ರಾಹುಲ್ ಗಾಂಧಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಅವರ ಟೀ ಶರ್ಟ್ (T-Shirt) ಬಗ್ಗೆ ಆಕರ್ಷಕ ಚರ್ಚೆಗಳು ನಡೆಯುತ್ತಿವೆ. 3,570 ಕಿಲೋ ಮೀಟರ್ ಉದ್ದದ ಈ ಮಹಾ ಯಾತ್ರೆಯಲ್ಲಿ ರಾಹುಲ್ ಅವರು ಒಂದೇ ಟೀ ಶರ್ಟ್‌ನಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವುದು ಸುದ್ದಿಗೆ ಗ್ರಾಸವಾಗಿದೆ.
ರಾಹುಲ್ ಗಾಂಧಿ ಟೀ ಶರ್ಟ್ ಕುರಿತಂತೆ ಕಾರ್ಯಕರ್ತರು ಸೇರಿದಂತೆ ಎಲ್ಲರೂ ಪ್ರಶ್ನೆ ಮಾಡುತ್ತಿದ್ದಾರೆ. ಉತ್ತರ ಭಾರತದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಚಳಿ ಇದ್ದರೂ ಸಹ ಕಾಂಗ್ರೆಸ್ ನಾಯಕ ಹೇಗೆ ಅದನ್ನು ಸಹಿಸಿಕೊಂಡಿದ್ದಾರೆ ಅನ್ನೋದು ಯಾತ್ರೆಯಲ್ಲಿ ಪಾಲ್ಗೊಂಡವರ ಪ್ರಶ್ನೆಯಾಗಿದೆ.
ಈ ಕುರಿತು ಸುದ್ದಿಗಾರರು ಪ್ರಶ್ನೆ ಮಾಡಿದಾಗ, ಸ್ವಾರಸ್ಯಕರ ಉತ್ತರವನ್ನು ರಾಹುಲ್ ಗಾಂಧಿ ನೀಡಿದ್ದಾರೆ. ಕಾಂಗ್ರೆಸ್ ಇಂದು ಪಕ್ಷದ ಸಂಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಈ ಸುಸಂದರ್ಭದಲ್ಲಿ ರಾಹುಲ್ ಗಾಂಧಿ ಟೀ ಶರ್ಟ್ ನಲ್ಲೇ ಕಚೇರಿಗೆ ಆಗಮಿಸಿದರು. ಈ ಕುರಿತು ರಾಹುಲ್ ಗಾಂಧಿ ಅವರನ್ನು ಪ್ರಶ್ನೆ ಮಾಡಿದಾಗ, “ಸದ್ಯ ಟೀ ಶರ್ಟ್ ಮಾತ್ರ ಕೆಲಸ ಮಾಡುತ್ತಿದೆ. ಟೀ ಶರ್ಟ್ ಕೆಲಸ ಮಾಡದಿದ್ದಾಗ ಮುಂದೆ ನೋಡುತ್ತೇನೆ” ಎಂದು ರಾಹುಲ್ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆಗೆ ವಿರಾಮ
ಭಾರತ್ ಜೋಡೋ ಯಾತ್ರೆ ಪ್ರಸ್ತುತ 9 ದಿನಗಳ ವಿರಾಮದಲ್ಲಿದೆ. ಜನವರಿ 3 ರಂದು ಉತ್ತರ ಪ್ರದೇಶದಿಂದ ಯಾತ್ರೆ ಆರಂಭವಾಗಲಿದ್ದು, ಮೂರು ಜಿಲ್ಲೆಗಳಲ್ಲಿ ಸಂಚರಿಸಲಿದೆ. ಜನವರಿ 3 ರಂದು ಗಾಜಿಯಾಬಾದ್‌ನ ಲೋನಿಯಿಂದ ಪ್ರಯಾಣ ಆರಂಭವಾಗಲಿದ್ದು, ಮರುದಿನ ಅಂದರೆ ಜನವರಿ 4 ರಂದು ಬಾಗ್‌ಪತ್ ಜಿಲ್ಲೆಯ ಮಾವಿ ಕಲಾನ್ ತಲುಪಲಿದೆ. ಜನವರಿ 4 ರಂದು ಭಾರತ್ ಜೋಡೋ ಯಾತ್ರೆಯು ಬಾಗ್‌ಪತ್, ಸಿಸಾನಾ, ಸರೂರ್‌ಪುರ, ಬಾಗ್‌ಪತ್‌ನ ಬಾರೋಟ್ ನಲ್ಲಿ ಸಂಚಾರ ನಡೆಸಲಿದೆ. ಭಾರತ್ ಜೋಡೋ ಯಾತ್ರೆ ಯುಪಿಯಲ್ಲಿ ಜನವರಿ 5 ರವರೆಗೆ ಮುಂದುವರಿಯಲಿದೆ.
ಸುಮಾರು 3000 ಕಿ.ಮೀ ನಡಿಗೆ ಪೂರ್ಣ
ಭಾರತ್ ಜೋಡೋ ಯಾತ್ರೆಯು 9 ರಾಜ್ಯಗಳ 46 ಜಿಲ್ಲೆಗಳನ್ನು 107 ದಿನಗಳಲ್ಲಿ ಕ್ರಮಿಸಿದ್ದು, ಸುಮಾರು 3000 ಕಿ.ಮೀ. ಪೂರ್ಣಗೊಳಿಸಿದೆ. ಇನ್ನು 548 ಕಿ.ಮೀ ಪ್ರಯಾಣ ಮಾತ್ರ ಬಾಕಿ ಇದೆ. ಕಾಂಗ್ರೆಸ್ 150 ದಿನಗಳಲ್ಲಿ 3500 ಕಿ.ಮೀ ಪಾದಯಾತ್ರೆ ಗುರಿ ಹಾಕಿಕೊಂಡಿದೆ. ಯಾತ್ರೆಯು ಯುಪಿ, ಪಂಜಾಬ್ ಮತ್ತು ಜಮ್ಮು ಮತ್ತು ಕಾಶ್ಮೀರ ರಾಜ್ಯಗಳ ಮೂಲಕ ಇನ್ನೂ ಹಾದುಹೋಗಬೇಕಿದೆ.