ಬೆಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರೊಫೆಸರ್ ರಾಜೀವ್ ಗೌಡ (Rajeev Gowda) ಪ್ರಧಾನಿ ನರೇಂದ್ರ ಮೋದಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (Narendra Modi) ನಾಳೆ ರಾಜ್ಯಕ್ಕೆ ಬರ್ತಿದ್ದಾರೆ. ಅವರು ಬರುವ ಮುನ್ನ ಕೆಲವು ಪ್ರಶ್ನೆಗಳಿವೆ. ಈ ಪ್ರಶ್ನೆಗಳಿಗೆ ಪ್ರಧಾನಿ ಉತ್ತರಿಸಬೇಕು ಎನ್ನುವುದು ರಾಜೀವ್ಗೌಡ ಅವರ ಆಗ್ರಹ.
ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ದೊಡ್ಡದಿದೆ, ಮೇಕೆದಾಟಿಗೆ ಪ್ರಪೋಸಲ್ ಕೊಟ್ಟಿದ್ದೆವು, ಆದರೆ ಯಾಕೆ..? ಪರಿಸರ ಇಲಾಖೆ ಅನುಮತಿ ಕೊಟ್ಟಿಲ್ಲ..? ಕೃಷ್ಣ ಟ್ರಿಬ್ಯೂನಲ್ ಆಗಿ 10 ವರ್ಷವೇ ಕಳೆದು ಹೋಗಿದೆ. ಆದರೂ ಯಾಕಿನ್ನು ಗೆಜೆಟ್ ನೋಟಿಫಿಕೇಷನ್ ಹೊರಡಿಸಿಲ್ಲ..? ಭದ್ರಾ ಮೇಲ್ದಂಡೆ ಯೋಜನೆಗೆ ₹5,300 ಕೋಟಿ ಘೋಷಣೆ ಮಾಡಿದ್ರು. ಇಲ್ಲಿಯವರೆಗೆ ಅದರ ಹಣ ಬಿಡುಗಡೆ ಮಾಡಿಲ್ಲ ಯಾಕೆ..? 15ನೇ ಹಣಕಾಸು ಆಯೋಗದ ರಿಪೋರ್ಟ್ ಏನಿದೆ..? ಕರ್ನಾಟಕಕ್ಕೆ 5,400 ಕೋಟಿ ನೀಡುವಂತೆ ಶಿಫಾರಸು ಮಾಡಿತ್ತು. ಅದರ ಈ ಬಗ್ಗೆ ಯಾಕೆ ಚಕಾರವಿಲ್ಲ..? ಇಂಪ್ಲಿಮೆಂಟ್ ಮಾಡ್ತೇವೆ ಅಂದವರು ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಫೈನಾನ್ಸ್ ಕಮೀಷನ್ ಶಿಫಾರಸು ಮಾಡಿದ ಬಳಿಕವೂ ಯಾಕೆ ಹಣವನ್ನ ನಮಗೆ ಬಿಡುಗಡೆ ಮಾಡಿಲ್ಲ..? ಫೆರಿಪೆರಲ್ ರಿಂಗ್ ರಸ್ತೆಗೆ ಹಣ ಯಾಕೆ ಕೊಟ್ಟಿಲ್ಲ..? ಪ್ರಧಾನಿಯಾದ ನೀವೇ ಸಬರಬನ್ ರೈಲು ಉದ್ಘಾಟಿಸಿದ್ರಿ, 40 ತಿಂಗಳಲ್ಲಿ ಯೋಜನೆ ಪೂರ್ಣ ಮಾಡುತ್ತೇವೆ ಎಂದಿದ್ದೀರಿ. ಈಗ 20 ತಿಂಗಳು ಕಳೆದು ಹೋಯ್ತು. ಎಲ್ಲಿ ಹೋಯ್ತು ನಿಮ್ಮ ಯೋಜನೆ..? ಎಂದು ಪ್ರಶ್ನಿಸಿದ್ದಾರೆ. ಬರ ಪರಿಹಾರದ ಬಗ್ಗೆ ಗಮನವನ್ನೇ ಕೊಟ್ಟಿಲ್ಲ. ರಾಜ್ಯದ 223 ತಾಲೂಕುಗಳಲ್ಲಿ ಬರ ಪರಿಸ್ಥಿತಿ ಹೆಚ್ಚಾಗಿದೆ. ಗ್ರಾಮೀಣ ಭಾಗದ ಜನ ಸಂಕಷ್ಟದಲ್ಲಿದ್ದಾರೆ. ಇಲ್ಲಿಯವರೆಗೆ ಪರಿಹಾರದ ಹಣ ಕೊಟ್ಟಿಲ್ಲ ಎಂದು ಪ್ರಧಾನಿ ಮೋದಿಗೆ ರಾಜೀವ್ ಗೌಡ ಪ್ರಶ್ನೆ ಮಾಡಿದ್ದಾರೆ.
ನಾ ಕಾವೂಂಗಾ ನಾ ಕಾನೇ ದೂಂಗಾ ಅಂದಿದ್ರಿ, ನಿಮ್ಮ ಎಂಪಿಯೊಬ್ಬರ ಮೇಲೆ ಇಡಿ ಕೇಸ್ ಇದೆ. ಅವರನ್ನು ಯಾಕೆ ಸಚಿವ ಸಂಪುಟಕ್ಕೆ ತೆಗೆದುಕೊಂಡಿದ್ದೀರಿ..? ಶೋಭಾ ಕರಂದ್ಲಾಜೆ ಮೇಲೆ 44 ಕೋಟಿ ಹಗರಣ ಆರೋಪವಿದೆ. ಅವರನ್ನ ಹೇಗೆ ಸಚಿವೆಯನ್ನಾಗಿ ಮಾಡಿದ್ದೀರಿ..? ಇದು ನ್ಯಾಯಕ್ಕೆ ವಿರುದ್ಧ ಅಲ್ಲವೇ..? ಎಂದು ಪ್ರಶ್ನಿಸಿದ್ದಾರೆ. ಎಲೆಕ್ಟ್ರೋಲ್ ಬಾಂಡ್ನಲ್ಲಿ ದೊಡ್ಡ ಭ್ರಷ್ಟಾಚಾರ ಆಗಿದೆ. ಜಾರಿ ನಿರ್ದೇಶನಾಲಯದಿಂದ ರೇಡ್ ಮಾಡಿಸ್ತೀರಿ, ನಂತರ ಅದೇ ಸಂಸ್ಥೆಯಿಂದ ಹಣವನ್ನು ಕಲೆಕ್ಟ್ ಮಾಡ್ತೀರಿ. ಭ್ರಷ್ಟಾಚಾರ ಅಂದ್ರೆ ಮೋದಿ ಸರ್ಕಾರ ಮೊದಲು ಬರುತ್ತೆ. ಈ ಬಗ್ಗೆ ನಮ್ಮ ರಾಜ್ಯಕ್ಕೆ ಬಂದಾಗ ಉತ್ತರ ಕೊಡಬೇಕು ಎಂದು ಪ್ರೊಫೆಸರ್ ರಾಜೀವ್ ಗೌಡ ಆಗ್ರಹ ಮಾಡಿದ್ದಾರೆ.
ಕೃಷ್ಣಮಣಿ