ತಥಾಕಥಿತ ರಾಜಕೀಯ ಪಕ್ಷಗಳಿಗಿಂತ ಭಿನ್ನ ಎಂದು ಹೇಳಿಕೊಳ್ಳುವ ಆಮ್ ಆದ್ಮಿ ಪಕ್ಷ (Aam Admi Party) ಪಂಜಾಬಿನಲ್ಲಿ ಅಂತಹ ‘ಭಿನ್ನವಾದ’ ನಡೆಗಳನ್ನು ಇಡುತ್ತಿದೆ. ರಾಜಭವನದಲ್ಲಿ ಅಥವಾ ರಾಜಧಾನಿಯಲ್ಲಿ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವುದು ಮಾಮೂಲಿ. ಆದರೆ ಪಂಜಾಬಿನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ (Bhagawanth Maan) ಪ್ರಮಾಣವಚನ ಸ್ವೀಕರಿಸಿದ್ದು ಸ್ವತಂತ್ರ್ಯ ಸೇನಾನಿ ಭಗತ್ ಸಿಂಗ್ (Bhagath Sing) ಹುಟ್ಟೂರಿನಲ್ಲಿ. ಈಗ ಎರಡನೇ ತಮ್ಮ ಮಂತ್ರಿ ಮಂಡಳ ಕಟ್ಟಿಕೊಳ್ಳುವುದರಲ್ಲೂ ಭಗವಂತ್ ಮಾನ್ ವಿಶೇಷತೆ ಮೆರೆದಿದ್ದಾರೆ.
ಸಮಾನ್ಯವಾಗಿ ರಾಜಕೀಯ ಪಕ್ಷಗಳು ಅದರಲ್ಲೂ ಮೊದಲ ಸಂಪುಟ ರಚನೆಯನ್ನು ಶನಿವಾರ ಮಾಡಲ್ಲ. ಆದರೆ ಇಂದು ಸಚಿವ ಸಂಪುಟ ವಿಸ್ತರಣೆ ಮಾಡಲಾಗಿದ್ದು, ಇಂದೇ ಪ್ರಮಾಣವಚನ ಬೋಧಿಸಲಾಗಿದೆ. ಪಂಜಾಬಿನ ವಿಧಾನಸಭೆಯ ಬಲಕ್ಕೆ ಅನುಗುಣವಾಗಿ ಅಲ್ಲಿನ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ಸೇರಿದಂತೆ ಒಟ್ಟು 18 ಜನರಿರಬಹುದು. ಇವತ್ತು 10 ಮಂದಿ ಸಂಪುಟ ಸೇರಿದ್ದಾರೆ. ರಾಜಕೀಯಕ್ಕೂ ಮಿಗಿಲಾದ ಹಿನ್ನೆಲೆ ಇರುವ ಈ 10 ಸಚಿವರ ಪರಿಚಯವನ್ನು ‘ಪ್ರತಿಧ್ವನಿ’ (Pratidwani) ನಿಮ್ಮ ಮುಂದಿಡುತ್ತಿದೆ.
ಹರ್ಪಾಲ್ ಚೀಮಾ
ಹರ್ಪಾಲ್ ಚೀಮಾ 2012ರಲ್ಲೂ ಆಮ್ ಆದ್ಮಿ ಪಕ್ಷದಿಂದ ಪಂಜಾಬ್ ವಿಧಾನಸಭೆ ಪ್ರವೇಶಿಸಿದ್ದರು. ಇದು ಅವರ ಎರಡನೇ ಅವಧಿ. ಮರು ಆಯ್ಕೆಯಾದ ದಿರ್ಬಾದ ಶಾಸಕ ಹರ್ಪಾಲ್ ಚೀಮಾ ವೃತ್ತಿಯಲ್ಲಿ ವಕೀಲರು. ಇವರು ಹಿಂದಿನ ಅವಧಿಯಲ್ಲಿ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡಿದ್ದರು. ಅಲ್ಲದೆ ಆಮ್ ಆದ್ಮಿ ಪಕ್ಷದ ದಲಿತ ನಾಯಕ ಎಂದು ಗುರುತಿಸಿಕೊಂಡಿದ್ದಾರೆ. ಇದೇ ಹಿನ್ನೆಲೆಯಲ್ಲಿ ತಾವು ಕೂಡ ಮುಖ್ಯಮಂತ್ರಿ ಆಗಬೇಕೆಂದು ಬಯಸಿದ್ದರು. ಆದರೆ ಮುಖ್ಯಮಂತ್ರಿ ಅಭ್ಯರ್ಥಿಯಾಗಿದ್ದ ಭಗವಂತ್ ಮಾನ್ ಜೊತೆಗೆ ಒಳ್ಳೆಯ ಸಂಬಂಧವನ್ನೇ ಹೊಂದಿದ್ದರು. ಹಾಗಾಗಿ ಈಗ ಬಹಳ ಅರ್ಹವಾಗಿ ಸಂಪುಟ ಸೇರಿದ್ದಾರೆ.
ಡಾ. ಬಲ್ಜಿತ್ ಕೌರ್
ಡಾ. ಬಲ್ಜಿತ್ ಕೌರ್ ಅವರು ಮಾಲೌಟ್ ಕ್ಷೇತ್ರವನ್ನು ಪ್ರತಿನಿಧಿಸಿ ಮೊದಲ ಬಾರಿಗೆ ವಿಧಾನಸಭೆಗೆ ಬಂದಿದ್ದಾರೆ. ಇವರು ವೃತ್ತಿಯಲ್ಲಿ ವೈದ್ಯೆ. ಆಮ್ ಆದ್ಮಿ ಪಕ್ಷದ ಮಾಜಿ ಸಂಸದ ಪ್ರೊ. ಸಾಧು ಸಿಂಗ್ ಅವರ ಪುತ್ರಿಯಾದ ಡಾ. ಬಲ್ಜಿತ್ ಕೌರ್ ಆಮ್ ಆದ್ಮಿ ಪಕ್ಷ ಸೇರಲೆಂದೇ ತಮ್ಮ ಸರ್ಕಾರಿ ಸೇವೆಯನ್ನು ತೊರೆದಿದ್ದಾರೆ.
ಡಾ. ವಿಜಯ್ ಸಿಂಗ್ಲಾ
ಡಾ. ವಿಜಯ್ ಸಿಂಗ್ಲಾ ಅವರು ಮಾನ್ಸಾ ಕ್ಷೇತ್ರವನ್ನು ಪ್ರತಿನಿಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಪಡೆದಿದ್ದಾರೆ. ಇವರು ವೃತ್ತಿಯಲ್ಲಿ ದಂತವೈದ್ಯ 5 ವರ್ಷಗಳಿಂದ ಆಮ್ ಆದ್ಮಿ ಪಕ್ಷದೊಂದಿಗೆ ನಿಕಟ ಸಂಬಂಧ ಹೊಂದಿದ್ದ ಡಾ. ವಿಜಯ್ ಸಿಂಗ್ಲಾ ಅವರು ಈ ಚುನಾವಣೆಯಲ್ಲಿ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರನ್ನು ಸೋಲಿಸಿದರು. ಕುತೂಹಲಕಾರಿ ಸಂಗತಿ ಎಂದರೆ ಗಾಯಕ ಸಿಧು ಅವರ ದಂತವೈದ್ಯ ಇದೇ ಡಾ. ವಿಜಯ್ ಸಿಂಗ್ಲಾ.
ಹರ್ಭಜನ್ ಸಿಂಗ್
ಹರ್ಭಜನ್ ಸಿಂಗ್ ಎಂದರೆ ಕ್ರಿಕೆಟರ್ ಎಂದುಕೊಳ್ಳಬೇಡಿ. ಈ ಹರ್ಭಜನ್ ಸಿಂಗ್ ಪಂಜಾಬ್ ಸರ್ಕಾರದಲ್ಲಿ ಅಬಕಾರಿ ಮತ್ತು ತೆರಿಗೆ ಅಧಿಕಾರಿಯಾಗಿದ್ದವರು. ಸ್ವಯಂ ನಿವೃತ್ತಿ ಪಡೆದು ಆಮ್ ಆದ್ಮಿ ಪಕ್ಷ ಸೇರಿದರು. ಆದರೆ 2017ರ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಟಿಕೆಟ್ ಪಡೆಯಲು ವಿಫಲರಾಗಿದ್ದರು. ಈ ಬಾರಿ ಟಿಕೆಟ್ ಪಡೆದದ್ದು ಮಾತ್ರವಲ್ಲದೆ ಮಜಾ ಪ್ರದೇಶದ ಜಂಡಿಯಾಲಾ ಕ್ಷೇತ್ರದಲ್ಲಿ ಭಾರೀ ಅಂತರದ ಗೆಲುವು ಸಾಧಿಸಿದ್ದಾರೆ.

ಹರ್ಜೋತ್ ಸಿಂಗ್ ಬೈನ್ಸ್
ಹರ್ಜೋತ್ ಸಿಂಗ್ ಬೈನ್ಸ್ ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸ್ಥಾಪಕ ಸದಸ್ಯರಲ್ಲಿ ಒಬ್ಬರು. ಆನಂದಪುರ ಸಾಹಿಬ್ ಅವರನ್ನು ಪ್ರತಿನಿಧಿಸುವ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಭಾಗಿಯಾಗಿದ್ದರು.
ಗುರ್ಮೀತ್ ಸಿಂಗ್ ಮೀಟ್ ಹೇಯರ್
ಗುರ್ಮೀತ್ ಸಿಂಗ್ ಮೀಟ್ ಹೇಯರ್ ಪಿಎಸ್‌ಪಿಸಿಎಲ್ ಉದ್ಯೋಗಿಯ ಮಗ. ಬರ್ನಾಲಾದ ಬಿಜಿಎಸ್ ಪಬ್ಲಿಕ್ ಸ್ಕೂಲ್‌ನಲ್ಲಿ ಓದಿದ್ದಾರೆ. ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್. ಭ್ರಷ್ಟಾಚಾರದ ವಿರುದ್ಧ ಭಾರತ ಚಳುವಳಿಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದ ಮೊದಲ ಕೆಲವೇ ಜನರಲ್ಲಿ ಇವರೂ ಒಬ್ಬರು. 2017ರಲ್ಲಿ ಕಾಂಗ್ರೆಸ್ ನಾಯಕ ಕೇವಲ್ ಧಿಲ್ಲೋನ್ ಅವರನ್ನು ಸೋಲಿಸಿದಾಗ ಅವರ ವಯಸ್ಸು 27. ಆಗ ಪಂಜಾಬ್ ವಿಧಾನಸಭೆ ಪ್ರವೇಶಿಸಿದ ಕಿರಿಯ ಶಾಸಕ ಎಂಬ ಹೆಚ್ಚುಗಾರಿಕೆ ಪಾತ್ರರಾಗಿದ್ದರು. ಇವರು ಪಂಜಾಬ್ ಆಮ್ ಆದ್ಮಿ ಪಕ್ಷದ ಯುವ ಘಟಕದ ಅಧ್ಯಕ್ಷರೂ ಹೌದು.
ಲಾಲ್ ಚಂದ್ ಕತರುಚಕ್
ಲಾಲ್ ಚಂದ್ ಕತರುಚಕ್ ಕಮ್ಯುನಿಸ್ಟ್ ಹಿರಿಯ ನಾಯಕ ಸಿಪಿಎಂನಲ್ಲಿ ತಮ್ಮ ಜೀವನದುದ್ದಕ್ಕೂ ಸಕ್ರಿಯರಾಗಿದ್ದರು. 2 ದಶಕಗಳ ಹಿಂದೆ ಮಂಗತ್ ರಾಮ್ ಪಸ್ಲಾ ಸಿಪಿಎಂನಿಂದ ಬೇರ್ಪಟ್ಟಾಗ ಇವರು ತಮ್ನದೇ ಆದ ಪಂಜಾಬ್ ಮೂಲದ ಲಾಲ್ ಚಂದ್ ಪಸ್ಲಾವನ್ನು ಸ್ಥಾಪಿಸಿದರು. 2017ರ ಚುನಾವಣೆಯಲ್ಲಿ ಲಾಲ್ ಚಂದ್ ಅವರು ರೆವಲ್ಯೂಷನರಿ ಮಾರ್ಕ್ಸಿಸ್ಟ್ ಪಾರ್ಟಿ ಆಫ್ ಇಂಡಿಯಾ (RMPI) ಅಭ್ಯರ್ಥಿಯಾಗಿ ಭೋವಾದಿಂದ ಸ್ಪರ್ಧಿಸಿದ್ದರು ಆದರೆ ಸೋತಿದ್ದರು. 2022ರಲ್ಲಿ ಅವರು ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದಾರೆ. ಹಲವು ವರ್ಷಗಳಿಂದ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ.
ಲಾಲ್ಜಿತ್ ಸಿಂಗ್ ಭುಲ್ಲರ್
ಲಾಲ್ಜಿತ್ ಸಿಂಗ್ ಭುಲ್ಲರ್ ಒಬ್ಬ ಕೃಷಿಕ ಮತ್ತು ವೃತ್ತಿಯಲ್ಲಿ ಕಮಿಷನ್ ಏಜೆಂಟ್. ಮಾಜಿ ಸಚಿವ ಆದೇಶ್ ಪರತಾಪ್ ಸಿಂಗ್ ಕೈರೋನ್ ಅವರನ್ನು ಸೋಲಿಸಿದ್ದಾರೆ. ಇವರು ಹಲವಾರು ವರ್ಷ ಅಖಾಲಿ ದಳದಲ್ಲಿ ಸಕ್ರಿಯರಾಗಿದ್ದರು. ಶ್ರೀ ಗುರು ಗ್ರಂಥ ಸಾಹಿಬ್ ಅವರ ತ್ಯಾಗದ ಘಟನೆಗಳ ನಂತರ ಪಕ್ಷವನ್ನು ತೊರೆದು 2018ರಲ್ಲಿ ಮತ್ತೆ ಅಖಾಲಿದಳ ಸೇರಿದ್ದರು. 2019ರಲ್ಲಿ ಆಮ್ ಆದ್ಮಿ ಪಕ್ಷ ಸೇರಿದ್ದರು.
ಬ್ರಹ್ಮ ಶಂಕರ್ ಜಿಂಪಾ
ಮಾಜಿ ಕೈಗಾರಿಕಾ ಸಚಿವ ಸುಂದರ್ ಶಾಮ್ ಅರೋರಾ ಅವರನ್ನು ಸೋಲಿಸುವ ಮೂಲಕ ಬ್ರಹಮ್ ಶಂಕರ್ ಜಿಂಪಾ ಹೋಶಿಯಾರ್‌ಪುರದ ಶಾಸಕರಾಗಿದ್ದಾರೆ. ಇವರ ವಿದ್ಯಾರ್ಹತೆ ಸೆಕೆಂಡ್ ಪಿಯುಸಿ ಪಾಸ್ ಅಷ್ಟೇ. ಆದರೆ ಕಾಂಗ್ರೆಸ್ ಪಕ್ಷದಲ್ಲಿದ್ದ ಜಿಂಪಾ ಪಂಜಾಬ್ ಕೈಗಾರಿಕಾ ಅಭಿವೃದ್ಧಿ ಮಂಡಳಿ ಉಪಾಧ್ಯಕ್ಷರಾಗಿ, ಹೋಶಿಯಾರ್‌ಪುರ ಪುರಸಭೆ ಕೌನ್ಸಿಲರ್ ಆಗಿ ಅನುಭವ ಹೊಂದಿದ್ದಾರೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದಿದ್ದಾರೆ.
ಕುಲದೀಪ್ ಸಿಂಗ್ ಧಲಿವಾಲ್
ಕುಲದೀಪ್ ಸಿಂಗ್ ಧಲಿವಾಲ್ ಅಜ್ನಾಲಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ರೈತ. ಇವರ ವಿದ್ಯಾರ್ಹತೆ ಮೆಟ್ರಿಕ್ಯುಲೇಷನ್. 2014ರಲ್ಲಿ ಭಾರತಕ್ಕೆ ಹಿಂತಿರುಗುವ ಮೊದಲು ಯುಎಸ್‌ನಲ್ಲಿದ್ದರು. ಸ್ವದೇಶಕ್ಕೆ ಮರಳಿದ ಬಳಿಕ ಕೃಷಿ ಮಾಡುತ್ತಿದ್ದಾರೆ. 2019ರಲ್ಲಿ ಖದೂರ್ ಸಾಹಿಬ್‌ನಿಂದ ಎಎಪಿ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಿದ್ದರು. ಎಎಪಿ ಜಿಲ್ಲಾ ಅಧ್ಯಕ್ಷರೂ ಹೌದು. ಮೊದಲ ಬಾರಿಗೆ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ.