ನವದೆಹಲಿ: ದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಫೋಟೊ ಹಾಕಲಾಗಿದ್ದು, ಇಂದು ಠಾಣೆಗೆ ಭೇಟಿ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಬಗ್ಗೆ ಪ್ರಶ್ನಿಸಿದ್ದಾರೆ.

ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಸಂಸತ್ ಚಲೋ ವೇಳೆ ಯುವಕರ ಮೇಲೆ ಪೆಲೆಟ್ ಗನ್ ಬಳಸಿ ದಾಳಿ ನಡೆಸಲಾಗಿದೆ ಎಂದು ಆರೋಪಿಸಿ, ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಒತ್ತಾಯಿಸಿ ರಾಹುಲ್ ಗಾಂಧಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಈ ವೇಳೆ ಠಾಣೆಯ ಡಿಸಿಪಿ ಸಚಿನ್ ಶರ್ಮಾ ಅವರನ್ನು ಭೇಟಿಯಾಗಿ ಪ್ರಕರಣದ ಕುರಿತು ಚರ್ಚಿಸಿದ ರಾಹುಲ್ ಗಾಂಧಿ, ಠಾಣೆಯೊಳಗೆ ಅಮಿತ್ ಶಾ ಅವರ ಫೋಟೊ ಇರುವುದನ್ನು ಗಮನಿಸಿ ಪೊಲೀಸರನ್ನು ಪ್ರಶ್ನಿಸಿದರು. ‘ಅಮಿತ್ ಶಾ ಅವರು ನಿಮ್ಮ ಉಸ್ತುವಾರಿಯೇ? ನಿಮ್ಮ ಇಲಾಖೆಯನ್ನು ಅವರೇ ನಡೆಸುತ್ತಿದ್ದಾರೆಯೇ? ಠಾಣೆಯಲ್ಲಿ ಅವರ ಫೋಟೊ ಏಕೆ?’ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಇನ್ನು ಎಫ್ಐಆರ್ ದಾಖಲಿಸಲು ಪೊಲೀಸರು ಆರಂಭದಲ್ಲಿ ಒಪ್ಪದ ಹಿನ್ನೆಲೆಯಲ್ಲಿ, ಪೆಲೆಟ್ ಗನ್ ದಾಳಿಯಲ್ಲಿ ಗಾಯಗೊಂಡಿದ್ದಾರೆ ಎನ್ನಲಾದ ಸಾಹಿಲ್ ಲೊಚಬ್ ಹಾಗೂ ಅವರ ತಾಯಿಯೊಂದಿಗೆ ರಾಹುಲ್ ಠಾಣೆಯ ಹೊರಗೆ ಧರಣಿ ನಡೆಸಿದರು. ಬಳಿಕ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಕೊನೆಗೆ ಪ್ರತಿಭಟನಾಕಾರರ ಒತ್ತಡದ ಬಳಿಕ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡರು. ಬಿಎನ್ಎಸ್ನ ಸೆಕ್ಷನ್ 118 ಮತ್ತು 25ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಎಫ್ಐಆರ್ ದಾಖಲಾದ ಬಳಿಕ ರಾಹುಲ್ ಗಾಂಧಿ ಧರಣಿ ಅಂತ್ಯಗೊಳಿಸಿದ್ದಾರೆ.







