ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಪ್ರಮುಖ ಸಾಕ್ಷಿ ಎನ್ನಲಾಗುವ ಖಾಸಗಿ ಡಿಟೆಕ್ಟಿವ್ ಕಿರಣ್ ಗೋಸಾವಿ ಅವರನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ. ಕುತೂಹಲಕಾರಿಯೆಂದರೆ, ಹಲವು ಪ್ರಕರಣಗಳಲ್ಲಿ ಪುಣೆ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿರುವ ಈತ ಉತ್ತರಪ್ರದೇಶದ ಲಕ್ನೋ ಪೊಲೀಸರಿಗೆ ತಾನು ಶರಣಾಗುತ್ತೇನೆ ಎಂದು ಬಯಸಿದ್ದ.
ಐಷಾರಾಮಿ ಹಡಗಿನ ಮೇಲಿನ ದಾಳಿ ಸಂದರ್ಭದಲ್ಲಿ ಎನ್ಸಿಬಿಗೆ ಸಂಬಂಧವೇ ಇಲ್ಲದ ವ್ಯಕ್ತಿಗಳು ಕೂಡ ಹಾಜರಿದ್ದರು. ಆ ಪೈಕಿ ಕಿರಣ್ ಗೋಸಾವಿ ಕೂಡಾ ಇದ್ದರು. ಆರ್ಯನ್ ಖಾನ್ ಸಿಕ್ಕಿಬಿದ್ದಾಗ ಅವರ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಕಿರಣ್ ಗೋಸಾವಿ (Kiran Gosavi ) ಅದನ್ನು ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದರು. ಎನ್ಸಿಬಿ ದಾಳಿ ವೇಳೆಗೆ ಯಾವುದೇ ಸಂಬಂಧವಿಲ್ಲದ ಗೋಸಾವಿ ಇದ್ದಿದ್ದು ಸಾಕಷ್ಟು ಅನುಮಾನ ಮೂಡಿಸಿತ್ತು.

ಆರ್ಯನ್ ಖಾನ್ ಬಂಧನದ ಬಗ್ಗೆ ಅನುಮಾನ ಮೂಡುತ್ತಿದ್ದಂತೆಯೇ ಕಿರಣ್ ಗೋಸಾವಿ ನಾಪತ್ತೆ ಆಗಿದ್ದರು. ಅವರಿಗೂ ಎನ್ಸಿಬಿಗೂ ಯಾವುದೇ ಸಂಬಂಧ ಇಲ್ಲ ಎಂದು ಎನ್ಸಿಬಿ ಕಡೆಯಿಂದಲೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಲಾಗಿತ್ತು. ಆದರೆ ಅವರನ್ನು ಈ ಪ್ರಕರಣದ ಪ್ರಮುಖ ಸಾಕ್ಷಿ ಎಂದು ಪರಿಗಣಿಸಲಾಗಿತ್ತು. ಕಿರಣ್ ಗೋಸಾವಿ ನಾಪತ್ತೆ ಆದ ಬಳಿಕ ಅವರ ಬಾಡಿಗಾರ್ಡ್ ಪ್ರಭಾಕರ್ ಸೈಲ್ ಕೆಲವು ಗಂಭೀರ ಆರೋಪ ಮಾಡಿದ್ದರು. ಎನ್ಸಿಬಿ ಅಧಿಕಾರಿಗಳು ಖಾಲಿ ಹಾಳೆ ಮೇಲೆ ಸಹಿ ಮಾಡಿಸಿಕೊಂಡರು. ಹಾಗೂ ಶಾರೂಖ್ ಖಾನ್ ಜೊತೆ ಬಹುಕೋಟಿ ಡೀಲ್ ನಡೆಸಲು ತಯಾರಿ ಮಾಡಲಾಗಿತ್ತು. ತಮ್ಮ ಮೇಲೆ ಜೀವ ಬೆದರಿಕೆ ಹಾಕಲಾಗಿದೆ ಎಂಬಿತ್ಯಾದಿ ಆರೋಪಗಳನ್ನು ಅವರು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯ ಮುಖ್ಯ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ವಿಜಿಲೆನ್ಸ್ ತನಿಖೆಯೂ ನಡೆದಿತ್ತು.

ಗೋಸಾವಿ ಓರ್ವ ಖಾಸಗಿ ಡಿಟೆಕ್ಟೀವ್ ಎಂದು ಹೇಳಲಾಗಿದೆ. ಅವರ ವಿರುದ್ಧ ಹಲವು ಕೇಸ್ಗಳು ಇವೆ. ಅನೇಕರಿಗೆ ಮೋಸ ಮಾಡಿ ಪರಾರಿ ಆಗಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಪುಣೆ ಪೊಲೀಸರು ಗೋಸಾವಿಗಾಗಿ ಈ ಮೊದಲಿನಿಂದಲೂ ಹುಡುಕಾಟ ನಡೆಸಿದ್ದರು. ಈಗ ಅವರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಹಲವು ಪ್ರಕರಣಗಳ ಮುಖ್ಯ ಆರೋಪಿಯಾಗಿರುವ ಗೋಸಾವಿ ವಿರುದ್ಧ 2018ರ ಮೇ 19ರಂದು ಪುಣೆಯ ಫರಸ್ಕನ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಮಲೇಷಿಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ವ್ಯಕ್ತಿಯೊಬ್ಬನಿಗೆ ಆಮಿಷವೊಡ್ಡಿ ಹಣ ವಸೂಲಿ ಮಾಡಿದ ಆರೋಪ ಈತನ ಮೇಲಿತ್ತು.

ಆದರೆ ವ್ಯಕ್ತಿಗೆ ಉದ್ಯೋಗ ಕೊಡಿಸುವುದಾಗಲಿ, ಹಣ ವಾಪಸ್ ನೀಡುವುದಾಗಲಿ ಮಾಡಿರಲಿಲ್ಲ. ಹೀಗಾಗಿ ಕಿರಣ್ ಗೋಸಾವಿ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 419, 420ರಡಿಯಲ್ಲಿ ಇಂಟೆಲೆಕ್ಚುವಲ್ ಟೆಕ್ನಾಲಜಿ ಆಕ್ಟ್ ನಡಿ ಕೇಸು ದಾಖಲಾಗಿತ್ತು.
ಕಳೆದ ಅಕ್ಟೋಬರ್ 18ರಂದು ಪಲ್ಗರ್ ನ ಕೆಲ್ವ ಪೊಲೀಸ್ ಠಾಣೆಯಲ್ಲಿ ವಂಚನೆ ಕೇಸನ್ನು ಕೂಡ ದಾಖಲಿಸಲಾಗಿದೆ. ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿಗಳನ್ನು ಸುಲಿಗೆ ಮಾಡಿ ವಂಚಿಸಿದ ಆರೋಪ ಕೂಡ ಇದೆ.

ಆರ್ಯನ್ ಖಾನ್ ಅರೆಸ್ಟ್ ಆದ ದಿನ ಶಾರುಖ್ ಮ್ಯಾನೇಜರ್ ಜೊತೆ ಮಾತನಾಡಲು ಆರ್ಯನ್ಗೆ ಗೋಸಾವಿಯ ಫೋನ್ ನೀಡಲಾಗಿತ್ತು. ಅದರ ವಿಡಿಯೋ ಕೂಡ ಈಗಾಗಲೇ ವೈರಲ್ ಆಗಿದೆ. ಅಂದು ಶಾರುಖ್ ಮ್ಯಾನೇಜರ್ ಜೊತೆ ಬಹುಕೋಟಿ ಡೀಲ್ ಖುದುರಿಸುವ ಪ್ರಯತ್ನ ನಡೆದಿತ್ತು ಎಂಬ ಶಂಕೆಗೆ ಇದು ಸಾಕಷ್ಟು ಬಲ ನೀಡಿತ್ತು.
ಒಟ್ಟಾರೆ, ಇದೀಗ ಪುಣೆಯಲ್ಲಿ ಗೋಸಾವಿ ಬಂಧನವಾಗಿದ್ದು, 2019ರಿಂದ ಪುಣೆ ಪೊಲೀಸರ ‘ವಾಂಟೆಡ್’ ಲಿಸ್ಟ್ನಲ್ಲಿ ಇದ್ದ ಈತನ ವಿರುದ್ಧದ ವಂಚನೆ ಪ್ರಕರಣವನ್ನು ತನಿಖೆ ನಡೆಸಲಾಗುವುದು ಎಂದು ಪುಣೆ ಪೊಲೀಸ್ ಕಮಿಷನರ್ ಅಮಿತಾಬ್ ಗುಪ್ತಾ ತಿಳಿಸಿದ್ದಾರೆ.
