ಬೆಂಗಳೂರು : ಗಣರಾಜ್ಯೋತ್ಸವದಂದು ನಾವು ಸಂವಿಧಾನವನ್ನು ಹೊಗಳುತ್ತೇವೆ. ಸಮಾನತೆ, ಸ್ವಾತಂತ್ರ್ಯ, ಅವಕಾಶಗಳ ನ್ಯಾಯ ಎಂಬ ಘೋಷಣೆಗಳನ್ನು ಜೋರಾಗಿ ಕೂಗುತ್ತೇವೆ. ಆದರೆ ಅದೇ ಸಂವಿಧಾನವನ್ನು ಪ್ರತಿದಿನ ಮೌನವಾಗಿ ಕುಸಿತಗೊಳಿಸುವ ಒಂದು ವ್ಯವಸ್ಥೆಯನ್ನು ನಾವು ಸಹಜವಾಗಿ ಒಪ್ಪಿಕೊಂಡಿದ್ದೇವೆ ; ಅದೇ ಕುಟುಂಬ ರಾಜಕಾರಣ. ಪ್ರಜಾಪ್ರಭುತ್ವದಿಂದ ರಾಜಪ್ರಭುತ್ವದ ಕಡೆ ಹೋಗುತ್ತಿರುವ ನಾವು ಗಣ ರಾಜ್ಯೋತ್ಸವ ಆಚರಿಸುತ್ತಿರುವುದು ವಿಕಟ. ಇದು ಪ್ರಜಾಪ್ರಭುತ್ವದ ವೈಫಲ್ಯವಲ್ಲ; ಪ್ರಜಾಪ್ರಭುತ್ವಕ್ಕೆ ವಂಚನೆ.
ರಾಜಕಾರಣ ಜನರದೇ? ಅಥವಾ ಕೆಲ ಕುಟುಂಬಗಳ ಜಾಗೀರ್ದಾರಿಯೇ?
ಕುಟುಂಬ ರಾಜಕಾರಣ ಎಂದರೆ ರಾಜಕೀಯ ಅಧಿಕಾರವು ಜನರಿಂದ ಜನರಿಗೆ ಹರಿಯದೆ, ತಂದೆಯಿಂದ ಮಗನಿಗೆ, ತಾಯಿಯಿಂದ ಮಗಳಿಗೆ, ಗಂಡನಿಂದ ಹೆಂಡತಿಗೆ ವರ್ಗಾಯಿಸುವ ವ್ಯವಸ್ಥೆ. ಇದು ಚುನಾವಣೆ ಎಂಬ ಪ್ರಕ್ರಿಯೆಯ ಹಿಂದೆ ಅಡಗಿಕೊಂಡಿರುವ ರಾಜಕೀಯ ವಂಶಪಾರಂಪರ್ಯ. ಪ್ರಜಾಪ್ರಭುತ್ವದಲ್ಲಿ ಜನ ತೀರ್ಪುಗಾರರು ಆಗಬೇಕು. ಆದರೆ ಭಾರತದಲ್ಲಿ ಜನರು ಅನೇಕ ಬಾರಿ ಕೇವಲ ವಾರಸುದಾರರನ್ನು ದೃಢೀಕರಿಸುವ ಯಂತ್ರಗಳಾಗಿ ಬದಲಾಗಿದ್ದಾರೆ.
ಒಂದು ಪಕ್ಷದ ಸಮಸ್ಯೆಯೇ?
ಕುಟುಂಬ ರಾಜಕಾರಣ ಒಂದು ಪಕ್ಷಕ್ಕೆ ಅಂಟಿಕೊಂಡ ಪಾಳೇಗಾರಿಕೆಯಲ್ಲ. ಇದೇ ಮಾದರಿ ಇತರೆ ಎಲ್ಲ ಪಕ್ಷಗಳಲ್ಲಿಯೂ ಸಾಮಾನ್ಯವಾಗಿದೆ. ಜವಾಹರಲಾಲ್ ನೆಹರು ಅವರ ನಂತರ ಅವರ ಪುತ್ರಿ ಇಂದಿರಾ ಗಾಂಧಿ, ಅವರ ಮಗ ರಾಜೀವ್ ಗಾಂಧಿ, ಸೊಸೆ ಸೋನಿಯಾ ಗಾಂಧಿ ಮತ್ತು ಮಗ ರಾಹುಲ್ ಗಾಂಧಿ, ಮಗಳು ಪ್ರಿಯಾಂಕ ಗಾಂಧಿ ಅಧಿಕಾರದಲ್ಲಿ ಮುಂದುವರಿದ್ದಾರೆ. ಇದು ಕೇವಲ ಕಾಂಗ್ರೆಸ್‌ಗೆ ಸೀಮಿತವಲ್ಲ; ಬಿಜೆಪಿ, ಎಸ್‌ಪಿ, ಡಿಎಂಕೆ ಮುಂತಾದ ಪಕ್ಷಗಳಲ್ಲೂ ಇದು ಕಂಡುಬರುತ್ತದೆ. ಉತ್ತರ ಪ್ರದೇಶದಲ್ಲಿ ಯಾದವ್ ಕುಟುಂಬ: ಮುಲಾಯಂ ಸಿಂಗ್ ಯಾದವ್ ಅವರ ಮಗ ಅಖಿಲೇಶ್ ಯಾದವ್ ಮುಖ್ಯಮಂತ್ರಿಯಾಗಿದ್ದರು ಮತ್ತು ಅವರ ಕುಟುಂಬದ ಹಲವು ಸದಸ್ಯರು ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಪಂಜಾಬ್‌ನಲ್ಲಿ ಸುಖಬೀರ್ ಸಿಂಗ್ ಬಾದಲ್ ಮತ್ತು ಅವರ ಕುಟುಂಬ, ತಮಿಳುನಾಡಿನಲ್ಲಿ ಕರುಣಾನಿಧಿ ಕುಟುಂಬ, ಮಹಾರಾಷ್ಟ್ರದಲ್ಲಿ ಠಾಕ್ರೆ ಕುಟುಂಬ, ಕರ್ನಾಟಕದಲ್ಲಿ ದೇವೇಗೌಡರು, ಶಾಮನೂರು ಶಿವಶಂಕರಪ್ಪ, ಜಾರಕಿಹೊಳಿ ಕುಟುಂಬ – ಮುಂತಾದ ಉದಾಹರಣೆಗಳು ಇದನ್ನು ಸಾಬೀತುಪಡಿಸುತ್ತವೆ.
ಕುಟುಂಬ ರಾಜಕಾರಣ ಪಕ್ಷಗಳ ದೋಷವಲ್ಲ,
ಇದು ಭಾರತದ ರಾಜಕೀಯ ಸಂಸ್ಕೃತಿಯ ದೋಷ.
ಕುಟುಂಬ ರಾಜಕಾರಣ ಅರ್ಹತೆಯನ್ನು ಹತ್ಯೆ ಮಾಡುತ್ತದೆ.
ಒಬ್ಬ ಸಾಮಾನ್ಯ ಕಾರ್ಯಕರ್ತ, ಪ್ರತಿಭಾವಂತ ಯುವ ನಾಯಕ, ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿದರೂ, ಕೊನೆಗೆ ಟಿಕೆಟ್ ಸಿಗುವುದು “ಕುಟುಂಬದ ಕುಡಿ”ಗೆ. ರಾಜಕೀಯವು ಸೇವೆಯ ಕ್ಷೇತ್ರವಾಗದೇ, ಉತ್ತರಾಧಿಕಾರದ ಹುದ್ದೆಯಾಗಿ ಬದಲಾಗುತ್ತದೆ.
ವಿಶ್ವ ಬ್ಯಾಂಕ್ ಮತ್ತು ಇತರ ಅಧ್ಯಯನಗಳು ಹೇಳುವಂತೆ:
•ಕುಟುಂಬ ರಾಜಕಾರಣ ಆರ್ಥಿಕ ಅಭಿವೃದ್ಧಿಯನ್ನು ಕುಗ್ಗಿಸುತ್ತದೆ
•ಭ್ರಷ್ಟಾಚಾರವನ್ನು ಸಂಸ್ಥಾನೀಕರಿಸುತ್ತದೆ
•ಆಡಳಿತವನ್ನು ಉತ್ತರದಾಯಿತ್ವವಿಲ್ಲದಂತೆ ಮಾಡುತ್ತದೆ
*ಅಧಿಕಾರ ವಾರಸುದಾರನಿಗೆ ಸಿಕ್ಕಾಗ, ಜನರಿಗೆ ಉತ್ತರಿಸಬೇಕಾದ ಅವಶ್ಯಕತೆ ಕಡಿಮೆಯಾಗುತ್ತದೆ.
“ಅವರು ಅಭಿವೃದ್ಧಿ ಮಾಡುತ್ತಾರೆ” ಎಂಬ ಮಿಥ್
ಕುಟುಂಬ ರಾಜಕಾರಣದ ಪರವಾಗಿ ನೀಡುವ ವಾದ
“ಅವರು ದೀರ್ಘಕಾಲಿಕ ಅಭಿವೃದ್ಧಿ ಮಾಡುತ್ತಾರೆ.”
ವಾಸ್ತವದಲ್ಲಿ, ಇದು ಅಭಿವೃದ್ಧಿಯಲ್ಲ; ವೋಟು ಖರೀದಿಯ ನವೀನ ರೂಪ. ಪ್ರಯೋಜನಗಳನ್ನು ಹಂಚಿ, ನಿಷ್ಠೆ ಖರೀದಿಸುವ ರಾಜಕಾರಣ ತಾತ್ಕಾಲಿಕ ಲಾಭ ನೀಡಬಹುದು. ಆದರೆ ಅದು ನಾಗರಿಕರನ್ನು ಹಕ್ಕುದಾರರಾಗಿ ಅಲ್ಲ, ಉಪಕಾರ ಪಡೆದವರಾಗಿ ರೂಪಿಸುತ್ತದೆ. ಇದು ಪ್ರಜಾಪ್ರಭುತ್ವವಲ್ಲ; ಅವಲಂಬಿತ ರಾಜಕೀಯ!
ಕಟುವಾದ ಸತ್ಯ ಏನೆಂದರೆ ಕುಟುಂಬ ರಾಜಕಾರಣ ರಾಜಕಾರಣಿಗಳಿಂದ ಮಾತ್ರ ಉಳಿದಿಲ್ಲ; ಜನರಿಂದ ಉಳಿದಿದೆ. ಸರ್ವೇಗಳ ಪ್ರಕಾರ, 46% ಭಾರತೀಯರು ಕುಟುಂಬ ರಾಜಕಾರಣಿಗಳನ್ನು ಬೆಂಬಲಿಸುತ್ತಾರೆ. ಹೆಸರು, ಜಾತಿ, ಕುಟುಂಬ ಪರಿಚಯ ಇವೆಲ್ಲವೂ ಮತದಾನದ ಮಾನದಂಡಗಳಾಗಿವೆ. ಪ್ರಶ್ನೆ ಕೇಳದ ಮತದಾರನೇ ಕುಟುಂಬ ರಾಜಕಾರಣದ ಅತಿದೊಡ್ಡ ಶಕ್ತಿ.
ಪರಿಹಾರವಿದೆಯೇ?
ಕುಟುಂಬ ರಾಜಕಾರಣವನ್ನು ಒಂದು ಕಾನೂನಿನಿಂದ, ಪ್ರತಿಭಟನೆಯಿಂದ ತಕ್ಷಣಕ್ಕೆ ನಿಲ್ಲಿಸಲಾಗದು. ಆದರೆ ಇದನ್ನು ದುರ್ಬಲಗೊಳಿಸಬಹುದು.
•ಪಕ್ಷಗಳ ಒಳಾಂಗಣ ಪ್ರಜಾಪ್ರಭುತ್ವ ಕಡ್ಡಾಯವಾಗಬೇಕು
•ಟಿಕೆಟ್ ಹಂಚಿಕೆಗೆ ಪಾರದರ್ಶಕ ಮಾನದಂಡ ಇರಬೇಕು
•ರಾಜಕೀಯ ಪಕ್ಷಗಳು ಖಾಸಗಿ ಆಸ್ತಿಯಂತೆ ವರ್ತಿಸುವುದನ್ನು ತಡೆಯಬೇಕು
•ಪ್ರಜಾಪ್ರಭುತ್ವಎಂದರೇ “ಕುಟುಂಬವಲ್ಲ, ಸಾಮರ್ಥ್ಯ” ಎಂಬ ಮನೋಭಾವ ಬೆಳೆಸಬೇಕು
ಈ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನಾವು ಕೇಳಬೇಕಾದ ಪ್ರಶ್ನೆ ಇದು:
ನಾವು ಪ್ರಜಾಪ್ರಭುತ್ವವನ್ನು ಆಚರಿಸುತ್ತಿದ್ದೇವೆಯೇ, ಅಥವಾ ಕೇವಲ ಕುಟುಂಬ ರಾಜಕಾರಣಕ್ಕೆ ಸಂವಿಧಾನಾತ್ಮಕ ಮುದ್ರೆ ಹಾಕುತ್ತಿದ್ದೇವೆಯೇ?
ಕುಟುಂಬ ರಾಜಕಾರಣ ಮುಂದುವರಿದರೆ,
ಚುನಾವಣೆಗಳು ಇರುತ್ತವೆ; ಆದರೆ ಆಯ್ಕೆ ಇರುವುದಿಲ್ಲ.
ಪಕ್ಷಗಳು ಇರುತ್ತವೆ; ಆದರೆ ಪ್ರಜಾಪ್ರಭುತ್ವ ಇರುವುದಿಲ್ಲ.
ಪ್ರಜಾಪ್ರಭುತ್ವ ಉಳಿಯಬೇಕಾದರೆ,
ಕುಟುಂಬ ರಾಜಕಾರಣಕ್ಕೆ ರಾಜಕೀಯವಾಗಿ ಮಾತ್ರವಲ್ಲ;
ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸವಾಲು ಹಾಕಬೇಕಿದೆ.
– ರಾ. ಚಿಂತನ್











