ಟಿವಿ ವಾಹಿನಿಗಳು ತಮ್ಮ ಕಾರ್ಯವೈಖರಿಯನ್ನು ಬದಲಿಸಿಕೊಳ್ಳಲು ಇದು ಸಕಾಲ ಅಂತಾ ನಿಮಗೆ ಅನಿಸುತ್ತಿಲ್ಲವೇ? ಹೇಗೆಂದರೆ ಮೊದಲು ಈ ಆಂಕರ್‌ಗಳನ್ನು ಬಿಟ್ಟಾಕಬೇಕು. ಅದರಲ್ಲೂ ಸೋಮವಾರದಿಂದ ಶುಕ್ರವಾರದವರೆಗೆ ಪ್ರೈಮ್‌ಟೈಮ್ ನಲ್ಲಿ ಕಾಣಿಸಿಕೊಳ್ಳುವ ನಿರೂಪಕರನ್ನು. ಏಕೆಂದರೆ ಇವರು ‘ಫೇಸಸ್ ಆಫ್ ದಿ ಚಾನೆಲ್ಸ್’ ಎನ್ನುವ ರೀತಿಯಲ್ಲಿ ಆಗಿಹೋಗಿದೆ. ಇತ್ತೀಚೆಗೆ ಪ್ರವಾದಿ ಮೊಹಮ್ಮದ್ ಬಗ್ಗೆ ಬಿಜೆಪಿಯ ಮಾಜಿ ವಕ್ತಾರೆ ನೂಪುರ್ ಶರ್ಮಾ ಅವಹೇಳನಕಾರಿಯಾಗಿ ಮಾತನಾಡಲು ವೇದಿಕೆ ಕಲ್ಪಿಸಿಕೊಟ್ಟಿದ್ದು ರಾಷ್ಟ್ರದ ಒಂದು ಪ್ರಮುಖ ಸುದ್ದಿ ವಾಹಿನಿ ಮತ್ತದರ ಪ್ರಮುಖ ನಿರೂಪಕಿ.
ಇದೇ ವಿಷಯವಾಗಿ ದೇಶದ ಸರ್ವೋಚ್ಚ ನ್ಯಾಯಾಲಯ ನೂಪೂರ್ ಶರ್ಮಾ ಮತ್ತು ಟಿವಿ ಚಾನೆಲ್ ನಿರೂಪಕಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದೆ. ‘ಚರ್ಚೆಗಳು ಎಲ್ಲೆ ಮೀರಿದರೆ ನಿರೂಪಕರೇ ಜವಾಬ್ದಾರರು, ಅವರ ಮೇಲೆ ದೂರು ದಾಖಲಿಸಿ’ ಎಂದು ಕೂಡ ಹೇಳಿದೆ. ಮುಖ್ಯವಾಹಿನಿಗಳ ಜವಾಬ್ದಾರಿ ಏನು ಎಂಬುದನ್ನು ಈ ಮೂಲಕ ಸುಪ್ರೀಂ ಕೋರ್ಟ್ ಬಹಳ ಸ್ಪಷ್ಟವಾಗಿ ಹೇಳಿದೆ.
ಇನ್ನೊಂದು ನಿದರ್ಶನ; ಗುಜರಾತಿನಲ್ಲಿ 2002ರ ಗೋಧ್ರಾ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊನ್ನೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಇನ್ನೊಂದು ಟಿವಿ ವಾಹಿನಿ ‘ಮೋದಿ ಕಾ ನಾಮ್ ಕಿಸ್ನೆ ಕಿಯಾ ಬದ್ನಾಮ್’ ಎಂಬ ಚರ್ಚೆ ನಡೆಸಿತು. ಕಾರ್ಯಕ್ರಮದ ಹೆಸರಿನಲ್ಲೇ ಟಿವಿ ಚಾನೆಲ್ ಉದ್ದೇಶ ಏನು ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಇದೇ ರೀತಿ ಹಲವಾರು ಕಾರ್ಯಕ್ರಮಗಳು ನಿತ್ಯವೂ ಪ್ರಸಾರವಾಗುತ್ತಿವೆ. ಈ ಎಲ್ಲಾ ಕಾರ್ಯಕ್ರಮಗಳಲ್ಲಿ ನಿಮಗೆ ಕಾಣಿಸುವುದು ಬಹುತೇಕ ಅಪ್ರಬುದ್ಧ ನಿರೂಪಕರೇ. ಈ ನಿರೂಪಕರು ಅವರದೇಯಾದ ಅಭಿಪ್ರಾಯ ಹೊಂದಿರುತ್ತಾರೆ, ಅದಕ್ಕೆ ಪೂರಕವಾಗಿ ಮಾತನಾಡುವ ಅತಿಥಿಗಳನ್ನೇ ಚರ್ಚೆಗೆ ಆಹ್ವಾನಿಸುತ್ತಾರೆ. ನೆಪಮಾತ್ರಕ್ಕೆ ಭಿನ್ನ ಅಭಿಪ್ರಾಯ ಇರುವವರಿಗೂ ಅವಕಾಶ ಕೊಟ್ಟಿರುತ್ತಾರೆ. ಒಟ್ಟಾರೆಯಾಗಿ ಇವು ‘ಅವರ ಬೇಳೆ ಬೇಯಿಸಿಕೊಳ್ಳಲು ಹಾಗೂ ಮತ್ಯಾರದೋ ಅಜೆಂಡಾಗಳನ್ನು ಬಿತ್ತಲು’ ನಡೆಸುವ ಚರ್ಚೆಗಳೇ.
ಅತಿಥಿಗಳನ್ನು ತಮ್ಮ ಚರ್ಚೆಗೆ ಆಹ್ವಾನಿಸುವ ಈ ನಿರೂಪಕರು ಅತಿಥಿಗಳಿಗೆ ವಿಷಯ ಮಂಡನೆಗೆ ಅವಕಾಶ ನೀಡುವುದಿಲ್ಲ. ಅವರು ಮಾತನಾಡುವಾಗ ಮೈಕ್ ಆಫ್ ಮಾಡಲಾಗುತ್ತದೆ. ನಿರ್ದಿಷ್ಟ ಪದ ಬಳಕೆಯ ಸಂದರ್ಭದಲ್ಲಿ ‘ಬೀಪ್’ ಹಾಕಲಾಗುತ್ತದೆ. ಪ್ರೇಕ್ಷಕರಿಗೆ ಏನು ನಡೆಯುತ್ತಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಬಿಡುವುದಿಲ್ಲ. ಚರ್ಚೆಯ ಬದಲು ಜಗಳ ಮಾಡಿಸುತ್ತಾರೆ. ಇಡೀ ಕಾರ್ಯಕ್ರಮವನ್ನು ಸಮಚಿತ್ತದಿಂದ ನಿರ್ವಹಿಸಬೇಕಾದ ನಿರೂಪಕರೇ ಪ್ಯಾನೆಲಿಸ್ಟ್‌ಗಳನ್ನು ಪ್ರಚೋದಿಸುತ್ತಾರೆ. ನಿಂದಿಸುತ್ತಾರೆ. ಅಷ್ಟೇಯಲ್ಲ ಬೆದರಿಸುತ್ತಾರೆ. ನಿರೂಪಕರೇ ಪಕ್ಷವೊಂದರ ವಕ್ತಾರರಾಗುತ್ತಾರೆ. ಅಂತಿಮವಾಗಿ ನಿರೂಪಕರೇ ತೀರ್ಪುಗಳನ್ನು ನೀಡಿಬಿಡುತ್ತಾರೆ. ಇತ್ತೀಚೆಗೆ ಟೆಲಿವಿಷನ್ ನ್ಯೂಸ್ ಸ್ಟುಡಿಯೋಗಳಲ್ಲಿ ಪ್ರತಿ ಸಂಜೆಯೂ ನಡೆಯುತ್ತಿರುವುದು ಇದೇ.

ಬಿಗ್ ಬಾಸ್ ಮಾದರಿ ಏಕಾಗಬಾರದು?
ಹೀಗೆ ಚರ್ಚೆಗಳ ಬದಲು ವಾಗ್ಯುದ್ಧವಾಗಬೇಕು ಎನ್ನುವುದಾದರೆ, ಜಗಳ ಆಗಬೇಕು ಎನ್ನುವುದಾದರೆ, ರೋಚಕತೆ ಬೇಕು ಎನಿಸಿದರೆ ಬಿಗ್ ಬಾಸ್ ಮಾದರಿಯನ್ನು ಏಕೆ ಅನುಸರಿಸಬಾರದು. ಹಾಗಾದರೆ ಪ್ಯಾನೆಲಿಸ್ಟ್‌ಗಳು ಪರಸ್ಪರ ಮಾತಿನ ಚಕಮಕಿಯಲ್ಲಿ ತೊಡಗಬಹುದು. ಆಂಕರ್ ಸುಮ್ಮನೆ ಕುಳಿತುಕೊಂಡು ಕೆಲ ಕಾಲ ಚಮತ್ಕಾರವನ್ನು ವೀಕ್ಷಿಸಬಹುದು. ಅಂತಿಮವಾಗಿ ತಮ್ಮ ಅಭಿಪ್ರಾಯವನ್ನು ಸೇರಿಸಿ ಕಾರ್ಯಕ್ರಮ ಮುಗಿಸಬಹುದಲ್ಲವೇ? ಹಿಂದಿ ಮತ್ತು ಇಂಗ್ಲಿಷ್ ಸುದ್ದಿ ವಾಹಿನಿಗಳಲ್ಲಿ ಟಿವಿ ನ್ಯೂಸ್ ಆಂಕರ್‌ನ ಪಾತ್ರವು ಮಾಡರೇಟರ್‌ನ ಪಾತ್ರವಲ್ಲ ಎಂಬುದು ಸ್ಪಷ್ಟವಾಗಿದೆ.
ಬಿಗ್ ಬಾಸ್ ಮನೆಯಲ್ಲಿರುವವರು ಕಳೆದ ಆರು ದಿನಗಳಲ್ಲಿ ಏನು ಮಾಡಿದರು? ಅವರ ನಡವಳಿಕೆ ಹೇಗಿತ್ತು? ಎಂದು ವಾರಕ್ಕೊಮ್ಮೆ ಮಾತ್ರ ಮಾಸ್ಟರ್ ಆಫ್ ಸಮಾರಂಭದಲ್ಲಿ ವಿಶ್ಲೇಷಣೆ ಮಾಡಲಾಗುತ್ತದೆ. ಪ್ರತಿದಿನ ಅಥವಾ ಗಂಟೆಯ ಆಧಾರದ ಮೇಲೆ ಅವರು ಅಶರೀರವಾದ ಧ್ವನಿಯಿಂದ ನಿರ್ದೇಶಿಸಲ್ಪಡುತ್ತಾರೆ. ‘ಇದನ್ನು ಮಾಡು, ಅದನ್ನು ಮಾಡು’ ಎಂದು ಅವರಿಗೆ ಆದೇಶಿಸಲಾಗುತ್ತದೆ. ಇದು ರಿಯಾಲಿಟಿ ಶೋ. ಇದೇ ರೀತಿ ಸುದ್ದಿ ವಾಹಿನಿಗಳ ಚರ್ಚೆಗಳು ‘ರಿಯಾಲಿಟಿ ಶೋ’ಗಳಂತೆ ‘ನಿರ್ದೆಶನಕ್ಕೊಳಪಡುವ ಕಾರ್ಯಕ್ರಮಗಳಾಗಿರುವುದರಿಂದ ನೇರಾನೇರಾ ರಿಯಾಲಿಟಿ ಶೋಗಳನ್ನೇ ಏಕೆ ಆಯೋಜಿಸಬಾರದು?
ಆ್ಯಂಕರ್‌ಗಳೇ ಇಲ್ಲದಿದ್ದರೆ ಜನ ಹೆಚ್ಚಿನ ಸುದ್ದಿಗಳನ್ನು ಪಡೆಯಬಹುದು. ನಮ್ಮಲ್ಲಿ ಹೆಚ್ಚಿನವರು ಕೆಲಸದ ವೇಳೆ ತಪ್ಪಿಸಿಕೊಂಡ ದಿನದ ಘಟನೆಗಳನ್ನು ಮರುಕಳಿಸುವ ಕಾರ್ಯಕ್ರಮಗಳ ಮೂಲಕ ಪಡೆಯಬಹುದು. ಹಾಗಾಗಿ ಇದು ಸುದ್ದಿ ನಿರೂಪಕರಿಗೆ ವಿದಾಯ ಹೇಳಲು ಸಕಾಲವಾಗಿದೆ. ವಾಹಿನಿಗಳು ಗಂಭೀರ ಚಿಂತನೆ ನಡೆಸಬೇಕಿದೆ.












