ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್‌ಗೆ ಕಾನೂನು ಸಂಕಷ್ಟ ಮುಂದುವರಿದಿದೆ. ಪ್ರಕರಣದ ಎ14 ಆರೋಪಿ ಹಾಗೂ ದರ್ಶನ್ ಅವರ ಆಪ್ತನಾಗಿದ್ದ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿರುವುದು ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿದೆ.ಪ್ರದೋಷ್ ಮಾಫಿ ಸಾಕ್ಷಿಯಾದರೆ ಪ್ರಕರಣದ ತನಿಖೆ ಹಾಗೂ ವಿಚಾರಣೆಯಲ್ಲಿ ಮಹತ್ವದ ಪರಿಣಾಮ ಬೀರುವ ಸಾಧ್ಯತೆಯಿದ್ದು, ಇದು ದರ್ಶನ್‌ಗೆ ಮತ್ತಷ್ಟು ಕಾನೂನು ಸಂಕಷ್ಟ ತಂದೊಡ್ಡಬಹುದು ಎನ್ನಲಾಗುತ್ತಿದೆ.
ಈ ನಡುವೆ ಪತಿ ದರ್ಶನ್ ಎದುರಿಸುತ್ತಿರುವ ಸಂಕಷ್ಟಗಳು ನಿವಾರಣೆಯಾಗಲಿ ಎಂದು ಅವರ ಪತ್ನಿ ವಿಜಯಲಕ್ಷ್ಮಿ ದೈವಾರಾಧನೆಯ ಮೊರೆ ಹೋಗಿದ್ದಾರೆ ಎನ್ನಲಾಗಿದೆ.
ಮಂಗಳೂರಿನ ಪ್ರಸಿದ್ಧ ಶ್ರೀಕ್ಷೇತ್ರ ಮಂದಾರಬೈಲು ರಕ್ತೇಶ್ವರಿ ಸನ್ನಿಧಿಗೆ ಭೇಟಿ ನೀಡಿದ ವಿಜಯಲಕ್ಷ್ಮಿ, ದೇವಿ ಹಾಗೂ ಮಂತ್ರಜಾವದೆ, ಗುಳಿಗ ದೈವಗಳಿಗೆ ವಿಶೇಷ ಪೂಜೆ ಮತ್ತು ಸೇವೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.ದರ್ಶನ್‌ಗೆ ಎದುರಾಗಿರುವ ಕಾನೂನು ಸಂಕಷ್ಟಗಳು ದೂರವಾಗಿ ಪತಿಗೆ ಒಳಿತಾಗಲಿ ಎಂದು ವಿಜಯಲಕ್ಷ್ಮಿ ದೈವದ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ ಎನ್ನಲಾಗಿದೆ. ಈ ಹಿಂದೆ ಕೂಡ ನಾಡಿನ ಹಲವು ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಜಯಲಕ್ಷ್ಮಿ ಪೂಜೆ ಸಲ್ಲಿಸಿದ್ದರು.

ಇನ್ನೊಂದೆಡೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವೈಯಕ್ತಿಕವಾಗಿ ಹಾಜರಾಗುವ ವಿಚಾರಕ್ಕೆ ಸಂಬಂಧಿಸಿದಂತೆ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ವಜಾಗೊಳಿಸಿದೆ. ಇದರಿಂದ ದರ್ಶನ್‌ಗೆ ಮತ್ತೊಂದು ಹಿನ್ನಡೆಯಾಗಿದೆ.ಈ ಹಿಂದೆ ದರ್ಶನ್ ಅವರನ್ನು ನ್ಯಾಯಾಲಯಕ್ಕೆ ನೇರವಾಗಿ ಹಾಜರುಪಡಿಸಿದ ಸಂದರ್ಭದಲ್ಲಿ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹಾಗೂ ಸಾರ್ವಜನಿಕರು ಕೋರ್ಟ್ ಆವರಣದಲ್ಲಿ ಸೇರಿದ್ದರು ಎಂದು ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ಅಭಿಮಾನಿಗಳ ಭಾರಿ ಸಂಖ್ಯೆಯ ಹಾಜರಾತಿಯಿಂದ ನ್ಯಾಯಾಲಯದ ಆವರಣದಲ್ಲಿ ಕಿಕ್ಕಿರಿದ ವಾತಾವರಣ ನಿರ್ಮಾಣವಾಗಿತ್ತು. ಚಾರ್ಜ್ ಫ್ರೇಮ್ ಸಿದ್ಧಪಡಿಸುವ ಸಂದರ್ಭದಲ್ಲಿ ನ್ಯಾಯಾಧೀಶರು ಹೇಳುವ ಮಾತುಗಳು ಆರೋಪಿಗಳಿಗೇ ಸ್ಪಷ್ಟವಾಗಿ ಕೇಳದ ಪರಿಸ್ಥಿತಿ ನಿರ್ಮಾಣವಾಗಿ, ವಿಚಾರಣೆಯ ಸಮಯವೂ ವ್ಯರ್ಥವಾಗಿತ್ತು ಎಂದು ಎಸ್‌ಪಿಪಿ ವಾದಿಸಿದ್ದರು.

ಹೀಗಾಗಿ ದರ್ಶನ್ ಅವರನ್ನು ಪ್ರತಿಬಾರಿ ನ್ಯಾಯಾಲಯಕ್ಕೆ ಖುದ್ದಾಗಿ ಹಾಜರುಪಡಿಸುವ ಬದಲು ಅಗತ್ಯವಿರುವ ಸಂದರ್ಭದಲ್ಲಿ ಮಾತ್ರ ಹಾಜರುಪಡಿಸುವಂತೆ ಮನವಿ ಮಾಡಲಾಗಿತ್ತು. ಇದೀಗ ವೈಯಕ್ತಿಕ ಹಾಜರಾತಿಗೆ ಸಂಬಂಧಿಸಿದ ಅರ್ಜಿ ವಜಾಗೊಂಡಿರುವುದು ಪ್ರಕರಣದಲ್ಲಿ ಮತ್ತೊಂದು ಬೆಳವಣಿಗೆಯಾಗಿದೆ.ಒಂದೆಡೆ ಪ್ರದೋಷ್ ಮಾಫಿ ಸಾಕ್ಷಿಯಾಗಲು ಮುಂದಾಗಿರುವುದು, ಮತ್ತೊಂದೆಡೆ ವೈಯಕ್ತಿಕ ಹಾಜರಾತಿ ಅರ್ಜಿ ವಜಾಗೊಂಡಿರುವುದು ದರ್ಶನ್‌ಗೆ ಕಾನೂನು ಹೋರಾಟವನ್ನು ಮತ್ತಷ್ಟು ಕಠಿಣಗೊಳಿಸಿದೆ.







