
ಬೆಂಗಳೂರು:ಗಾಂಧಿ ಭಾರತ ಕಾರ್ಯಕ್ರಮ ಭಾಗವಾಗಿ ಇದೇ 26ರಂದು ಪಕ್ಷದ ಕಾರ್ಯಕಾರಣಿ ಸಮಿತಿ ಸಭೆ ನಡೆಯಲಿದ್ದು, 27ರಂದು ಸಾರ್ವಜನಿಕ ಸಭೆ ನಡೆಯಲಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಕುಮಾರಪಾರ್ಕ್ ನ ಗೃಹ ಕಚೇರಿಯಲ್ಲಿ ಶನಿವಾರ ಮಾಧ್ಯಮದವರ ಜತೆ ಮಾತನಾಡಿ ಈ ವಿಚಾರ ತಿಳಿಸಿದರು.”ಗಾಂಧಿ ಭಾರತ ಕಾರ್ಯಕ್ರಮದ ಭಾಗವಾಗಿ 26 ಹಾಗೂ 27ರಂದು ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆ ಚರ್ಚೆ ಮಾಡಲು, ಮುಖ್ಯಮಂತ್ರಿಗಳು ಡಿ.10ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.
ಇದೇ 9ರಂದು ನಾನು ಬೆಳಗಾವಿಗೆ ಹೋಗಿ ಕಾರ್ಯಕ್ರಮದ ಸ್ಥಳ ಅಂತಿಮಗೊಳಿಸಲಾಗುವುದು. ನಮ್ಮ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಕೂಡ ಈ ಜಾಗವನ್ನು ಪರಿಶೀಲಿಸುತ್ತಾರೆ.
ಇದೇ 13ರಂದು ಕಲ್ಯಾಣ ಕರ್ನಾಟಕ ಭಾಗದ ಎಲ್ಲಾ ಪದಾಧಿಕಾರಿಗಳ ಸಭೆಯನ್ನು ಬೆಳಗಾವಿಯಲ್ಲಿ ಕರೆಯಲಾಗಿದೆ. 14ರಂದು ರಾಜ್ಯದ ಇತರೆ ಪದಾಧಿಕಾರಿಗಳ ಸಭೆಯನ್ನು ಭಾರತ ಜೋಡೋ ಭವನದಲ್ಲಿ ಮಾಡಲಿದ್ದೇನೆ. ರಾಷ್ಟ್ರ ಮಟ್ಟದ ಈ ಕಾರ್ಯಕ್ರಮದಲ್ಲಿ ಎಲ್ಲರಿಗೂ ಜವಾಬ್ದಾರಿ ಹಂಚಿಕೆ ಮಾಡಲಾಗುವುದು.
ಉಗ್ರಪ್ಪ ಅವರ ಸತ್ಯಶೋಧನಾ ಸಮಿತಿ ವರದಿ ಸಲ್ಲಿಕೆ:ಐದು ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ಹಾಗೂ ಕಾರ್ಯಕರ್ತರ ಅಭಿಪ್ರಾಯದ ಬಗ್ಗೆ ವಿ.ಎಸ್ ಉಗ್ರಪ್ಪ ಅವರ ಸಮಿತಿ ಇಂದು ವರದಿ ಸಲ್ಲಿಕೆ ಮಾಡಿದೆ. ಇತರರ ನೇತೃತ್ವದ ಸಮಿತಿಗಳು ಕೂಡ ಬೇರೆ ಕ್ಷೇತ್ರಗಳ ವರದಿ ಸಲ್ಲಿಕೆ ಮಾಡಿವೆ.ಈ ಎಲ್ಲಾ ವರದಿಗಳನ್ನು ಸೇರಿಸಿ, ಪಕ್ಷದ ಹಿರಿಯ ನಾಯಕರು, ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳ ಜತೆ ಚರ್ಚೆ ಮಾಡಲಾಗುವುದು.
ಸಮಿತಿ ವರದಿಯಲ್ಲಿ ಯಾರಿಂದ ಹಿನ್ನಡೆಯಾಗಿದೆ ಎಂದು ತಿಳಿಸಲಾಗಿದೆಯೇ ಎಂದು ಕೇಳಿದಾಗ, “ನಾನು ಒಂದು ವರದಿ ಇಟ್ಟುಕೊಂಡು ಮಾತನಾಡಲು ಆಗುವುದಿಲ್ಲ. ಎಲ್ಲಾ ವಲಯಗಳ ವರದಿ ಪರಿಶೀಲಿಸಿ ನಂತರ ಮಾಹಿತಿ ನೀಡುತ್ತೇನೆ” ಎಂದು ತಿಳಿಸಿದರು.