ಬಿಜೆಪಿ ಸಚಿವರಾದ ಆರ್. ಅಶೋಕ ಹಾಗೂ ವಿ ಸೋಮಣ್ಣ ನಡುವಿನ ಜಗಳ ಈಗ ಮತ್ತೆ ತಾರಕಕ್ಕೇರಿದೆ. ಬೆಂಗಳೂರಿನ ಈ ಸಚಿವದ್ವಯರ ಬಹಿರಂಗ ಕಾದಾಟ ರಾಜ್ಯ ಬಿಜೆಪಿಗೆ ಬಗೆ ಹರಿಸಲಾಗದ ತಲೆನೋವಾಗಿ ಪರಿಣಮಿಸಿದೆ. ಹಾಗೆ ನೋಡಿದರೆ, ಈ ಸಚಿವರಿಬ್ಬರ ನಡುವಿನ ಕಾದಾಟಕ್ಕೆ ದೀರ್ಘ ಇತಿಹಾಸವಿದೆ.
2019 ರಲ್ಲಿ ಸಭೆಯೊಂದರಲ್ಲಿ ಸುತ್ತೂರು ಶ್ರೀಗಳ ಎದುರು ನಡೆದಿದ್ದ ಇವರಿಬ್ಬರ ಕಾದಾಟ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅದಾದ ಬಳಿಕ ಫೋನ್ ಕಾಲ್‌ನಲ್ಲಿ ಪರಸ್ಪರ ಏಕವಚನದಲ್ಲಿ ಕಿತ್ತಾಡಿಕೊಂಡು ಮುಜುಗರವನ್ನೂ ಸೃಷ್ಟಿಸಿದ್ದರು. ಇದೀಗ ಮತ್ತೆ ಇವರಿಬ್ಬರು ಬಹಿರಂಗ ಕಾದಾಟಕ್ಕೆ ಇಳಿದಿದ್ದಾರೆ. ಬೆಂಗಳೂರು ಉಸ್ತುವಾರಿ ವಿಚಾರದಲ್ಲಿ ಇವರಿಬ್ಬರ ನಡುವೆ ತೀವ್ರ ಪೈಪೋಟಿ ಶುರು ಆಗಿದ್ದು, ಅದಕ್ಕೆ ಬೆಂಗಳೂರಿನ ಉಸ್ತುವಾರಿ ಕುರಿತಂತೆ ಸೋಮಣ್ಣ ನೀಡಿರುವ ಹೇಳಿಕೆಯೇ ಸಾಕ್ಷಿ.
ಸದ್ಯ ಸಿಎಂ ಬಸವರಾಜ ಬೊಮ್ಮಾಯಿ ಬಳಿ ಬೆಂಗಳೂರು ನಗರಾಭಿವೃದ್ದಿ ಖಾತೆ ಇದೆ. ಹಲವಾರು ಖಾತೆಗಳನ್ನು ನಿಭಾಯಿಸಲು ಕಷ್ಟವಾಗುವ ಹಿನ್ನೆಲೆಯಲ್ಲಿ ಸಿಎಂ ತನ್ನ ಆಪ್ತರಾಗಿರುವ ಅಶೋಕ್ ಅವರಿಗೆ ಬೆಂಗಳೂರಿನ ಮೇಲುಸ್ತುವಾರಿಯನ್ನು ನೋಡಿಕೊಳ್ಳಲು ಸೂಚಿಸಿದ್ದಾರೆ ಎನ್ನಲಾಗಿದೆ. ಅಧಿಕೃತವಾಗಿ ಉಸ್ತುವಾರಿಯನ್ನು ನೀಡದಿದ್ದರೂ ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆಗಳನ್ನು ಅಶೋಕ್ ನಡೆಸುತ್ತಿದ್ದಾರೆ. ಆದರೆ ಆ ಸಭೆಗಳಿಗೆ ಬೆಂಗಳೂರಿನ ಇತರೆ ಸಚಿವರನ್ನು, ಶಾಸಕರನ್ನು ಆಹ್ವಾನಿಸುತ್ತಿಲ್ಲ.
ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಬೆಂಗಳೂರಿನ ಉಸ್ತುವಾರಿಯನ್ನು ತನಗೇ ನೀಡಿರುವಂತೆ ಅಶೋಕ್ ವರ್ತಿಸುತ್ತಿದ್ದಾರೆ ಎನ್ನುವುದು ವಿ ಸೋಮಣ್ಣ ಸೇರಿದಂತೆ ಇತರೆ ಬಿಜೆಪಿ ಶಾಸಕರ ಹಾಗೂ ಸಚಿವರ ಅಸಮಾಧಾನಕ್ಕೆ ಕಾರಣವಾಗಿದೆ.
ಅದೂ ಅಲ್ಲದೆ, ತಾನು ಕರೆದ ಸಭೆಗಳಲ್ಲಿ ಆರ್. ಅಶೋಕ ಪಾಲ್ಗೊಳ್ಳುವುದಿಲ್ಲ ಎಂಬ ಅಸಮಾಧಾನವೂ ವಿ ಸೋಮಣ್ಣ ಅವರಿಗಿದೆ.
ಬೆಂಗಳೂರು ರಸ್ತೆ ಗುಂಡಿ ಸಮಸ್ಯೆ ಪರಿಹಾರ ವಿಚಾರಕ್ಕೆ ಸಂಬಂದಪಟ್ಟಂತೆ ಸಚಿವ ಆರ್. ಅಶೋಕ್ ನಡೆಸಿದ್ದ ಸಭೆಯಲ್ಲಿ ಬೆಂಗಳೂರಿನ ಇತರ ಸಚಿವರು ಇರಲಿಲ್ಲ. ಬೆಂಗಳೂರು ಸಚಿವರಿಗೆ ಆಹ್ವಾನ ನೀಡದೇ ಕೇವಲ ಬಿಬಿಎಂಪಿ ಅಧಿಕಾರಿಗಳೊಂದಿಗೆ ಆರ್ ಅಶೋಕ್ ಸಭೆ ನಡೆಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಅದಾದ ಬಳಿಕ, ವಸತಿ ಇಲಾಖೆಗೆ ಸಂಬಂಧ ಪಟ್ಟಂತೆ ಸಚಿವ ಸೋಮಣ್ಣ ಬೇಕಂತಲೇ ಅಶೋಕ್ ಅವರಿಗೆ ಆಹ್ವಾನ ನೀಡದೆ ಬೆಂಗಳೂರಿನ ಉಳಿದ ಶಾಸಕರು, ಸಚಿವರನ್ನು ಆಹ್ವಾನಿಸಿದ್ದರು. ಇದು ಅವರ ನಡುವಿನ ಶೀತಲ ಸಮರದ ಉದ್ವಿಗ್ನವನ್ನು ಹೆಚ್ಚಿಸಿದೆ.
ಅಶೋಕ್ ಮೇಲೆ ಅಸಮಾಧಾನವನ್ನು ಇಟ್ಟುಕೊಂಡೇ ಬಂದಿರುವ ಸೋಮಣ್ಣ, ಸಿಎಂ ಬಳಿ ಇರುವ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ತನಗೇ ನೀಡುವಂತೆ ಒತ್ತಡ ಹಾಕುತ್ತಿದ್ದಾರೆ. ಅಶೋಕ್ ಕೂಡಾ ನಗರಾಭಿವೃದ್ಧಿ ಖಾತೆಗೆ ಗುರಿಯಿಟ್ಟಿರುವುದು ಇವರ ನಡುವಿನ ತಿಕ್ಕಾಟವನ್ನು ತೀವ್ರಗೊಳಿಸಿದೆ. ಅದಕ್ಕೆ ಪೂರಕವೆಂಬಂತೆ, ತನ್ನ ಹಿರಿತನವನ್ನು ಮಾಧ್ಯಮಗಳ ಮುಂದೆಯೇ ಸೋಮಣ್ಣ ಪ್ರಸ್ತಾಪಿಸಿ ಉಸ್ತುವಾರಿಗೆ ಬೇಡಿಕೆ ಇಟ್ಟಿದ್ದಾರೆ.
ಬೆಂಗಳೂರಿನ ಉಸ್ತುವಾರಿಯನ್ನು ಯಾರಿಗೆ ಬೇಕಾದರೂ ನೀಡಲಿ. ಆದರೆ, ಹಿರಿತನವನ್ನು ಪರಿಗಣಿಸಲಿ. ನಾನು ಸಚಿವನಾಗಿದ್ದಾಗ ಅಶೋಕ್ ಎಮ್‌ಎಲ್‌ಎ ಕೂಡಾ ಆಗಿರಲಿಲ್ಲ ಎಂದು ಸೋಮಣ್ಣ ಹೇಳಿದ್ದಾರೆ.
ನಾನು ಬೆಂಗಳೂರಿನ ಹಿರಿಯ ಸಚಿವ. ಬೆಂಗಳೂರಿನ ಉಸ್ತುವಾರಿ ಮುಖ್ಯಮಂತ್ರಿ ಬಳಿಯೇ ಇರುವುದಾದರೆ ಅಭ್ಯಂತರವಿಲ್ಲ. ಉಸ್ತುವಾರಿಯನ್ನು ಬೇರೆಯವರಿಗೆ ಕೊಡುವುದಾದರೆ ನನ್ನನ್ನು ಪರಿಗಣಿಸಿ, 40 ವರ್ಷದಿಂದ ರಾಜಕಾರಣ ಮಾಡುತ್ತಿದ್ದೇನೆ ನಾನು ಎಲ್ಲರಿಗಿಂತ ಹೆಚ್ಚು ಅರ್ಹತೆ ಇರುವವನು ಎಂದು ಸಿಎಂ ಬಳಿ ಹೇಳಿರುವುದಾಗಿ ಸೋಮಣ್ಣ ಮಾಧ್ಯಮಗಳ ಮುಂದೆ ತಿಳಿಸಿದ್ದಾರೆ.
ಬೆಂಗಳೂರಿನ ಉಸ್ತುವಾರಿಗೆ ಹೊಸ ಪ್ರಸ್ತಾಪ.!
ಇದೆಲ್ಲದರ ನಡುವೆ ಸೋಮಣ್ಣ ಅವರು ಬೆಂಗಳೂರಿನ ಉಸ್ತುವಾರಿ ಸಂಬಂಧಪಟ್ಟಂತೆ ನೂತನ ಪ್ರಸ್ತಾಪ ಇಟ್ಟಿದ್ದು, ಉಸ್ತುವಾರಿಯನ್ನು ಪಾಲು ಮಾಡುವಂತೆ ಹಾಗೂ ಇಬ್ಬರು ಉಸ್ತುವಾರಿಯನ್ನು ನೇಮಿಸುವಂತೆ ಹೊಸ ಪ್ರಸ್ತಾಪವನ್ನು ಸಿಎಂ ಮುಂದಿಟ್ಟಿದ್ದಾರೆ ಎಂಬ ಮಾತುಗಳೂ ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.
ತನಗೆ ಅರ್ಧ, ಅಶೋಕ್‌ಗೆ ಅರ್ಧ ಬೆಂಗಳೂರು ಎಂಬ ಸೋಮಣ್ಣ ಅವರ ಈ ಪ್ರಸ್ತಾಪವನ್ನು ಒಂದು ವೇಳೆ ಸಿಎಂ ಅಂಗೀಕರಿಸಿದರೆ, ಸಚಿವರ ನಡುವಿನ ಅಸಮಾಧಾನ ಇನ್ನಷ್ಟು ತೀವ್ರವಾಗುವ ಸಾಧ್ಯತೆ ಇದೆ. ಬೆಂಗಳೂರಿನ ಉಸ್ತುವಾರಿ ಹಂಚಿಕೆಯಾದರೆ, ಯಾರ ಪ್ರಭಾವ, ಅಧಿಕಾರ ಹೆಚ್ಚು ಎಂಬ ಪ್ರತಿಷ್ಟೆಯ ಹಕ್ಕು ಸ್ಥಾಪನೆ ಬಿರುಸಾಗಲಿದೆ.
ಬೇರೆ ಬೇರೆ ಇಲಾಖೆಯ ಉಸ್ತುವಾರಿಯನ್ನು ವಹಿಸಿಕೊಂಡು ಸಮನ್ವಯ ಇಲ್ಲದ ಈ ಸಚಿವರು ಬೆಂಗಳೂರು ಉಸ್ತುವಾರಿಯನ್ನು ಹಂಚಿಕೊಂಡು ಇನ್ನಷ್ಟು ಅಧ್ವಾನಗೊಳಿಸುವ ಸಾಧ್ಯತೆ ಇದೆ. ಒಟ್ಟಾರೆ, ಬೆಂಗಳೂರಿನ ಹಿರಿಯ ಇಬ್ಬರ ಶಾಸಕರ ಬಹಿರಂಗ ಜಗಳ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.