ಮೂರು ಕೃಷಿ ಕಾನೂನುಗಳನ್ನು ಸರ್ಕಾರ ಪ್ರತಿಪಕ್ಷಗಳ ಜೊತೆ ಚರ್ಚಿಸದೆ ರದ್ದುಗೊಳಿಸಿರುವುದನ್ನು ನೋಡಿದರೆ ಸರ್ಕಾರವು ಈ ವಿಚಾರದ ಬಗ್ಗೆ ಚರ್ಚಿಸಲು ಹೆದರುತ್ತಿದೆ ಮತ್ತು ತಮ್ಮ ತಪ್ಪಿನ ಅರಿವಾದಂತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದಾರೆ.
ಕಳೆದ ಒಂದು ವರ್ಷದಿಂದ ರೈತರು ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಪ್ರತಿಭಟಿಸಿದ್ದರು. ಸಂಸತ್ತು ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್, ನಾನು ಈ ಹಿಂದೆಯೆ ಭವಿಷ್ಯ ನುಡಿದಿದ್ದೆ ಸರ್ಕಾರ ರೈತರ ಪ್ರತಿಭಟನೆಗೆ ಮಣಿದು ಕಾನೂನುಗಳನ್ನು ಹಿಂಪಡೆಯುತ್ತದೆ ಎಂದು. ಆದರೆ ಇದು ಇವಾಗ ನಿಜವಾಗಿದೆ ಯಾರೋ ಮೂರು, ನಾಲ್ಕು ಬಂಡವಾಳಶಾಹಿಗಳನ್ನು ಮೆಚ್ಚಿಸಲು ಈ ಕಾನೂನನ್ನು ಜಾರಿಗೆ ತರಲಾಯಿತು. ಆದರೆ, ರೈತರ ಮತ್ತು ಕಾರ್ಮಿಕರ ಶಕ್ತಿಯನ್ನು ಯಾರೇ ಬಂದರು ತಡೆಯಲು ಸಾಧ್ಯವಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ.
ದುರದೃಷ್ಟಕರ ಸಂಗತಿ ಎಂದರೆ ಮಸೂದೆಯನ್ಬು ಯಾವುದೇ ಚರ್ಚೆಯಿಲ್ಲದೆ ರದ್ದುಗೊಳಿಸಲಾಗಿದೆ. ನಾವು ಈ ಮಸೂದೆಗಳ ಹಿಂದಿದ್ದ ಶಕ್ತಿಗಳ ಬಗ್ಗೆ ಚರ್ಚಿಸಲು ಬಯಸಿದ್ದೆವು. ಏಕೆಂದರೆ ಈ ಮಸೂದೆಗಳು ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವನ್ನ ಪ್ರತಿಬಿಂಬಿಸುವುದಿಲ್ಲ ಕೆಲವು ದುಷ್ಟ ಶಕ್ತಿಗಳನ್ನು ಬಿಂಬಿಸುತ್ತವೆ. ಅದರ ಬಗ್ಗೆ ನಾವು ಚರ್ಚಿಸಲು ಬಯಸಿದ್ದೆವು ಎಂದು ಹೇಳಿದ್ದಾರೆ.
ನಾವು ಎಂಎಸ್ಪಿ, ಲಖೀಂಪುರ್ ಖೇರಿ ಹಿಂಸಾಚಾರ ಮತ್ತು ಪ್ರತಿಭಟನೆ ವೇಳೆ ಮೃತಪಟ್ಟ 700 ಕ್ಕೂ ಹೆಚ್ಚಿನ ರೈತರ ಬಗ್ಗೆ ಚರ್ಚಿಸಲು ಬಯಸಿದೆವು. ಆದರೆ, ಸರ್ಕಾರ ಅವಕಾಶವನ್ನ ಕೊಡಲಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಈ ವಿಚಾರದ ಬಗ್ಗೆ ಚರ್ಚೆ ನಡೆಸಲು ಸರ್ಕಾರ ಹೆದರುತ್ತದೆ ಮತ್ತು ವಿಷಯವನ್ನ ಮರೆಮಾಚಲು ಯತ್ನಿಸುತ್ತಿದೆ ಎಂದು ಕಿಡಿಕಾರಿದ್ದಾರೆ. ಚರ್ಚೆಗೆ ಅವಕಾಶ ನೀಡದೆ ಮಸೂದೆಯನ್ನು ಅಂಗೀಕರಿಸಿದರೆ ಏನು ಪ್ರಯೋಜನ ಎಂದು ಕೇಂದ್ರ ಸರ್ಕಾರವನ್ನ ಪ್ರಶ್ನಿಸಿದ್ದಾರೆ.