ಬೆಳಗಾವಿ : ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ನಗರದ ಮಹಾನಗರ ಪಾಲಿಕೆಯ ತುರ್ಮುರಿ ಘನತ್ಯಾಜ್ಯ ಸಂಸ್ಕರಣಾ ಮತ್ತು ವಿಲೇವಾರಿ ಘಟಕಕ್ಕೆ ಭೇಟಿ ನೀಡಿ, ಘಟಕದ ಕಾರ್ಯನಿರ್ವಹಣೆಯನ್ನು ಪರಿಶೀಲಿಸಿದರು.

ಪರಿಶೀಲನೆ ವೇಳೆ ಅಧಿಕಾರಿಗಳಿಂದ ಘಟಕದ ಕಾರ್ಯವೈಖರಿ, ತ್ಯಾಜ್ಯ ಸಂಗ್ರಹಣೆ, ವೈಜ್ಞಾನಿಕ ಸಂಸ್ಕರಣೆ ಹಾಗೂ ವಿಲೇವಾರಿ ಪ್ರಕ್ರಿಯೆಗಳ ಕುರಿತು ಮಾಹಿತಿ ಪಡೆದ ಸಚಿವರು, ನಗರದಲ್ಲಿ ಸ್ವಚ್ಛತೆ ಕಾಪಾಡುವ ಜೊತೆಗೆ ಪರಿಸರ ಸಂರಕ್ಷಣೆಗೆ ಪೂರಕವಾಗುವ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಸೂಚಿಸಿದರು.
ಪ್ರಸ್ತುತ ಈ ಘಟಕದಲ್ಲಿ ಪ್ರತಿದಿನ ಸುಮಾರು 238 ಟನ್ ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಲಾಗುತ್ತಿದೆ. ಸಂಸ್ಕರಣೆಯ ಮೂಲಕ ಪ್ರತಿದಿನ 12 ರಿಂದ 16 ಟನ್ ಸಾವಯವ ಗೊಬ್ಬರ ಉತ್ಪಾದಿಸಿ ರೈತರಿಗೆ ಪೂರೈಸಲಾಗುತ್ತಿದ್ದು, ಉಳಿದ ತ್ಯಾಜ್ಯದಿಂದ ತಯಾರಾಗುವ Refuse Derived Fuel (RDF) ಅನ್ನು ಸಿಮೆಂಟ್ ಕಾರ್ಖಾನೆಗಳಿಗೆ ಇಂಧನವಾಗಿ ಪೂರೈಸಲಾಗುತ್ತಿದೆ.
ಇದನ್ನೂ ಓದಿ : ಆರ್‌ಬಿಐ ಕ್ರಮಕ್ಕೆ ನ್ಯಾಯಾಲಯದ ಮುದ್ರೆ : ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಚ್ಚಲು ಆದೇಶ
ಘನತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಉಪಯುಕ್ತ ಸಂಪನ್ಮೂಲವನ್ನಾಗಿ ಪರಿವರ್ತಿಸುವ ಇಂತಹ ಯೋಜನೆಗಳು ಪರಿಸರ ಸಂರಕ್ಷಣೆ, ಸ್ವಚ್ಛ ನಗರ ನಿರ್ಮಾಣ ಹಾಗೂ ಸುಸ್ಥಿರ ನಗರಾಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಲಿವೆ ಎಂದು ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.






