ಬೆಂಗಳೂರು : ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸೇರಿದಂತೆ ಗಣ್ಯರು ಅಭಿನಂದನೆಗಳನ್ನು ತಿಳಿಸಿದ್ದಾರೆ.

ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ಅವರ ಅಧಿಕಾರಾವಧಿಗೆ ಶುಭಾಶಯಗಳು. ಕೇಂದ್ರವು ಕರ್ನಾಟಕ ಸರ್ಕಾರದೊಂದಿಗೆ ಜನರ ಕಲ್ಯಾಣಕ್ಕಾಗಿ ನಿಕಟವಾಗಿ ಕಾರ್ಯನಿರ್ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಭಕೋರಿದ್ದಾರೆ.
ಇನ್ನೂ ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಸನ್ಮಾನ್ಯ ಶ್ರೀ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ನಾಡಿನ ಹಿತರಕ್ಷಣೆ, ಸರ್ವತೋಮುಖ ಅಭಿವೃದ್ಧಿ ಹಾಗೂ “ಸರ್ವರಿಗೂ ಸಮಬಾಳು, ‘ಸರ್ವರಿಗೂ ಸಮಪಾಲು, ಸಾಮಾಜಿಕ ನ್ಯಾಯ’ ತತ್ವದಡಿಯಲ್ಲಿ ಸಮಾಜದ ಕಟ್ಟಕಡೆಯ ಪ್ರಜೆಯ ಕಲ್ಯಾಣಕ್ಕಾಗಿ ಶ್ರಮಿಸಲು ಭಗವಂತನು ತಮಗೆ ಪೂರ್ಣ ಶಕ್ತಿ, ಆಯುರಾರೋಗ್ಯ ಕರುಣಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಡಿಕೆ ಶಿವಕುಮಾರ್‌ಗೆ ವಿಶ್ ಮಾಡಿದ್ದಾರೆ.
ರಾಜ್ಯದ ಒಳಿತಿನ ವಿಷಯದಲ್ಲಿ ನಮ್ಮ ಸಕಾರಾತ್ಮಕ ಸಹಕಾರ ಯಾವಾಗಲೂ ಇರಲಿದ್ದು, ನಿಮ್ಮ ಅಧಿಕಾರಾವಧಿಯು ನಾಡಿಗೆ ಶಾಂತಿ, ಸಮೃದ್ಧಿ ತರಲಿ ಎಂದು ಹಾರೈಸುತ್ತೇನೆ ಎಂದು ಯಡಿಯೂರಪ್ಪ ಬೆಂಬಲ ವ್ಯಕ್ತಪಡಿಸಿದ್ದಾರೆ.
ಅಲ್ಲದೆ ಕರ್ನಾಟಕದ ನೆಲ, ಜಲ, ಭಾಷೆ ಹಾಗೂ ಸಮಗ್ರ ಅಭಿವೃದ್ಧಿಗೆ ನಿಮ್ಮ ಸರಕಾರ ಬದ್ಧವಾಗಿ ಕಾರ್ಯ ನಿರ್ವಹಿಸಲಿ ಎಂದು ಆಶಿಸುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಡಿಕೆ ಶಿವಕುಮಾರ್‌ಗೆ ಅಭಿನಂದಿಸಿದ್ದಾರೆ.

ರಾಜ್ಯದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರಾಜ್ಯದ ರೈತರು, ಕಾರ್ಮಿಕರು, ಬಡವರು, ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲ ವರ್ಗದ ಜನರ ಹಿತ ಕಾಯುವಿರೆಂಬ ನಿರೀಕ್ಷೆ ನಾಡಿನ ಜನರದ್ದಾಗಿದೆ. ತಾರತಮ್ಯವಿಲ್ಲದ ಶುದ್ಧ ಆಡಳಿತ ತತ್ವಕ್ಕೆ ಬದ್ಧರಾಗಿ ನಡೆದುಕೊಳ್ಳುವಿರೆಂದು ಬಯಸುವೆ. ರಾಜ್ಯ ನೂತನ ಸಚಿವ ಸಂಪುಟದ ಎಲ್ಲ ಸಚಿವರಿಗೂ ಶುಭ ಹಾರೈಸುವೆ ಎಂದು ವಿಜಯೇಂದ್ರ ಡಿಕೆ ಶಿವಕುಮಾರ್ ನೂತನ ಸರ್ಕಾರಕ್ಕೆ ಹಾರೈಸಿದ್ದಾರೆ.






