2014ಕ್ಕೂ ಮುನ್ನ ರೈಲುಗಳನ್ನೂ, ರೈಲು ನಿಲ್ದಾಣಗಳನ್ನೂ ರೈಲು ಮಾರ್ಗಗಳನ್ನೂ ಮಾರಾಟ ಮಾಡುವ ಪರಿಸ್ಥಿತಿ ಈ ದೇಶಕ್ಕೆ ಒದಗಿ ಬರುತ್ತದೆ ಎಂದು ಯಾರೂ ಕನಸಿನಲ್ಲಿ ಕೂಡಾ ಊಹಿಸಿರಲಿಲ್ಲ. ಯಾಕೆಂದರೆ ಆಗ ದೇಶದ ಆರ್ಥಿಕ ಪರಿಸ್ಥಿತಿ ಆಸ್ತಿ ಮಾರಾಟ ಮಾಡುವ ಹಂತಕ್ಕೆ ಕುಸಿಯುವ ಕಲ್ಪನೆ ಕೂಡಾ ಇರಲಿಲ್ಲ, ಅಷ್ಟು ಸದೃಢವಾಗಿತ್ತು. ಭಾರತೀಯ ರೈಲ್ವೆ ಜಗತ್ತಿನ ಅತಿ ದೊಡ್ಡ ಉದ್ಯೋಗದಾತ ಅಷ್ಟೇ ಅಲ್ಲಾ, ಅತಿ ಹೆಚ್ಚು ಪ್ರಯಾಣಿಕರಿಗೆ ಅತ್ಯಂತ ಸುಲಭದರದಲ್ಲಿ ಸೇವೆ ಒದಗಿಸುವ ಸಾಧನ. ಈ ಏಳೂವರೆ ವರ್ಷಗಳಲ್ಲಿ ಎಲ್ಲವೂ ಬದಲಾಗಿದೆ. ರೈಲ್ವೆ ಸುಧಾರಣೆಯ ಹೆಸರಿನಲ್ಲಿ, ಉನ್ನತೀಕರಣದ ಹೆಸರಿನಲ್ಲಿ ಉದ್ಯಮಿಗಳ ಹಿಡಿತಕ್ಕೆ ನೀಡುವ ಹುನ್ನಾರಗಳು ಆಸ್ತಿನಗದೀಕರಣದ ರೂಪದಲ್ಲಿ ಕಾಣಿಸಿಕೊಂಡಿವೆ.
ಅಷ್ಟಕ್ಕೂ ಈ ಬಜೆಟ್ಟಿನಲ್ಲಿ ರೈಲ್ವೆ ಆಸ್ತಿ ಮಾರಾಟದ ಪ್ರಸ್ತಾಪವೇ ಇಲ್ಲ. ಆದರೆ, ಈಗಾಗಲೇ ರೈಲ್ವೆಯ 1.52 ಲಕ್ಷ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಲು ನಿರ್ಧರಿಸಲಾಗಿದೆ. ಆಸ್ತಿ ಮಾರಾಟದಂತಹ ವಿವರಗಳು ಬಜೆಟ್ಟಿನಲ್ಲಿ ಪ್ರಸ್ತಾಪ ಮಾಡದೇ ಇರುವುದು ದೇಶದ ಜನರನ್ನು ಹಾದಿ ತಪ್ಪಿಸುವ ಪ್ರಯತ್ನವಲ್ಲದೇ ಮತ್ತೇನೂ ಅಲ್ಲ. ಅಷ್ಟಕ್ಕೂ ಮೋದಿ ನೇತೃತ್ವದ ಎನ್ಡಿಎ ಸರ್ಕಾರಕ್ಕೆ ರೈಲ್ವೆಯನ್ನು ಸದೃಢಗೊಳಿಸುವ ಇರಾದೆ ಇದ್ದಂತಿಲ್ಲ. ರೈಲ್ವೆಯನ್ನು ಮತ್ತೊಂದು ಏರ್ ಇಂಡಿಯಾ ಮಾಡಿ, ಇಡೀ ರೈಲ್ವೆ ಆಸ್ತಿಯನ್ನು ಆಡಳಿತ ಪಕ್ಷದ ಆಪ್ತ ವಲಯದ ಉದ್ಯಮಿಗಳಿಗೆ ಅತ್ಯಲ್ಪ ಮೊತ್ತಕ್ಕೆ ವಹಿಸಿ ಬಿಟ್ಟರೂ ಅಚ್ಚರಿ ಇಲ್ಲ!
ಆ ನಿಟ್ಟಿನಲ್ಲಿ ಮೋದಿ ಸರ್ಕಾರ ಮೊದಲೇ ನಿರ್ಧಾರ ಮಾಡಿದಂತಿದೆ. ರೈಲ್ವೆಯ ಮಹತ್ವವನ್ನು ಬಗ್ಗು ಬಡಿಯಲು ಮೊದಲು ಮಾಡಿದ ಕೆಲಸ ಎಂದರೆ ರೈಲ್ವೆ ಬಜೆಟ್ ಅನ್ನೇ ತೆಗಿದು ಹಾಕಿದ್ದು, ಅದನ್ನು ಕೇಂದ್ರ ಸರ್ಕಾರದ ಸಾಮಾನ್ಯ ಇಲಾಖೆಯಂತೆ ಪರಿಗಣಿಸಿ, ಮುಖ್ಯ ಬಜೆಟ್ಟಿನ ಜತೆಗೆ ವಿಲೀನಗೊಳಿಸಿದ್ದು. 2016ರ ನಂತರ ನಂತರ ‘ರಾಷ್ಟ್ರದ ಜೀವನಾಡಿ’ ರೈಲ್ವೆ ಬಜೆಟ್ ಮಹತ್ವ ಕಳೆದುಕೊಂಡಿದೆ. ಜತೆಗೆ ಸರ್ಕಾರ ನೀಡುತ್ತಿದ್ದ ಗಮನ ಮತ್ತು ಬಿಡುಗಡೆ ಮಾಡುತ್ತಿದ್ದ ಅನುದಾನವೂ ತಗ್ಗಿದೆ. ಆದರೆ, ರೈಲ್ವೆಯು ಮಾಡಿರುವ ಬೃಹತ್ ಸಾಲದ ಮೊತ್ತವು ಹಿಗ್ಗುತ್ತಲೇ ಇದೆ. ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರೈಲ್ವೆ ಮೂಲಭೂತ ಸೌಲಭ್ಯಗಳನ್ನು ಉನ್ನತೀಕರಿಸುವ ಹೆಸರಿನಲ್ಲಿ ಹೆಚ್ಚಿನ ಬಂಡವಾಳ ವೆಚ್ಚ ಹೆಚ್ಚಿಸಲಾಗಿದೆ. ಈ ಉದ್ದೇಶಕ್ಕಾಗಿ ಭಾರಿ ಮೊತ್ತದ ಸಾಲ ರೈಲ್ವೆ ಹೆಗಲಿಗೆ ಬಿದ್ದಿದೆ. ರೈಲ್ವೆಯ ವರ್ಷದ ಆದಾಯದ ದುಪ್ಪಟ್ಟು ಪ್ರಮಾಣದಲ್ಲಿ ಅಂದರೆ, 4 ಲಕ್ಷ ಕೋಟಿಗಳಷ್ಟು ಸಾಲದ ಹೊರೆ ರೈಲ್ವೆ ಮೇಲೆ ಬಿದ್ದಿದೆ.
ಮೂಲಭೂತ ಸೌಲಭ್ಯ ಅಭಿವೃುದ್ಧಿ ಹೆಸರಿನಲ್ಲಿ ಪಡೆಯಲಾಗಿರುವ ಸಾಲಕ್ಕೆ ಆರಂಭಿಕ ವರ್ಷಗಳಲ್ಲಿ ಬಡ್ಡಿಪಾವತಿಗೆ ರಿಯಾಯ್ತಿ ಇದೆ. ರಿಯಾಯ್ತಿ ಅವಧಿ ಮುಗಿದ ನಂತರ ಈ ಸಾಲದ ಮೇಲಿನ ಬಡ್ಡಿಯ ಹೊರೆಯನ್ನು ರೈಲ್ವೆ ಹೊರಲೇಬೇಕಾಗುತ್ತದೆ. ರೈಲ್ವೆಯು ಈ ದೇಶದ ಜೀವನಾಡಿ ಎಂದು ಗೊತ್ತಿದ್ದರೂ ಅದನ್ನು ಆರ್ಥಿಕವಾಗಿ ಸ್ವಾವಲಂಬಿಯಾಗಿ ರೂಪುಗೊಳ್ಳಲು ಮೋದಿ ಸರ್ಕಾರ ಯಾವುದೇ ಪ್ರೋತ್ಸಾಹಕ ನೆರವು ನೀಡಿಲ್ಲ. ನೀಡುವ ಉದ್ದೇಶವೂ ಇದ್ದಂತಿಲ್ಲ. ರೈಲ್ವೆಯ ಸಾಲದ ಹೊರೆ ಹೆಚ್ಚುತ್ತಾ ಹೋದರೆ, ಸಾಲದ ಮೇಲಿನ ಬಡ್ಡಿ ಪಾವತಿ, ಸಿಬ್ಬಂದಿ ವೇತನ, ಪಿಂಚಣಿ ಹೊರೆಯಿಂದಲೇ ಭಾರಿ ನಷ್ಟವನ್ನು ಅನುಭವಿಸಿ ಏರ್ ಇಂಡಿಯಾ ಹಾದಿಯಲ್ಲಿ ಸಾಗುವ ಅಪಾಯ ಇದೆ. ರೈಲ್ವೆಯು ಈ ಹಾದಿಯಲ್ಲೇ ಸಾಗಬೇಕೆಂಬ ಉದ್ದೇಶವೂ ಮೋದಿ ಸರ್ಕಾರದ್ದಾಗಿರಬಹುದೇ ಎಂಬ ಅನುಮಾನವೂ ಕಾಡುತ್ತಿದೆ.
ಈಗಾಗಲೇ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಣೆ ಮಾಡಿರುವ ಪ್ರಕಾರ, ಪ್ರಸಕ್ತ ವಿತ್ತೀಯ ವರ್ಷದಲ್ಲೇ 17,810 ಕೋಟಿ ರೂಪಾಯಿ, ಮುಂದಿನ ವರ್ಷದಲ್ಲಿ 57,222 ಕೋಟಿ ರೂಪಾಯಿ, 2023-24ರಲ್ಲಿ 32,557 ಕೋಟಿ ರೂಪಾಯಿ ಮತ್ತು 2024-25ರಲ್ಲಿ 32,557 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಮಾರಾಟವಾಗಲಿದೆ. ಆ ಹೊತ್ತಿಗೆ ರೈಲ್ವೆಯ ಸಾಲವು ಎಂಟು ಲಕ್ಷ ಕೋಟಿ ರೂಪಾಯಿ ದಾಟಿದ್ದರೂ ಅಚ್ಚರಿಯಿಲ್ಲ. ಏಕೆಂದರೆ ಮೋದಿ ಸರ್ಕಾರ ಮಾರಾಟಕ್ಕೆ ಮುಂದಾಗಿರುವುದು ನಷ್ಟದ ಅಥವಾ ಕಡಿಮೆ ಆದಾಯದ ರೈಲು ಮಾರ್ಗ, ರೈಲು ನಿಲ್ದಾಣಗಳಲ್ಲ, ಬದಲಿಗೆ ಭಾರಿ ಲಾಭ ತಂದುಕೊಡುತ್ತಿರುವ ರೈಲು ಮಾರ್ಗಗಳು ಮತ್ತು ರೈಲುಗಳು!
ಸರ್ಕಾರ ಮೂಲಭೂತ ಸೌಲಭ್ಯಗಳ ರೂಪದಲ್ಲಿ ತನ್ನ ಆಸ್ತಿಯನ್ನು ಹೆಚ್ಚಿಸಿಕೊಳ್ಳಬೇಕು, ದೀರ್ಘಕಾಲದಲ್ಲಿ ಅವುಗಳಿಂದ ಹೆಚ್ಚಿನ ಲಾಭಗಳಿಸುವ ಮಾರ್ಗೊಪಾಯಗಳನ್ನು ರೂಪಿಸಿಕೊಳ್ಳಬೇಕು. ಸರ್ಕಾರದ ಸೃಷ್ಟಿಸುವ ಮೂಲಭೂತ ಸೌಲಭ್ಯ ರೂಪದ ಆಸ್ತಿಗಳು ಸಾರ್ವಜನಿಕರ ಬಳಕೆಗೆ ಲಭ್ಯವಾಗಬೇಕು ಮತ್ತು ಬಳಕೆ ಮಾಡಿಕೊಳ್ಳುವ ಸಾರ್ವಜನಿಕರ ಮೇಲೆ ಸುಲಭದರದ ಶುಲ್ಕ ಇರಬೇಕು. ಆದರೆ, ಮೋದಿ ಸರ್ಕಾರ ತುಳಿದಿರುವ ಹಾದಿಯನ್ನು ನೋಡಿ, ಸಾರ್ವಜನಿಕರು ಬಳಸುವ ಮೂಲಭೂತ ಸೌಲಭ್ಯಗಳ ಮೇಲೆ ಭಾರಿ ಶುಲ್ಕವನ್ನು ಹೇರಿ ಪರೋಕ್ಷವಾಗಿ ಸಾರ್ವಜನಿಕರಿಗೆ ಆ ಸೌಲಭ್ಯಗಳು ದುಬಾರಿಯಾಗಿ, ಬಳಸಿಕೊಳ್ಳದಂತೆ ಮಾಡುತ್ತಿದೆ. ದೀರ್ಘಕಾಲದಲ್ಲಿ ಇದರಿಂದ ನಷ್ಟ ಆಗಲಿದ್ದು, ಮಾರಾಟ ಮಾಡುವ ಸರ್ಕಾರದ ಉದ್ದೇಶ ಸಲೀಸಲಾಗಲಿದೆ.
(ಮುಂದಿನ ಭಾಗದಲ್ಲಿ- ವಿತ್ತ ಸಚಿವೆ ರೈಲ್ವೆ ಬಜೆಟ್ಟಿನಲ್ಲಿ ಹೇಳಿದ್ದು ಮತ್ತು ಹೇಳದೇ ಬಿಟ್ಟದ್ದು!)