ಶಿವಮೊಗ್ಗ/ ಬೆಳಗಾವಿ : ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದೆ. ಹೀಗಾಗಿ ರಾಜಕೀಯ ಚದುರಂಗದಾಟ ಕೂಡ ಜೋರಾಗುತ್ತಿದೆ. ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಉಳಿಸಿಕೊಳ್ಳಲೇಬೇಕಾದ ಅನಿವಾರ್ಯತೆಯಲ್ಲಿರುವ ರಾಜ್ಯ ಬಿಜೆಪಿ ನಾಯಕರು ಇದಕ್ಕಾಗಿ ಹೈಕಮಾಂಡ್ ಮೊರೆ ಹೋಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ರಾಜ್ಯಕ್ಕೆ ಭೇಟಿ ನೀಡುತ್ತಲೇ ಇದ್ದಾರೆ.
ಕೆಲವು ದಿನಗಳ ಹಿಂದೆಯಷ್ಟೇ ಬೆಂಗಳೂರು ಹಾಗೂ ತುಮಕೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಇಂದು ಶಿವಮೊಗ್ಗ ಹಾಗೂ ಬೆಳಗಾವಿಯಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಸರ್ಕಾರಿ ಕಾರ್ಯಕ್ರಮದ ನೆಪದಲ್ಲಿ ಪದೇ ಪದೇ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ಮೋದಿ ಬಿಜೆಪಿ ಪರವಾಗಿ ಪ್ರಚಾರ ಕಾರ್ಯವನ್ನು ನಡೆಸುತ್ತಲೇ ಇದ್ದಾರೆ. ಇಂದು ಶಿವಮೊಗ್ಗದ ಸೋಗಾನೆ ಬಳಿ ತಲೆ ಎತ್ತಿರುವ ರಾಜ್ಯದ ಎರಡನೇ ದೊಡ್ಡ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಿದ್ದಾರೆ .
ಕನ್ನಡದಲ್ಲಿಯೇ ಭಾಷಣವನ್ನು ಶುರು ಮಾಡಿದ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕವಿ ಕುವೆಂಪುಗೆ ನಮನ ಸಲ್ಲಿಸಿದರು. ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದ ನೈಸರ್ಗಿಕ ಶ್ರೀಮಂತಿಕೆ, ಕಲಾ ಶ್ರೀಮಂತಿಕೆಯನ್ನು ಯಾವುದೇ ಚೀಟಿ, ಎಲ್ಇಡಿ ಸ್ಕ್ರೀನ್ ಸಹಾಯ ಪಡೆಯದೇ ಪ್ರಧಾನಿ ಮೋದಿ ನಿರರ್ಗಳವಾಗಿ ಹೇಳಿದ್ದು ಎಲ್ಲರ ಗಮನ ಸೆಳೆಯಿತು. ಗಂಗಾ ನದಿಯಲ್ಲಿ ಸ್ನಾನ, ತುಂಗಾ ನದಿಯ ನೀರು ಕುಡಿಯದೇ ಇದ್ದರೆ ಜೀವನವೇ ಅಪೂರ್ಣ ಎಂದ ಪ್ರಧಾನಿ ಮೋದಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯ್ತು.
ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಬಳಿಕ ಪ್ರಧಾನಿ ಮೋದಿ ನೇರವಾಗಿ ಕುಂದಾನಗರಿ ಬೆಳಗಾವಿಗೆ ತೆರಳಿದ್ರು. ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ ಕೋರಲಾಯ್ತು. ವಾಯುಸೇನೆ ಹೆಲಿಕಾಪ್ಟರ್ ಮೂಲಕ ಕೆಎಸ್ಆರ್ಪಿ ಮೈದಾನಕ್ಕೆ ಬಂದಿಳಿದ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ರು.

ಬೆಳಗಾವಿಯ ಚೆನ್ನಮ್ಮ ವೃತ್ತದಿಂದ ಆರಂಭವಾದ ರೋಡ್ ಶೋ ಕಾಲೇಜು ಮಾರ್ಗವಾಗಿ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ಶನಿ ಮಂದಿರ, ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಓಲ್ಡ್ ಪಿಬಿ ರಸ್ತೆಗೆ ಸಾಗಿತು. ಪ್ರಧಾನಿ ಮೋದಿಯನ್ನು ಕಣ್ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ಜನಸ್ತೋಮವೇ ಹರಿದಿತ್ತು. ಮೊದಲು ಕಾರಿನ ಒಳಗೆ ಕುಳಿತಿದ್ದ ಪ್ರಧಾನಿ ಮೋದಿ ಬಳಿಕ ವಾಹನದ ಹೊರಭಾಗದ ಸ್ಟ್ಯಾಂಡ್ ಮೇಲೆ ನಿಂತು ಜನರತ್ತ ಕೈ ಬೀಸಿದರು. ರಸ್ತೆಯ ಇಕ್ಕೆಲ, ಕಟ್ಟಡಗಳು ಹಾಗೂ ಮರದ ಮೇಲೆಲ್ಲ ನಿಂತಿದ್ದ ಬೆಳಗಾವಿ ಜನತೆ ಪ್ರಧಾನಿ ಮೋದಿಯನ್ನು ಕಣ್ತುಂಬಿಕೊಂಡ ದೃಶ್ಯ ಕಂಡು ಬಂತು.
ಡಬಲ್ ಎಂಜಿನ್ ಸರ್ಕಾರ ಅಂತಾ ಬಿಜೆಪಿ ನಾಯಕರು ಹೇಳಿಕೊಳ್ಳುತ್ತಾ ಇದ್ದರೂ ಸಹ ರಾಜ್ಯಕ್ಕೆ ನಿರೀಕ್ಷೆಯಷ್ಟು ಕೊಡುಗೆಯನ್ನು ಈ ಸರ್ಕಾರ ನೀಡಿಲ್ಲ ಎಂಬ ಮಾತನ್ನೂ ಸಹ ತಳ್ಳಿ ಹಾಕುವಂತಿಲ್ಲ. ಈ ಮಾತಿಗೆ ಪೂರಕ ಎಂಬಂತೆ ರಾಜ್ಯ ಬಜೆಟ್ ಕೂಡ ಅನೇಕ ನಿರಾಸೆಗಳನ್ನು ಹುಟ್ಟು ಹಾಕಿರೋದು ಬಿಜೆಪಿ ಸರ್ಕಾರಕ್ಕೆ ಚುನಾವಣೆ ಸಮಯದಲ್ಲಿ ಮತ್ತೊಂದು ಸಮಸ್ಯೆ ತಂದೊಡ್ಡಿರೋದಂತೂ ಸತ್ಯ. ಚುನಾವಣಾ ಪೂರ್ವ ಸಮೀಕ್ಷೆಗಳು ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಬಗ್ಗೆ ಗ್ಯಾರಂಟಿ ನೀಡದೇ ಇರೋದು ಸಹ ಕೇಸರಿ ಪಾಳಯಕ್ಕೆ ನಡುಕ ಹುಟ್ಟುವಂತೆ ಮಾಡಿದೆ. ಹೀಗಾಗಿ ರಾಜ್ಯದಲ್ಲಿ ಪ್ರವಾಹದಂತಹ ಕ್ಲಿಷ್ಟಕರ ಸಮಸ್ಯೆ ಉಂಟಾದಾಗ ಕರ್ನಾಟಕದತ್ತ ಮುಖ ಮಾಡದ ಪ್ರಧಾನಿ ಮೋದಿ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮೂರು ತಿಂಗಳ ಅವಧಿಯಲ್ಲಿ ಐದಕ್ಕೂ ಅಧಿಕ ಬಾರಿ ಭೇಟಿ ನೀಡಿರೋದು ವಿಪರ್ಯಾಸವೇ ಸರಿ .












