ವರ್ಷದ ಮುಂಗಾರು ಮಳೆಗೆ 16,755 ಹೆಕ್ಟೇರ್ ಕೃಷಿ ಭೂಮಿ ಹಾನಿಯಾಗಿದೆ. 370 ಕಡೆ ಭೂ ಕುಸಿತ ಸಂಭವಿಸಿದೆ. ಲೋಕೋಪಯೋಗಿ ಇಲಾಖೆಯ ಮಾಹಿತಿಯ ಅನುಸಾರ 13 ಸಾವಿರ ಕಿಲೋಮೀಟರ್ ರಸ್ತೆಗಳು, 650 ಸೇತುವೆಗಳು ಹಾನಿಗೊಳಗಾಗಿವೆ. 500ಕ್ಕೂ ಹೆಚ್ಚು ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ. 16 ಸಾವಿರ ಮನೆಗಳು ಕುಸಿದಿವೆ. ನಾಲ್ಕು ಸಾವಿರಕ್ಕೂ ಹೆಚ್ಚು ಶಾಲೆಗಳು, ಅಂಗನವಾಡಿ ಕಟ್ಟಡಗಳು ನಾಶವಾಗಿವೆ. 93ಕ್ಕೂ ಹೆಚ್ಚು ಸಣ್ಣಕೆರೆಗಳು ಹಾನಿಗೊಳಗಾಗಿವೆ. 71 ಜನರು ಮೃತಪಟ್ಟಿರುವುದಾಗಿ ವರದಿಯಾಗಿದೆ. ಈ ಅಪಾಯ ಮತ್ತು ಹಾನಿಯ ನಡುವೆಯೇ ಜನಸಾಮಾನ್ಯರು ರಸ್ತೆಗಳಲ್ಲಿ ತೆಪ್ಪಗಳನ್ನು ಬಳಸುವುದನ್ನು ರೂಢಿಸಿಕೊಂಡಿದ್ದಾರೆ. ಶಾಲಾ ಮಕ್ಕಳು ಅಪಾಯಕಾರಿ ಹೊಳ್ಳಗಳನ್ನು ದಾಟಿ ಹೋಗುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಕೆರೆಗಳಲ್ಲಿ ಬಡಾವಣೆಗಳು ನಿರ್ಮಾಣವಾಗಿರುವುದರಿಂದ ರಸ್ತೆಗಳಲ್ಲೇ ಕೆರೆಗಳನ್ನು ನೋಡಿ ಆನಂದಿಸುವ ʼ ಸೌಭಾಗ್ಯ ʼ ನಮ್ಮದಾಗಿದೆ. ಕುಸಿದ ಸೇತುವೆಗಳು ಅನೇಕ ಹಳ್ಳಿಗಳಿಗೆ ಸಂಪರ್ಕವನ್ನೇ ಕಡಿದುಹಾಕುತ್ತವೆ.
ಕೊಡಗು, ಮಲೆನಾಡಿನ ಪಶ್ಚಿಮ ಘಟ್ಟಗಳಲ್ಲಿ ಗುಡ್ಡ ಕುಸಿತದಿಂದ ಹತ್ತು ಹಲವಾರು ಮನೆಗಳು ಭೂಗತವಾಗುತ್ತವೆ. ಇಡೀ ಗ್ರಾಮಗಳೇ ಜಲಾವೃತವಾಗುತ್ತವೆ. ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಸಂಭವಿಸಿದ ಭೂಕುಸಿತ, ಗುಡ್ಡಕುಸಿತದ ದುಷ್ಪರಿಣಾಮಗಳನ್ನು ಅಲ್ಲಿನ ಜನರು ಇನ್ನೂ ಅನುಭವಿಸುತ್ತಿರುವಾಗಲೇ, ಈ ವರ್ಷದ ಮುಂಗಾರು ಮತ್ತಷ್ಟು ಹಾನಿ ಉಂಟುಮಾಡಿದೆ. ಸಂಪಾಜೆ ವಲಯದಲ್ಲಿ ನಿರಂತರವಾಗಿ ಭೂಕುಸಿತ ಸಂಭವಿಸುತ್ತಿದ್ದು ಅಪಾಯದ ಮಟ್ಟ ತಲುಪಿದೆ. ಪಶ್ಚಿಮ ಘಟ್ಟಗಳಲ್ಲಿ ಸಂಭವಿಸುವ ಭೂಕುಸಿತಗಳಿಗೆ ಅತಿವೃಷ್ಟಿ ಕೇವಲ ನಿಮಿತ್ತ ಮಾತ್ರ. ಕಳೆದ ಐದು ವರ್ಷಗಳಿಂದಲೂ ಇಲ್ಲಿನ ಗುಡ್ಡಗಳು ಪ್ರಕೃತಿ ವಿಕೋಪಕ್ಕೆ ಒಳಗಾಗುತ್ತಿದ್ದರೂ, ಎತ್ತರದ ಪ್ರದೇಶಗಳಲ್ಲಿನ ಕಟ್ಟಡ ಕಾಮಗಾರಿಗಳನ್ನಾಗಲೀ, ರೆಸಾರ್ಟ್ಗಳನ್ನಾಗಲೀ ನಿರ್ಬಂಧಿಸುವ ಒಂದು ನಿಯಮವನ್ನು ರೂಪಿಸಲಾಗಿಲ್ಲ. ಮಾರುಕಟ್ಟೆ ಆರ್ಥಿಕತೆಗೆ ಪೂರಕವಾಗಿ, ನಿಸರ್ಗದ ರಮಣೀಯ ತಾಣಗಳನ್ನು ಔದ್ಯಮಿಕ ಬಿಂದುಗಳಾಗಿ ಮಾಡುವ ಒಂದು ವಿಕೃತ ನೀತಿಗೆ ಪಶ್ಚಿಮ ಘಟ್ಟಗಳು ಬಲಿಯಾಗುತ್ತಲೇ ಇವೆ. ಇದನ್ನು ತಪ್ಪಿಸಲು ತಜ್ಞರು ನೀಡುವ ಸಲಹೆಗಳಿಗೆ, ಉದಾಹರಣೆಗೆ ಕಸ್ತೂರಿ ರಂಗನ್ ವರದಿಗೆ, ಇದೇ ಮಾರುಕಟ್ಟೆ ಶಕ್ತಿಗಳಿಂದ ಮತ್ತು ಅವುಗಳನ್ನು ಪೋಷಿಸುವ ರಾಜಕೀಯ ವಲಯದಿಂದ ತೀವ್ರ ವಿರೋಧ ವ್ಯಕ್ತವಾಗುತ್ತದೆ.
ಪ್ರವಾಹ, ಅತಿವೃಷ್ಟಿ ಮತ್ತು ಭೂಕುಸಿತದ ಸಂದರ್ಭದಲ್ಲಿ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಕೊಂಡೊಯ್ಯಲು ವಿಪತ್ತು ನಿರ್ವಹಣೆಗಾಗಿಯೇ ಮುಡಿಪಾಗಿರುವ ಸೇನೆ ಮತ್ತು ಅರೆಸೇನೆಯ ಸಿಬ್ಬಂದಿ ತಮ್ಮ ಪ್ರಾಣ ಒತ್ತೆಯಿಟ್ಟು ಜೀವರಕ್ಷಣೆಯಲ್ಲಿ ತೊಡಗುತ್ತಾರೆ. ಈ ಸ್ತುತ್ಯಾರ್ಹ ರಕ್ಷಣಾ ಕಾರ್ಯಗಳ ನಡುವೆಯೇ ಇತ್ತೀಚಿನ ದಿನಗಳಲ್ಲಿ ನಗರ ಪ್ರದೇಶಗಳಲ್ಲೂ ಜಲಾವೃತ ಪ್ರದೇಶಗಳು ನಿರ್ಮಾಣವಾಗುವುದನ್ನು ಕಾಣುತ್ತಿದ್ದೇವೆ. ನಾವು ಅತ್ಯಂತ ಪ್ರಾಮಾಣಿಕತೆಯಿಂದ, ಕೆರೆಕಟ್ಟೆಗಳನ್ನು ಒಣಗಿಸುತ್ತಿದ್ದೇವೆ ಅಥವಾ ಒಣಗಿದ ಕೆರೆಗಳನ್ನು ವಸತಿ ನೆಲೆಗಳಾಗಿ ಪರಿವರ್ತಿಸುತ್ತಿದ್ದೇವೆ. 1990ರ ನಂತರ ನಗರೀಕರಣಕ್ಕೆ ಬಲಿಯಾದ ಮೊದಲ ನಿಸರ್ಗ ಶಿಶು ಎಂದರೆ ಕೆರೆಗಳೇ ಆಗಿರುವುದನ್ನು ಒಪ್ಪಲೇಬೇಕಲ್ಲವೇ ? ಒಣಗಿದ ಕೆರೆಗಳಲ್ಲಿ ಇಟ್ಟಿಗೆ ಗೂಡು ಮಾಡುವುದಕ್ಕಿಂತಲೂ ಹೆಚ್ಚು ಲಾಭದಾಯಕ ಉದ್ದಿಮೆಯಾಗಿ ರಿಯಲ್ ಎಸ್ಟೇಟ್ ಕಂಡಿದ್ದರಿಂದಲೇ ಎಲ್ಲೆಂದರಲ್ಲಿ “ ಕೆರೆಯಂಗಳದ ಸುಂದರ ಬಡಾವಣೆಗಳು ” ತಲೆಎತ್ತಿದ್ದನ್ನು ಬೀದರ್ನಿಂದ ಕೋಲಾರ-ಚಾಮರಾಜನಗರದವರೆಗೂ ಕಾಣಬಹುದು. ಒಳಚರಂಡಿ ನಿರ್ಮಾಣದಲ್ಲಿ ಸರ್ಕಾರ ನೀಡುವ ಅನುದಾನದೊಂದಿಗೆ, ಸಿಮೆಂಟು, ಜಲ್ಲಿ, ಗಾರೆಯನ್ನೂ ನುಂಗಿಹಾಕುವ ಒಂದು ಧನಲೋಭಿ ಜನಾಂಗವನ್ನೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಸೃಷ್ಟಿಸಿರುವುದರಿಂದ, ಮಳೆ ಹೆಚ್ಚಾದ ಕೂಡಲೇ ಮನೆಯಂಗಳಗಳೇ ಚರಂಡಿಗಳಾಗಿರುತ್ತವೆ. ಇದಕ್ಕೆ ಹಿತವಲಯದ ಐಷಾರಾಮಿ ಫ್ಲಾಟುಗಳೂ ಹೊರತಾಗುವುದಿಲ್ಲ.
ಸುದ್ದಿಪತ್ರಿಕೆಗಳಲ್ಲಿ “ ಪ್ರಧಾನಿಗಳಿಂದ ಉದ್ಘಾಟನೆಯಾದ ಸೇತುವೆ ಆರು ತಿಂಗಳಲ್ಲೇ ಕುಸಿತ ” ಎಂಬ ಸುದ್ದಿ ಬರುತ್ತದೆ. ಸೇತುವೆಗೆ ಬೇಕಿರುವುದು ಉದ್ಘಾಟಕರ ಕೃಪೆ ಅಲ್ಲ, ನಿರ್ಮಾಣದಲ್ಲಿ ಕೈಹಾಕುವ ಇಂಜಿನಿಯರುಗಳು, ಹಣಕಾಸು ಒದಗಿಸುವ ಅಧಿಕಾರಶಾಹಿ ಮತ್ತು ಶಾಸನಸಭೆಯಲ್ಲಿ ಅನುಮೋದಿಸುವ ಜನಪ್ರತಿನಿಧಿಗಳ ಕೃಪೆ. ಈ ಕೂಟದ ಭ್ರಷ್ಟಾಚಾರದ ಬ್ರಹ್ಮಾಂಡ ಸ್ವರೂಪವನ್ನು ಕುಸಿದ ಸೇತುವೆಗಳಲ್ಲಿ, ಮಳೆನೀರಿನಿಂದ ತುಂಬಿ ಹರಿವ ರಾಜಕಾಲುವೆಗಳಲ್ಲಿ, ಒಳಚರಂಡಿಗಳಲ್ಲಿ ಮತ್ತು ಅವೈಜ್ಞಾನಿಕವಾಗಿ ನಿರ್ಮಿಸುವ ಬಡಾವಣೆಗಳಲ್ಲಿ, ರಸ್ತೆಗಳಲ್ಲಿ ಕಾಣಬಹುದು. ನಿಸರ್ಗದ ಎಲ್ಲ ಕೊಡುಗೆಗಳಿಂದಲೂ ಹಣ ಗಳಿಸುವ ಮನುಷ್ಯನ ಹಪಹಪಿ ಮತ್ತು ಲೋಭಕ್ಕೆ ಬಲಿಯಾಗಿರುವ ಪಶ್ಚಿಮ ಘಟ್ಟದ ಗುಡ್ಡಗಳು ಸಹಜವಾಗಿಯೇ ಬುಡ ಸಡಿಲವಾದರೆ, ಹೆಗಲ ಭಾರ ಹೆಚ್ಚಾದರೆ ಕುಸಿಯುತ್ತವೆ. ಕುಸಿಯುವ ಗುಡ್ಡಕ್ಕೆ ಭೂಗತರಾದವರ ಚಿಂತೆ ಇರುತ್ತದೆಯೇ ? ಇಲ್ಲಿ ಜೀವನ ಮತ್ತು ಜೀವನೋಪಾಯ ಕಳೆದುಕೊಳ್ಳುವ ಸೋ ಕಾಲ್ಡ್ ಸಂತ್ರಸ್ತರು ವರ್ಷಗಟ್ಟಲೆ ಪರಿಹಾರಕ್ಕಾಗಿ ಅಂಗಲಾಚುತ್ತಲೇ ಇರುತ್ತಾರೆ. ಅತ್ತ ಉದ್ಯಮಿಗಳ ಸಾಮ್ರಾಜ್ಯ ವಿಸ್ತರಿಸುತ್ತಲೇ ಇರುತ್ತದೆ. ಪ್ರವಾಸೋದ್ಯಮ ಎನ್ನುವುದು ನಿಸರ್ಗದ ದೃಷ್ಟಿಯಿಂದ ಪ್ರಯಾಸೋದ್ಯಮವಾಗಿರುವುದಕ್ಕೆ ಈ ಅಮಾಯಕ ಜನರು ಬೆಲೆ ತೆರುವಂತಾಗಿದೆ.
ಇತ್ತ ಮಳೆಗಾಲದಲ್ಲಿ ಜಲಾನಯನ ಪ್ರದೇಶಗಳಂತಾಗುವ ಪ್ರತಿಷ್ಠಿತ ನಗರಗಳ ಸಂಖ್ಯೆ ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಸಾಂಸ್ಕೃತಿಕ ನಗರಿ ಮೈಸೂರು ಸಹ ಇದಕ್ಕೆ ಹೊರತಾಗಿಲ್ಲ. ಸುಡುಬೇಸಿಗೆಯಲ್ಲಿ ಕಾದ ಬಾಣಲೆಯಾಗಿ, ಮಳೆಗಾಲದಲ್ಲಿ ಜಲಾವೃತ ದ್ವೀಪವಾಗುವ ಮೂಲಕ ರಾಜಧಾನಿ ಬೆಂಗಳೂರು ತನ್ನದೇ ಆದ ವೈಶಿಷ್ಟ್ಯವನ್ನು ಪಡೆದುಕೊಳ್ಳುತ್ತಿದೆ. ಆರು ತಿಂಗಳ ಎಳೆ ವಯಸ್ಸಿನ ಡಾಂಬರು ರಸ್ತೆಗಳಿಗೂ ಸಹ ಆದಷ್ಟೂ ಬೇಗನೆ ಬಾಯ್ದೆರೆಯುವ ಹಂಬಲ ಇರುವುದರಿಂದ, ರಸ್ತೆಗಳ ಬದಿಯ ಚರಂಡಿಗೆ ಪೈಪೋಟಿ ನೀಡುತ್ತಾ ಹೊಂಡಗಳು ಮದುವಣಿಗರಂತೆ ಸಿದ್ಧವಾಗುತ್ತವೆ. ಅತಿವೃಷ್ಟಿಯಾದ ಸಂದರ್ಭದಲ್ಲೆಲ್ಲಾ ಈ ಹೊಂಡಗಳು ಸಾವಿನ ಕೂಪಗಳಾಗಿ ಪರಿಣಮಿಸುತ್ತವೆ. ಒಳಚರಂಡಿಗಳನ್ನು ಕೋಟ್ಯಂತರ ರೂಗಳ ಬಂಡವಾಳ ಹೂಡಿ ನಿರ್ಮಿಸುವುದಾದರೂ, ಅದರ ನಿರ್ವಹಣೆಗಾಗಿ ಒಂದು ವೈಜ್ಞಾನಿಕ ಮಾದರಿ ಇಲ್ಲದಿರುವುದರಿಂದ, ಮಳೆ ಹೆಚ್ಚಾದಾಗ, ರಸ್ತೆಬದಿಯ ಕಾಲುವೆಗಳಾಗಿ ಮಾರ್ಪಡುತ್ತವೆ. ಚರಂಡಿಯೊಳಗಿನ ತ್ಯಾಜ್ಯ ರಸ್ತೆಗಳಲ್ಲಿ ಶೇಖರಣೆಯಾಗಿ, ನಗರಗಳ ಮುಖ್ಯ ರಸ್ತೆಗಳೂ ಸಹ ನೀರಿನ ಹೊಂಡಗಳಾಗುತ್ತವೆ. ನಗರೀಕರಣದ ಪ್ರಭಾವದಿಂದ ಎತ್ತರದ ಪ್ರದೇಶಗಳಾಗಲೀ, ತಗ್ಗು ಪ್ರದೇಶಗಳಾಗಲೀ, ಕೆರೆಗಳ ಅಚ್ಚುಕಟ್ಟು ಪ್ರದೇಶಗಳಾಗಲೀ, ವಸತಿ ಸಮುಚ್ಚಯಗಳ ಕೂಪವಾಗುವುದರಿಂದ, ಐಷಾರಾಮಿ ಅಪಾರ್ಟ್ಮೆಂಟ್ಗಳೂ ಸಹ ಈ ವಿನೂತನ ಹೊಳೆಯ ಅನುಭವವನ್ನು ಪಡೆಯುವಂತಾಗಿದೆ.
ನಗರ ಪ್ರದೇಶಗಳಲ್ಲಿ ಹೊಸದಾಗಿ ನಿರ್ಮಿಸುವ ಮನೆಗಳಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಕಡ್ಡಾಯ ಮಾಡುವುದು, ಹೊರವಲಯಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವುದು, ಹೊಂಡ ಬಿದ್ದ ರಸ್ತೆಗಳನ್ನು ಬೇಸಿಗೆಯಲ್ಲೇ ದುರಸ್ತಿ ಮಾಡುವುದು, ರಸ್ತೆಗಳಿಗೆ ಮಳೆಗಾಲದ ಮುನ್ನವೇ ಡಾಂಬರು ಹಾಕುವುದು ಮತ್ತು ಚರಂಡಿಗಳಲ್ಲಿ ಸಂಗ್ರಹವಾಗುವ ಘನತ್ಯಾಜ್ಯವನ್ನು ಆಗಿಂದಾಗ್ಗೆ ತೆಗೆದುಹಾಕುವುದು, ರಾಜಕಾಲುವೆಗಳಲ್ಲಿ ಸಂಗ್ರಹವಾಗುವ ತ್ಯಾಜ್ಯವನ್ನು ಶುಚಿಗೊಳಿಸುವುದು, ಅಳಿದುಳಿದ ಕೆರೆಕಟ್ಟೆಗಳಲ್ಲಿ ಹೂಳು ತೆಗೆಸುವ ಮೂಲಕ ಹೆಚ್ಚಿನ ಪ್ರಮಾಣದ ನೀರು ಸಂಗ್ರಹಣೆಯಾಗುವಂತೆ ಮಾಡುವುದು ಮತ್ತು ರಾಜಕಾಲುವೆ-ಕೆರೆ ಪ್ರದೇಶಗಳ ಒತ್ತುವರಿಗೆ ತಡೆ ಹಾಕುವುದು, ಇವೆಲ್ಲವೂ ನಗರಾಭಿವೃದ್ಧಿಯ ನಿಯಮಗಳಾಗಬೇಕು. ದುರಂತ ಸಂಭವಿಸಿದ ನಂತರ ನೀಡುವ ಪರಿಹಾರಗಳು ಅವಶ್ಯವೇ ಆದರೂ ದುರಂತಗಳನ್ನು ತಪ್ಪಿಸುವುದು ಆಡಳಿತ ವ್ಯವಸ್ಥೆಯ ಆದ್ಯತೆಯಾದರೆ ಮಾತ್ರ ಇದು ಸಾಧ್ಯ. ಆದರೆ ಸರ್ಕಾರದಿಂದ ಅಭಿವೃದ್ಧಿ ಕಾಮಗಾರಿಗಳಿಗೆ ನೀಡಲಾಗುವ ಅನುದಾನದಲ್ಲಿ ಅರ್ಧದಷ್ಟು ದಂಧೆಕೋರರ ಪಾಲಾಗುತ್ತಿರುವುದರಿಂದ ಇದು ಸಾಧ್ಯವಾಗುತ್ತಿಲ್ಲ. ಹಾಗಾಗಿಯೇ ಆರು ತಿಂಗಳ ಎಳೆ ವಯಸ್ಸಿನ ಡಾಂಬರು ರಸ್ತೆಗಳಿಗೂ ಸಹ ಆದಷ್ಟೂ ಬೇಗನೆ ಬಾಯ್ದೆರೆಯುವ ಹಂಬಲ ಉಂಟಾಗುತ್ತದೆ. ರಸ್ತೆಗಳ ಬದಿಯ ಚರಂಡಿಗೆ ಪೈಪೋಟಿ ನೀಡುತ್ತಾ ಹೊಂಡಗಳು ನೀರು ತುಂಬಿಸಿಕೊಳ್ಳಲು ಸಿದ್ಧವಾಗುತ್ತವೆ ಅತಿವೃಷ್ಟಿಯಾದ ಸಂದರ್ಭದಲ್ಲೆಲ್ಲಾ ಈ ಹೊಂಡಗಳು ಸಾವಿನ ಕೂಪಗಳಾಗಿ ಪರಿಣಮಿಸುತ್ತವೆ. ಕೀಲುಮೂಳೆ ವೈದ್ಯರಿಗೆ ಬೇಡಿಕೆಯೂ ಹೆಚ್ಚಾಗುವುದು ಕಾಕತಾಳೀಯ ಎನ್ನಬಹುದು.
ಯಾರನ್ನು ದೂಷಿಸುವುದು ? ಪ್ರಕೃತಿಯನ್ನೋ ? ಪ್ರಕೃತಿಯ ನಿಯಮಾನುಸಾರ ಸಮಾಜವನ್ನು ನಿರ್ಮಿಸುವ ಕ್ಷಮತೆ ಮತ್ತು ಅರ್ಹತೆ ಇಲ್ಲದ ಆಡಳಿತ ವ್ಯವಸ್ಥೆಯನ್ನೋ ? ಅಥವಾ ಎಲ್ಲವನ್ನೂ ಅನುಭವಿಸುತ್ತಲೂ ಮತ್ತೊಂದು ಮಹಾಮಳೆಯ ನಿರೀಕ್ಷೆಯಲ್ಲಿ ಬದುಕು ಸವೆಸುವ ನಿಷ್ಕ್ರಿಯ ಜನತೆಯನ್ನೋ ?