ಜನರ ಜೀವ ಉಳಿಸುವದಕ್ಕಾಗಿ ಕಠಿಣ ನಿರ್ಧಾರ ಅನಿವಾರ್ಯ. ಜೀವ ಮತ್ತು ಜೀವನ ಎರಡನ್ನೂ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡುತ್ತೇವೆ. ಸಾರ್ವಜನಿಕರಿಗೂ ಸಹಾಯ ಆಗುವಂತೆ ನಿರ್ಧಾರವನ್ನು ನಾಳೆ ಸಿಎಂ ಪ್ರಕಟಿಸುತ್ತಾರೆ ಎಂದು ಕಂದಾಯ ಸಚಿವ ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ ಆರ್ ಅಶೋಕ್ ತಿಳಿಸಿದರು.
ನಾಳೆ ಮಧ್ಯಾಹ್ನ 1 ಗಂಟೆಗೆ ಕೋವಿಡ್ ಹೊಸ ಗೈಡ್ ಲೈನ್ ಸಂಬಂಧಿಸಿ ಸಿಎಂ ಸಭೆ ಕರೆದಿದ್ದಾರೆ. ಕೋವಿಡ್ ನಿರ್ವಹಣೆ ಸಮಿತಿ ಸದಸ್ಯರು, ಸಚಿವರು, ತಜ್ಞರು ಈ ಸಭ ಸಭೆಯಲ್ಲಿ ಭಾಗವಹಿಸುತ್ತಾರೆ. ಇದುವರೆಗೆ ಎಲ್ಲ ಪಕ್ಷಗಳ ನಾಯಕರು ಅವರ ವೈಯಕ್ತಿಕ ಹೇಳಿಕೆ ಕೊಟ್ಟಿದ್ದಾರೆ. ಕೆಲವರು ನಿರ್ಬಂಧ ತೆಗೆಯಬೇಕು ಅಂದಿದ್ದಾರೆ. ಸಂಘ ಸಂಸ್ಥೆಗಳ ಹೇಳಿಕೆಗಳನ್ನು ಕೂಡ ನಾವು ಗಮನಿಸಿದ್ದೇವೆ. ತಜ್ಞರ ವರದಿ ಕೂಡ ಗಮನದಲ್ಲಿಟ್ಟುಕೊಂಡು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಸಹ ವಿದೇಶಿ ವಿಮಾನಯಾನ ಓಡಾಟ ರದ್ದು ಮಾಡಿದೆ. ಕೋವಿಡ್ ಕಂಟ್ರೋಲ್ ನಲ್ಲಿ ಇರುವ 18 ಜಿಲ್ಲೆಗಳೂ ಇವೆ. ಬೆಂಗಳೂರಿನಲ್ಲಿ ದಿನೇ ದಿನೇ ಸೋಂಕು ಹೆಚ್ಚಾಗುತ್ತಾ ಇದೆ. ಮುಂದಿನ ದಿನಗಳಲ್ಲಿ ಹೇಗೆ ಏರಿಕೆ ಆಗುತ್ತದೆ ಅಂತ ಸಚಿವ ಸುಧಾಕರ್ ಕೂಡ ಹೇಳಿದ್ದಾರೆ. ಈಗ ನಿಧಾನವಾಗಿ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಆಸ್ಪತ್ರೆ ಹೋಗುವವರ ಸಂಖ್ಯೆ ಹೆಚ್ಚುತ್ತಿದೆ ಎಂದರು.
ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ನಾಯಕರು ಕೊಡುತ್ತಿರುವ ಹೇಳಿಕೆಗಳು ವೈಯಕ್ತಿಕವಾದದ್ದು. ತಜ್ಞರ ವರದಿ ಬಿಟ್ಟು ನಾವು ಏನೂ ನಿರ್ಧಾರ ಮಾಡುವದಿಲ್ಲ. ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಮಾಡಿದ್ದು ತಜ್ಞರ ಅಭಿಪ್ರಾಯದ ಆಧಾರದ ಮೇಲೆಯೇ ಎಂದು ತಿಳಿಸಿದರು.