ಇತ್ತೀಚೆಗೆ ಬಿಜೆಪಿ ಮಾತು ಎತ್ತಿದರೆ ಸಾಕು “ಕಾಂಗ್ರೆಸ್ ಮುಳುಗುತ್ತಿರುವ ಹಡಗು, ಅಂತ್ಯ ಕಾಣುತ್ತಿರುವ ಪಕ್ಷ” ಎಂದು ಸದಾ ಟೀಕಿಸುತ್ತಲೇ ಬರುತ್ತಿದೆ. ಈಗ ಬಿಜೆಪಿಗೆ ತಿರುಗೇಟು ನೀಡಲು ಮುಂದಾದ ಕಾಂಗ್ರೆಸ್ ಬಿಜೆಪಿ ಭದ್ರಕೋಟೆಯನ್ನೇ ಭೇದಿಸಲು ಸಜ್ಜಾಗಿದೆ. ಮುಂಬರುವ ಚುನಾವಣೆಯ ಗೆಲುವಿನ ಸಮರಕ್ಕೆ ಈಗಿನಿಂದಲೇ ಜೂನಿಯರ್ ಇಂದಿರಾ ಗಾಂಧಿ ಎಂದೇ ಖ್ಯಾತಿಯಾದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ತಯಾರಿ ಆರಂಭಿಸಿದ್ದಾರೆ.
ದೇಶದಲ್ಲಿ 70 ವರ್ಷಗಳ ಕಾಲ ಸುದೀರ್ಘ ಆಡಳಿತ ನೀಡಿದ್ದ ಕಾಂಗ್ರೆಸ್ ಪಕ್ಷ ತಾತ್ಕಲಿಕವಾಗಿ ಹಿಂದಡಿ ಇಟ್ಟಿದೆ. ಈಗ ಬಿಜೆಪಿಯ ಸುಭದ್ರ ಕೋಟೆ ಎನಿಸಿಕೊಂಡಿರುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಿಯಾಂಕಾ ಗಾಂಧಿ ಗೆಲುವಿನ ಹೋರಾಟ ಆರಂಭಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಪಕ್ಷವನ್ನು ಶತಾಯಗತಾಯ ಮೇಲೆತ್ತಲು ಜೂನಿಯರ್ ಪ್ರಿಯಾಂಕಾ ಗಾಂಧಿ ಪಣ ತೊಟ್ಟಿದ್ದಾರೆ. ಕಳೆದ ಒಂದೂವರೆ ವರ್ಷದಿಂದ ಇಲ್ಲೇ ಮೊಕ್ಕಾಂ ಹೂಡಿರುವ ಪ್ರಿಯಾಂಕಾ, ಹತ್ತು ಹಲವು ತಂತ್ರಗಳನ್ನು ಬತ್ತಳಿಕೆಯಲ್ಲಿ ಇರಿಸಿಕೊಂಡು ರಾಜಕೀಯ ರಣತಂತ್ರ ಹೆಣೆದಿದ್ದಾರೆ.
ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಹಾಗೂ ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ, ಯೋಗಿ ಆದಿತ್ಯನಾತ್ ಕೋಟೆಯಿಂದಲೇ ತಮ್ಮ ವಿಜಯಯಾತ್ರೆಯನ್ನು ಆರಂಭಿಸಿದ್ದಾರೆ.. 2022ರ ವಿಧಾನಸಭಾ ಚುನಾವಣೆಗೂ ಮುನ್ನವೇ ಪಕ್ಷದ ನಿರ್ಣಯಗಳನ್ನು ಜನರಿಗೆ ತಲುಪಿಸಲು ಬರಾಬಂಕಿಯಿಂದ ‘ಪ್ರತಿಜ್ಞಾ ಯಾತ್ರೆ’ ಆರಂಭಿಸಲಿದ್ದಾರೆ.

ಕೇಸರಿ ಕೋಟೆಯಲ್ಲಿ ‘ಕೈ’ ‘ಪ್ರತಿಜ್ಞೆ’
- ಯುಪಿಯಲ್ಲಿ ಕಾಂಗ್ರೆಸ್ ಮೊದಲ ಭಾಗವಾಗಿ ಪ್ರತಿಜ್ಞಾ ಯಾತ್ರೆ
- ಮೂರ್ನಾಲ್ಕು ತಿಂಗಳು ಚುನಾವಣೆ ಬಾಕಿ ಇರುವಾಗಲೇ ಪ್ರತಿಜ್ಞೆ
- ಯಾತ್ರೆಗೆ ಮೂರು ಮಾರ್ಗಗಳನ್ನು ಪ್ರಿಯಾಂಕಾ ಆಯ್ಕೆ ಮಾಡಿದ್ದಾರೆ
- 12 ಸಾವಿರ ಕಿಲೋಮೀಟರ್ ಯಾತ್ರೆ ಮಾಡಲಿರುವ ಪ್ರಿಯಾಂಕ
- ಬಾರಾಬಂಕಿಯಿಂದ ಆರಂಭವಾಗಲಿರುವ ಪಕ್ಷದ ‘ಪ್ರತಿಜ್ಞಾ ಯಾತ್ರೆ’
- ಬುಂದೇಲ್ಖಂಡ್, ಸಹರಾನ್ಪುರ, ಮಥುರಾ ಕ್ಷೇತ್ರಗಳ ಮಾರ್ಗ
- ಮೋದಿ ಕ್ಷೇತ್ರ ವಾರಣಾಸಿಯಿಂದ ರಾಯ್ಬರೇಲಿವರೆಗೆ ಯಾತ್ರೆ
- ನವೆಂಬರ್ 1ರವರೆಗೆ ಪ್ರತಿಜ್ಞಾ ಯಾತ್ರೆ ನಡೆಯಲಿದೆ
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಮೊದಲ ಭಾಗವಾಗಿ ಪ್ರತಿಜ್ಞಾ ಯಾತ್ರೆಯನ್ನು ಆರಂಭಿಸಿದೆ.. ಚುನಾವಣೆ ಮೂರ್ನಾಲ್ಕು ತಿಂಗಳು ಬಾಕಿ ಇರುವಾಗಲೇ ಪ್ರತಿಜ್ಞಾ ಯಾತ್ರೆಯನ್ನು ಕೈಗೊಂಡಿದ್ದು, ಯಾತ್ರೆ ನಡೆಸಲು ಪ್ರಿಯಾಂಕಾ ಗಾಂಧಿ ಮೂರು ಮಾರ್ಗಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಟ್ಟು 12 ಸಾವಿರ ಕಿಲೋಮೀಟರ್ ಪ್ರಿಯಾಂಕ ಯಾತ್ರೆ ಮಾಡಲಿದ್ದಾರೆ.
ಬಾರಾಬಂಕಿಯಿಂದ ಪಕ್ಷದ ಪ್ರತಿಜ್ಞಾ ಯಾತ್ರೆ ಆರಂಭವಾಗಲಿದ್ದು, ಬುಂದೇಲ್ಖಂಡ್, ಸಹರಾನ್ಪುರ, ಮಥುರಾ ಕ್ಷೇತ್ರ ಸೇರಿದಂತೆ, ಪ್ರಧಾನಿ ಮೋದಿ ಕ್ಷೇತ್ರ ವಾರಣಾಸಿಯಿಂದ ರಾಯ್ಬರೇಲಿವರೆಗೆ ಯಾತ್ರೆ ಸಾಗಲಿದ್ದು, ನವೆಂಬರ್ 1ರವರೆಗೆ ಪ್ರತಿಜ್ಞಾ ಯಾತ್ರೆ ಮುಂದುವರೆಯಲಿದೆ.
ಬಿಜೆಪಿಯ ಭದ್ರ ಕೋಟೆ ಎನಿಸಿಕೊಂಡಿರುವ ಯುಪಿಯಲ್ಲಿ ಈಗಾಗಲೇ ಪ್ರಿಯಾಂಕ ಉಸ್ತುವಾರಿ ವಹಿಸಿಕೊಂಡಿದ್ದು, ಶತಾಯಗತಾಯ ಆದ್ರೂ ಯುಪಿಯಲ್ಲಿ ಗೆಲುವಿನ ಪಾತಾಕೆ ಹಾರಿಸಲು ಪಣ ತೊಟ್ಟಿದ್ದಾರೆ.. ಇನ್ನೂ ಪ್ರತಿಯೊಂದು ವಿಷಯವನ್ನೂ ಗಂಭೀರವಾಗಿ ಪರಿಗಣಿಸುತ್ತಿರುವ ಪ್ರಿಯಾಂಕ, ಪ್ರತಿ ಹೆಜ್ಜೆಯನ್ನು ಬಹಳ ಸೂಕ್ಷ್ಮವಾಗಿ ಆಲೋಚಿಸಿ ತಿರ್ಮಾನ ಕೈಗೊಳ್ಳುತ್ತಿದ್ದಾರೆ.

ಹಿರಿಯ ನಾಯಕರಿಗೆ ‘ಪ್ರತಿಜ್ಞೆ’ಯ ನೇತೃತ್ವ
- ವಾರಣಾಸಿಯಿಂದ ರಾಯ್ ಬರೇಲಿವರೆಗೆ ಪ್ರಮೋದ್ ತಿವಾರಿ ನೇತೃತ್ವ
- ಬಾರಾಬಂಕಿಯಿಂದ ಬುಂದೇಲ್ಖಂಡ್ವರೆಗೆ ಪುನಿಯಾ ಮುನ್ನಡೆಸಲಿದ್ದಾರೆ
- ಬುಂದೇಲ್ಖಂಡ್ನಿಂದ ಮಾಜಿ ಸಚಿವ ಪ್ರದೀಪ್ ಜೈನ್ ಆದಿತ್ಯ ನೇತೃತ್ವ
- ಸಹರನ್ಪುರ – ಮಥುರಾವರೆಗೆ ಯಾತ್ರೆಗೆ ಸಲ್ಮಾನ್ ಖುರ್ಷಿದ್ ಲೀಡರ್
- ಮಥುರಾದಿಂದ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ನೇತೃತ್ವ
ವಾರಣಾಸಿಯಿಂದ ರಾಯ್ ಬರೇಲಿವರೆಗೆ ಪ್ರಮೋದ್ ತಿವಾರಿ ನೇತೃತ್ವ ವಹಸಿದ್ದಾರೆ. ಬಾರಾಬಂಕಿಯಿಂದ ಬುಂದೇಲ್ಖಂಡ್ವರೆಗೆ ಪುನಿಯಾ ಮುನ್ನಡೆಸಲಿದ್ದಾರೆ. ಇನ್ನೂ ಬುಂದೇಲ್ಖಂಡ್ನಿಂದ ಮಾಜಿ ಸಚಿವ ಪ್ರದೀಪ್ ಜೈನ್ ಆದಿತ್ಯ ಮುನ್ನಡೆಸಿದರೆ, ಸಹರನ್ಪುರ-ಮಥುರಾವರೆಗೆ ಯಾತ್ರೆಗೆ ಸಲ್ಮಾನ್ ಖುರ್ಷಿದ್ ನೇತೃತ್ವ ವಹಿಸಲಿದ್ದಾರೆ. ಮಥುರಾದಿಂದ ಕಾಂಗ್ರೆಸ್ನ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಯಾತ್ರೆಯ ನೇತೃತ್ವ ವಹಿಸುತ್ತಿದ್ದಾರೆ.
ಇನ್ನೂ ಯುದ್ದಕಾಲದಲ್ಲಿ ಶಸ್ತ್ರಾಭ್ಯಾಸ ಎನ್ನುವ ಹಳೇ ಸಂಪ್ರದಾಯಕ್ಕೆ ಎಳ್ಳು ನೀರು ಬಿಟ್ಟಿರುವ ಪ್ರಿಯಾಂಕಾ ಗಾಂಧಿ, ಚುನಾವಣೆ ಘೋಷಣೆಗೆ ಮುಂಚೆ ಕಾಂಗ್ರೆಸ್ ಪಕ್ಷ ಹಲವಾರು ನಿರ್ಣಯಗಳನ್ನು ಜನರಿಗೆ ತಲುಪಿಸಲು ಯೋಜನೆ ರೂಪಿಸಿದ್ದು, ನೂತನ ಆಲೋಚನೆಗಳ ಮೂಲಕ ಗೆಲುವಿನ ಮುಂದಡಿ ಇಡುತ್ತಿದ್ದಾರೆ..
ಮುಂಬರುವ ಚುನಾವಣೆ ತಯಾರಿ ಆರಂಭದಲ್ಲೇ ಪ್ರಿಯಾಂಕ ಮಹಿಳೆಯರನ್ನೆ ಟಾರ್ಗೆಟ್ ಮಾಡಿದ್ದಾರೆ.. ಚುನಾವಣೆಯಲ್ಲಿ ಶೇ.40ರಷ್ಟು ಸೀಟು ಮಹಿಳೆಯರಿಗೆ ಮೀಸಲಿರಿಸಲು ಒತ್ತು ನೀಡಿದ್ದಾರೆ. ಜೂನಿಯರ್ ಇಂದಿರಾ ಗಾಂಧಿ ಮಹಿಳಾ ಮತ ಬ್ಯಾಂಕ್ ಮೇಲೆ ಕಣ್ಣಿಟ್ಟಿದ್ದಾರೆ.

ಮಹಿಳೆಯರಿಗೆ ಸ್ಮಾಟ್ ಫೋನ್, ಸ್ಕೂಟಿ ನೀಡುವ ಘೋಷಣೆ ಮಾಡಿದ್ದಾರೆ.. ಚುನಾವಣೆಗೆ ಮುನ್ನವೇ ‘ಕೈ’ ಅಭ್ಯರ್ಥಿಗಳ ಘೋಷಣೆಗೆ ನಿರ್ಧಾರ ಮಾಡಲಾಗಿದ್ದು, ಈ ಸಂಬಂಧ ಎಐಸಿಸಿ ಅಧ್ಯಕ್ಷೆ ಸೋನಿಯಾ ನೇತೃತ್ವದಲ್ಲಿ ಸಭೆ ನಡೆಸಲಿದ್ದಾರೆ. ಮುಂದಿನ ವಾರವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ‘ಕೈ’ ಸಿದ್ಧತೆ ನಡೆಸಿದ್ದು, ಯುಪಿಯಲ್ಲಿನ ಸಣ್ಣ ವಿಚಾರವನ್ನು ಕೂಡ ರಾಜಕೀಯ ಅಸ್ತ್ರವಾಗಿ ಬಳಕೆ ಮಾಡಿಕೊಳ್ಳಲು ಪ್ಲಾನ್ ಮಾಡಿದ್ದಾರೆ.
ಒಟ್ಟಾರೆ 70 ವರ್ಷಗಳ ಕಾಲ ಸುದೀರ್ಘ ಆಡಳಿತ ನೀಡಿದ್ದ ಪಕ್ಷವನ್ನು ಮುಳುಗುತ್ತಿರುವ ಹಡಗು ಎಂದು ಅಣಕಿಸುವವರಿಗೆ, ತನ್ನ ಅಜ್ಜಿಯಂತೆಯೇ ವಿರೋಧಿಗಳಿಗೆ ಖಡಕ್ ಉತ್ತರ ನೀಡಲು ಪ್ರಿಯಾಂಕ ಸಜ್ಜಾಗಿದ್ದಾರೆ.. ಅದು ಬಿಜೆಪಿಯ ಭದ್ರ ಕೋಟೆ ಎಂದು ಬಿಂಬಿತವಾಗಿರುವ ವಾರಣಾಸಿ, ಉತ್ತರ ಪ್ರದೇಶದಲ್ಲಿ ಪ್ರಿಯಾಂಕ ಕದನದ ಗೆಲುವಿಗೆ ಮುನ್ನುಡಿ ಬರೆದಿದ್ದಾರೆ.. ಚುನಾವಣೆ ಮೂರ್ನಾಲ್ಕು ತಿಂಗಳು ಇರುವಾಗಲೇ ತನ್ನ ಪಕ್ಷದ ಗೆಲುವಿಗೆ ರಣತಂತ್ರ ರೂಪಿಸಿ.. ರಾಜಕೀಯ ಘಟಾನುಘಟಿ ವಿರೋಧಿಗಳಿಗೆ ಸೋಲುಣಿಸಲು ಸಜ್ಜಾಗಿದ್ದು, ಚುನಾವಣೆಯಲ್ಲಿ ಯಾರು ಗೆಲುವಿನ ಕಹಳೆ ಮೊಳಗಿಸುತ್ತಾರೆ ಕಾದು ನೋಡಬೇಕಿದೆ.