ಬೆಂಗಳೂರಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮಳೆ ನೀರು ಮನೆಯೊಳಗೆ ನುಗ್ಗಿದ್ದರಿಂದ ಕೋಟ್ಯಾಧಿಪತಿಗಳು ಕೂಡ ಹೋಟೆಲ್ ಲಾಡ್ಜ್ ಕಡೆ ಮುಖ ಮಾಡಿದ್ದಾರೆ.
ಕೋಟ್ಯಂತರ ರೂಪಾಯಿ ಮೌಲ್ಯದ ಅಪಾರ್ಟ್ ಮೆಂಟ್ ಹಾಗೂ ಬಂಗಲೆ, ವಿಲ್ಲಾಗಳು ನೀರಿನಲ್ಲಿ ಮುಳುಗಿದ್ದರಿಂದ ಕುಟುಂಬಗಳು ಹೋಟೆಲ್ ರೂಮ್ ಗಳಲ್ಲಿ ಉಳಿದುಕೊಳ್ಳುವಂತಾಗಿದೆ.
ಬೆಂಗಳೂರಿನ ಜನರು ಮನೆ ಇದ್ದರೂ ಹೋಟೆಲ್ ರೂಮ್ ಗಳತ್ತ ಮುಖ ಮಾಡಿರುವುದರಿಂದ ಹೋಟೆಲ್ ಲಾಡ್ಜ್ ಗಳ ಕೊಠಡಿ ಬೆಲೆ ಗಗನಕ್ಕೇರಿದ್ದು, 2 ಸಾವಿರ, ಸಾವಿರಕ್ಕೆ ಸಿಗುತ್ತಿದ್ದ ಕೊಠಡಿಗಳ ಬೆಲೆ ಒಂದು ದಿನಕ್ಕೆ 40 ಸಾವಿರ ರೂ. ದಾಟಿದೆ.

ಈ ಬಾರಿ ಮಳೆಯಿಂದ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವ ಮಹದೇವಪುರ ಹಾಗೂ ಶಾಸ್ತ್ರಿನಗರ ಮುಂತಾದೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಐಟಿ ಬಿಟಿ ಉದ್ಯೋಗಿಗಳು ಹಾಗೂ ಅವರ ಕುಟುಂಬಗಳು ಹೋಟೆಲ್ ರೂಮ್ ಗಳಲ್ಲಿ ತಾತ್ಕಾಲಿಕವಾಗಿ ನೆಲೆಸುವಂತಾಗಿದೆ. ಇದರಿಂದ ಈ ಪ್ರದೇಶದ ಹೋಟೆಲ್ ಕೊಠಡಿಗಳ ಬೆಲೆ ಗಗನಕ್ಕೇರಿದೆ.
ಸಾಮಾನ್ಯವಾಗಿ ಈ ಹೋಟೆಲ್ ಗಳಲ್ಲಿ ಒಂದು ದಿನ ಉಳಿದುಕೊಳ್ಳಲು ದುಪ್ಪಟ್ಟು ಅಂದರೆ 10 ಸಾವಿರದಿಂದ 20 ಸಾವಿರ ಆಗಬಹುದು. ಆದರೆ ಪರಿಸ್ಥಿತಿಯ ಪೂರ್ಣ ಲಾಭ ಪಡೆಯುತ್ತಿರುವ ಹೋಟೆಲ್ ಲಾಡ್ಜ್ ಮಾಲೀಕರು 40 ಸಾವಿರ ರೂ.ವರೆಗೂ ಡಿಮ್ಯಾಂಡ್ ಮಾಡುತ್ತಿದ್ದಾರೆ.
ವೈಟ್ ಫೀಲ್ಡ್, ದೇವನಹಳ್ಳಿ ವಿಮಾನ ನಿಲ್ದಾಣ ಸಂಪರ್ಕಿಸುವ ಹೊರವರ್ತುಲ ರಸ್ತೆ, ಕೋರಮಂಗಲಗಳಲ್ಲಿ ವಾಸಿಸುವ ಜನರು ಪಂಚತಾರಾ ಹೋಟೆಲ್ ಗಳಾದ ಲೀಲಾ ಪ್ಯಾಲೆಸ್, ತಾಜ್ ಬೆಂಗಳೂರು ಮುಂತಾದೆ ಬುಕ್ಕಿಂಗ್ ಮಾಡುತ್ತಿದ್ಧಾರೆ. ಇಲ್ಲಿ ಒಂದು ದಿನ ಡಿಲೆಕ್ಸ್ ರೂಮ್ ಬಾಡಿಗೆ 14 ಸಾವಿರದಿಂದ 18 ಸಾವಿರ ರೂ. ಇದೆ. ಆದರೆ ಈಗ ಜಿಎಸ್ ಟಿ ಸೇರಿ ಹೆಚ್ಚುವರಿ ಡಿಮ್ಯಾಂಡ್ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.











