ತೀವ್ರ ಕುತೂಹಲ ಮೂಡಿಸಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಆಡಳಿತರೂಢ ಬಿಜೆಪಿ ತಾನು ಕೇಂದ್ರ ಮತ್ತು ರಾಜ್ಯಗಳಲ್ಲಿ ಅಧಿಕಾರದಲ್ಲಿರುವುದನ್ನೇ ಮರೆತಿದೆ. ತಾನು ಮಾಡಿರುವ ಕೆಲಸಗಳ ಬಗ್ಗೆ ಹೇಳುವುದನ್ನು ಬಿಟ್ಟು ಹಳೆಯ ‘ಹಿಂದುತ್ವದ’ ಅಸ್ತ್ರವನ್ನೇ ಮತ್ತೆ ಪ್ರಯೋಗಿಸುತ್ತಿದೆ. ಪ್ರಮುಖ ಪ್ರತಿಪಕ್ಷವಾದ ಸಮಾಜವಾದಿ ಪಕ್ಷ ಬಿಜೆಪಿಗೆ ಇರುವ ಆಡಳಿತವಿರೋಧಿ ಅಲೆಯ ಪ್ರಯೋಜನ ಪಡೆಯಲು ಪ್ರಯತ್ನಿಸುತ್ತಿದೆ. ಬಹುಜನ ಸಮಾಜವಾದಿ ಪಕ್ಷ ಈವರೆಗೆ ತನ್ನ ನಿಲುವೇನೂ ಎನ್ನುವುದನ್ನು ಸೂಕ್ತ ರೀತಿಯಲ್ಲಿ ಖಾತರಿ ಪಡಿಸಿಲ್ಲ. ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಚುನಾವಣಾ ಕಣಕ್ಕಿಳಿದಿರುವ ಕಾಂಗ್ರೆಸ್ ಈ ಬಾರಿ ‘ಮಹಿಳಾ ಅಸ್ತ್ರವನ್ನು’ ಸಮರ್ಥವಾಗಿ ಬಳಸಲು ಮುಂದಾಗಿದೆ.
ಕಾಂಗ್ರೆಸ್ ಪಕ್ಷ ಮೊದಲಿಗೆ ‘ಈ ಬಾರಿಯ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಶೇಕಡಾ 40ರಷ್ಟು ಸೀಟುಗಳನ್ನು ಮಹಿಳೆಯರಿಗೆ ನೀಡಲಾಗುವುದು’ ಎಂದು ಘೋಷಣೆ ಮಾಡಿತ್ತು. ಬಳಿಕ ‘ಮಹಿಳೆಯರಿಗೆ ಪ್ರತ್ಯೇಕವಾದ ಪ್ರಣಾಳಿಕೆ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಈಗ ಉತ್ತರ ಪ್ರದೇಶದ ಉಸ್ತುವಾರಿಯೂ ಆಗಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ‘ಲಡ್ಕಿ ಹೂ, ಲಾಡ್ ಸಕ್ತಿ ಹೂ’ (ನಾನು ಹುಡುಗಿ, ಹೋರಾಟ ಮಾಡಬಲ್ಲೆ) ಎಂಬ ವಿನೂತನವಾದ ಅಭಿಯಾನವನ್ನು ಆರಂಭಿಸಿದ್ದಾರೆ.
‘ಲಡ್ಕಿ ಹೂ, ಲಾಡ್ ಸಕ್ತಿ ಹೂ’ ಅಭಿಯಾನವನ್ನು ಹಲವಾರು ರೀತಿಯಲ್ಲಿ ರೂಪಿಸಲಾಗಿದೆ. ಇವತ್ತು (ಡಿಸೆಂಬರ್ 28) ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ‘ಲಡ್ಕಿ ಹೂ, ಲಾಡ್ ಸಕ್ತಿ ಹೂ ಮ್ಯಾರಥಾನ್’ ಎಂಬ ಹೆಸರಿನಲ್ಲಿ ‘ಹುಡುಗಿಯರ ಓಟ’ ಆಯೋಜಿಸಲಾಗಿತ್ತು. ನಾಳೆ (ಡಿಸೆಂಬರ್ 29ರಂದು) ಫಿರೋಜಾಬಾದ್ನಲ್ಲಿ ‘ಲಡ್ಕಿ ಹೂ, ಲಾಡ್ ಸಕ್ತಿ ಹೂ’ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮದಲ್ಲಿ ಸ್ವತಃ ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದಾರೆ.
ಮುಂದಿನ ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದ್ದು ಅಲ್ಲಿಯವರೆಗೆ ಏನೇನು ಮಾಡಬೇಕು? ಯಾವ್ಯಾವ ರೀತಿಯ ಅಭಿಯಾನಗಳನ್ನು ನಡೆಸಬೇಕು? ಪ್ರಚಾರ ತಂತ್ರ ಹೇಗಿರಬೇಕು? ಸಭೆ-ಸಮಾರಂಭ-ಸಮಾವೇಶಗಳ ಸ್ವರೂಪ ಹೇಗಿರಬೇಕು ಎಂಬ 100 ದಿನಗಳ ಕ್ರಿಯಾ ಯೋಜನೆಯನ್ನೂ ಕಾಂಗ್ರೆಸ್ ರೂಪಿಸಿದೆ. ಈ ಕ್ರಿಯಾಯೋಜನೆಗಳ ಪ್ರಕಾರ ಕಾಂಗ್ರೆಸ್ ಪಕ್ಷವು ಉತ್ತರ ಪ್ರದೇಶದ 4 ಕೋಟಿ ಮಹಿಳಾ ಮತದಾರರನ್ನು ತಲುಪಲು ದೊಡ್ಡ ಜನಸಂಪರ್ಕ ಅಭಿಯಾನವನ್ನು ಪ್ರಾರಂಭಿಸಿದೆ. ಸುಮಾರು 8,000 ಮಹಿಳಾ ಸ್ವಯಂಸೇವಕರ ಬ್ರಿಗೇಡ್ ಅನ್ನು “ಲಡ್ಕಿ ಹೂಂ, ಲಾಡ್ ಸಕ್ತಿ ಹೂಂ” ಎಂಬ ಘೋಷಣೆಯೊಂದಿಗೆ ನಿಯೋಜಿಸಲಾಗಿದೆ. ಈ ಅಭಿಯಾನದಲ್ಲಿ ಸುಮಾರು 150 ತರಬೇತಿ ಪಡೆದ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಈ ಬ್ರಿಗೇಡ್ ಪ್ರತಿದಿನ ಸುಮಾರು 2 ಲಕ್ಷ ಮಹಿಳೆಯರನ್ನು ಭೇಟಿ ಮಾಡಿ ಮಹಿಳೆಯರಿಗೆ ಕಾಂಗ್ರೆಸ್ ಪಕ್ಷ ಏನು ಮಾಡಲಿದೆ ಎಂಬ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಭರವಸೆಗಳನ್ನು ತಿಳಿಸಿಕೊಡಲಿದೆ.

ಇದಲ್ಲದೆ ಕಾಂಗ್ರೆಸ್ ಪಕ್ಷದ ವತಿಯಿಂದ ಮಹಿಳೆಯರ ಜೊತೆ ವಿಶೇಷ ಸಂವಾದ ಸಭೆಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅವುಗಳನ್ನು ‘ಮಹಿಳಾ ಟೌನ್ ಹಾಲ್’ಗಳೆಂದು ಕರೆಯಲಾಗುತ್ತಿದೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಇಂಥ ಸಂವಾದಗಳನ್ನು ಆಯೋಜಿಸುತ್ತಿದ್ದು ಈಗಾಗಲೇ ರಾಯಬರೇಲಿ ಮತ್ತು ಚಿತ್ರಕೂಟಗಳಲ್ಲಿ ಮಹಿಳಾ ಟೌನ್ ಹಾಲ್ಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಇದೇ ರೀತಿ ರಾಜ್ಯಾದ್ಯಂತ 100 ಟೌನ್ ಹಾಲ್ಗಳನ್ನು ಆಯೋಜಿಸಲು ಪಕ್ಷವು ನಿರ್ಧರಿಸಿದೆ. ಈ ಟೌನ್ ಹಾಲ್ ಸಭೆಗಳಲ್ಲಿ ಮಹಿಳಾ ಅಭ್ಯರ್ಥಿಗಳ ಶೋಧ ಕಾರ್ಯವೂ ನಡೆಯಲಿದೆ. ಜೊತೆಗೆ ಪ್ರಣಾಳಿಕೆಗೆ ಸೇರಿಸಬಹುದಾದ ಮಹಿಳೆಯರ ಬೇಡಿಕೆಗಳನ್ನು ಕೂಡ ಹುಡುಕಲಾಗುತ್ತಿದೆ.
ಮೂಲಗಳ ಪ್ರಕಾರ ಉತ್ತರ ಪ್ರದೇಶದ ಮಹಿಳಾ ಮತದಾರರಲ್ಲಿ ಶೇಖಡಾ 60ರಷ್ಟು 18ರಿಂದ 35ರ ವಯೋಮಾನದವರಾಗಿದ್ದಾರೆ. ಈ 60ರಷ್ಟು ಯುವ ಮಹಿಳಾ ಮತದಾರರನ್ನು ಪಕ್ಷಕ್ಕೆ ಸೆಳೆಯಲು ಕಾಂಗ್ರೆಸ್ ವಿಶೇಷ ಪ್ರಯತ್ನ ನಡೆಸುತ್ತಿದೆ. ಉತ್ತರ ಪ್ರದೇಶದ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ 100 ಸ್ಥಾನಗಳ ಮೇಲೆ ಕಾಂಗ್ರೆಸ್ ಗಮನ ಹರಿಸಿದ್ದು ಆ 100 ಕ್ಷೇತ್ರಗಳಲ್ಲಿ ಪ್ರತಿ ಮಹಿಳೆಯನ್ನು 10 ಬಾರಿ ಸಂಪರ್ಕ ಮಾಡಬೇಕೆಂಬ ಗುರಿಯನ್ನು ನಿಗದಿಪಡಿಸಲಾಗಿದೆ.
2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 312 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಮೂಲಕ ಭರ್ಜರಿ ಗೆಲುವು ಸಾಧಿಸಿತ್ತು. ಸಮಾಜವಾದಿ ಪಕ್ಷ (ಎಸ್ಪಿ) 47 ಸ್ಥಾನ, ಬಿಎಸ್ಪಿ 19 ಸ್ಥಾನಗಳನ್ನು ಗೆದ್ದಿದ್ದರೆ ಕಾಂಗ್ರೆಸ್ ಏಳು ಸ್ಥಾನಗಳನ್ನು ಗೆಲ್ಲಲು ಮಾತ್ರ ಶಕ್ತವಾಗಿತ್ತು. ಈಗ ಪ್ರಿಯಾಂಕಾ ಗಾಂಧಿ ಅವರ ನೇತೃತ್ವದಲ್ಲಿ ಸಾಧ್ಯವಾದಷ್ಟು ಹೆಚ್ಚು ಸೀಟುಗಳನ್ನು ಗೆಲ್ಲಬೇಕು. ಬಿಜೆಪಿಯೇತರ ಸರ್ಕಾರ ರಚನೆ ಆಗುವಂತೆ ಮಾಡಬೇಕು. ಶೇಕಡಾವಾರ ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದ ಮತಗಳನ್ನು ಪಡೆಯಬೇಕು. 2024ರ ಲೋಕಸಭಾ ಚುನಾವಣೆಗೆ ಪಕ್ಷದ ಸಂಘಟನೆಯನ್ನು ಹೆಚ್ಚು ಮಾಡಬೇಕು ಎಂದು ನಿರ್ಧರಿಸಿದೆ. ಅದಕ್ಕಾಗಿ ಕಾಂಗ್ರೆಸ್ ಪಕ್ಷ ಅತಿ ಹೆಚ್ಚು ಭರವಸೆ ಇಟ್ಟುಕೊಂಡಿರುವುದು ಮಹಿಳೆಯರ ಮೇಲೆ.