ವಿಶ್ವವಿಖ್ಯಾತ ಮೈಸೂರು ದಸರಾ ಕಾರ್ಯಕ್ರಮ ಉದ್ಘಾಟನೆಗಾಗಿ ರಾಷ್ಟ್ರಪತಿ ದ್ರೌಪದಿ ಮರ್ಮು ಅವರಿಗೆ ಸರಕಾರ ಅಧಿಕೃತವಾಗಿ ಆಹ್ವಾನ ನೀಡಲಾಯಿತು.
ಗುರುವಾರ ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ನೇತೃತ್ವದ ನಿಯೋಗ ರಾಷ್ಟ್ರಪತಿ ಮರ್ಮು ಅವರಿಗೆ ಆಹ್ವಾನ ಪತ್ರ ನೀಡಿತು.
ಆಹ್ವಾನ ನೀಡಿದ ನಿಯೋಗದಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಸಂಸದ ಪ್ರತಾಪ್ ಸಿಂಹ, ಅಣ್ಣಸಾಹೇಬ ಶಂಕರ ಜೊಲ್ಲೆ ಮತ್ತು ಮೈಸೂರು ಮೇಯರ್ ಶಿವಕುಮಾರ್ ಇದ್ದರು.
ಸೆ.26ರಂದು ನಾಡದೇವತೆ ಚಾಮುಂಡೇಶ್ವರಿ ದೇವಿ (Chamundeshwari) ಯ ಅಗ್ರಪೂಜೆಯೊಂದಿಗೆ ನಾಡಹಬ್ಬ ಮೈಸೂರು ದಸರಾ ಆರಂಭವಾಗಲಿದೆ. ಅಂದು ಬೆಳಗ್ಗೆ 9.45ರಿಂದ 10.05ರೊಳಗೆ ವೃಶ್ಚಿಕ ಲಗ್ನದಲ್ಲಿ ಚಾಮುಂಡೇಶ್ವರಿ ದೇವಿ ಸನ್ನಿಧಿಯಲ್ಲಿ ರಾಷ್ಟ್ರಪತಿಗಳು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಇದೇ ಮೊದಲ ಬಾರಿ ರಾಷ್ಟ್ರಪತಿಗಳು ದಸರಾ ಮಹೋತ್ಸವ ಉದ್ಘಾಟನೆ ಮಾಡುತ್ತಿದ್ದಾರೆ. ಈಗಾಗಲೇ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಭೇಟಿ ಮಾಡಿ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ರಾಜ್ಯ ಹೈಕೋರ್ಟ್ ನ ಹಂಗಾಮಿ ಮುಖ್ಯನ್ಯಾಯಮೂರ್ತಿ ಅಲೋಕ್ ಆರಾಧೆ, ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಪರಿಷತ್ ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಹಾಗೂ ಸಚಿವರು, ಶಾಸಕರು ಸೇರಿದಂತೆ ಗಣ್ಯಾತಿಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನ ಮಾಡಲಾಗಿದೆ.