ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಜ.19ರಂದು ಬೆಂಗಳೂರಿಗೆ ಆಗಮಿಸಲಿದ್ದು, ಬೋಯಿಂಗ್ ಸಂಸ್ಥೆ ನಿರ್ಮಿಸಿರುವ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕೇಂದ್ರವನ್ನು ಲೋಕಾರ್ಪಣೆ ಮಾಡಲಿದ್ದಾರೆ.
ಅಮೆರಿಕ ಮೂಲದ ಈ ಸಂಸ್ಥೆ ಬೆಂಗಳೂರಿನಲ್ಲಿ ಅತಿದೊಡ್ಡ ಕಾರ್ಯಕ್ಷೇತ್ರವನ್ನು ಅಭಿವೃದ್ಧಿ ಪಡಿಸಿದ್ದು, ಈ ನೂತನ ಕೇಂದ್ರ 43 ಎಕರೆ ಪ್ರದೇಶದಲ್ಲಿ ವಿಸ್ತಾರಗೊಂಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ರಾಜ್ಯ ಸರ್ಕಾರ ಅಭಿವೃದ್ಧಿ ಪಡಿಸಿರುವ ರಕ್ಷಣಾ ವಿಮಾನ ಪಾರ್ಕ್ ಆವರಣದಲ್ಲಿ ಇದನ್ನು ನಿರ್ಮಿಸಲಾಗಿದೆ. ಇದಕ್ಕೆ 1 ಸಾವಿರದ 600 ಕೋಟಿ ರೂಪಾಯಿ ವಿನಿಯೋಗಿಸಲಾಗಿದೆ.

ಬೋಯಿಂಗ್ ಸಂಸ್ಥೆಯ ಸುಕನ್ಯ ಕಾರ್ಯಕ್ರಮಕ್ಕೂ ನಾಳೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಹೆಣ್ಣು ಮಕ್ಕಳು ವಿಮಾನ ಕ್ಷೇತ್ರದಲ್ಲಿ ಇಂಜಿನಿಯರ್ಗಳಾಗಿ ಕೆಲಸ ಮಾಡಲು ಬೋಯಿಂಗ್ ಸಂಸ್ಥೆ ಸುಕನ್ಯ ಕಾರ್ಯಕ್ರಮವನ್ನು ಆರಂಭಿಸಿದೆ. ಶಿಕ್ಷಣ ತರಬೇತಿ, ಉದ್ಯೋಗವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾರ್ಯಕ್ರಮ ಆಯೋಜಿಸಲಾಗಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ನಾಳೆ ತಮಿಳುನಾಡಿನಲ್ಲಿ, ಸುಮಾರು 250 ಕೋಟಿ ರೂ. ವೆಚ್ಚದ ಪ್ರಸಾರ ಕೇಂದ್ರಗಳಿಗೆ ಚಾಲನೆ ನೀಡಲಿದ್ದಾರೆ. 8 ರಾಜ್ಯಗಳಲ್ಲಿನ 12 ಎಫ್ಎಂ ಕೇಂದ್ರಗಳು, ದೂರದರ್ಶನದ 4 ಟ್ರಾನ್ಸ್ ಮೀಟರ್ ಕೇಂದ್ರಗಳ ನಿರ್ಮಾಣಕ್ಕೂ ಶಂಕು ಸ್ಥಾಪನೆ ನೆರವೇರಿಸಲಿದ್ದಾರೆ. ಇದರಲ್ಲಿ ಕರ್ನಾಟಕದ ಶಿವಮೊಗ್ಗ, ಉಡುಪಿ ವಾಹಿನಿ ಕೇಂದ್ರಗಳು ಸೇರಿವೆ.