ವೈವಿಧ್ಯಮಯ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ ಪ್ರಿಯಾಂಕಾ ಉಪೇಂದ್ರ ಅವರು ನಟಿಸಿರುವ ಹೊಸ ಚಿತ್ರ “ಸಪ್ಟೆಂಬರ್ 21” ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಗಿಸಿ ಈಗ ಬಿಡುಗಡೆಗೆ ಸಿದ್ಧವಾಗಿದೆ.

ಸೆಪ್ಟೆಂಬರ್ 21 ಹಿಂದಿ ಮತ್ತು ಕನ್ನಡ ಭಾಷೆಯಲ್ಲಿ ಚಿತ್ರೀಕರಣಗೊಂಡಿದ್ದು, 2026ರಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಚಿತ್ರದ ನಿರ್ದೇಶನವನ್ನು 21 ವರ್ಷದ ಕರೆನ್ ಕ್ರಿಷ್ಠಿ ಸುವರ್ಣ ಮಾಡಿದ್ದಾರೆ. ಇದು ಕರೆನ್ ಕ್ರಿಷ್ಠಿ ಸುವರ್ಣ ನಿರ್ದೇಶನದ ಮೊದಲ ಚಿತ್ರ. ಹಾಗೆ ಇದೇ ನವಂಬರ್ 20 ರಿಂದ ನವಂಬರ್ 24ರ ವರೆಗೆ ನಡೆಯುವ 56ನೇ ಗೋವಾ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಈ ಚಿತ್ರ ಪ್ರದರ್ಶನಗೊಳ್ಳಲಿದೆ.

ಪ್ರಿಯಾಂಕ ಉಪೇಂದ್ರರವರ ಹುಟ್ಟು ಹಬ್ಬದ ಪ್ರಯುಕ್ತ ಚಿತ್ರತಂಡ ಚಿತ್ರದ ಮೊದಲ ಪೋಸ್ಟರ್(First look poster) ಬಿಡುಗಡೆ ಮಾಡಲು ತೀರ್ಮಾನಿಸಿದೆ. ಈ ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಮೊದಲ ಬಾರಿಗೆ ಮಧ್ಯಮ ವರ್ಗದ ಮಹಿಳೆಯ ಪಾತ್ರ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಪ್ರಿಯಾಂಕ ಉಪೇಂದ್ರ ʼಇದು ನನ್ನ ವೃತ್ತಿ ಜೀವನದ ಅತ್ಯಂತ ಸವಾಲಿನ ಪಾತ್ರ ಇದಾಗಿದ್ದು, ಅದನ್ನು ಅಷ್ಟೇ ಸೊಗಸಾಗಿ ಯುವ ನಿರ್ದೇಶಕಿ ಚಿತ್ರಿಕರಿಸಿದ್ದಾರೆʼ ಎಂದು ಹೇಳಿದ್ದಾರೆ.

ಪ್ರಿಯಾಂಕ ಉಪೇಂದ್ರ ಅಲ್ಲದೇ ಅನೇಕ ಬಾಲಿವುಡ್ ನಟ ನಟಿಯರ ದಂಡೆ ಈ ಚಿತ್ರದಲ್ಲಿ ಇದೆ. ಮುಖ್ಯ ಪಾತ್ರದಲ್ಲಿ ಪ್ರವೀಣ್ ಸಿಂಗ್ ಸಿಸೋಡಿ ಯ, ಝರಿನ ವಾಹಬ್, ಅಮಿತ್ ಬೇಲ್, ಅಜಿತ್ ಶಿದಾಯೆ,ಸಚಿನ್ ಪಾಟೆಕರ್ ನಟಿಸಿದ್ದಾರೆ. ಆಲ್ಝೈಮರ್ ಕಾಯಿಲೆ (Alzheimer’s disease)ಸುತ್ತ ನಡೆಯುವ ಕಥೆ ಇದಾಗಿದ್ದು, ರೋಗಿಗಿಂತ ಅವನ ಪಾಲನೆ ಮಾಡುವವರು ತೆಗೆದುಕೊಳ್ಳುವ ನಿರ್ಧಾರ ತುಂಬಾ ಮುಖ್ಯ ಎನ್ನುವುದು ಚಿತ್ರದ ಅಡಿಬರಹವಾಗಿದೆ.

ರಾಜಶೇಖರ್ ಕಥೆಗೆ, ವಿನಯ್ ಚಂದ್ರ ಸಂಗೀತವಿದ್ದು, ಅನಿಲ್ ಕುಮಾರ್ ಛಾಯಾಗ್ರಹಣ ಮಾಡಿದ್ದಾರೆ. ಈ ಚಿತ್ರವನ್ನು ಬಾಲಿವುಡ್ ನಿರ್ದೇಶಕ ಇಮ್ತಿಯಜ್ ಆಲಿ ಪತ್ನಿ ಪ್ರೀತಿ ಆಲಿ ತಮ್ಮ ಹಮಾರಾ ಮೂವಿ ಸಹಭಾಗಿತ್ವ ದಲ್ಲಿ FMD ವಿಸಿಕ ಫಿಲಂಸ್ ಮತ್ತು ಫಿಲಂ ಮ್ಯಾಕ್ಸ್ ಪ್ರೊಡಕ್ಷನ್ ಜಂಟಿಯಾಗಿ ನಿರ್ಮಿಸುತ್ತಿದೆ.


