ನವದೆಹಲಿ :ಏ.29: ಭಾರತದ ಕುಸ್ತಿ ಒಕ್ಕೂಟದ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಹಲವಾರು ಮಹಿಳಾ ಅಥ್ಲೀಟ್ಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಕೆಲ ದಿನಗಳಿಂದ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಇಂದು ಮುಂಜಾನೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯವರು ಭೇಟಿ ಮಾಡಿದರು.
ದೆಹಲಿಯ ಜಂತರ್ ಮಂತರ್ ನಲ್ಲಿ ಮಹಿಳಾ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರಿಯಾಂಕಾ ಗಾಂಧಿಯವರು ಪ್ರತಿಭಟನಾನಿರತ ಕುಸ್ತಿಪಟುಗಳ ಭೇಟಿ ಮಾಡಿ, ಕುಸ್ತಿ ಪಟುಗಳನ್ನ ಸಂತೈಸಿ ಮಾತುಕತೆ ನಡೆಸಿದರು.
ಕುಸ್ತಿಪಟುಗಳ ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಪ್ರಿಯಾಂಕಾ, ಪ್ರಧಾನಿ ನರೇಂದ್ರ ಮೋದಿ ಬಗ್ಗೆ ನನಗೆ ಯಾವುದೇ ನಿರೀಕ್ಷೆ ಇಲ್ಲ, ಏಕೆಂದರೆ ಅವರು ಈ ಕುಸ್ತಿಪಟುಗಳ ಬಗ್ಗೆ ಚಿಂತೆ ಮಾಡಿರುವುದೇ ಆದರೆ, ಅವರು ಏಕೆ ಇನ್ನೂ ಪ್ರತಿಭಟನೆ ನಡೆಸುತ್ತಿರುವ ಕುಸ್ತಿಪಟುಗಳನ್ನು ಭೇಟಿ ಮಾಡಿಲ್ಲ, ಮಾತುಕತೆ ನಡೆಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಪ್ರತಿಭಟನಾನಿರತ ಮಹಿಳಾ ಕುಸ್ತಿಪಟುಗಳ ಜೊತೆ ಇಡೀ ದೇಶ ನಿಂತಿದೆ. ಕುಸ್ತಿಪಟುಗಳು ಇದರ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ನನಗೆ ತುಂಬಾ ಹೆಮ್ಮೆ ಇದೆ ಎಂದು ಪ್ರಿಯಾಂಕ ಗಾಂಧಿ ಹೇಳಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಪೊಲೀಸರು ದಾಖಲಿಸಿರುವ ಎಫ್ಐಆರ್ನಲ್ಲಿ ಏನಿದೆ ಎಂಬುದು ಯಾರಿಗೂ ತಿಳಿದಿಲ್ಲ. ಎಫ್ಐಆರ್ ಪ್ರತಿ ಕೂಡ ಪೊಲೀಸರು ತೋರಿಸುತ್ತಿಲ್ಲ? ಈ ಕುಸ್ತಿಪಟುಗಳು ಪದಕಗಳನ್ನು ಗೆದ್ದಾಗ ನಾವೆಲ್ಲರೂ ಟ್ವೀಟ್ ಮಾಡಿ ಹೆಮ್ಮೆ ಪಡುತ್ತೇವೆ. ಆದರೆ, ಇಂತಹ ಕುಸ್ತಿಪಟುಗಳು ರಸ್ತೆಯಲ್ಲಿ ಕುಳಿತಿದ್ದು, ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದಾರೆ. ಈ ಎಲ್ಲಾ ಮಹಿಳಾ ಕುಸ್ತಿಪಟುಗಳು ಈ ಹಂತಕ್ಕೆ ಬರಲು ಸಾಕಷ್ಟು ಕಷ್ಟಪಡುತ್ತಾರೆ. ಸರ್ಕಾರವು ಸಂಸದನ್ನೇಕೆ (ಬ್ರಿಜ್ ಭೂಷಣ್ ಶರಣ್ ಸಿಂಗ್) ರಕ್ಷಣೆ ಮಾಡುವ ಕೆಲಸ ಮಾಡುತ್ತಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.