ಐಟಿ ಕಂಪನಿಗಳಿಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೂಚನೆ.

ಬೆಂಗಳೂರು, ಫೆಬ್ರುವರಿ 20: ಐಟಿ ಕಂಪನಿಗಳಲ್ಲಿ ಎಷ್ಟು ಉದ್ಯೋಗಿಗಳಿದ್ದಾರೆ. ಅವರಲ್ಲಿ ಪುರುಷರು ಎಷ್ಟು, ಮಹಿಳೆಯರು ಎಷ್ಟು ಎಂಬ ಮಾಹಿತಿ ಸರ್ಕಾರದ ಬಳಿ ಇರುವುದಿಲ್ಲ. ಉದ್ಯೋಗಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುವಾಗ ಯಾವ ನಿಯಮಗಳನ್ನು ತಿಳಿಸಿರುತ್ತೀರಿ. ಕೆಲಸದಿಂದ ತೆಗೆದುಹಾಕುವಾಗ ಯಾವ ಶಿಷ್ಟಾಚಾರ ಅನುಸರಿಸಲಾಗುತ್ತದೆ ಎಂಬ ಬಗ್ಗೆ ಸಹ ಸರ್ಕಾರಕ್ಕೆ ಮಾಹಿತಿ ಇರುವುದಿಲ್ಲ. ಇದೆಲ್ಲದರ ಬಗ್ಗೆ ಸರ್ಕಾರದೊಂದಿಗೆ ಮಾಹಿತಿ ಹಂಚಿಕೊಂಡರೆ ಉದ್ಯೋಗಿಗಳ ಹಿತ ಕಾಯುವ ನೀತಿ ರೂಪಿಸಲು ಸಹಾಯವಾಗಲಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಹೇಳಿದರು.
ವಿಕಾಸಸೌಧದಲ್ಲಿ ಇಂದು ಅವರು, ಇನ್ಫೋಸಿಸ್‌ನ ಮೈಸೂರು ನೌಕರರ/ ಆಡಳಿತ ಮಂಡಳಿಗೆ ಸಂಬಂಧಿಸಿದಂತೆ ಸಭೆ ನಡೆಸಿ ಮಾತನಾಡಿದರು.

ಸಾಫ್ಟ್‌ವೇರ್ ಉದ್ಯಮಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ರಾತ್ರೋರಾತ್ರಿ ಕೆಲಸದಿಂದ ತೆಗೆದುಹಾಕಿ ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಕಂಪನಿಗಳು ಹೇಳುತ್ತಿವೆ ಎಂಬ ದೂರುಗಳಿವೆ. ಇದು ಯಾವುದೋ ಒಂದು ಕಂಪನಿಯ ನೌಕರರ ಸಮಸ್ಯೆ ಅಲ್ಲ. ಎಲ್ಲಾ ಕಡೆ ಹೀಗೆ ಮಾಡಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಕೆಲಸ ಕಳೆದುಕೊಂಡವರು ತೊಂದರೆಗೆ ಒಳಗಾಗಬೇಕಾಗುತ್ತದೆ. ಇದಕ್ಕೊಂದು ಪರಿಹಾರ ಕಂಡುಕೊಳ್ಳಿ ಎಂದು ಸಚಿವ ಲಾಡ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕಾರ್ಮಿಕ ಇಲಾಖೆಯೊಂದಿಗೆ ಕಂಪನಿಗಳು ಕೈ ಜೋಡಿಸಿದರೆ ಉದ್ಯೋಗಿಗಳ ಪರವಾದ ಪಾಲಿಸಿಯನ್ನು ರೂಪಿಸಲು ಸಹಾಯವಾಗಲಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಸಚಿವರು ಸಲಹೆ ನೀಡಿದರು.
ಕೌಶಲ್ಯ ವೃದ್ಧಿಸಲು ಸಹಕಾರ ಬೇಕು

ಸರ್ಕಾರದೊಂದಿಗೆ ಐಟಿ ಕಂಪನಿಗಳು ಕೈ ಜೋಡಿಸಿದರೆ ಉದ್ಯೋಗಾವಕಾಶ ಹೆಚ್ಚಿಸಬಹುದು, ಕೌಶಲ್ಯ ವೃದ್ಧಿಸಬಹುದು ಹಾಗೂ ಅವಕಾಶಗಳನ್ನು ಸೃಷ್ಟಿಸಬಹುದು ಎಂದೂ ಲಾಡ್ ಅವರು ಸಭೆಯಲ್ಲಿ ಹೇಳಿದರು.
ಇತ್ತೀಚೆಗೆ ಉದ್ಯೋಗದ್ದೇ ದೊಡ್ಡ ಸಮಸ್ಯೆ. ಸರ್ಕಾರವೇ ಎಲ್ಲರಿಗೂ ಕೆಲಸ ಕೊಡಲು ಸಾಧ್ಯವಿಲ್ಲ. ಕೆಲಸ ಕಳೆದುಕೊಂಡವರಿಗೆ ಮತ್ತೆ ಸರಿಯಾದ ಕೆಲಸ ಸಿಗುತ್ತಿಲ್ಲ.. ಇಂತಹ ಸಂದರ್ಭದಲ್ಲಿ ಸೂಕ್ತ ಕೌಶಲ್ಯ ಹೊಂದಿದ್ದರೆ ಉದ್ಯೋಗ ಸಿಗಲಿದೆ ಎಂದರು.

ಐಟಿ ಉದ್ಯಮದ ಸಮಸ್ಯೆಯನ್ನು ಅರಿಯಲು ಸರ್ಕಾರ ಬಯಸಿದೆ. ಇದರಿಂದ ಉದ್ಯೋಗಿಗಳಿಗೆ ಸಹಾಯವಾಲಿದೆ. ಕೌಶಲ ಹೆಚ್ಚಳಕ್ಕೆ ಸರ್ಕಾರ ಸಹ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಕಂಪನಿಗಳು ಈ ನಿಟ್ಟಿನಲ್ಲಿ ನಾಯಕತ್ವ ತೆಗೆದುಕೊಳ್ಳಬೇಕು. ಸರ್ಕಾರ ಮತ್ತು ಉದ್ದಿಮೆಗಳು ಒಂದಾದರೆ ಅಭ್ಯರ್ಥಿಗಳಿಗೆ ಒಳ್ಳೆಯದಾಗಲಿದೆ ಎಂದರು.

ಅದಕ್ಕೆ ಉತ್ತರಿಸಿದ ಅಧಿಕಾರಿಗಳು, ಉದ್ಯೋಗಿಯನ್ನು ಏಕಾಏಕಿ ಕೆಲಸದಿಂದ ತೆಗೆದು ಹಾಕುವ ಮುಂಚೆ ಕಂಪನಿಯ ಕ್ರಮಗಳನ್ನು ಕೈಗೊಂಡಿರುತ್ತದೆ. ಶಿಸ್ತುಪಾಲನಾ ಸಮಿತಿ ಇದೆ. ಅವರು ತೀರ್ಮಾನ ಕೈಗೊಳ್ಳುತ್ತದೆ. ಯಾವುದೇ ಅಭ್ಯರ್ಥಿಗೆ ತೊಂದರೆ ಮಾಡುವ ಉದ್ದೇಶ ಕಂಪನಿಗೆ ಇರುವುದಿಲ್ಲ. ಅವರ ಕೆಲಸದ ಕೌಶಲ ಮತ್ತಿತರ ಅಂಶಗಳನ್ನು ಪರಿಗಣಿಸುತ್ತೇವೆ ಎಂದರು.
ಟ್ರೈನಿ ಅಪ್ರೆಂಟಿಶಿಪ್ ಅಭ್ಯರ್ಥಿಗಳ ಸಮಸ್ಯೆ ಹಾಗೂ ಇತರ ವಿಷಯಗಳ ಕುರಿತು ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.