ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನೊಳಗೆ ನಡೆಯುತ್ತಿದ್ದ ಅಕ್ರಮಗಳ ಕೆಲವು ವಿಡಿಯೋ ವೈರಲ್ ಆದ ನಂತರ ಜೈಲಿನಲ್ಲಿ ಕೆಲ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನೂತನ ಮುಖ್ಯ ಅಧೀಕ್ಷಕರಾದ ಅಂಶು ಕುಮಾರ್ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕಠಿಣ ನಿಯಮಗಳನ್ನು ಕೈಗೊಂಡಿದ್ದು, ಕೈದಿಗಳಿಗೆ ನೀಡುತ್ತಿದ್ದ ಬೀಡಿ ಮತ್ತು ಸಿಗರೇಟ್‌ಗೂ ಬ್ರೇಕ್ ಹಾಕಲಾಗಿದೆ.

ನಿಯಮಾನುಸಾರ ಬೀಡಿ ಮತ್ತು ಸಿಗರೇಟ್ ಮಾರಾಟವು ಕಾನೂನುಬಾಹಿರವಾಗಿದೆ. ಆದರೆ ಜೈಲಿನ ಕೈದಿಗಳಿಗೆ ಇದು ಸುಲಭವಾಗಿ ಲಭ್ಯವಾಗುತ್ತಿತ್ತು. ಸದ್ಯ ಜೈಲಿನಲ್ಲಿ ಬೀಡಿ ಮತ್ತು ಸಿಗರೇಟ್‌ಅನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಕೈದಿಗಳು ಜೈಲಿನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಬೀಡಿ ಮತ್ತು ಸಿಗರೇಟ್ ನೀಡುವಂತೆ ಆಗ್ರಹಿಸಿ ಕಳೆದ ಮೂರು ದಿನಗಳಿಂದ ಕೈದಿಗಳು ಉಪವಾಸ ನಡೆಸುತ್ತಿದ್ದಾರೆ. ಜೈಲಿನೊಳಗೆ ಬೀಡಿ ಮತ್ತು ಸಿಗರೇಟ್ ಮಾರಾಟಕ್ಕೆ ಮತ್ತೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿರುವ ಕೈದಿಗಳು ಊಟ ತಿಂಡಿ ಬಿಟ್ಟು ಪ್ರತಿಭಟಿಸುತ್ತಿದ್ದಾರೆ. ಆದರೆ ಇದಕ್ಕೆ ಕ್ಯಾರೇ ಎನ್ನದ ಜೈಲು ಹಿರಿಯ ಅಧಿಕಾರಿಗಳು ಬೀಡಿ, ಸಿಗರೇಟ್‌ಗೆ ಅವಕಾಶ ಇಲ್ಲ. ಜೈಲಿನ ಕೈಪಿಡಿ ಅನುಸಾರವೇ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟನೆ ನೀಡಿದ್ದಾರೆ.












