ಲಸಿಕೆ ಬಗ್ಗೆ ಕೇಂದ್ರ ಸರ್ಕಾರ ಉತ್ತರಿಸಬೇಕಾದ ಪ್ರಶ್ನೆಗಳು..


ನಿನ್ನೆ (ಜೂನ್ 7) ಸಂಜೆ 5 ಗಂಟೆಗೆ ದೇಶ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ’18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೇಂದ್ರ ಸರ್ಕಾರ ಉಚಿತವಾಗಿ ಕರೋನಾ ಲಸಿಕೆ ನೀಡಲಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಕರೋನಾ ಲಸಿಕೆ 150 ರೂಪಾಯಿ ದರ ನಿಗದಿ ಮಾಡಲಾಗಿದೆ’ ಎಂದು ಘೋಷಿಸಿದ್ದಾರೆ. ಈ ಮೂಲಕ ಬಹಳ ಸ್ಪಷ್ಟವಾಗಿ ಅವರದೇ ಸರ್ಕಾರ ತಿಂಗಳ ಹಿಂದೆ ಜಾರಿಗೆ ತಂದಿದ್ದ ಲಸಿಕಾ ನೀತಿಯನ್ನು ಮೂಲೆಗೆ ಎಸೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಯು-ಟರ್ನ್ ತೆಗೆದುಕೊಂಡ ಬಗ್ಗೆ ಕೆಲವು ಪ್ರಶ್ನೆಗಳು ಎದ್ದಿದ್ದು, ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರ ನಿಜಕ್ಕೂ ಪ್ರಾಮಾಣಿಕವಾಗಿದ್ದರೆ, ಪಾರದರ್ಶಕವಾಗಿದ್ದರೆ ಮತ್ತು ಪ್ರಜಾಪ್ರಭುತ್ವದ ಮೇಲೆ ಕಿಂಚಿತ್ತಾದರೂ ಗೌರವ ಹೊಂದಿದ್ದರೆ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ.


1) ಈಗ ಕೇಂದ್ರ ಸರ್ಕಾರವೇ ಕರೋನಾ ಲಸಿಕೆ ಕೊಡುತ್ತದೆ ಎಂದು ಹೇಳಿದೆಯಲ್ಲಾ, ಮೊದಲಿಗೆ ಲಸಿಕೆಗಳು ಕೊರತೆ ಇರುವಾಗ ರಾಜ್ಯಗಳು ಲಸಿಕೆಗಳನ್ನು ಕೊಡಬಲ್ಲವು ಎಂದು ಹೇಗೆ ನಿರೀಕ್ಷಿಸಿತು?


2) ಕೇಂದ್ರ ಸರ್ಕಾರ ಈಗ ಅಳವಡಿಸಿಕೊಂಡಿರುವ ಲಸಿಕಾ ನೀತಿಯನ್ನು ಅಳವಡಿಸಿಕೊಳ್ಳುವ ಮೊದಲು ಯಾವುದಾದರೂ ಸಾರ್ವಜನಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿತ್ತಾ? 

3) ತಜ್ಞರು ‘ಒಂದು ರಾಷ್ಟ್ರ-ಒಂದು-ಬೆಲೆ-ಒಂದು-ಖರೀದಿದಾರ’ ಎಂಬ ನೀತಿಯ ಬಗ್ಗೆ ಮಾತನಾಡುತ್ತಿದ್ದರು. ಆದರೆ ಕೇಂದ್ರ ಸರ್ಕಾರ ಎರಡು ರೀತಿಯ ಬೆಲೆ ನಿಗದಿ ಮಾಡಿದ್ದೇಕೆ?

4) ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳ ಮೂಲಕ ಸರ್ಕಾರಿ ಆಸ್ಪತ್ರೆಗಳ ಮೂಲಕ ಅಥವಾ ಲಸಿಕಾ ಕೇಂದ್ರಗಳನ್ನು ಸ್ಥಾಪಿಸಿ ಜನರಿಗೆ ನೇರವಾಗಿ ಲಸಿಕೆಗಳನ್ನು ಕೊಡಬಹುದಿತ್ತಲ್ಲವೇ? ಖಾಸಗಿ ಆಸ್ಪತ್ರೆಗಳನ್ನು ಪಾಲುದಾರ ಮಾಡಿಕೊಂಡದ್ದರ ಹಿಂದಿನ ಆಲೋಚನೆ ಏನು?


5) ಹೆಚ್ಚು ದುರ್ಬಲರು ಹೆಚ್ಚಿನ ಅಪಾಯದಲ್ಲಿದ್ದಾಗ ಎಲ್ಲರಿಗೂ ಲಸಿಕೆಗಳನ್ನು ನೀಡುವ ಅಗತ್ಯತೆ ಏನಿತ್ತು? ದೀರ್ಘಕಾಲದ ಕಾಯಿಲೆಯುಳ್ಳವರು, ಯುವ ಮಧುಮೇಹಿಗಳು, ಮನೆಯಿಲ್ಲದವರಿಗೆ ಮೊದಲು ಲಸಿಕೆ ನೀಡಬೇಕಿತ್ತಲ್ಲವೇ?

6) 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ಲಸಿಕೆ ಎಂದು ನಿರ್ಧರಿಸಿದ್ದೇಕೆ? ಎಲ್ಲರಿಗೂ ಕೊಡುವ ಯೋಜನೆ ರೂಪಿಸಬೇಕಿತ್ತಲ್ಲವೆ?


7) ಕರೋನಾ ಲಸಿಕೆಗಳ ಕೊರತೆ ವ್ಯಾಪಕವಾಗಿ ಕೇಳಿಬರುತ್ತಿದೆ. ಲಸಿಕೆಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರ ಸರ್ಕಾರ ಏನು ಕ್ರಮ ಕೈಗೊಂಡಿದೆ?


8) ಆರೋಗ್ಯವು ರಾಜ್ಯ ಸರ್ಕಾರ ನಿಭಾಯಿಸಬೇಕಾದ ವಿಷಯವಾದ್ದರಿಂದ ಮೊದಲು ಹಸ್ತಕ್ಷೇಪ ಮಾಡಿದ್ದೇಕೆ? ಈಗ ಇದು ‘ರಾಜ್ಯದ ವಿಷಯ’ ಎಂದು ಹೇಳುತ್ತಿರುವುದೇಕೆ?


9) ಫೀಜರ್, ಮರ್ಡೆನಾದಂತಹ ದೊಡ್ಡ ಲಸಿಕಾ ಉತ್ಪಾದನಾ ಸಂಸ್ಥೆಗಳು ನೇರವಾಗಿ ರಾಜ್ಯ ಸರ್ಕಾರಗಳಿಗೆ ಲಸಿಕೆ ನೀಡುವುದಿಲ್ಲ, ನಮ್ಮ ವ್ಯವಹಾರವೇನಿದ್ದರೂ ಕೇಂದ್ರ ಸರ್ಕಾರದ ಜೊತೆಗೆ ಎಂದ ಮೇಲೆ ನಿಮ್ಮ ನಿಲುವು ಬದಲಾಯಿತಾ?

10) ರಾಜ್ಯ ಸರ್ಕಾರಗಳು ಸತತವಾಗಿ ಲಸಿಕೆ ಕೊಡಿ ಎಂದು ಕೇಳಿಕೊಂಡಾಗ ಮೌನವಾಗಿದ್ದುದು ಏಕೆ?


11) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ‘ರಾಜ್ಯ ಸರ್ಕಾರವೇ ಲಸಿಕೆ ನೀಡಬೇಕಾದರೆ ಲಸಿಕೆ ಪಡೆದ ದಾಖಲೆ ಪತ್ರದ ಮೇಲೆ ರಾಜ್ಯದ ಜನರ ತೆರಿಗೆ ಹಣದಲ್ಲಿ ನಿಮ್ಮ ಫೋಟೋ ಏಕೆ ಹಾಕಬೇಕು, ಮುಖ್ಯಮಂತ್ರಿ ಆಗಿರುವ ತಮ್ಮದೇ ಫೋಟೋವನ್ನು ಹಾಕುತ್ತೇನೆ’ ಎಂದಿದ್ದು ಪ್ರಚಾರ ಪ್ರಿಯರಾದ ನಿಮ್ಮನ್ನು ವಿಚಲಿತರನ್ನಾಗಿ ಮಾಡಿತಾ?


12) ಕರೋನಾ ಲಸಿಕೆಗಾಗಿ ಗ್ಲೋಬಲ್ ಟೆಂಡರ್ ಕರೆಯಲು ಅವಕಾಶ ಮಾಡಿಕೊಡುವ ಮೂಲಕ ರಾಜ್ಯ ಸರ್ಕಾರಗಳ ನಡುವೆ ಬೆಲೆಗಳ ವಿಷಯದಲ್ಲಿ ಸ್ಫರ್ಧೆ ಏರ್ಪಡಲು ಅವಕಾಶ ಮಾಡಿಕೊಟ್ಟಿದ್ದೀರಿ. ಕರೋನಾ ನಿರ್ವಹಣೆಗೆ ಎಂದು ಮೀಸಲಿರಿಸಿದ 35,000 ಕೋಟಿ ರೂಪಾಯಿಗೆ ಲೆಕ್ಕ ಕೊಡಿ. ಬಿಹಾರ ಮತ್ತು ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ‘ಉಚಿತವಾಗಿ ಲಸಿಕೆ ನೀಡುವುದಾಗಿ ಭರವಸೆ ಕೊಟ್ಟದ್ದನ್ನು ಮರೆತೆರಾ? ‘ಇದೇನಾ ನಿಮ್ಮ ಲಸಿಕಾ ನೀತಿ’ ಎಂದು ಚಾಟಿ ಬೀಸಿದ ಪರಿಣಾಮ ಈಗ ಉಚಿತವಾಗಿ ಲಸಿಕೆ ನೀಡಲು ಮುಂದಾಗಿದ್ದೀರಾ?


ಜನ ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರದಿಂದ ಉತ್ತರವನ್ನು ನಿರೀಕ್ಷೆ ಮಾಡಿದ್ದಾರೆ. ಇದರೊಂದಿಗೆ ಕರೋನಾ ಮೊದಲ ಮತ್ತು ಎರಡನೇ ಅಲೆಯ ವೇಳೆ ಸಮಸ್ಯೆ ಆರಂಭವಾಗುವ ಮುನ್ನವೇ ಮೌಲಿಕ ಸಲಹೆಗಳನ್ನು ಕೊಟ್ಟು ಎಚ್ಚರಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈಗ ‘ಉಚಿತವಾಗಿ ಲಸಿಕೆ ಕೊಡುವುದಾದರೆ, ಖಾಸಗಿ ಆಸ್ಪತ್ರೆಗಳಲ್ಲಿ 150 ರೂಪಾಯಿ ದರ ನಿಗದಿ ಮಾಡಿರುವುದೇಕೆ?’ ಎಂದು ಪ್ರಶ್ನಿಸಿದ್ದಾರೆ. ಪ್ರತಿ ಬಾರಿ ರಾಹುಲ್ ಗಾಂಧಿ ಅವರನ್ನು ಅಣಕ ಮಾಡುವ ಆಡಳಿತಾರೂಢ ಬಿಜೆಪಿ ನಾಯಕರೇ ಈ ಪ್ರಶ್ನೆ ‘ಸರಿ’ ಎನಿಸಿದೆ. ಹಾಗಾಗಿ ಅವರ ಪ್ರಶ್ನೆಯನ್ನು ಕೂಡ ಪ್ರತ್ಯೇಕವಾಗಿ ಪ್ರಸ್ತುತಪಡಿಸಲಾಗಿದೆ. ಉತ್ತರಿಸುವ ಉದಾರತನ ತೋರುವುದು ನಿಮಗೆ ಬಿಟ್ಟಿದ್ದು.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...