ಮುಂದಿನ ತಿಂಗಳು ಏಳು ಹಂತಗಳಲ್ಲಿ ಚುನಾವಣೆ ಎದುರಿಸಲಿರುವ ಉತ್ತರಪ್ರದೇಶದಲ್ಲಿ ಈಗಾಗಲೇ ರಾಜಕೀಯ ಪಕ್ಷಗಳು ತಮ್ಮದೇ ಆದ ತಂತ್ರ ಮತ್ತು ಪ್ರತಿತಂತ್ರ ಹೆಣೆಯುವುದರಲ್ಲಿ ನಿರತವಾಗಿವೆ. ಆದರೆ, ಈ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಮುಂಬರುವ ಚುನಾವಣೆ ಕುರಿತು ಭವಿಷ್ಯವನ್ನ ನುಡಿದಿದ್ದು ಕಾಂಗ್ರೆಸ್ ನಾಯಕರು ದಿಕ್ಸೂಚಿ ಎಂದೇ ಭಾವಿಸಿದ್ದಾರೆ.
ಆಡಳಿತ ವಿರೋಧಿ ಅಲೆ ಹಾಗೂ ಪ್ರಿಯಾಂಕ ಗಾಂಧಿರವರ ಸತತ ಪರಿಶ್ರಮದ ಫಲವಾಗಿ ಮುಂಬರುವ ಉತ್ತರಪ್ರದೇಶ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿಯುತ್ತದೆ ಎಂದು ಭವಿಷ್ಯವನ್ನ ನುಡಿದಿದ್ದಾರೆ.
ಪ್ರಿಯಾಂಕ ಗಾಂಧಿರವರು ಶುರು ಮಾಡಿದ ʻಮೇ ಲಡ್ಕಿ ಹೂ ಲಡ್ ಸಕ್ತಾ ಹೂʼ ಅಭಿಯಾನವು ಪ್ರತಿಯೊಂದು ಜಾತಿ ಹಾಗೂ ಧರ್ಮದ ಜನರಲ್ಲಿ ಹೊಸ ಚೈತನ್ಯವನ್ನ ಮೂಡಿಸಿದೆ. ಉತ್ತರ ಪ್ರದೇಶದ ಜನರು ಬದಲಾವಣೆಯನ್ನು ಬಯಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಮುಂದುವರೆದು, ನಾನು ಇತ್ತೀಚಿಗೆ ಯುಪಿಗೆ ಭೇಟಿ ನೀಡಿದೆ ಮತ್ತು ನಾನು ಯುವಕನಾಗಿ ಇದ್ದಾಗಿನಿಂದಲೂ ಯುಪಿಯೊಂದಿಗೆ ನಿಕಟ ಸಂಬಂಧವನ್ನು ಹೊಂದಿದ್ದೇನೆ. ಜನರು ಆಡಳಿತ ಪಕ್ಷದ ವಿರುದ್ದ ಮತ ಚಲಾಯಿಸಲು ಮುಂದಾಗಿದ್ದಾರೆ . ಪ್ರಿಯಾಂಕ ಗಾಂಧಿರವರ ಪ್ರಯತ್ನದಿಂದ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಹಾಗೂ ರಾಜ್ಯಕ್ಕೆ ಚುನಾವಣೆ ನಂತರ ಬದಲಾವಣೆ ತರಲಿದೆ ಎಂದು ಹೇಳಿದ್ದಾರೆ.

ಇಂದಿನ ಕಾಲಘಟದಲ್ಲಿ ಶೇ.95ರಷ್ಟು ಜನರು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯರಾಗಿರುವುದರಿಂದ ಹಾಗೂ ಉತ್ತಮ ತಿಳುವಳಿಕೆ ಹೊಂದಿರುವುದರಿಂದ ಬಿಜೆಪಿ ಜಾಹೀರಾತು ನೀಡುವ ಮೂಲಕ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.
ಸದ್ಯ ಉತ್ತರಪ್ರದೇಶದಲ್ಲಿ ಕಾಂಗ್ರೆಸ್ ಜಾರಿಗೆ ತಂದಿರುವ 40% ಮಹಿಳಾ ಮೀಸಲಾತಿಯನ್ನು ಸ್ಥಳೀಯ ನಾಯಕರೊಂದಿಗೆ ಚರ್ಚಿಸಿ ಮಧ್ಯಪ್ರದೇಶದಲ್ಲು ಸಹ ಜಾರಿಗೆ ತರಲಾಗುವುದು. ರಾಜಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಮಹಿಳೆಯರಿಗೆ ಉತ್ತೇಜನ ನೀಡುವ ಪರವಾಗಿ ನಾನು ಇದ್ದೇನೆ ಎಂದು ಈ ವೇಳೆ ಹೇಳಿದ್ದಾರೆ.
ಮಧ್ಯಪ್ರದೇಶದಲ್ಲಿ ಈವರೆಗೂ ಕೋವಿಡ್ಗೆ 2.5ಲಕ್ಷ ಜನರು ಬಲಿಯಾಗಿದ್ದಾರೆ ಇದು ಪಕ್ಷದ ಲೆಕ್ಕಾಚಾರವಲ್ಲ ಸ್ಮಶಾನದಲ್ಲಿ ಸುಟ್ಟ ಶವಗಳ ಲೆಕ್ಕವನ್ನು ಪಟ್ಟಿ ಮಾಡಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.












