ನಾಡ ಹಬ್ಬ ಮೈಸೂರು ದಸರಾ (Mysuru Dasara) ಪ್ರಯುಕ್ತ ನವರಾತ್ರಿ ಆಚರಣೆ ಸಂಪೂರ್ಣ ಗೊಂಡಿದ್ದು , ಇಂದು ವಿಶ್ವ ವಿಖ್ಯಾತ ಜಂಬೂ ಸವಾರಿಗೆ (Jamboo savari) ಕ್ಷಣಗಣನೆ ಆರಂಭವಾಗಿದೆ. ಆದ್ರೆ ಈ ಬಾರಿಯ ಜಂಬೂ ಸವಾರಿಗೆ ಮಳೆಯ ಆತಂಕ ಎದುರಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಮೈಸೂರಿನಲ್ಲಿ ಶುಕ್ರವಾರ ಮತ್ತು ಶನಿವಾರ ಮಳೆಯಾಗುವ ಸಾಧ್ಯತೆಯಿದೆ ಎಂಬ ವರದಿ ನೀಡಿದೆ.
ಈಗಾಗಲೇ ಕೆಲವು ದಿನಗಳಿಂದ ಮೈಸೂರು ಭಾಗದಲ್ಲಿ ಆಗಾಗ್ಗೆ ಮಳೆಯಾಗುತ್ತಿದ್ದು ಮೋಡ ಕವಿದ ವಾತಾವರಣವಿದೆ. ಆದ್ರೆ ಈ ಹವಾಮಾನ ಜಂಬೂ ಸವಾರಿಗೆ ಯಾವುದೇ ರೀತಿ ಅಡ್ಡಿಪಡಿಸುವುದಿಲ್ಲ ಎಂಬುದು ಅಧಿಕಾರಿಗಳ ನಂಬಿಕೆ. ವಿಶ್ವ ವಿಖ್ಯಾತ ಜಂಬೂ ಸವಾರಿ ಮೆರವಣಿಗೆ ಇಂದು ಸಂಜೆ 4:30 ಕ್ಕೆ ಪ್ರಾರಂಭವಾಗಲಿದೆ.
ಇನ್ನು ಭಾರತದ ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಮೈಸೂರಿನಲ್ಲಿ ಸುಮಾರು 2.5 ಮಿಮೀ ರಿಂದ 64.4 ಮಿಮೀ ಮಳೆಯಾಗಬಹುದು ಎನ್ನಲಾಗಿದೆ. ಆದ್ರೆ ಇತ್ತ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರದ ಮೂಲಗಳು, ಮಳೆಯ ಸಾಧ್ಯತೆ ಕಡಿಮೆ ಎಂದು ವರದಿ ಮಾಡಿವೆ.