ಲಡಾಖ್ ಗಡಿ ವಿವಾದವನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಪ್ರಸ್ತಾಪಿಸಿದ್ದಾರೆ. ದೇಶದ ಒಂದಿಂಚೂ ಭೂಭಾಗವನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಹೇಳಿದ್ದಾರೆ ಎಂದು ಶುಕ್ರವಾರ (ಆಗಸ್ಟ್ 25) ವರದಿಯಾಗಿದೆ.
ದೇಶದ ಗಡಿ ಪ್ರದೇಶವನ್ನು ಚೀನಾ ವಶಪಡಿಸಿಕೊಂಡಿದೆ ಎಂಬುದು ಇಲ್ಲಿರುವ ಪ್ರತಿಯೊಬ್ಬ ನಾಗರಿಕರಿಗೂ ತಿಳಿದಿರುವ ವಿಷಯ. ಪ್ರಧಾನಿ ಮೋದಿ ಸತ್ಯವನ್ನು ಹೇಳುತ್ತಿಲ್ಲ ಎಂದು ರಾಹುಲ್ ಹೇಳಿದ್ದಾರೆ.
ಲಡಾಖ್ಗೆ ಒಂಬತ್ತು ದಿನಗಳ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಕೊನೆಯ ದಿನ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ನಿಮ್ಮ ಕಷ್ಟದಲ್ಲಿ ಕಾಂಗ್ರೆಸ್ ಪಕ್ಷ ಸದಾ ನಿಮ್ಮೊಂದಿಗೆ ಇರಲಿದೆ. ಅದು ರಕ್ಷಣೆಯ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ್ದ ವಿಷಯಗಳಾಗಿರಬಹುದು. ಲಡಾಖ್ ನೈಸರ್ಗಿಕ ಸಂಪನ್ಮೂಲದಿಂದ ಸಮೃದ್ಧವಾಗಿದೆ. 21ನೇ ಶತಮಾನವು ಸೌರಶಕ್ತಿಯಿಂದ ಕೂಡಿದ್ದು, ಲಡಾಖ್ಗೆ ಯಾವುದೇ ಕೊರತೆ ಕಾಡುತ್ತಿಲ್ಲ ಎಂದು ಹೇಳಿದರು.
ಗೌತಮ್ ಅದಾನಿಗಾಗಿ ನಿಮ್ಮ ನೆಲವನ್ನು ಸ್ವಾಧೀನಪಡಿಸಿಕೊಳ್ಳಲು ಬಿಜೆಪಿ ಬಯಸುತ್ತಿದೆ. ಆದರೆ ಯಾವುದೇ ಕಾರಣಕ್ಕೂ ಅದನ್ನು ಬಿಡುವುದಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಅವರ ‘ಮನ್ ಕಿ ಬಾತ್’ ಟೀಕಿಸಿದ ರಾಹುಲ್, ಕೆಲವರು ತಮ್ಮ ಹೃದಯದಲ್ಲಿರುವುದರ ಬಗ್ಗೆ ಮಾತನಾಡುತ್ತಾರೆ. ಆದರೆ ನಾನು ಇಲ್ಲಿ ನಿಮ್ಮ ಹೃದಯದಲ್ಲಿ ಏನಿದೆ ಎಂಬುದನ್ನು ತಿಳಿಯಲು ಬಂದಿದ್ದೇನೆ. ಗಾಂಧಿ ಮತ್ತು ಕಾಂಗ್ರೆಸ್ನ ಸಿದ್ಧಾಂತವು ಲಡಾಖ್ ಜನರ ರಕ್ತದಲ್ಲಿ ಮತ್ತು ಡಿಎನ್ಎಯಲ್ಲಿ ಅಡಗಿದೆ ಎಂದು ಹೇಳಿದರು.
ಬಿಜೆಪಿ ಮತ್ತು ಆರ್ಎಸ್ಎಸ್ ಹರಡಿದ ದ್ವೇಷವನ್ನು ತೊಲಗಿಸಲು ಭಾರತ್ ಜೋಡೊ ಯಾತ್ರೆ ನಡೆಸಿರುವುದಾಗಿ ಅವರು ಹೇಳಿದರು.
ಕಳೆದ ವಾರ ಲಡಾಖ್ನ ಪಾಂಗೊಂಗ್ ಸರೋವರಕ್ಕೆ ಬೈಕ್ ಸವಾರಿ ಮಾಡಿದ್ದ ರಾಹುಲ್, ಲಡಾಖ್ ಪ್ರದೇಶವನ್ನು ಚೀನಾ ಸ್ವಾಧೀನಪಡಿಸಿಕೊಂಡ ಪರಿಣಾಮ ಜನರು ತಲ್ಲಣಗೊಂಡಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
ಮತ್ತೊಂದೆಡೆ ದಕ್ಷಿಣ ಆಫ್ರಿಕಾದ ಜೊಹಾನಸ್ಬರ್ಗ್ನಲ್ಲಿ ನಡೆದ ಬ್ರಿಕ್ಸ್ ಶೃಂಗಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಅಧ್ಯಕ್ಷ ಷಿ ಜಿನ್ಪಿಂಗ್ ಅವರೊಂದಿಗೆ ಗಡಿ ವಿಚಾರದ ಕುರಿತಂತೆ ಮಾತುಕತೆ ನಡೆಸಿದ್ದಾರೆ. ವಾಸ್ತವಿಕ ನಿಯಂತ್ರಣ ರೇಖೆಯುದ್ಧಕ್ಕೂ ಗಡಿ ಸಮಸ್ಯೆಗಳ ಬಗ್ಗೆ ಭಾರತದ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.











