ಪಂಚರಾಜ್ಯಗಳ ಚುನಾವಣಾ ಕಾವು ದಿನೇ ದಿನೇ ಜೋರಾಗುತ್ತಿದ್ದು, ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ. ಚುನಾವಣೆ ಗೆಲ್ಲಲು ತಮ್ಮದೇ ಆದ ತಂತ್ರಗಾರಿಕೆಗಳನ್ನು ಪ್ರಯೋಗ ಮಾಡುತ್ತಿದ್ದಾರೆ. ಈ ಮಧ್ಯೆಯೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಿಂದೂ-ಹಿಂದುತ್ವದ ಬಗ್ಗೆ ಸರಣಿ ರೂಪದಲ್ಲಿ ಮಾತನಾಡಿ ಸುದ್ದಿಯಲ್ಲಿದ್ದಾರೆ.
ಕಳೆದ ವಾರ ರಾಜಸ್ಥಾನದ ಜೈಪುರದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಮಾವೇಶದಲ್ಲಿ ʻಹಿಂದೂ ಕಾಂಗ್ರೆಸ್ vs ಹಿಂದೂತ್ವ ಬಿಜೆಪಿ ಎಂಬ ಚರ್ಚೆಯನ್ನು ಹುಟ್ಟುಹಾಕಿದ್ದರು. ಹಿಂದೂ ಧರ್ಮವು ಸತ್ಯಕ್ಕಾಗಿ ಮತ್ತು ಹಿಂದುತ್ವವು ಸತ್ಯವನ್ನು ಹುಡುಕುತ್ತದೆ ಎಂದು ಹೇಳುವ ಮೂಲಕ ಬಿಜೆಪಿಯ ನಕಲಿ ಹಿಂದುತ್ವವನ್ನು ರಾಹುಲ್ ಎತ್ತಿತೋರಿಸಿದ್ದಾರೆ.
ರಾಹುಲ್ ಅವರ ಹಿಂದೂ ವಿಚಾರಧಾರೆಯ ಮೂಲ ಕಲ್ಪನೆ ಗಮನಿಸಿದಾಗ ತಮ್ಮ ಪಕ್ಷದ ಸಂಸದ ಮತ್ತು ವಕ್ತಾರ ಶಶಿ ತರೂರ್ ಬರೆದಿರುವ `Why I Am A Hindu’ ಪುಸ್ತಕದ ಸಂಗತಿಗಳನ್ನು ಚೆನ್ನಾಗಿ ಓದಿಕೊಂಡಂತೆ ಕಾಣುತ್ತದೆ. ಈ ಆಧಾರದ ಮೇಲೆ ರಾಹುಲ್ ಅವರು ಹಿಂದೂತ್ವದ ವಿಚಾರವಾಗಿ ಪ್ರತಿ ಕಾರ್ಯಕ್ರಮದಲ್ಲೂ ಪ್ರಸ್ತಾಪಿಸುತ್ತಿದ್ದಾರೆ.
ಜೊತೆಗೆ ಕೇಂದ್ರದ ಮಾಜಿ ಸಚಿವರಾದ ಪಿ.ಚಿದಂಬರಂ ಮತ್ತು ಜೈರಾಮ್ ರಮೇಶ್ ಹಿಂದೂ ಕುರಿತ ವಾದಗಳನ್ನು ಮುಂದುವರೆಸಿದ್ದಾರೆ. ಅವರು ತಮ್ಮ ಬರಹಗಳಲ್ಲಿ ಅವರು ಹಿಂದೂಗಳು, ಹಿಂದುತ್ವವಾದಿಗಳಲ್ಲ. ಮೋದಿಯವರು ನಂಬಿರುವ ಹಿಂದೂ ಧರ್ಮ ಹಿಂದುತ್ವಕ್ಕೆ ವಿರುದ್ದವಾಗಿದೆ ಎಂದು ತಮ್ಮ ಬರಹಗಳಲ್ಲಿ ಹೇಳಿರುವುದನ್ನು ಗಮನಿಸಬಹುದು.
ಈ ಹಿಂದೆ ಕಾಂಗ್ರೆಸ್ ನಾಯಕರು ತಮ್ಮನ್ನು ಜಾತ್ಯತೀತವಾದಿಗಳು ಮತ್ತು ಸೆಕ್ಯೂಲರಿಸ್ಟ್ಗಳು ಎಂದು ಬಿಂಬಿಸಿಕೊಂಡಿದ್ದರು. ಈಗ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ನಾಯಕರು ಮೃದು ಹಿಂದುತ್ವವನ್ನು ಪ್ರದರ್ಶಿಸುತ್ತಿದ್ದಂತೆ ಕಾಣುತ್ತಿದೆ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ತಮ್ಮನ್ನು ತಾವು ಹಿಂದುಳಿದ ವರ್ಗಗಳ ನಾಯಕ ಎಂದು ಘೋಷಿಸಿದ್ದ ನಂತರ ಇದೆಲ್ಲವೂ ಆಗುತ್ತಿದೆ.
2014ರ ಚುನಾವಣಾ ಪೂರ್ವದಲ್ಲಿ ನರೇಂದ್ರ ಮೋದಿ ಗುಜರಾತಿನ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿಯಾಗಿ ʻಕಾಂಗ್ರೆಸ್ ಮುಕ್ತ ಭಾರತʼದ ಪರಿಕಲ್ಪನೆಯೊಂದಿಗೆ ಅತ್ಯಂತ ಬಲಶಾಲಿ ಕಾಂಗ್ರೆಸ್ ವಿರೋಧಿ ಹಿಂದುತ್ವ ನಾಯಕ ಎಂದು ಮೋದಿ ಬಿಂಬಿಸಿಕೊಂಡಿದ್ದರು.
ಸರ್ದಾರ್ ವಲ್ಲಭಭಾಯ್ ಅವರ ಅತಿ ಎತ್ತರದ ಪುತ್ಥಳಿಯನ್ನು ತಮ್ಮ ತವರು ರಾಜ್ಯದಲ್ಲಿ ಸ್ಥಾಪಿಸುವ ಮೂಲಕ ಮತ್ತು ಅಂಬೇಡ್ಕರ್ ಪರಂಪರೆಯನ್ನು ಸೂಕ್ಷ್ಮವಾಗಿ ಪಾಲಿಸುವ ಮೂಲಕ ಮೋದಿ ಕಾಂಗ್ರೆಸ್ ಪಕ್ಷವನ್ನು ಗೊಂದಲಕ್ಕೀಡು ಮಾಡಿದ್ದಾರೆ. ಈ ಇಬ್ಬರು ಮಹಾನ್ ನಾಯಕರನ್ನು ಕಾಂಗ್ರೆಸ್ ಒಂದು ಕಾಲದಲ್ಲಿ ಕಡೆಗಣಿಸಿದನ್ನು ಮೋದಿ ಸೂಕ್ಷ್ಮವಾಗಿ ಅನುಸರಿಸಲು ಶುರು ಮಾಡಿದ್ದರು. ಮೋದಿ ಕಾಂಗ್ರೆಸ್ ವಿರೋಧಿ, ಮುಸ್ಲಿಂ ವಿರೋಧಿ ನೀತಿ ಎಲ್.ಕೆ.ಅಡ್ವಾನಿ ಮತ್ತು ವಾಕಪೇಯಿ ಅವರುಗಳಿಗಿಂತ ಭಿನ್ನವಾಗಿದೆ. 2002ರ ಗುಜರಾತ್ನಲ್ಲಿ ನಡೆದ ಗಲಭೆಯನ್ನು ನಿಭಾಯಿಸಲು ವಿಫಲವಾಗಿ ಮತ್ತು ಜಾಗತಿಕವಾಗಿ ತೀವ್ರ ಟೀಕೆಗೆ ಗುರಿಯಾಗಿದ್ದ ಮೋದಿ 2014ರ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸಿ ಪ್ರಧಾನಿಯಾಗುತ್ತಾರೆ ಎಂದು ಕಾಂಗ್ರೆಸ್ ಪಕ್ಷ ಎಂದಿಗೂ ಊಹಿಸಿರಲಿಲ್ಲ. ವಾಜಪೇಯಿ ಮತ್ತು ಅಡ್ವಾನಿಯ ನೇತೃತ್ವದಲ್ಲಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಎಂದಿಗೂ ಗೆದ್ದಿಲ್ಲ. ಮೋದಿ ತನ್ನನ್ನು ತಾನು ಚುನಾವಣೆಯ ಸಮಯದಲ್ಲಿ ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸಿಕೊಂಡಿದ್ದರಿಂದ ಇದೆಲ್ಲವೂ ಸಾಧ್ಯವಾಯಿತು ಎಂಬ ಅಂಶವು ಕಾಂಗ್ರೆಸ್ಗೆ ತಿಳಿದಿರುವ ಸಂಗತಿ. ಮೋದಿ ತಾನು ಒಬ್ಬ ಹಿಂದೂ ಬ್ರಾಹ್ಮಣನಾಗಿದ್ದರೆ ಬಿಜೆಪಿಗೆ ಚುನಾವಣೆ ಗೆಲುವು ಸಾಧ್ಯವಾಗುತ್ತಿರಲಿಲ್ಲ.
ಕಾಂಗ್ರೆಸ್ ದಾರಿ ತಪ್ಪಿದಲ್ಲಿ?
ಸುಮಾರು ನಾಲ್ಕು ದಶಕಗಳ ಕಾಲ ಕಾಂಗ್ರೆಸ್ ಶೂದ್ರರು ಮತ್ತು ಹಿಂದುಳಿದವರನ್ನು ಕಡೆಗಣಿಸದೆ ಅಲ್ಪಸಂಖ್ಯಾತ, ಹಿಂದುಳಿದ, ದಲಿತ ಮತಗಳಿಗೆ ನೀಡಿದ ಪ್ರಾಶ್ಯಸ್ತವನ್ನ ಶೂದ್ರರು ಮತ್ತು ಹಿಂದುಳಿದವರಿಗೆ ನೀಡಿದರೆ ಮೋದಿ ಪ್ರಧಾನಿಯಾಗುತ್ತಿರಲಿಲ್ಲ ಎಂಬ ಅಂಶ ಕಾಂಗ್ರೆಸ್ ನಾಯಕರಿಗೆ ಇದೀಗ ಮನವರಿಕೆಯಾದಂತೆ ಕಾಣುತ್ತಿದೆ. ಕಾಂಗ್ರೆಸ್ನ ತಂತ್ರವನ್ನ ಅರೆತ ಮೋದಿ ಮತ್ತು ತಂಡ ಯುಪಿಎ ಆಡಳಿತಾವಧಿಯಲ್ಲಿ ಕಡೆಗಣಿಸಲ್ಪಟಿದ್ದ ಶೂದ್ರರು ಮತ್ತು ಹಿಂದುಳಿದ ವರ್ಗಗಳ ಜನರಿಗೆಕಾಂಗ್ರೆಸ್ ಬಗ್ಗೆ ಇದ್ದ ಅಸಮಾಧಾನವನ್ನ ಬಂಡವಾಳವನ್ನಾಗಿಸಿಕೊಂಡು ತಮ್ಮ ಹಿಂದುತ್ವದ ಅಜೆಂಡಾವನ್ನು ಒಬಿಸಿ ಮತ್ತು ಶೂದ್ರರ ಅಜೆಂಡವನ್ನಾಗಿ ಪರಿವರ್ತಸಿತ್ತು ಮೋದಿ ಮತ್ತು ಟೀಂ. ಈ ಅಂಶ ಆರ್ಎಸ್ಎಸ್ನಲ್ಲಿ ಸಣ್ಣ ಕಿಡಿಯನ್ನು ಹೊತ್ತಿಸಿದ್ದರು ಸಹ ಸಂಘದ ಹಿರಿಯ ನಾಯಕರು ಮೋದಿ ಮತ್ತು ತಂಡಕ್ಕೆ ಜೈಕಾರ ಹಾಕಿತ್ತು. ಈ ತಂತ್ರವನ್ನ ಅನುಸರಿಸಿ ಮೋದಿ ಮತ್ತು ತಂಡ ಬಿಜೆಪಿಗೆ ದೇಶದ ಆಡಳಿತ ಚುಕ್ಕಾಣಿ ಹಿಡಿದು ಕೊಡುವಲ್ಲಿ ಯಶಸ್ವಿಯಾಯಿತು.
ಸದ್ಯ ರಾಹುಲ್ ಗಾಂದಿಯಿಂದ ಮುನ್ನೆಲೆಗೆ ಬಂದಿರುವ ʻಹಿಂದೂ-ಹಿಂದುತ್ವʼ ಚರ್ಚೆಯು ಕೇವಲ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮತ ಪಡೆಯುವುದಕ್ಕಾಗಿ ಅಷ್ಟೇ ಹೊರತು ಹಿಂದೂಗಳ ಒಲೈಕೆಗೆ ಅಲ್ಲ. ಪಕ್ಷ ಅಧಿಕಾರಕ್ಕೆ ಬಂದ ನಂತರ ಮತ್ತೇ ಅವರ ಹಳೇ ಚಾಳಿಯನ್ನು ಮುಂದುವರೆಸುತ್ತಾರೆ ಎಂಬ ಅಂಶ ದೇಶದ ಜನರಿಗಿಂತ ಕಾಂಗ್ರೆಸ್ ನಾಯಕರಿಗೆ ಹೆಚ್ಚಾಗಿ ತಿಳಿದಿದೆ. ಹತ್ತು ವರ್ಷಗಳ ಹಿಂದೆ ಕಾಂಗ್ರೆಸ್ ಆಡಳಿತದಲ್ಲಿ ಹಿಂದುಳಿದ ವರ್ಗಗಳ ನಾಯಕರನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿರಲಿಲ್ಲ. ಕಾಂಗ್ರೆಸ್ನ ಶಶಿ ತರೂರ್ ಬರೆದಿರುವ ಪುಸ್ತಕದಲ್ಲಿ ಹಿಂದೂಗಳ ಬಗ್ಗೆ ಒಂದು ಪುಟದಲ್ಲು ಸಹ ಎಲ್ಲಿಯೂ ಬರೆದಿಲ್ಲ ಕಾಂಗ್ರೆಸ್ ನಾಯಕರ ಈ ನಡೆಯೆ ಹಿಂದುಳಿದ ವರ್ಗಗಳ ನಾಯಕರು ಬಿಜೆಪಿ ಕಡೆಗೆ ಮುಖ ಮಾಡುವಂತಾಯಿತು.
ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ವತಿಯಿಂದ ದೇಶದ ಜನತೆಗೆ ಬಿಜೆಪಿಯ ಕಟ್ಟಾ ಹಿಂದುತ್ವದ ವಿರುದ್ದ ರೂಪಿಸಿರುವ ಯೋಜನೆಗಳ ಕುರಿತು ತಿಳಿಸಬೇಕು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಂಬೇಡ್ಕರ್ ಮತ್ತು ಗಾಂಧೀಜಿ ಹಿಂದೂ ಸುಧಾರಣೆಗಳ ಬಗ್ಗೆ ಚರ್ಚೆಯನ್ನು ಮಾಡಿದ್ದರು. ಈ ಹಿಂದೆ ಈ ಇಬ್ಬರು ಧೀಮಂತ ನಾಯಕರು ಎತ್ತಿದ ಪ್ರಶ್ನೆಗಳಿಗೆ ಕಾಂಗ್ರೆಸ್ ಉತ್ತರಿಸಲು ಮರೆತ್ತಿದ್ದನ್ನು ಗಮನಿಸಿ ಸನಾತನ ಹಿಂದೂ ಧರ್ಮದಲ್ಲಿ ನಂಬಿಕೆಯಿಟ್ಟಿದ್ದ ಆರ್ಎಸ್ಎಸ್ ಮತ್ತು ಬಿಜೆಪಿ ಮತ ಕ್ರೋಢಿಕರಣಕ್ಕಾಗಿ ಧರ್ಮವನ್ನು ರಾಜಕೀಗೊಳಿಸಿತ್ತು.
ತಲೆದೂರಿದ ಆಳವಾದ ಸಮಸ್ಯೆ
ಧಾರ್ಮಿಕ ಪ್ರಶ್ನೆಗಳ ಬಗ್ಗೆ ಮೌನವಾಗಿರುವ ಕಾಂಗ್ರೆಸ್ ನೆಹರುವಿಯನ ಸೆಕ್ಯುಲರಿಸಂ ಅನ್ನು ಕೈ ಬಿಟ್ಟರೆ ಪಕ್ಷ ತೆಗೆದುಕೊಳ್ಳುವ ಹೊಸ ಹಿಂದೂ ಮಾರ್ಗವೇನು ಎಂಬ ಪ್ರಶ್ನೆ ಉದ್ಭವವಾಗಿದೆ.
ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅನೇಕ ಸಂಸ್ಥೆಗಳನ್ನು ನಿಯಂತ್ರಿಸುತ್ತಿದ್ದ ಎಡಪಂಥೀಯ ಬುದ್ಧಿಜೀವಿಗಳು ಜಾತ್ಯತೀತತೆಯ ಹೆಸರಿನಲ್ಲಿ ಲಾಭ ಪಡೆದರು ಮತ್ತು ಹಿಂದುಳಿದ ವರ್ಗ, ದಲಿತ ಮತ್ತು ಆದಿವಾಸಿಗಳಿಗೆ ಕೇಂದ್ರದಲ್ಲಿ ಸ್ಥಾನವನ್ನು ಪಡೆಯಲು ಯಾವುದೇ ಅವಕಾಶವನ್ನು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಆಕ್ರಮಣಕಾರಿ ಹಿಂದುತ್ವವನ್ನು ಪ್ರದರ್ಶಿಸಲು ಮೋದಿ ಮತ್ತು ತಂಡಕ್ಕೆ ಉತ್ತಮ ಅವಕಾಸ ಸಿಕ್ಕಿತ್ತು.
ನಿರಂತರ ಬೆಲೆ ಏರಿಕೆ, ರೈತರ ಪ್ರತಿಭಟನೆ, ಸಾಂಕ್ರಾಮಿಕತೆಯನ್ನು ಪ್ರಧಾನಿ ಪ್ರತಿನಿಧಿಸುವ ವಾರಣಾಸಿಯಲ್ಲಿ ಸಾಕಷ್ಟು ಬಿಕ್ಕಟ್ಟನ್ನು ಉಂಟು ಮಾಡಿದೆ. ಆದರೆ, ಇಂತಹ ಸಂದರ್ಭವನ್ನು ಉಪಯೋಗಿಸಿಕೊಂಡು ಮತಗಳನ್ನು ತನ್ನೆಡೆ ಸೆಳೆಯುವಲ್ಲಿ ಕಾಂಗ್ರೆಸ್ ವಿಫಲವಾಗಿದೆ.
ಕೇವಲ ʻಹಿಂದೂ-ಹಿಂದುತ್ವʼ ಎಂಬ ಚರ್ಚೆಯನ್ನು ಹುಟ್ಟುಹಾಕುವ ಮೂಲಕ ಕಾಂಗ್ರೆಸ್ ಹಿಂದುಳಿದ, ದಲಿತ, ಆದಿವಾಸಿಗಳ ಜ್ವಲಂತ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ನೇಮಕದಲ್ಲೇ ಆಳವಾದ ಸಮಸ್ಯೆ ತಲೆದೂರಿದೆ. ದೆಹಲಿಯಲ್ಲಿ ಕುಳಿತಿರುವ ಕಾಂಗ್ರೆಸ್ನ ತಂತ್ರಜ್ಞರು ತುಳಿತಕ್ಕೊಳಗಾಗಿರುವ ಜಾತಿ ಮತ್ತು ಸಮುದಾಯದ ನಾಯಕರನ್ನು ಬೆಳೆಸಲು ಮತ್ತು ಬೆಳೆಯಲು ಅವಕಾಶವನ್ನು ನೀಡುವುದಿಲ್ಲ.
ಇಂದು ದೇಶಕ್ಕೆ ಮಹಾತ್ಮ ಗಾಂಧೀಜಿಯವರಂತಹ ನಾಯಕತ್ವದ ಅವಶ್ಯಕತೆಯಿದೆ. ನಿಸ್ವಾರ್ಥ ಸೇವೆ ಮತ್ತು ಸಂಘಟನೆಯ ಅವಶ್ಯಕತೆ ಕಾಂಗ್ರೆಸ್ಗಿದೆ. ರಾಹುಲ್ ಗಾಂಧಿ ಮೊದಲು ತಾನು ಪ್ರಧಾನಿ ಆಗುವ ಬಗ್ಗೆ ಯೋಚನೆ ಮಾಡಬಾರದು ಮತ್ತು ಅವರ ಆಪ್ತ ವಲಯ ಕೇಂದ್ರ ಸಚಿವ ಸ್ಥಾನದ ಬಗ್ಗೆ ಯೋಚಿಸಬಾರದು. ರಾಹುಲ್ ಗಾಂಧಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ʻಹಿಂದೂ-ಹಿಂದುತ್ವʼದ ಮೂಲಕ ಅಧಿಕಾರಕ್ಕೆ ತರಲು ಬಯಸಿದರೆ ಮೊದಲು ಅವರ ಪಕ್ಷದ ಸುಧಾರಣೆ ಮತ್ತು ಕಾರ್ಯಸೂಚಿಯನ್ನು ಬದಲಿಸಿ ಅದನ್ನು ಜನರಿಗೆ ವಿವರಿಸಬೇಕು.