ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಬಿ.ವೈ ವಿಜಯೇಂದ್ರ ಆಯ್ಕೆಯಿಂದ ಬಿಜೆಪಿ ಅಂಗಳದಲ್ಲಿ ಬೆಂಕಿಯೇ ಬಿದ್ದಿತ್ತು, ಹೈಕಮಾಂಡ್ ನಾಯಕರ ನಿರ್ಧಾರವನ್ನು ಪ್ರಶ್ನೆಯನ್ನೂ ಮಾಡಲಾಗದೆ, ಒಪ್ಪಿಕೊಳ್ಳಲೂ ಆಗದ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿದ್ರು. ಆದರೆ ಎಲ್ಲಿಯೂ ಭಿನ್ನಭಿಪ್ರಾಯ ತೋರ್ಪಡಿಕೆ ಆಗಿರಲಿಲ್ಲ. ಆದರೆ ಬೆಂಗಳೂರಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಿನ್ನಮತ ಬಹಿರಂಗ ಆಗಿದೆ. ಜೊತೆಗೆ ಆರ್ ಅಶೋಕ್ ಅವರನ್ನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡುವ ಮುನ್ನವೇ ಸಭೆಯಿಂದ ಹೊರ ನಡೆಯುವ ಮೂಲಕ ಅಸಮಾಧಾನದ ಕಿಚ್ಚನ್ನು ವಹಿರಂಗವಾಗಿ ತೋರ್ಪಡಿಸಿದ್ದಾರೆ. ಬಿಜೆಪಿಯಲ್ಲಿ ಅತಿ ಹಿರಿಯ ಶಾಸಕ ಆಗಿರುವ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್. ಅಶೋಕ್ ಅವರನ್ನು ವಿಪಕ್ಷ ನಾಯಕನನ್ನಾಗಿ ಆಯ್ಕೆ ಮಾಡುವ ಮೂಲಕ ಯಡಿಯೂರಪ್ಪ ಆಯ್ಕೆಯನ್ನಷ್ಟೇ ಬಿಜೆಪಿ ಹೈಕಮಾಂಡ್ ಪರಿಗಣಿಸಿದೆ ಎನ್ನುವ ಮಾಹಿತಿ ಹೊರ ಬೀಳುತ್ತಿದೆ.
ಶಾಸಕಾಂಗ ಪಕ್ಷದ ಸಭೆ ಬಹಿಷ್ಕರಿಸಿದವರು ಯಾರು..?
ರಾಜ್ಯ ವಿಧಾನಸಭೆಯಲ್ಲಿ 66 ಶಾಸಕರ ಬಲವನ್ನು ಹೊಂದಿರುವ ಭಾರತೀಯ ಜನತಾ ಪಾರ್ಟಿಯಲ್ಲಿ ಸಾಕಷ್ಟು ಜನರು ಪ್ರಬಲ ಪೈಪೋಟಿ ನಡೆಸುತ್ತಿದ್ದರು. ಅದರಲ್ಲೂ ವಿಜಯಪುರ ಕ್ಷೇತ್ರದ ಶಾಸಕ ಹಿಂದುತ್ವದ ಫೈರ್ ಬ್ರ್ಯಾಂಡ್ ಎಂದೇ ಹೆಸರುವಾಸಿಯಾಗಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ಪಕ್ಷದ ಸ್ಥಾನಕ್ಕೆ ಪ್ರಮುಖ ಆಕಾಂಕ್ಷಿಯಾಗಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಸರ್ವಾನುಮತದಿಂದ ಆರ್ ಅಶೋಕ್ ಹೆಸರನ್ನು ಘೋಷಣೆ ಮಾಡುವ ಸುಳಿವು ಸಿಗುತ್ತಿದ್ದಂತೆ ITC ಗಾರ್ಡೇನಿಯಾ ಹೋಟೆಲ್‌ನಿಂದ ಹೊರಬಂದ ಯತ್ನಾಳ್ ಹಾಗು ರಮೇಶ್ ಜಾರಕಿಹೊಳಿ ಮನೆಗೆ ತೆರಳಿದ್ದಾರೆ. ಇನ್ನು ಶಾಸಕಾಂಗ ಸಭೆಗೆ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ, ಬಾಲಚಂದ್ರ ಜಾರಕಿಹೊಳಿ, ಶಿವರಾಮ್ ಹೆಬ್ಬಾರ್, ಎಸ್.ಟಿ ಸೋಮಶೇಖರ್ ಗೈರು ಹಾಜರು ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಶಾಸಕಾಂಗ ಸಭೆಯಲ್ಲಿ ಸುನಿಲ್ ಕುಮಾರ್‌ಗೂ ಒಲವು..
ಶಾಸಕಾಂಗ ಪಕ್ಷದ ಸಭೆಯಲ್ಲಿ ಆರ್ ಅಶೋಕ್ ಅವರ ಆಯ್ಕೆಗೂ ಮುನ್ನ ಕಾರ್ಕಳ ಶಾಸಕ ಸುನೀಲ್ ಕುಮಾರ್ ಅವರ ಕಡೆಗೂ ಕೆಲವು ಶಾಸಕರು ಒಲವು ತೋರಿಸಿದ್ರು. ಆದರೆ ಅಂತಿಮವಾಗಿ ಮಾಜಿ ಸಿಎಂ ಯಡಿಯೂರಪ್ಪ ಅವರ ನಿರ್ಧಾರದಂತೆ ಎಲ್ಲಾ ಶಾಸಕರು ಆರ್. ಅಶೋಕ್ ಅವರನ್ನು ಬೆಂಬಲಿಸಿದ್ರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಆರ್ ಅಶೋಕ್ ಹೆಸರನ್ನು ಸೂಚಿಸಿದ್ರೆ, ಪೈಪೋಟಿಯಲ್ಲಿದ್ದ ಸುನೀಲ್ ಕುಮಾರ್ ಅನುಮೋದನೆ ಮಾಡಿದ್ರು. ಆ ಬಳಿಕ ಆರ್ ಅಶೋಕ್ ಅವರನ್ನು ವೇದಿಕೆ ಮೇಲೆ ಕರೆತಂದು ಕೂರಿಸಲಾಯ್ತು. ಉತ್ತರ ಕರ್ನಾಟಕ ಭಾಗದ ಶಾಸಕರನ್ನು ವಿರೋಧ ಪಕ್ಷದ ನಾಯಕನನ್ನಾಗಿ ಮಾಡಬೇಕು ಅನ್ನೋ ಒತ್ತಾಯವನ್ನು ಯತ್ನಾಳ್ ಹಾಗು ರಮೇಶ್ ಜಾರಕಿಹೊಳಿ ಮಾಡಿದ್ದರು ಎನ್ನಲಾಗಿದೆ. ಅಂತಿಮವಾಗಿ ವೀರಶೈವ ಲಿಂಗಾಯತ ಸಮುದಾಯದಲ್ಲಿ ರಾಜ್ಯಾಧ್ಯಕ್ಷ ಹಾಗು ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ಕೊಡುವ ಮೂಲಕ ರಾಜಕೀಯ ಲೆಕ್ಕಾಚಾರ ಮಾಡಲಾಗಿದೆ.
ಆರ್. ಅಶೋಕ್ ಆಯ್ಕೆ ಹಿಂದೆ ಸಾಕಷ್ಟು ಲೆಕ್ಕಾಚಾರ..!
ಪ್ರತಿಧ್ವನಿ ಕಳೆದ ನಾಲ್ಕೈದು ದಿನಗಳ ಹಿಂದೆಯೇ ಅಶೋಕ್ ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಆಗುವ ಬಗ್ಗೆ ಸುದ್ದಿ ಮಾಡಿತ್ತು. ಆರ್ ಅಶೋಕ್ ಬಿಜೆಪಿಯಲ್ಲಿ ಹಿರಿಯ ನಾಯಕ ಜೊತೆಗೆ, ಪಕ್ಷನಿಷ್ಠ ಎನ್ನುವ ಖ್ಯಾತಿಯೂ ಸೇರಿಕೊಂಡಿದೆ. ಆದರೆ ರಾಜಕಾರಣದಲ್ಲಿ ಸದಾಕಾಲ ಹೊಂದಾಣಿಕೆ ರಾಜಕೀಯ ಮಾಡುತ್ತಾರೆ ಅನ್ನೋ ಆರೋಪ ಇದೆ. ಸ್ವತಃ ಪದ್ಮನಾಭನಗರದಲ್ಲಿ ಜೆಡಿಎಸ್ ಬೆಂಬಲ ಇಲ್ಲದಿದ್ದರೆ ಸೋಲು ಕಟ್ಟಿಟ್ಟ ಬುತ್ತಿ ಎಂದೇ ರಾಜಕೀಯ ವಲಯದಲ್ಲಿ ಚರ್ಚೆ ಆಗುವ ವಿಚಾರ. ಇದೇ ಕಾರಣಕ್ಕೆ ಕಳೆದ ಸರ್ಕಾರದಲ್ಲಿ ಮಂಡ್ಯ ಉಸ್ತುವಾರಿಯಾಗಿ ನೇಮಕ ಆದ ಬೆನ್ನಲ್ಲೇ ಗೋ ಬ್ಯಾಕ್ ಅಶೋಕ್ ಅನ್ನೋ ನಾಮಫಲಕ ಹಾಕಲಾಗಿತ್ತು. ಸಾಮಾಜಿಕ ಜಾಲತಾಣದಲ್ಲೂ ಗೋಬ್ಯಾಕ್ ಅಶೋಕ್ ಅಬ್ಬರ ಸೃಷ್ಟಿಸಿತ್ತು. ಆ ಬಳಿಕ ಮಂಡ್ಯ ಜಿಲ್ಲಾ ಉಸ್ತುವಾರಿಯನ್ನೇ ಬಿಟ್ಟಿದ್ದರು. ಆದರೆ ಈಗ ಜೆಡಿಎಸ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿರುವ ಬಿಜೆಪಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುವ ನಾಯಕರ ಅಗತ್ಯ ಹೆಚ್ಚಾಗಿದೆ. ಇದೊಂದೇ ಕಾರಣಕ್ಕೆ ಆರ್ ಅಶೋಕ್ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನೊಂದು ಕಾರಣ ಅಂದ್ರೆ ಎರಡು ಪ್ರಬಲ ಸಮುದಾಯದ ನಾಯಕರಿಗೆ ಮಣೆ ಹಾಕಿರುವ ಕಾರಣ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸುಲಭ ಅನ್ನೋದು ಅಷ್ಟೆ. ಅಶೋಕ್ ಅವರನ್ನು ಆಯ್ಕೆ ಮಾಡುತ್ತಿದ್ದಂತೆ ಹೋಟೆಲ್ ಮುಂಭಾಗ ಅಶೋಕ್ ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದಾರೆ. ಒಟ್ಟಾರೆ ಇಷ್ಟು ದಿನಗಳ ಕಾಲ ಖಾಲಿ ಬಿದ್ದಿದ್ದ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಬರೋಬ್ಬರಿ 6 ತಿಂಗಳ ಬಳಿಕ ಭರ್ತಿ ಮಾಡಿದ್ದಾರೆ ಅನ್ನೋದಷ್ಟೆ ಸಮಾಧಾನದ ಸಂಗತಿ
ಕೃಷ್ಣಮಣಿ