ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಿ.ವೈ ವಿಜಯೇಂದ್ರ ಆಯ್ಕೆಯಾದಾಗಲೂ ವ್ಯಂಗ್ಯವಾಡಿದ್ದ ಕಾಂಗ್ರೆಸ್, ಯಡಿಯೂರಪ್ಪ ಮಗ ಅನ್ನೋ ಕಾರಣಕ್ಕೆ ಆಯ್ಕೆಯಾಗಿರುವ ವಿಜಯೇಂದ್ರ ಅವರಿಗೆ ಸ್ವಾಗತ ಎಂದಿತ್ತು. ಯಡಿಯೂರಪ್ಪ ಅವರ ಮಗನನ್ನು ರಾಜ್ಯಾಧ್ಯಕ್ಷನನ್ನಾಗಿ ಮಾಡುವ ಮೂಲಕ ಬಿಜೆಪಿ ಲೀಡರ್ ಲೆಸ್ ಪಕ್ಷ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ದಶಕಗಳ ಕಾಲ ಪಕ್ಷದಲ್ಲಿ ದುಡಿದವರನ್ನು ಬಿಟ್ಟು ʻಎಳೆ ಹುಡುಗʼನಿಗೆ ಪಟ್ಟ ಕಟ್ಟುವ ಮೂಲಕ ಉಳಿದವರು ಅನರ್ಹ ಎನ್ನುವ ಸಂದೇಶ ನೀಡಿದೆ. ಅಥವಾ ಕುಟುಂಬ ರಾಜಕಾರಣಕ್ಕೆ ಮುಂದಾಗಿದೆ ಎಂದು ಟೀಕಿಸಿತ್ತು. ಇದೀಗ ಮತ್ತೆ ವಿರೋಧ ಪಕ್ಷದ ನಾಯಕ ಆಯ್ಕೆ ವಿಚಾರದಲ್ಲೂ ತನ್ನ ವ್ಯಂಗ್ಯಭರಿತ ಮಾತುಗಳಿಂದ ಭಾರತೀಯ ಜನತಾ ಪಾರ್ಟಿಯನ್ನು ತಿವಿಯುವ ಕೆಲಸ ಮುಂದುವರಿಸಿದೆ.
ಠೇವಣಿ ಇಲ್ಲದ ಅಶೋಕ್ ವಿಪಕ್ಷ ನಾಯಕನಾಗಿ ಆಯ್ಕೆ..!
ಡಿ.ಕೆ ಶಿವಕುಮಾರ್ ಎದುರು ಚುನಾವಣೆಗೆ ಸ್ಪರ್ಧಿಸಿದ್ದ ಆರ್ ಅಶೋಕ್, ವಿರೋಧ ಪಕ್ಷದ ನಾಯಕ ಆಗಿರುವುದಕ್ಕೆ ಟಾಂಗ್ ಕೊಟ್ಟಿರುವ ಕಾಂಗ್ರೆಸ್, ಕನಕಪುರದಲ್ಲಿ ಠೇವಣಿ ಕಳೆದುಕೊಂಡು ಹೀನಾಯವಾಗಿ ಸೋತಿರುವ ಬಿಜೆಪಿ ಅಭ್ಯರ್ಥಿ ಆರ್ ಅಶೋಕ್ ಈಗ ವಿರೋಧ ಪಕ್ಷದ ನಾಯಕ. ವಿರೋಧ ಪಕ್ಷದ ನಾಯಕನಾಗಲು ಬೇಕಿರುವ ಜ್ಞಾನ, ಅರ್ಹತೆ ಯಾವುದೂ ಇಲ್ಲ. ನಕಲಿ ಸಾಮ್ರಾಟನೇ ಕೊನೆಯ ಆಯ್ಕೆಯಾಗಿರುವುದು ಬಿಜೆಪಿಯಲ್ಲಿ ನಾಯಕರಿಗೆ ಬರಗಾಲ ಇರುವುದಕ್ಕೆ ನಿದರ್ಶನ ಎಂದಿದೆ. ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರಂತಹ ನಾಯಕರ ಎದುರು ತರಗೆಲೆಯಂತಹ ವ್ಯಕ್ತಿಯನ್ನು ಬಿಜೆಪಿ ತಂದು ಕೂರಿಸಿದೆ ಎನ್ನುವ ಮೂಲಕ ಆರ್ ಅಶೋಕ್ ಸಮರ್ಥ ನಾಯಕನಲ್ಲ. ಅಸಮರ್ಥ ರಾಜಕಾರಣಿ ಎಂದು ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದೆ
ಕಾಂಗ್ರೆಸ್ ವಿರುದ್ಧ ಮಾತಿನಲ್ಲೇ ಸಿಡಿದ ಸಾಮ್ರಾಟ್..
ನನ್ನನ್ನು ವಿರೋಧ ಪಕ್ಷದ ನಾಯಕನಾಗಿ ಆಯ್ಕೆ ಮಾಡಿದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಹಾಗೂ ಮೋದಿ ಅಮಿತ್ ಶಾಗೆ ಸೇರಿದಂತೆ ಎಲ್ಲಾ ಮುಖಂಡರಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದಿರುವ ಅಶೋಕ್, ನಾನು ಸಾಮಾನ್ಯ ಬಿಜೆಪಿ ಕಾರ್ಯಕರ್ತ. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದೆ. ಇಪ್ಪತ್ತು ವರ್ಷ ಪಕ್ಷ ಸಂಘಟನೆಯಲ್ಲಿ ಕೆಲಸ ಮಾಡಿದ್ದೇನೆ. ಉತ್ತರಹಳ್ಳಿ ಕ್ಷೇತ್ರದಲ್ಲಿ ಮೊದಲ ಬಾರಿ ಶಾಸಕನಾಗಿ ಆಯ್ಕೆಯಾದೆ. ನಂತರ ಏಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ . ಪಕ್ಷ ಕೊಟ್ಟಿರುವ ಹೊಸ ಜವಾಬ್ದಾರಿ ಜೊತೆಗೆ ವಿಜಯೇಂದ್ರ ಜೊತೆಗೆ ಸೇರಿಕೊಂಡು ಪಕ್ಷದ ಸಂಘಟನೆಯಲ್ಲಿ ಕೆಲಸ ಮಾಡುತ್ತೇವೆ. 28 ಕ್ಷೇತ್ರದಲ್ಲೂ ಗೆಲ್ಲುವ ಜವಾಬ್ದಾರಿ ನೀಡಿದ್ದಾರೆ. ಕಾಂಗ್ರೆಸ್ ಸರ್ಕಾರ ಬಂದ ದಿನದಲ್ಲಿ ವರ್ಗಾವಣೆ ದಂದೆ ಅಂಗಡಿ ತೆರೆದಿದ್ದಾರೆ. ಪ್ರತಿದಿನ ದ್ವೇಷದ ರಾಜಕಾರಣ ಮಾಡುತ್ತಿದೆ. ಶಾಸಕರ ಅನುದಾನ ಕಡಿತ ಮಾಡಲಾಗಿದೆ. ಶಾಲೆ, ಆಸ್ಪತ್ರೆ ಹೊಸದಾಗಿ ಪ್ರಾರಂಭ ಮಾಡಿಲ್ಲ. ನೀರಾವರಿ ಯೋಜನೆಗಳು ಪ್ರಾರಂಭ ಆಗಿಲ್ಲ. ಸರ್ಕಾರ ಬದುಕಿದ್ಯಾ.? ಸತ್ತಿದ್ಯಾ..? ಎನ್ನುವಂತಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಒ್ಟಾಗಿ 85 ಜನ ಇದ್ದೇವೆ. ಒಟ್ಟಾಗಿ ಧ್ವನಿ ಎತ್ತುತ್ತೇವೆ. ಕರ್ನಾಟಕದಲ್ಲಿರುವ ದುರಾಡಳಿತದವನ್ನು ಕಿತ್ತೊಗೆಯುತ್ತೇವೆ. ಅದುವೇ ನಮ್ಮ ಮೊದಲ ಆದ್ಯತೆ ಎಂದಿದ್ದಾರೆ.

ಕಾಂಗ್ರೆಸ್ನ ವ್ಯಂಗ್ಯ ಯಾರಿಗೆ ಲಾಭ..? ಯಾರಿಗೆ ನಷ್ಟ..?
ರಾಜ್ಯದಲ್ಲಿ ಭರ್ಜರಿ ಯಶಸ್ಸು ಕಂಡಿರುವ ಕಾಂಗ್ರೆಸ್ ನಾಯಕರು ಅಹಂ ತೋರಿಸುತ್ತಿರುವುದು ಸುಳ್ಳಲ್ಲ. ವಿಜಯೇಂದ್ರ ಹಾಗು ಆರ್ ಅಶೋಕ್ ನೇಮಕ ಲೆಕ್ಕಕ್ಕೇ ಇಲ್ಲ ಎನ್ನುವ ವರ್ತನೆಯನ್ನು ತೋರುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆ ಎದುರಾಗಲಿದ್ದು, ಒಂದು ವೇಳೆ ಜೆಡಿಎಸ್ ಹಾಗು ಬಿಜೆಪಿ ಒಟ್ಟಾಗಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ಬೀಗಿದರೆ ಸರ್ಕಾರಕ್ಕೆ ಮುಖಭಂಗ ನಿಶ್ಚಿತ. ಈಗ ಬಿಜೆಪಿ ನಾಯಕರ ಬಗ್ಗೆ ವ್ಯಂಗ್ಯದ ಮಾತುಗಳಿಂದ ಮೂಗು ಮುರಿಯುತ್ತಿರುವ ಕಾಂಗ್ರೆಸ್ ಉದ್ದೇಶವೇ ಶಕ್ತಿಯನ್ನು ಕುಗ್ಗಿಸುವುದು, ಮನೋಸ್ಥೈರ್ಯ ಕುಗ್ಗಿಸುವುದರಿಂದ ಬಿಜೆಪಿ ಸಂಘಟನೆ ಮೇಲೆ ಪರಿಣಾಮ ಬೀರುವಂತೆ ಮಾಡುವುದು. ಆದರೆ ಆ ಟೀಕೆಗಳನ್ನೇ ಬಿಜೆಪಿ ನಾಯಕರು ಹಠಕ್ಕೆ ಬಿದ್ದವರಂತೆ ತೆಗೆದುಕೊಂಡು ತಿರುಗಿ ನಿಂತರೆ ಕಾಂಗ್ರೆಸ್ಗೆ ಕೇಡುಗಾಲು ಶುರುವಾಗಲೂಬಹುದು. ಈಗಾಗಲೇ ಠೇವಣಿ ರಾಜಕೀಯಕ್ಕೆ ಆರ್ ಅಶೋಕ್ ತಿರುಗೇಟು ನೀಡಿದ್ದು, ತರಗೆಲೆಯಂತೆ ಉದುರಿ ಹೋಗಲು ಸಿದ್ದರಾಮಯ್ಯನಂತೆ ಎಲ್ಲಾ ಪಾರ್ಟಿ ತಿರುಗಿ ಬಂದಿಲ್ಲ. ನಾನು ಒಂದೇ ಪಕ್ಷ, ಒಂದೇ ಸಿದ್ದಾಂತ ನನ್ನದು. ನಾನು ಗಟ್ಟಿ ಕಮಲ ಎನ್ನುವ ಮೂಲಕ ಶಕ್ತಿಯುತ ಬೇರು ಎಂದಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕಾರಣ ಹೇಗೆ ಬದಲಾಗುತ್ತದೆ ಎನ್ನುವುದನ್ನು ನೋಡಬೇಕಿದೆ.
ಕೃಷ್ಣಮಣಿ