ಕಲಘಟಗಿ: ಯೋಜನೆಯಡಿ ಡ್ರೋನ್ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್
ಧಾರವಾಡ, ಜ. 18: ಅನೇಕ ಗ್ರಾಮವಾಸಿಗಳು ಎಷ್ಟೊ ವರ್ಷದಿಂದ ಇದೇ ಜಾಗದಲ್ಲಿದ್ದರೂ ಅವರಲ್ಲಿ ಸರಿಯಾದ ಅಳತೆ ಇಲ್ಲ. ಇದರಿಂದ ವ್ಯಾಜ್ಯ, ಆರ್ಥಿಕ ನಷ್ಟಗಳು ಆಗುತ್ತಿದೆ. ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆ ಮೂಲಕ ಎಲ್ಲ 375 ಗ್ರಾಮಗಳನ್ನು ಡ್ರೋನ್ ಮೂಲಕ ಸರ್ವೆ ಮಾಡಿ, ಮಾಲೀಕರಿಗೆ ಅವರ ಆಸ್ತಿಯನ್ನು ನಿಖರವಾಗಿ ಗುರುತಿಸಲಾಗುತ್ತದೆ. ಇದಕ್ಕೆ ಗ್ರಾಮಸ್ಥರ, ಗ್ರಾಮ ಪ್ರತಿನಿಧಿಗಳ ಸಹಕಾರ ಮುಖ್ಯವಾಗಿದೆ ಎಂದು ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಹೇಳಿದರು.
ಕಲಘಟಗಿ ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದಲ್ಲಿ ಸ್ವಾಮಿತ್ವ ಯೋಜನೆಯಡಿ ಡ್ರೋನ್ ಸರ್ವೆ ಕಾರ್ಯಕ್ಕೆ ಚಾಲನೆ ನೀಡಿ ಅವರು, ಮಾತನಾಡಿದರು.
ಗ್ರಾಮವಾಸಿಗಳ ಸಮಸ್ಯೆ ನಿವಾರಣೆಗೆ ರಾಜ್ಯ ಸರಕಾರ ರಾಜ್ಯದ ಪ್ರತಿ ಗ್ರಾಮವನ್ನು ಸ್ವಾಮಿತ್ವ ಯೋಜನೆಯಡಿ ಸಮಿಕ್ಷೆ ಮಾಡಿ, ಕಾನೂನಾತ್ಮಕವಾಗಿ ಗ್ರಾಮ ನಿವಾಸಿಗಳ ಆಸ್ತಿ ಗುರುತಿಸುವಿಕೆ ಮಾಡಲಾಗುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಸಚಿವರು ಹೇಳಿದರು.
ಹೊಸ ಯೋಜನೆ ಆಗಿರುವುದರಿಂದ ಪರಸ್ಪರರಲ್ಲಿ ಸಮಸ್ಯೆ ಸಹಜ. ಊರಿನ ಪ್ರಮುಖರು, ಜನಪ್ರತಿನಿಧಿಗಳು ಸಹಕಾರ ನೀಡಿ ಸಮಸ್ಯೆ ಬಗೆ ಹರಿಸಬೇಕು ಎಂದರು.
ಡ್ರೋನ್ ಮೂಲಕ ಏರೀಯಲ್ ಸರ್ವೆ ಮತ್ತು ರೊವರ್ ಸರ್ವೆ ಎರಡನ್ನು ಮಾಡಲಾಗುತ್ತದೆ. ಇದು ಭವಿಷ್ಯತ್ತಿನಲ್ಲಿ ಬಹಳಷ್ಟು ಉಪಯೋಗವಾಗುತ್ತದೆ ಎಂದು ಸಚಿವರು ಹೇಳಿದರು.
ಕಾರ್ಯಕ್ರಮದಲ್ಲಿ ಭೂದಾಖಲೆಗಳ ಇಲಾಖೆಯ ಉಪನಿರ್ದೇಶಕ ಮೋಹನ ಶಿವಣ್ಣವರ, ತಹಶೀಲ್ದಾರ ವಿರೇಶ ಮುಳಗುಂದಮಠ, ಜಿಲ್ಲಾ ಗ್ಯಾರಂಟಿ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ಪಾಟೀಲ, ಕಲಘಟಗಿ ಭೂದಾಖಲೆಗಳ ಸಹಾಯಕ ನಿರ್ದೇಶಕ ಮಂಜೇಶ್, ಮಡಕಿಹೊನ್ನಳ್ಳಿ ಗ್ರಾಮ ಪಂಚಾಯತ ಅಧ್ಯಕ್ಷ ಬಸವರಾಜ ಪರ್ವಾಪುರ, ಉಪಾಧ್ಯಕ್ಷೆ ರೇಣುಕಾ ಕುಬಿಹಾಳ, ಸದಸ್ಯರು ಮತ್ತು ಗ್ರಾಮದ ಪ್ರಮುಖರಾದ ಶಿವಪುತ್ರಪ್ಪ ಆಲದಕಟ್ಟಿ, ಮಂಜುನಾಥ ಮರಳ್ಳಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಶಂಭುಲಿಂಗ ಹೊಸಮನಿ, ಗ್ರಾಮಲೆಕ್ಕಾಧಿಕಾರಿ ಮಂಜುನಾಥ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.