ತನ್ನ ವಿರುದ್ಧ ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಡ ಹೇರಿದ್ದರಿಂದ ಸಿಬಿಐ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಆರೋಪಿಸಿರುವುದು ರಾಷ್ಟ್ರ ರಾಜಕಾರಣದಲ್ಲಿ ಸಾಕಷ್ಟು ಸಂಚಲನಕ್ಕೆ ಕಾರಣವಾಗಿದೆ. ಕೇಂದ್ರೀಯ ತನಿಖಾ ಸಂಸ್ಥೆಗಳಿಂದ ಪ್ರತಿಪಕ್ಷ ನಾಯಕರನ್ನು ಸದೆ ಬಡಿಯಲಾಗುತ್ತಿದೆ ಎಂಬ ಕೇಂದ್ರ ಸರ್ಕಾರ ಮೇಲಿರುವ ಆರೋಪಗಳ ಹಿನ್ನೆಲೆಯಲ್ಲಿ ಸಿಸೋಡಿಯಾ ಅವರ ಆರೋಪವು ಗಂಭೀರವೆಂದೆನಿಸಿದೆ. ಅದಾಗ್ಯೂ ಸಿಸೋಡಿಯಾ ಆರೋಪವನ್ನು ಸಿಬಿಐ ನಿರಾಕರಿಸಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಸಿಬಿಐ ಅಧಿಕಾರಿಯ ಮೇಲೆ ನನ್ನ ವಿರುದ್ಧ ತಪ್ಪು ಪ್ರಕರಣ ದಾಖಲಿಸಿ ಬಂಧಿಸುವಂತೆ ಒತ್ತಡ ಹೇರಲಾಗಿದೆ, ಒತ್ತಡ ತಾಳಲಾರದೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಿಸೋಡಿಯಾ ಆರೋಪಿಸಿದ್ದಾರೆ.
ಸಿಬಿಐ ಅಧಿಕಾರಿ ಸಾವಿನ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮನೀಶ್ ಸಿಸೋಡಿಯಾ, “ಎರಡು ದಿನಗಳ ಹಿಂದೆ ಸಿಬಿಐ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಅದರ ಸಂಪೂರ್ಣ ಸುದ್ದಿಯನ್ನು ಮಾಧ್ಯಮಗಳೂ ತೋರಿಸಿದ್ದವು. ಆತ್ಮಹತ್ಯೆ ಮಾಡಿಕೊಂಡ ಸಿಬಿಐ ಅಧಿಕಾರಿ ಜಿತೇಂದ್ರ ಕುಮಾರ್ ಎಂದು ತಿಳಿದು ಬಂದಿದೆ. ಉಪ ಕಾನೂನು ಸಲಹೆಗಾರರಾಗಿದ್ದ ಅವರು ಸಿಬಿಐನ ಭ್ರಷ್ಟಾಚಾರ ನಿಗ್ರಹ ಶಾಖೆಯಲ್ಲಿ ಕಾನೂನು ಸಲಹೆಗಾರರಾಗಿದ್ದರು. ಕಾನೂನು ವಿಷಯಗಳನ್ನು ಅನುಮೋದಿಸುವುದು, ತಿರಸ್ಕರಿಸುವುದು, ಎಲ್ಲಾ ಕಾನೂನುಬದ್ಧತೆಯನ್ನು ನೋಡುವುದು ಅವರ ಕೆಲಸವಾಗಿತ್ತು. ಅಲ್ಲದೆ, ನನ್ನ ವಿರುದ್ಧ ದಾಖಲಾಗಿರುವ ಅಬಕಾರಿ ಪ್ರಕರಣದಲ್ಲಿ, ಕಾನೂನು ವಿಷಯವನ್ನೂ ಅವರೇ ನೋಡಿಕೊಳ್ಳುತ್ತಿದ್ದರು. ನನ್ನ ವಿರುದ್ಧ ತಪ್ಪು ಪ್ರಕರಣ ದಾಖಲಿಸಿ ಬಂಧಿಸಲು ಕಾನೂನು ಅನುಮತಿ ನೀಡುವಂತೆ ಒತ್ತಡ ಹೇರಲಾಗಿತ್ತು. ಆದರೆ, ಅವರು ಅನುಮೋದನೆ ನೀಡಲಿಲ್ಲ. ಅವರ ಮೇಲೆ ವಿಪರೀತ ಒತ್ತಡವಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಅತ್ಯಂತ ದುಃಖಕರ ಘಟನೆ’ ಎಂದು ಸಿಸೋಡಿಯಾ ಗಂಭೀರ ಆರೋಪ ಹೊರಿಸಿದ್ದರು.

ಸಿಸೋಡಿಯಾ ಆರೋಪಕ್ಕೆ ಸಿಬಿಐಯೇ ಪ್ರತಿಕ್ರಿಯೆ ನೀಡಿದ್ದು, ಮನೀಶ್ ಸಿಸೋಡಿಯಾ ಅವರ ಚೇಷ್ಟೆಯ ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಯನ್ನು ನಿರಾಕರಿಸುವುದಾಗಿ ತನಿಖಾ ಸಂಸ್ಥೆ ಹೇಳಿದೆ. ಆತ್ಮಹತ್ಯೆ ಮಾಡಿಕೊಂಡ ಸಿಬಿಐ ಅಧಿಕಾರಿ ದಿವಂಗತ ಜಿತೇಂದ್ರ ಕುಮಾರ್ ಅವರು ಅಬಕಾರಿ ಪ್ರಕರಣದ ತನಿಖೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲ್ಲ ಎಂದು ಸಿಬಿಐ ಹೇಳಿದೆ.
ದಿಲ್ಲಿ ಅಬಕಾರಿ ನೀತಿ ಪ್ರಕರಣದ ಪ್ರಸ್ತುತ ತನಿಖೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಸಿಸೋಡಿಯಾ ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ ಸಿಬಿಐ ಅಧಿಕಾರಿ ಸಾವಿನ ಬಗ್ಗೆ ತನಿಖೆ ನಡೆಸುತ್ತಿರುವ ದಿಲ್ಲಿ ಪೊಲೀಸರ ಹೇಳಿಕೆಯನ್ನು ಉಲ್ಲೇಖಿಸಿದೆ. ಮೃತ ಅಧಿಕಾರಿಯು ತನ್ನ ‘ಆತ್ಮಹತ್ಯೆ ಟಿಪ್ಪಣಿ’ಯಲ್ಲಿ ತನ್ನ ಸಾವಿಗೆ ಯಾರನ್ನೂ ಹೊಣೆಗಾರರನ್ನಾಗಿ ಮಾಡಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಅಬಕಾರಿ ನೀತಿ ವಿಷಯದ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಯಾವೊಬ್ಬ ಆರೋಪಿಗೂ ಕ್ಲೀನ್ ಚಿಟ್ ನೀಡಿಲ್ಲ. ಸಿಸೋಡಿಯಾ ಅವರ ಚೇಷ್ಟೆಯ ಮತ್ತು ದಾರಿತಪ್ಪಿಸುವ ಹೇಳಿಕೆಯು ದಿಲ್ಲಿ ಅಬಕಾರಿ ನೀತಿ ಪ್ರಕರಣದ ಪ್ರಸ್ತುತ ತನಿಖೆಯಿಂದ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನವಾಗಿದೆ ಮತ್ತು ಅಧಿಕಾರಿಯ ಸಾವಿನ ತನಿಖೆಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪಕ್ಕೆ ಸಮಾನವಾಗಿದೆ ಎಂದು ಸಿಬಿಐ ಹೇಳಿದೆ.