ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನಲ್ಲಿ ಸಂಸದ ರಾಹುಲ್ ಗಾಂಧಿ ಹೊರತಾಗಿ ನಾಯಕರಿಲ್ಲ ಅನ್ನೋ ಪರಿಸ್ಥಿತಿಗೆ ಕಾಂಗ್ರೆಸ್ ಬಂದುಬಿಟ್ಟಿದೆ. 2019ರಲ್ಲಿ ಅಧ್ಯಕ್ಷ ಸ್ಥಾನ ತೊರೆದಿರುವ ರಾಹುಲ್ ಗಾಂಧಿಗೆ ಮತ್ತೆ ಪಟ್ಟ ಕಟ್ಟಲು ಒತ್ತಡ ಹೆಚ್ಚಾಗುತ್ತಲೇ ಇದೆ. ರಾಹುಲ್ ಗಾಂಧಿ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮರು ನೇಮಕ ಮಾಡಲು ಹಿರಿಯ ಕಾಂಗ್ರೆಸ್ಸಿಗರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಕಾಂಗ್ರೆಸ್ ಪಕ್ಷಕ್ಕೆ ರಾಷ್ಟ್ರಮಟ್ಟದಲ್ಲಿ ನಾಯಕರ ಕೊರತೆ ಕಾಡುತ್ತಿದೆ. ಮಾಸ್ ಲೀಡರ್ ಅನ್ನಿಸಿಕೊಂಡವರು ಯಾರೂ ಇಲ್ಲ. ಇದೇ ಕಾರಣಕ್ಕೆ 2017ರಲ್ಲಿ ಸೋನಿಯಾ ಗಾಂಧಿಯಿಂದ ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಅಧಿಕಾರ ವಹಿಸಿಕೊಂಡಿದ್ದರು. ರಾಹುಲ್ ನೇತೃತ್ವದಲ್ಲಿ ಸಾರ್ವತಿಕ ಚುನಾವಣೆಯನ್ನೂ ಎದುರಿಸಲಾಯ್ತು.
ಹಲವು ಕಾರಣಾಂತರಗಳಿಂದ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿತ್ತು. ಸೋಲಿನ ಹೊಣೆ ಹೊತ್ತ ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನ ತೊರೆದಿದ್ದರು. ಅಂದಿನಿಂದ ಮತ್ತೆ ಸೋನಿಯಾ ಗಾಂಧಿಯೇ ಪಕ್ಷದ ಅಧ್ಯಕ್ಷರಾಗಿದ್ದಾರೆ. ಸದ್ಯ ರಾಹುಲ್ ಗಾಂಧಿ ಯಾವುದೇ ಹುದ್ದೆ ಇಲ್ಲದೆ ಪಕ್ಷದಲ್ಲಿ ಮುಂದುವರೆದಿದ್ದಾರೆ.
2019ರಿಂದ ಇಲ್ಲಿಯವರೆಗೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಾಯಕನ ಆಯ್ಕೆ ಆಗಿಲ್ಲ. ತ್ವರಿತವಾಗಿ ಅಧ್ಯಕ್ಷರನ್ನ ನೇಮಿಸುವಂತೆ ಆಗ್ರಹವೂ ಕೇಳಿ ಬರುತ್ತಿದೆ. ಇದರ ನಡುವೆ ಮತ್ತೆ ರಾಹುಲ್ ಗಾಂಧಿಗೆ ಅಧ್ಯಕ್ಷ ಪಟ್ಟ ಕಟ್ಟುವಂತೆ ಒತ್ತಡ ಹೆಚ್ಚಾಗುತ್ತಿದೆ.
ಹೌದು, ಈ ಒತ್ತಡವೂ ಕಾಂಗ್ರೆಸ್ನಲ್ಲಿ ರಾಹುಲ್ ಗಾಂಧಿ ಹೊರತಾಗಿ ಮತ್ತೊಬ್ಬ ನಾಯಕ ಇಲ್ಲ ಎಂಬುದು ತೋರಿಸುತ್ತವೆ ಎಂಬ ಮಾತುಗಳು ಕೇಳಿ ಬಂದಿವೆ. ಕಾಂಗ್ರೆಸ್ನ ವಿಧ್ಯಾರ್ಥಿ ಸಂಘಟನೆ ಸೇರಿದಂತೆ ಕಾಂಗ್ರೆಸ್ನ ಎಲ್ಲಾ ಸಂಘಟನೆಗಳು ರಾಹುಲ್ ಗಾಂಧಿಯನ್ನು ಪಕ್ಷದ ಮುಖ್ಯಸ್ಥರನ್ನಾಗಿ ನೇಮಿಸುವಂತೆ ಒತ್ತಡ ಹಾಕಿದ್ದಾರೆ.
ರಾಹುಲ್ ಗಾಂಧಿ ಅಗ್ರಗಣ್ಯ ಮತ್ತು ಪ್ರಾಮಾಣಿಕ ನಾಯಕ. ವಿದ್ಯಾರ್ಥಿಗಳ ಧ್ವನಿಯನ್ನು ಬಲಪಡಿಸಿದವರಾಗಿದ್ದಾರೆ. ರಾಹುಲ್ ಗಾಂಧಿ ಭಾರತದ ವಿದ್ಯಾರ್ಥಿಗಳ ಧ್ವನಿಯಾಗಿದ್ದು, ರಾಹುಲ್ ನಾಯಕತ್ವದಲ್ಲಿ ಸುಸ್ಥಿರ & ಶಾಂತಿಯುತ ಸಮಾಜ ನಿರ್ಮಾಣ ಸಾಧ್ಯ. ಹೀಗಾಗಿ ಸಾಮಾಜಿಕ-ರಾಜಕೀಯ ಆಡಳಿತದ ದೂರದೃಷ್ಟಿ ಹೊಂದಿರುವ ನಾಯಕ ರಾಹುಲ್ ಗಾಂಧಿಯನ್ನು ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಿಸಬೇಕು ಎಂದು NSUI ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿ ಒತ್ತಾಯಿಸಿದೆ.
ಇತ್ತೀಚೆಗಷ್ಟೇ ರಾಹುಲ್ ಗಾಂಧಿಯನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮರು ನೇಮಕ ಮಾಡುವಂತೆ ಯುವ ಕಾಂಗ್ರೆಸ್ ಕೂಡ ಇದೇ ನಿರ್ಣಯವನ್ನು ಅಂಗೀಕರಿಸಿತ್ತು. ಇದಾದ ಒಂದು ವಾರದ ನಂತರ ಇದೀಗ NSUI ಕೂಡ ಇದೇ ನಿರ್ಣಯ ತೆಗೆದುಕೊಂಡಿದೆ.
ಕಳೆದ ಮೂರು ವರ್ಷಗಳಿಂದ ನೂತನ ಸಾರಥಿಯನ್ನ ಆಯ್ಕೆ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ಇದು ಪಕ್ಷದಲ್ಲಿ ಪರ್ಯಾಯ ನಾಯಕತ್ವ ಇಲ್ವಾ ಅನ್ನೋ ಪ್ರಶ್ನೆಯನ್ನ ಹುಟ್ಟುಹಾಕಿದೆ. ಸದ್ಯ ಸೋನಿಯಾ ಗಾಂಧಿಯೇ ಅಧ್ಯಕ್ಷರಾಗಿ ಮುಂದುವರೆದಿದ್ದಾರೆ.
ಅತ್ತ ರಾಹುಲ್ ಗಾಂಧಿ ಯಾವುದೇ ಸ್ಥಾನಮಾನಗಳಿಲ್ಲದೆ ಮುಂದುವರೆದಿದ್ದಾರೆ. ಇದರ ನಡುವೆ ರಾಹುಲ್ ಗಾಂಧಿ ಮರುನೇಮಕಕ್ಕೆ ಒತ್ತಡ ಹೆಚ್ಚಾಗ್ತಿದ್ದು, ಬಹುತೇಕ ರಾಹುಲ್ ಮತ್ತೆ ಅಧ್ಯಕ್ಷರಾಗೋ ಲಕ್ಷಣ ದಟ್ಟವಾಗಿದೆ.