ರಾಜ್ಯಾದ್ಯಂತ ಮಳೆ ನಿತಂತರವಾಗಿ ಬರುತ್ತಿದ್ದು, ಮುಂದೆ ಕೂಡ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ನವೆಂಬರ್, ಡಿಸೆಂಬರ್ನಲ್ಲಿ ಮಳೆ ಬಂದರೆ ಏನೇನು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಎಂದು ಚರ್ಚೆ ನಡೆಸಿ, ಯಾರಿಗೂ ತೊಂದರೆ ಆಗದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸೋಮವಾರ ಸಿಎಂ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಸಭೆ ನಡೆಸಿದ ಸಚಿವರು ಮಲೆನಾಡು ಪ್ರದೇಶ, ನದಿ ಪಾತ್ರಗಳಲ್ಲಿ ಹೇಗೆ ಕ್ರಮ ಕೈಗೊಳ್ಳಬೇಕು ಅಂತ ಚರ್ಚೆ ನಡೆಸಿದ್ದೇವೆ. ಪ್ರಾಣ ಹಾನಿ ಆಗದಂತೆ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ವರ್ಷ ಎಷ್ಟು ಮಳೆ ಬಿದ್ದಿದೆ, ಮನೆ ಹಾನಿ ಆಗಿರುವುದು, ನೀಡಿದ ಪರಿಹಾರ, ಇನ್ನು ನೀಡಬೇಕಾದ ಪರಿಹಾರ, ಸರ್ಕಾರದಿಂದ ಮನೆ ಕಟ್ಟಲು ತೆಗೆದುಕೊಂಡ ಕ್ರಮ ಇವುಗಳ ಬಗ್ಗೆಯೂ ಸಹ ವಿಸ್ತೃತ ಚರ್ಚೆಯಾಗಿದೆ. ಬಡವರು ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡು ವಾಸವಾಗಿದ್ದಾರೆ. ಅವರಿಗೆ 94C ಅಡಿಯಲ್ಲಿ ಸಕ್ರಮಗೊಳಿಸಲು ಕ್ರಮಕೈಗೊಳ್ಳಲಾಗುವುದು ಅಂತರವನ್ನು ಗುರುತಿಸಿ ವಾಸವಾಗಿರುವ ಜಮೀನಿನ ಹಕ್ಕುಪತ್ರ ನೀಡಲಾಗುವುದು ಎಂದಿದ್ದಾರೆ.
ಲಂಬಾಣಿ ತಾಂಡ, ಹಟ್ಟಿ ಹಾಗೂ ಕುಟುಂಬ ದಾಖಲೆ ಇಲ್ಲದೆ ಮನೆ ಕಟ್ಟಿರೋದು ಕೂಡ ಚರ್ಚೆಯಾಗಿದೆ. ಡಿಸೆಂಬರ್ ಒಳಗೆ ಅಂತವರನ್ನು ಗುರುತಿಸಿ ಹಕ್ಕು ಪತ್ರ ನೀಡಲು ತೀರ್ಮಾನಿಸಲಾಗಿದೆ. ಸುಮಾರು 1ಲಕ್ಷ 20 ಸಾವಿರ ಜನರಿಗೆ ಹಕ್ಕು ಪತ್ರ ನೀಡುತ್ತೇವೆ. ಇದೊಂದು ಐತಿಹಾಸಿಕ ಕ್ರಮ. ಕಂದಾಯ ಗ್ರಾಮಗಳನ್ನಾಗಿ ಮಾಡಿ ಎಲ್ಲ ಸರ್ಕಾರಿ ಸೌಲಭ್ಯ ಸಿಗುವಂತೆ ಮಾಡುತ್ತೇವೆ. ಈ ಪ್ರಕ್ರಿಯೆ ಈಗ ಜಾರಿಯಲ್ಲಿದೆ ಎಂದು ಹೇಳಿದ್ದಾರೆ.
ಪೌತಿ ಖಾತೆಯ ಸಮಸ್ಯೆ ಬಗೆಹರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಪೌತಿ ಖಾತೆಯಲ್ಲಿ ಸತ್ತವರ ಹೆಸರು ಮುಂದುವರೆಯುತ್ತಿತ್ತು. ಸತ್ತವರ ಹೆಸರನ್ನ ಕೈಬಿಟ್ಟು, ವಾರಸುದಾರರ ಹೆಸರು ಸೇರಿಸಲು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಡಿಸಿ, ಎಸಿ, ತಹಶಿಲ್ದಾರರ ಕಚೇರಿಯಲ್ಲಿ 3-4 ವರ್ಷ ಕೇಸ್ ಮುಂದುವರೆಯುತ್ತಿತ್ತು. ಪ್ರತೀ ತಿಂಗಳು ಮೀಟಿಂಗ್ ಕರೆದು, ಚರ್ಚೆ ಮಾಡಿ ಕ್ಲಿಯರ್ ಮಾಡಲು ಸೂಚಿಸಲಾಗಿದೆ.
ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್ ನಲ್ಲಿ ಕೊಡುವ ಆಹಾರ ಗುಣಮಟ್ಟವನ್ನು ಕಾಲಕಾಲಕ್ಕೆ ಖುದ್ದಾಗಿ ಪರಿಶೀಲನೆ ನಡೆಸುವಂತೆ ಸೂಚಿಸಿದ್ದೇವೆ. ಹಾಸ್ಟೆಲ್, ಆಸ್ಪತ್ರೆ, ಶಾಲೆ ಹೀಗೆ ಸಾರ್ವಜನಿಕ ಉಪಯೋಗಕ್ಕೆ ಬೇಕಾದ ಭೂಮಿಯನ್ನು ವಿಳಂಬ ಮಾಡದೇ ನೀಡಲು ಸೂಚನೆ ನೀಡಿದ್ದೇವೆ.
ನಿವೃತ್ತ ಸೈನಿಕರು, ಮಡಿದ ಸೈನಿಕರ ಕುಟುಂಬಕ್ಕೆ ಪಟ್ಟಣ ವ್ಯಾಪ್ತಿಯಲ್ಲಿಯೇ ಸೈಟ್ ಕೊಡಲು ತೀರ್ಮಾನಿಸಲಾಗಿದೆ.
ರಾಯಚೂರು ಗ್ರಾಮ ವಾಸ್ತವ್ಯದಲ್ಲಿ 240ಕ್ಕೂ ಹೆಚ್ಚು ಸೈನಿಕರಿಗೆ ಸೈಟ್ ನೀಡಲು ರಾಯಚೂರು ಪಟ್ಟಣ ಪ್ರದೇಶದಲ್ಲಿ ಸ್ಥಳ ಗುರುತಿಸಿ, ಆದೇಶ ನೀಡಿದ್ದೇನೆ.
ರಾಜ್ಯಾದ್ಯಂತ ಮಳೆಯಾಗುತ್ತಿದ್ದು ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ಪೂರೈಕೆಯಲ್ಲಿ ಸ್ವಲ್ಪವೂ ಲೋಪ ಆಗದಂತೆ ನೋಡಿಕೊಳ್ಳಬೇಕು. ಪೂರೈಕೆಗೆ ಸರಿಯಾದ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ರೈತರಿಗೆ ಯಾವ ಸಮಸ್ಯೆಯೂ ಆಗದಂತೆ ಸರ್ಕಾರ ನೋಡಿಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ರಸ್ತೆ ಗುಂಡಿ ಅಪಘಾತ ವಿಚಾರ
ಸಮಸ್ಯೆ ನಮಗೂ ಅರ್ಥ ಆಗಿದೆ. ಆದರೆ ನಿರಂತರ ಮಳೆಯಾಗಿ ಸಮಸ್ಯೆ ಆಗಿದೆ. ರಸ್ತೆ ಗುಂಡಿ ವಿಚಾರವಾಗಿ ಕಮೀಷನರ್ ಜೊತೆ ನಾನು ಮಾತನಾಡಿದ್ದೇನೆ. ಸಿಎಂ ಕೂಡ ಕಮೀಷನರ್ ಜೊತೆ ಮಾತಾಡಿದಾರೆ. ಬೆಂಗಳೂರಿಗೆ ಆರು ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ನಿರಂತರ ಮಳೆಯಿಂದಾಗಿ ಕೆಲಸ ವಿಳಂಬ ಆಗುತ್ತಿದೆ. ಮಳೆಯಲ್ಲಿ ಟಾರ್ ಹಾಕಿದ್ರೆ ಕಿತ್ತು ಹೋಗುತ್ತಿದೆ.
ಹಾಗಾಗಿ ಟಾರ್ ಹಾಕಲು ಸಮಸ್ಯೆ ಆಗಿದೆ. ಮಳೆ ಒಂದು ವಾರ ಬಿಡುವು ಕೊಟ್ಟರೆ ಸಾಕು ಎಲ್ಲಾ ಕಡೆ ಟಾರ್ ಹಾಕುತ್ತೇವೆ. ಸ್ಟಾರ್ಮ್ ವಾಟರ್ಗೂ ಕೂಡ ಒಂದುವರೆ ಸಾವಿರ ಕೋಟಿ ಕೊಡಲಾಗಿದೆ. ಒತ್ತುವರಿ ತೆರವು ಕೂಡ ನಿರಂತರವಾಗಿ ಮಾಡುತ್ತೇವೆ.
ಬಡವ, ಶ್ರೀಮಂತ ಯಾರದ್ದೇ ಆದರೂ ಬಿಡಲ್ಲ. ಯಾರೇ ಆದ್ರೂ ಕ್ರಮ ಕೈಗೊಳ್ಳಿ ಅಂತ ಕಮೀಷನರ್ ಗೆ ಸ್ಪಷ್ಟವಾಗಿ ಸೂಚನೆ ನೀಡಲಾಗಿದೆ. ರಾಜಕಾಲುವೆ ಒತ್ತುವರಿ ಮಾಡಿರೋದನ್ನ ತೆರವು ಮಾಡುತ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದ್ದಾರೆ.