• Home
  • About Us
  • ಕರ್ನಾಟಕ
Tuesday, July 1, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home Uncategorized

ವರ್ತಮಾನ ಭಾರತ – ಅಂಬೇಡ್ಕರ್‌ ಏಕೆ ಬೇಕು ?

ನಾ ದಿವಾಕರ by ನಾ ದಿವಾಕರ
May 3, 2025
in Uncategorized
0
ವರ್ತಮಾನ ಭಾರತ – ಅಂಬೇಡ್ಕರ್‌ ಏಕೆ ಬೇಕು ?
Share on WhatsAppShare on FacebookShare on Telegram

( ದಿನಾಂಕ 29 ಏಪ್ರಿಲ್‌ 2025ರಂದು ಮೈಸೂರಿನ ಪ್ರಸಾರಾಂಗ  ಏರ್ಪಡಿಸಿದ್ದ ಅಂಬೇಡ್ಕರ್‌ ಜಯಂತಿಯ ಸಂದರ್ಭಲ್ಲಿ ನೀಡಿದ ಉಪನ್ಯಾಸದ ಲೇಖನ ರೂಪ)

ADVERTISEMENT

ನಾ ದಿವಾಕರ

ನಮ್ಮ ವಿಶಾಲ ಸಮಾಜವು ಅಂಬೇಡ್ಕರರನ್ನು ಒಳಗೊಂಡು ಬೆಳೆಯುತ್ತಿದೆಯೇ ? ಈ ಆತ್ಮಾವಲೋಕನದ ಪ್ರಶ್ನೆಯೊಂದಿಗೆ ನಾವು ವರ್ತಮಾನದ ಭಾರತದಲ್ಲಿ ಅಂಬೇಡ್ಕರ್‌ ಅವರನ್ನಿಟ್ಟು ನೋಡಬೇಕಾಗುತ್ತದೆ. ಅಂಬೇಡ್ಕರರರ ಜನ್ಮದಿನದ ಶುಭಾಶಯಗಳು ಎಂಬ ಆಶಯಪೂರ್ವಕ ದನಿ ಈಗ ಎಲ್ಲ ಗಡಿಗಳನ್ನೂ ದಾಟಿ ಸಾರ್ವತ್ರೀಕರಣ ಪಡೆದುಕೊಂಡಿದೆ. ಅಂದರೆ ಭಾರತೀಯ ಸಮಾಜದ ಪ್ರತಿಯೊಂದು ಅಂಗವೂ, ಪ್ರತಿಯೊಂದು ವಿಭಾಗವೂ, ಪ್ರತಿಯೊಂದು ಚಿಂತನಾಧಾರೆಯೂ ಈ ಆಶಯದ ದನಿಯನ್ನು Ritualistic ಆಗಿ ಅನುಸರಿಸುತ್ತಿದೆ ಮತ್ತು ಪುನರುಚ್ಛಾರ ಮಾಡುತ್ತಿದೆ. ಇದೊಂದು ಸಕಾರಾತ್ಮಕ ಬೆಳವಣಿಗೆ. ಎಡ-ಬಲ-ಮಧ್ಯ  ಪಂಥದ ರಾಜಕೀಯ ಚಿಂತನೆಗಳ ನಡುವೆ ಈಗ ತಾತ್ವಿಕವಾಗಿ ಅಂಬೇಡ್ಕರ್‌ ಕುಳಿತಿರುವುದು ಬದಲಾದ ಭಾರತದ ಹೊಸ ಚಹರೆಯನ್ನು ಬಿಂಬಿಸುತ್ತದೆ. ಒಂದು ಕಾಲದಲ್ಲಿ ಅಂಬೇಡ್ಕರರನ್ನು ಪ್ರಧಾನವಾಗಿ ಪರಿಗಣಿಸದಿದ್ದ ಎಡಪಕ್ಷಗಳೂ, ಒಂದು ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್‌ ಹೆಸರನ್ನು ಇಡಲು ವಿರೋಧಿಸಿದ ಬಲಪಂಥೀಯ ಪಕ್ಷಗಳೂ ಇಂದು, ಸಂವಿಧಾನ ಮತ್ತು ಅಂಬೇಡ್ಕರರ ಸುತ್ತ ಸಂಕಥನಗಳನ್ನು ಹೊಸೆಯುತ್ತಿರುವುದು ಉತ್ತಮ ಬೆಳವಣಿಗೆ. ಇದು ಒಂದು ಮಜಲು.

ಮತ್ತೊಂದು ಮಜಲಿನತ್ತ ಹೊರಳಿದಾಗ, ಏಪ್ರಿಲ್-ಮೇ ಮಾಸಗಳುದ್ದಕ್ಕೂ ಡಾ. ಬಿ.ಆರ್.‌ ಅಂಬೇಡ್ಕರ್‌ ಅವರನ್ನು ಸಾರ್ವಜನಿಕವಾಗಿ ಜನಸಾಮಾನ್ಯರ ನಡುವೆ ತಂದು ನಿಲ್ಲಿಸುವ ಪ್ರಯತ್ನಗಳು ನಾನಾ ಮಾದರಿಗಳಲ್ಲಿ ಕಂಡುಬರುತ್ತದೆ. ತಾತ್ವಿಕ ನೆಲೆಯಲ್ಲಿ ಸ್ವತಃ ಬಾಬಾಸಾಹೇಬರೇ ಒಪ್ಪದ                      ʼ ಭಕ್ತಿʼ ʼ ಆರಾಧನೆ ʼ ಮತ್ತು ʼ ಮೆರವಣಿಗೆ ʼಯಂತಹ ಮಧ್ಯಕಾಲೀನ ಪ್ರವೃತ್ತಿಗಳೂ ಸಹ, ಅಂಬೇಡ್ಕರರನ್ನೇ ಆಕ್ರಮಿಸಿಕೊಂಡಿದ್ದು, ತಳಸಮಾಜದ ಶ್ರೀಸಾಮಾನ್ಯಲ್ಲಿ, ಶೋಷಿತ-ಅವಕಾಶವಂಚಿತ ಜನತೆಯಲ್ಲಿ ಹಾಗೂ ದಮನಿತ ಸಮುದಾಯಗಳಲ್ಲಿ, ಅಂಬೇಡ್ಕರ್‌ ಒಂದು ರೀತಿಯಲ್ಲಿ ʼ ಅತೀತ ʼ ಲಕ್ಷಣಗಳನ್ನು ಪಡೆದುಕೊಂಡಿದ್ದಾರೆ. ಈ ಅತೀತತೆ ಅಂಬೇಡ್ಕರರನ್ನು ʼ ದೇವರು ʼ ಎಂದು ಕರೆಯುವವರೆಗೂ ವಿಸ್ತರಿಸಿದೆ. ಇತ್ತೀಚಿನ ದಿನಗಳಲ್ಲಿ ಅಂಬೇಡ್ಕರ್‌ ಜಯಂತಿಯ ಭಾಗವಾಗಿ ಅವರ ಭಾವಚಿತ್ರವನ್ನು ಬೆಳ್ಳಿರಥಗಳಲ್ಲಿ ಮೆರವಣಿಗೆ ಮಾಡುವ ಪ್ರವೃತ್ತಿಯೂ ಹೆಚ್ಚಾಗಿದೆ ಈ ಪ್ರವೃತ್ತಿಯನ್ನು ಕ್ರಮೇಣವಾಗಿ ಹೋಗಲಾಡಿಸಬೇಕಿದೆಯೆ ಹೊರತು, ಸಂಪೂರ್ಣವಾಗಿ ತಿರಸ್ಕರಿಸಲಾಗಲೀ, ನಿರಾಕರಿಸಲಾಗಲೀ ಸಾಧ್ಯವಿಲ್ಲ.

ವಾಸ್ತವದ ನೆಲೆಯಲ್ಲಿ ಅಂಬೇಡ್ಕರ್‌

ಏಕೆಂದರೆ 77 ವರ್ಷಗಳ ಸ್ವತಂತ್ರ-ಪ್ರಜಾಸತ್ತಾತ್ಮಕ-ಸಾಂವಿಧಾನಿಕ ಆಳ್ವಿಕೆಗಳ ಹೊರತಾಗಿಯೂ, ತಳಸಮಾಜದಲ್ಲಿ ಶೋಷಣೆ, ತಾರತಮ್ಯ, ದೌರ್ಜನ್ಯ, ಅವಕಾಶ ವಂಚನೆ, ಸಾಮಾಜಿಕ ಅಂತರ ಮತ್ತು ಆರ್ಥಿಕ ಅಸಮಾನತೆಗಳು, ಕಾಣಿಸಿಕೊಳ್ಳುತ್ತಲೇ ಇವೆ. ಹೆಚ್ಚಾಗುತ್ತಲೂ ಇವೆ.  ನವ ನಾಗರಿಕತೆಯಲ್ಲಿ ಇರಬಾರದ ಈ ಎಲ್ಲ ಲಕ್ಷಣಗಳು ರೂಪಾಂತರ ಹೊಂದಿವೆಯೇ ಹೊರತು, ಅಂತ್ಯವಾಗಿಲ್ಲ. ಅಂಬೇಡ್ಕರ್‌ ಹೇಳಿದಂತೆ ಭಾರತದಲ್ಲಿ ಪ್ರತಿ ವ್ಯಕ್ತಿಯೂ ತನ್ನ ನೆರೆಯವರನ್ನು ಗುರುತಿಸುವುದೇ ಜಾತಿಯ ಮೂಲಕ. ಅದು ಇಂದಿಗೂ ವಾಸ್ತವ. ನಗರೀಕರಣದ ಪ್ರಕ್ರಿಯೆ ಈ ರೂಪಾಂತರಗೊಂಡ ಶೋಷಣೆ ಮತ್ತು ತಾರತಮ್ಯಗಳನ್ನು ಪೋಷಿಸಿಕೊಂಡೇ ಮುಂದುವರೆಯುತ್ತಿರುವುದನ್ನು ದಲಿತರ, ಅಲ್ಪಸಂಖ್ಯಾತರ ನಿತ್ಯ ಅನುಭವಗಳಲ್ಲೇ ಕಾಣಬಹುದಾಗಿದೆ. ಹಾಗಾಗಿ ತಮ್ಮ ವ್ಯಕ್ತಿಗತ-ಸಾಮುದಾಯಿಕ ವಿಮೋಚನೆಗಾಗಿ ಸಮಾಜದ ಶೋಷಿತ ಜನರು ದೈವತ್ವವನ್ನು ಮೊರೆ ಹೋಗುವಂತೆಯೇ ಅಂಬೇಡ್ಕರ್‌ ಅವರನ್ನು ಅತೀತರನ್ನಾಗಿಸಿ, ಈ ಸಾಂವಿಧಾನಿಕ ದೈತ್ಯ ಚಿಂತಕನ ಮೊರೆ ಹೋಗುತ್ತಾರೆ. ತಾತ್ವಿಕವಾಗಿ ಇದನ್ನು ಸಮ್ಮತಿಸುವುದು , ಭಾವನಾತ್ಮಕ ನೆಲೆಯಲ್ಲಿ, ಒಂದು ಹಂತದವರೆಗೆ ಮಾತ್ರ ಸಾಧ್ಯ.

Krishna Byre Gowda : ಹಕ್ಕುಪತ್ರ ಪಡೆಯಲು ಮಾನದಂಡಗಳೇನು? #pratidhvani

ಇದರಿಂದಾಚೆಗೆ ನೋಡುವುದೇ ಆದರೆ ನಾವು ಅಂಬೇಡ್ಕರರನ್ನು ಅವರ ಸುತ್ತ ನಿರ್ಮಾಣವಾಗಿರುವ ಸ್ಥಾವರ/ಪ್ರತಿಮೆಗಳಿಂದಾಚೆಗೆ ನೋಡಬೇಕಾಗುತ್ತದೆ. ಅಲ್ಲಿ ನಮಗೆ ಅವರೇ ಬೋಧಿಸಿ, ಬದುಕಿದಂತಹ ವೈಚಾರಿಕತೆ ಮತ್ತು ವೈಜ್ಞಾನಿಕ ಪ್ರಜ್ಞೆ ಕಾಣುತ್ತದೆ. ನಾವು ವರ್ತಮಾನ ಭಾರತ ಕುರಿತು ಮಾತನಾಡುತ್ತಿದ್ದೇವೆ. ಅಂದರೆ ಶೇಕಡಾ 30ರಷ್ಟು ಮಿಲೆನಿಯಂ ಮಕ್ಕಳೇ ಇರುವ ಸಮಾಜದಲ್ಲಿ. ಇವರೊಂದಿಗೆ ಇರುವ ಹಿರಿಯ ತಲೆಮಾರು ಮತ್ತು 1980ರ ಯುವ ತಲೆಮಾರು ಅಂಬೇಡ್ಕರರ ಚಿಂತನೆಗಳನ್ನು ಈ ಮಕ್ಕಳ ಭವಿಷ್ಯದ ಅಡಿಪಾಯವನ್ನಾಗಿ ಕಟ್ಟುವುದು ಮುಖ್ಯ        ಅಲ್ಲವೇ ? ಏಕೆಂದರೆ ಈ ಮಿಲೆನಿಯಂ ಮಕ್ಕಳಿಗೆ ಇತಿಹಾಸದ ಅರಿವು ಕಡಿಮೆ, ಇದ್ದರೂ ವಿದ್ಯಾವಂತ, ಸುಶಿಕ್ಷಿತ ಸಮಾಜದಲ್ಲಿ ಬೇರೂರಿರುವ ʼ ವಾಟ್ಸಾಪ್‌ ವಿಶ್ವವಿದ್ಯಾಲಯ ʼ ಎಂಬ ಬೌದ್ಧಿಕ ನೆಲೆಯಲ್ಲಿ ಈ ಪೀಳಿಗೆಯನ್ನು ಭ್ರಮಾಧೀನರನ್ನಾಗಿ ಮಾಡಲಾಗಿದೆ. ಇಲ್ಲಿ ಉತ್ಪಾದನೆಯಾಗುವ ಬೌದ್ಧಿಕ ಸರಕುಗಳು ಮೌಖಿಕವಾಗಿ, ಲಿಖಿತವಾಗಿ, ಸಂವಹನ ಮಾಧ್ಯಮಗಳ ಮೂಲಕ ಸುಲಭವಾಗಿ ಕಟ್ಟಕಡೆಯ ವ್ಯಕ್ತಿಗೂ ತಲುಪುತ್ತಿದೆ.

ಆದರೆ ಈ ʼಸುಳ್ಳಿನ ಕಾರ್ಖಾನೆ ʼ ಗಳಲ್ಲಿ ರೂಪಿಸಲಾಗುತ್ತಿರುವ ಪಠ್ಯಕ್ರಮ ಭಾರತದ ಪ್ರಾಚೀನ-ಮಧ್ಯಕಾಲೀನ ಹಾಗೂ ಸಮಕಾಲೀನ ಚರಿತ್ರೆಯನ್ನು ವಿಕೃತಗೊಳಿಸುತ್ತಿದೆ. ಹಾಗಾಗಿ ನಮಗೆ ಚಾರಿತ್ರಿಕ ವಾಸ್ತವಗಳು ಮಿಥ್ಯೆಗಳಾಗಿಯೂ, ಪೌರಾಣಿಕ ಮಿಥ್ಯೆಗಳು ಚರಿತ್ರೆಯಾಗಿಯೂ ಕಾಣತೊಡಗುತ್ತವೆ. ಚಾರಿತ್ರಿಕ ವ್ಯಕ್ತಿಗಳನ್ನು ವರ್ತಮಾನದ ಮತೀಯವಾದ ಮತ್ತು ಸಂಕುಚಿತ ರಾಷ್ಟ್ರೀಯತೆಯ ಕುಲುಮೆಗಳಲ್ಲಿ ಬೇಯಿಸಿ, ಹಿಗ್ಗಿಸಿ, ಹೊಸ ರೂಪದಲ್ಲಿ ಮಕ್ಕಳ ಮುಂದಿಡಲಾಗುತ್ತಿದೆ. ಇದು ನಡೆಯುತ್ತಿರುವುದು ಬೌದ್ಧಿಕ ಅಧ್ಯಯನ-ಸಂಶೋಧನೆಗಿಂತಲೂ ಹೆಚ್ಚಾಗಿ ಸಿನೆಮಾ ಪರದೆಗಳ ಮೇಲೆ ಎನ್ನುವುದು ವರ್ತಮಾನದ ದುರಂತ ಅಲ್ಲವೇ ? ಹಾಗಾಗಿ ಅಂಬೇಡ್ಕರರನ್ನು ಆರಾಧಿಸುವ ಮನಸ್ಸುಗಳಿಗೆ ಗಾಂಧಿ ಶತ್ರುವಾಗಿ, ಮಾರ್ಕ್ಸ್‌ ಬಹಿಷ್ಕೃತರಾಗಿ, ನೆಹರೂ ತಿರಸ್ಕೃತರಾಗಿ ಕಾಣತೊಡಗುತ್ತಾರೆ. ಇಲ್ಲಿ ಸಮಾಜ ಕಳೆದುಕೊಳ್ಳುತ್ತಿರುವ ವೈಚಾರಿಕ ಚಿಂತನೆಗಳು (Rational Thoughts) ಬೌದ್ಧಿಕವಾಗಿ ಇಡೀ ಸಮಾಜವನ್ನು ಭಾವಾವೇಶದ ಅಂಧಾನುಕರಣೆಯ ಕಡೆಗೆ ಕರೆದೊಯ್ಯುತ್ತದೆ.

ಪ್ರಸ್ತುತ ಸಂದರ್ಭದಲ್ಲಿ ಅಂಬೇಡ್ಕರ್‌

ಹಾಗಾದರೆ ವರ್ತಮಾನ ಭಾರತ ಅಂಬೇಡ್ಕರರನ್ನು ಹೇಗೆ ನೋಡಬೇಕು ? ಪರಾಕು/ಬಿರುದುಗಳಿಂದಾಚೆಗೆ ನೋಡಿದಾಗ ಅವರ ಚಿಂತನಾಧಾರೆಗಳಲ್ಲಿ ನಮಗೆ ಮುಖ್ಯವಾಗಿ ಕಾಣುವುದು ಪ್ರಜಾಪ್ರಭುತ್ವ, ಸಾರ್ವತ್ರಿಕ ಸಮಾನತೆ (Universal Equality)̧ ಸಾಂವಿಧಾನಿಕ ನೈತಿಕತೆ ಮತ್ತು ಜಾತಿ ವಿನಾಶದ ನೆಲೆಗಳು. ಈ ನಾಲ್ಕೂ ನೆಲೆಗಳಲ್ಲಿ ನಾವು ವಿಫಲರಾಗುತ್ತಿರುವುದು ನಮ್ಮನ್ನು ಕಾಡಲೇಬೇಕಾದ ಪ್ರಶ್ನೆ ಅಲ್ಲವೇ ? ದಲಿತ-ಶೋಷಿತರ ರಸ್ತೆ-ಕೇರಿಗಳನ್ನು ರಥಬೀದಿಗಳನ್ನಾಗಿ ಮಾಡುವುದರ ಮೂಲಕ, ಅಂಬೇಡ್ಕರರನ್ನು ರಥಾರೂಢರನ್ನಾಗಿ ಮಾಡುವ ಮೂಲಕ ಅಥವಾ ಸ್ವತಃ ಅಂಬೇಡ್ಕರರನ್ನು ವೈಭವೀಕರಿಸುವ, Romanticise ಮಾಡುವ, ಆರಾಧನೆಯ ವಸ್ತುವನ್ನಾಗಿ ಮಾಡುವ ಮೂಲಕ ಈ ಪ್ರಶ್ನೆಗೆ ಉತ್ತರ ಶೋಧಿಸಬಹುದೇ ? ಒಂದು ಉದಾಹರಣೆ ನೀಡಬಹುದಾದರೆ : ದಲಿತ ಮಹಿಳೆ ದೇಶದ ಅತ್ಯುನ್ನತ ಹುದ್ದೆ ಪಡೆದಾಗ ಅಥವಾ ಶೈಕ್ಷಣಿಕ ಸಾಧನೆ ಮಾಡಿದಾಗ ಇದು ಸಂವಿಧಾನದ/ಅಂಬೇಡ್ಕರ್‌ ಅವರ ತಾಕತ್ತು ಎಂಬ ವಾಟ್ಸಾಪ್‌ ಪೋಸ್ಟ್‌ಗಳು. ಇಲ್ಲಿ ಪ್ರೊ. ಸಾಯಿಬಾಬಾ, ಸ್ಟ್ಯಾನ್‌ ಸ್ವಾಮಿ, ಕಂಬಾಲಪಲ್ಲಿ, ಖೈರ್ಲಾಂಜಿಗೆ ಹೇಗೆ ಉತ್ತರಿಸುವುದು ?  ಇದನ್ನೇ ನಾನು Romanticisation ಎನ್ನುತ್ತೇನೆ.

. ಅಂಬೇಡ್ಕರ್‌ ಸಂವಿಧಾನದ ಮೂಲಕ ತಾಕತ್ತು ನೀಡಿಲ್ಲ, ಬದಲಾಗಿ ಪ್ರಜಾಸತ್ತಾತ್ಮಕ ಆಳ್ವಿಕೆಯ ಮಾದರಿ ನೀಡಿದ್ದಾರೆ. ಆಳ್ವಿಕೆಯನ್ನು ನಿರ್ವಹಿಸುವ ಸರ್ಕಾರಗಳ ತತ್ವಾದರ್ಶಗಳು ಪ್ರಜಾಪ್ರಭುತ್ವವನ್ನು ಉಳಿಸುವಲ್ಲಿ ನಿರ್ಣಾಯಕವಾಗುತ್ತದೆ. ಈ ಎಲ್ಲ ಪ್ರಯತ್ನಗಳಲ್ಲಿ ನಮಗೆ ಕಾಣುವುದು ಬಾಬಾಸಾಹೇಬರನ್ನು ಅರಿಯುವ ಮಾದರಿಗಳಲ್ಲ ಬದಲಾಗಿ , ವ್ಯಕ್ತಿ ವೈಭವೀಕರಣದಲ್ಲಿ ಮುಳುಗಿಹೋಗುವುದು ಅವರ ಮೂಲ ಆಶಯ-ಚಿಂತನೆ ಮತ್ತು ದೂರಗಾಮಿ ಧ್ಯೇಯಗಳು ಈ ಅಪಾಯವನ್ನು ಅರಿತಿದ್ದರಿಂದಲೇ ಅಂಬೇಡ್ಕರ್‌ ಭಕ್ತಿ ಅಥವಾ ಆರಾಧನೆಯ ಮನೋವೃತ್ತಿಯನ್ನು ಕಟುವಾಗಿ ವಿರೋಧಿಸುತ್ತಾರೆ. ಭಾರತೀಯ ಸಮಾಜದಲ್ಲಿ ಅತೀತ ಶಕ್ತಿಗಳಲ್ಲಿನ ಭಕ್ತಿ  ಅಥವಾ ಉನ್ನತ ವ್ಯಕ್ತಿಗಳ ಆರಾಧನೆ ಸಮಾಜವನ್ನು ಭ್ರಮಾಧೀನಗೊಳಿಸುವುದೇ ಅಲ್ಲದೆ, ವಿವೇಕ-ವಿವೇಚನೆಯನ್ನೂ ಇಲ್ಲದಂತಾಗಿಸಿ, ಅಂಧಾನುಕರಣೆಯ ಭಕ್ತಗಣವನ್ನು ಸೃಷ್ಟಿಸಿಬಿಡುತ್ತದೆ. ಇದನ್ನು ಅರಿತೇ ಅಂಬೇಡ್ಕರ್‌ ಎಚ್ಚರಿಕೆ ನೀಡಿದ್ದು ಅವರ ದಾರ್ಶನಿಕತೆ ಮತ್ತು ದೂರಗಾಮಿತ್ವಕ್ಕೆ ಸಾಕ್ಷಿ ಅಲ್ಲವೇ ? ಅಂಬೇಡ್ಕರ್‌ ಇದನ್ನು ನಾವು ಗೌರವಿಸಲೇಬೇಕು.

ವರ್ತಮಾನದ ಸಂದರ್ಭದಲ್ಲಿ ಈ ಎರಡೂ ಮನಸ್ಥಿತಿಗಳು ಏಕೆ ಅಪಾಯಕಾರಿಯಾಗುತ್ತವೆ ? ಏಕೆಂದರೆ ದೇಶದ ಸಾಮಾಜಿಕ ವ್ಯವಸ್ಥೆಯನ್ನು ಆವರಿಸುತ್ತಿರುವ ಧಾರ್ಮಿಕತೆ ಮತ್ತು ಜಾತಿ ಶ್ರೇಷ್ಠತೆಗಳು ಹಾಗೂ ಅವುಗಳನ್ನು ಸಾಂಸ್ಥೀಕರಣಗೊಳಿಸುವ ಮೂಲಕ ಸಾಂಘಿಕ ಸ್ವರೂಪ ನೀಡುತ್ತಿರುವ ರಾಜಕೀಯ ಬೆಳವಣಿಗೆಗಳು, ಸಾಂಸ್ಕೃತಿಕ ಚಿಂತನಾ ಲಹರಿಗಳು ಇದೇ ಮಾದರಿಯಲ್ಲೇ ಸಮಾಜವನ್ನು ತಪ್ಪುದಾರಿಗೆಳೆಯುತ್ತಿವೆ.  ಅಂಬೇಡ್ಕರ್‌ ನಿರಾಕರಿಸಿದ ಮತ್ತು ವಿರೋಧಿಸಿದ ಪ್ರಾಚೀನ ಮೌಢ್ಯಾಚರಣೆಗಳನ್ನು, ನಂಬಿಕೆಗಳನ್ನು, ಅಂಧ ಶ್ರದ್ಧೆಗಳನ್ನು ಹಾಗೂ ಅಂಧಾನುಕರಣೆಯ ಮಾರ್ಗಗಳನ್ನು ಪುನರ್‌ ಸ್ಥಾಪಿಸಲಾಗುತ್ತಿದೆ. ಅತ್ಯಾಧುನಿಕ ಆಂಡ್ರಾಯ್ಡ್‌ ಮೊಬೈಲ್‌ ತಂತ್ರಜ್ಞಾನದ ಮೂಲಕ ಗಣೇಶನಿಗೆ ಪ್ಲಾಸ್ಟಿಕ್‌ ಸರ್ಜರಿ ಮಾಡಿ ತಲೆ ಜೋಡಿಸಲಾಗಿತ್ತುಎಂದು ನಂಬಿಸಲಾಗುತ್ತದೆ. ಎತ್ತಣ ವೈಜ್ಞಾನಿಕ ತಂತ್ರಜ್ಞಾನ, ಎತ್ತಣ ಪೌರಾಣಿಕ ಮಿಥ್ಯೆ ?

ಸಮಾಜ-ಸಂಸ್ಕೃತಿ ಮತ್ತು ಸಮಕಾಲೀನತೆ

 ಸಾಮಾನ್ಯ ಸಂಕಥನಗಳಲ್ಲಿ (Discourses), ಸಾರ್ವಜನಿಕ ಚರ್ಚೆಗಳಲ್ಲಿ, ಸೆಮಿನಾರ್‌ ಹಾಲ್‌ಗಳಲ್ಲಿ ನಾವು ಇದನ್ನು ಮನುವಾದ ಎಂದು ಕರೆಯುತ್ತಿದ್ದೇವೆ. ಆದರೆ ಮನುವಾದ ಎಂದರೆ ಕೇವಲ ಜಾತಿ ಶ್ರೇಷ್ಠತೆ-ಮೇಲರಿಮೆ-ಪ್ರತ್ಯೇಕತೆ-ಮಡಿವಂತಿಕೆ ಮಾತ್ರವೇ ಅಲ್ಲ. ಅದು ಮಧ್ಯಕಾಲೀನ ಬಾರತದ ಶ್ರೇಣೀಕೃತ ಜಾತಿ-ಶೋಷಕ ವ್ಯವಸ್ಥೆಯಲ್ಲಿ ರೂಪುಗೊಂಡ ಒಂದು ಸಂಹಿತೆ. ಮನುವಾದವನ್ನು ನಾವು ಕಾಣಬೇಕಿರುವುದು ಇಂದಿಗೂ ಜೀವಂತವಾಗಿರುವ ಊಳಿಗಮಾನ್ಯ ಹಾಗೂ ಪಿತೃಪ್ರಧಾನತೆಯಲ್ಲಿ, ಮಹಿಳಾ ಸಮೂಹದ ಅಧೀನತೆಯಲ್ಲಿ, ಸಾಮಾಜಿಕ ಅಂತರಗಳಲ್ಲಿ ಮತ್ತು ಆರ್ಥಿಕ ಅಸಮಾನತೆಗಳಲ್ಲಿ. ಸಿರಿವಂತಿಕೆಯನ್ನು ವ್ಯಕ್ತಿ ಸಾಧನೆಯ ಫಲ, ಬಡತನವನ್ನು ಪೂರ್ವಜನ್ಮದ ಕರ್ಮ ಎನ್ನುವ ಪ್ರಾಚೀನ ಚಿಂತನೆ ಇನ್ನೂ ಉಸಿರಾಡುತ್ತಿರುವುದು ಈ ಪ್ರಭಾವದಿಂದಲೇ.

ಈ ಮನೋಭಾವ ಎಲ್ಲ ಜಾತಿ/ಉಪಜಾತಿಗಳಲ್ಲೂ, ಎಲ್ಲ ಧಾರ್ಮಿಕ ಚಿಂತನೆಗಳಲ್ಲೂ ಗಟ್ಟಿಯಾಗಿ ನೆಲೆಯೂರಿದೆ ಅಲ್ಲವೇ ? ಶೋಷಣೆ ಮತ್ತು ಅಸಮಾನತೆಗಳನ್ನು ನಿರ್ದಿಷ್ಟ ಅಸ್ಮಿತೆಗಳ ಚೌಕಟ್ಟಿನಿಂದಾಚೆ ನಿಂತು ನೋಡಿದಾಗ, ಇಂದು ನವ ಉದಾರವಾದಿ ಮಾರುಕಟ್ಟೆಯ ಶೋಷಣೆಗೊಳಗಾಗಿರುವ ಕೋಟ್ಯಂತರ ಶ್ರಮಜೀವಿಗಳು ನಮ್ಮ ಕಣ್ಣಿಗೆ ರಾಚುವಂತೆ ಎದುರಾಗುತ್ತಾರೆ. ಅಂಕಿಅಂಶಗಳು ಹೇಳುವಂತೆ ಪ್ರತಿ ಹದಿನೈದು ನಿಮಿಷಕ್ಕೊಮ್ಮೆ ಅತ್ಯಾಚಾರ, ದೌರ್ಜನ್ಯಕ್ಕೀಡಾಗುವ ಅಸಹಾಯಕ ಮಹಿಳೆಯರು ನಮ್ಮನ್ನೇ ದಿಟ್ಟಿಸುತ್ತಾರೆ. ಅಂಬೇಡ್ಕರ್‌ ಬಲವಾಗಿ ಪ್ರತಿಪಾದಿಸಿ, ಆಂದೋಲನದ ರೀತಿಯಲ್ಲಿ ರೂಪಿಸಿದ ಅಂತರ್ಜಾತಿ ವಿವಾಹಗಳು ಇಂದಿಗೂ ಸಾಮಾಜಿಕ ಬಹಿಷ್ಕಾರದಲ್ಲಿ ಪರ್ಯವಸಾನಗೊಳ್ಳುತ್ತಿವೆ. ಈ ಸಾಮಾಜಿಕ ಬಹಿಷ್ಕಾರ ಎಂಬ ಪ್ರಾಚೀನ ಪದ್ಧತಿ ಹಿಂದುಳಿದ ಜಾತಿ/ವರ್ಗಗಳಲ್ಲೂ ಪ್ರಚಲಿತವಾಗಿರುವುದು ದುರಂತ ಅಲ್ಲವೇ ? ಇಲ್ಲಿ ಮತ್ತೆ ಮಹಿಳೆಯೇ ದಾಳಿಗೊಳಗಾಗುತ್ತಾಳೆ, ಕೊಲೆಯಾಗುತ್ತಾಳೆ, ಬಹಿಷ್ಕೃತಳಾಗುತ್ತಾಳೆ.

ಈ ಘಟನೆಗಳು ಸಾಂವಿಧಾನಿಕ ನ್ಯಾಯ ವ್ಯವಸ್ಥೆಯನ್ನು ತಲುಪಲೂ ಸಾಧ್ಯವಾಗದಂತೆ ಖಾಪ್‌ ಪಂಚಾಯತ್‌ಗಳು ಕರ್ನಾಟಕದಲ್ಲೇ, ಮೈಸೂರಿನ ಅಕ್ಕಪಕ್ಕದ ಜಿಲ್ಲೆಗಳಲ್ಲೇ ಕಾರ್ಯನಿರ್ವಹಿಸುತ್ತಿವೆ. ಯಜಮಾನ್‌ ಪದ್ಧತಿಯನ್ನು ಒಂದು ಸಾಂಸ್ಕೃತಿಕ ನೆಲೆಯಲ್ಲಿ ಒಪ್ಪಿ ನಡೆಯುತ್ತಿರುವ ಸಮಾಜವೂ ನಮ್ಮ ನಡುವೆ ಇದೆ. ಸಂವಿಧಾನವನ್ನು ಎತ್ತಿಹಿಡಿಯುವ ಅಥವಾ ನಿತ್ಯ ಸಂವಿಧಾನ ಪಠಣ ಮಾಡುವ ಸಮಾಜವೊಂದು ಇದನ್ನು ಹೇಗೆ ಇರಲು ಬಿಟ್ಟಿದೆ ? ಈ ಪ್ರಶ್ನೆ ಆಳ್ವಿಕೆಯನ್ನಷ್ಟೇ ಅಲ್ಲ, ಸಂವಿಧಾನವನ್ನು ಪ್ರೀತಿಸುವ ನಮ್ಮನ್ನೂ ಕಾಡಬೇಕಲ್ಲವೇ ? ಈ ಯಜಮಾನ್‌ ಪದ್ಧತಿ ಊರ್ಜಿತವಾಗಿರುವ ಕಾರಣವನ್ನು ನಾವು ಕೇವಲ ಜಾತಿ ನೆಲೆಯಲ್ಲಿ ನೋಡಿದಾಗ ಮನುವಾದ ಕಾಣುತ್ತದೆ. ಆದರೆ ವರ್ಗದ ನೆಲೆಯಲ್ಲಿ ನೋಡಿದಾಗ ಅಲ್ಲಿ ವರ್ತಮಾನದ ಬಂಡವಾಳಶಾಹಿ ಆರ್ಥಿಕತೆ, ಅದು ಸೃಷ್ಟಿಸುವ ಆರ್ಥಿಕ ಮೇಲ್ಪಂಕ್ತಿಗಳು ಮತ್ತು ಅದನ್ನು ಪೋಷಿಸುವ ಒಂದು ಊಳಿಗಮಾನ್ಯ ಧೋರಣೆ ಕಾಣುತ್ತದೆ. ತಮ್ಮ ಆರ್ಥಿಕ ಬಲದಿಂದಲೇ ಸಮಾಜವನ್ನು ಅಧೀನದಲ್ಲಿಟ್ಟುಕೊಳ್ಳುವ ಮನಸ್ಥಿತಿಯನ್ನು ಆಧುನಿಕ ಕಾರ್ಪೋರೇಟ್‌ ಮಾರುಕಟ್ಟೆ ನೀರೆರೆದು ಪೋಷಿಸುತ್ತದೆ.

ಹಾಗಾಗಿಯೇ ನಮಗೆ ಅಂಬೇಡ್ಕರ್‌ ಚಿಂತನೆಗಳೊಂದಿಗೆ ಮಾರ್ಕ್ಸ್‌ನ ವರ್ಗ ಪರಿಕಲ್ಪನೆಯನ್ನೂ ಮುಖಾಮುಖಿಯಾಗಿಸುವ ಅವಶ್ಯಕತೆ ಎದ್ದು ಕಾಣುತ್ತದೆ. ಅಂಬೇಡ್ಕರ್‌ ಪದೇಪದೇ ಹೇಳಿರುವಂತೆ, ಆರ್ಥಿಕ-ಸಾಮಾಜಿಕ-ರಾಜಕೀಯ ಮತ್ತು ಸಾಂಸ್ಕೃತಿಕ ಸಮಾನತೆಗಳು ಪರಸ್ಪರ ಬೆಸೆದುಕೊಂಡಿರುವ ಸರಪಳಿಯಂತೆ. ಯಾವುದನ್ನೂ ಪ್ರತ್ಯೇಕವಾಗಿ ಸಾಧಿಸಲೂ ಆಗುವುದಿಲ್ಲ, ನೋಡುವುದೂ ತರವಲ್ಲ. ಆದರೆ ವರ್ತಮಾನ ಭಾರತದಲ್ಲಿ ಹೆಚ್ಚಾಗುತ್ತಿರುವ ಆರ್ಥಿಕ ಅಸಮಾನತೆಗಳಿಗೆ ಮೂಲ ಕಾರಣವನ್ನು ಶೋಧಿಸಲೇಬೇಕಲ್ಲವೇ  ಶೇಕಡಾ 1ರಷ್ಟು ಜನರು ದೇಶದ ಶೇಕಡಾ 40ರಷ್ಟು ಸಂಪತ್ತನ್ನು, ಶೇಕಡಾ 22ರಷ್ಟು ಆದಾಯವನ್ನು ಹೊಂದಿರುವುದಕ್ಕೆ ಕಾರಣ ನಮ್ಮ ಆಳ್ವಿಕೆಯಲ್ಲಿ ಅನುಸರಿಸಲಾಗುತ್ತಿರುವ ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ ಮತ್ತು ಅದರ ತಾತ್ವಿಕ ಬುನಾದಿಯಾದ ನವ ಉದಾರವಾದ. ಈ ಮಾರುಕಟ್ಟೆ ಆರ್ಥಿಕತೆಯನ್ನು ಜಾತಿ ಶೋಷಣೆಯ ನೆಲೆಯಲ್ಲಿ, ಲಿಂಗ ಅಸಮಾನತೆಯ ಚೌಕಟ್ಟಿನಲ್ಲಿ ಹೇಗೆ ನಿರ್ವಚಿಸಬೇಕು ಎನ್ನುವುದು ಈ ಹೊತ್ತಿನ ಸವಾಲು.

ರಾಜಕೀಯ ಪ್ರಜ್ಞೆಯಾಗಿ ಅಂಬೇಡ್ಕರ್

ದುರಂತ ಎಂದರೆ ವರ್ತಮಾನ ಭಾರತದ ದಲಿತ ಚಳುವಳಿಗಳಲ್ಲಿ, ದಲಿತ ರಾಜಕಾರಣದಲ್ಲಿ‌, ಪ್ರಗತಿಪರ ಎನ್ನಲಾಗುವ ಸಾಮಾಜಿಕ ಚಳುವಳಿಗಳಲ್ಲೂ ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆ ಚರ್ಚೆಯಾಗುವುದೇ ಇಲ್ಲ ? ಮೇಲ್ಜಾತಿ ಹಿಡಿತದಲ್ಲಿರುವ ಬೂರ್ಷ್ವಾ ಪಕ್ಷಗಳನ್ನು ಬದಿಗಿಟ್ಟು, ದಲಿತರನ್ನೇ ಪ್ರಧಾನವಾಗಿ ಪ್ರತಿನಿಧಿಸುವ ರಾಜಕೀಯ ಪಕ್ಷಗಳ ಪ್ರಣಾಳಿಕೆಗಳಲ್ಲೂ ನವ ಉದಾರವಾದ ಮತ್ತು ಕಾರ್ಪೋರೇಟ್‌ ಮಾರುಕಟ್ಟೆ ಆರ್ಥಿಕತೆ ಚರ್ಚೆಗೊಳಗಾಗುವುದಿಲ್ಲ. ಆದರೆ ದೇಶದ ಶೋಷಿತ-ಅವಕಾಶವಂಚಿತ ತಳಸಮಾಜದ, ತಳಸಮುದಾಯಗಳ ಯುವ ತಲೆಮಾರಿಗೆ ಅಪಾಯಕಾರಿಯಾಗಿರುವುದು ಈ ಅಸಮಾನತೆಗಳೇ ಅಲ್ಲವೇ  ? ಇತ್ತೀಚಿನ ಉದಾಹರಣೆ ಎಂದರೆ ರಾಜಸ್ಥಾನ ಸರ್ಕಾರ 53,749 ನಾಲ್ಕನೆ ದರ್ಜೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, 24.76 ಲಕ್ಷ ಜನರು ಅರ್ಜಿ ಹಾಕಿದ್ದಾರೆ. ಇವರ ಪೈಕಿ ಪಿಎಚ್‌ಡಿ ಮಾಡಿದವರು, ಪದವೀಧರರು, ಉನ್ನತ ಪದವಿ ಪಡೆದವರು ಎಲ್ಲರೂ ಸೇರಿದ್ದಾರೆ. ಇದು ಏನನ್ನು ಸೂಚಿಸುತ್ತದೆ. ಸಹಜವಾಗಿ ಇಲ್ಲಿ ಹೆಚ್ಚಿನ ಉದ್ಯೋಗಾಕಾಂಕ್ಷಿಗಳು ದಲಿತ ಸಮುದಾಯದಿಂದ ಬಂದವರೇ ಆಗಿರುತ್ತಾರೆ. ವರ್ತಮಾನ ಭಾರತವನ್ನು ನೋಡುವಾಗ ನಮಗೆ ಈ ಅಸಮಾನತೆಯ ಬಹುದೊಡ್ಡ ಕಂದಕ ಕಾಣಬೇಕಲ್ಲವೇ ?

ವರ್ತಮಾನ ಭಾರತ ಎದುರಿಸುತ್ತಿರುವ ಮತ್ತೊಂದು ಸವಾಲು ಮತೀಯವಾದ, ಮತಾಂಧತೆ ಮತ್ತು ಸಾಂಸ್ಕೃತಿಕ ರಾಜಕಾರಣ ಸೃಷ್ಟಿಸಿರುವಂತಹ ಏಕರೂಪಿ ಸಮಾಜದ ಪರಿಕಲ್ಪನೆ. ಒಂದು ದೇಶ, ಒಂದು ಭಾಷೆ ಎಂಬ ಪರಿಕಲ್ಪನೆಯ ಹಿಂದೆ ಒಂದು ಪ್ರಜಾಸತ್ತಾತ್ಮಕ ಭಾವನೆ ಇರಲು ಸಾಧ್ಯವೇ ? 77 ವರ್ಷಗಳ ಪ್ರಜಾಸತ್ತಾತ್ಮಕ ಆಳ್ವಿಕೆಯಲ್ಲಿ ದೇಶದ ಅಖಂಡತೆಯನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಸಹಭೋಜನ, ಅಂತರ್‌ಜಾತಿ ವಿವಾಹ, ಅಂತರ್‌ಧರ್ಮೀಯ ವಿವಾಹ ಇವೆಲ್ಲವೂ ತಮ್ಮದೇ ಆದ ಕೊಡುಗೆ ನೀಡಿದೆ. ಆದರೆ ಒಂದು ರಾಷ್ಟ್ರೀಯ ಸಹಮತ ಸಾಧ್ಯವಾಗಿದೆಯೇ ? ಎಂತಹ ಸಂದಿಗ್ಧ ಸಮಯದಲ್ಲೂ ಇದು ಸಾಧ್ಯವಾಗುತ್ತಿಲ್ಲ. ಇದಕ್ಕೆ ಅಡ್ಡಿಯಾಗಿರುವುದು ಮತ್ತದೇ ಜಾತಿಯ ಬೇಲಿಗಳು, ಜಾತಿ/ಉಪಜಾತಿಗಳ ನಡುವಿನ ಗೋಡೆಗಳು, ಹಿಂದೂ-ಮುಸ್ಲಿಂ-ಕ್ರೈಸ್ತ-ಸಿಖ್‌ ಮತಗಳ ವಿಭಜಕ ಗೆರೆಗಳು. ಇದನ್ನೂ ಮೀರಿ ನೋಡಿದಾಗ ನಮಗೆ ಅಂಬೇಡ್ಕರರಲ್ಲಿ“ ಸಮಕಾಲೀನ ಭಾರತದ ಪ್ರಪ್ರಥಮ ಸ್ತ್ರೀವಾದಿ ” ಕಾಣುವುದೇ ಆದರೆ ಲಿಂಗ ತಾರತಮ್ಯದ ಹಲವು ಆಯಾಮಗಳು                               ಗೋಚರಿಸಲೇಬೇಕಲ್ಲವೇ ? ಇಲ್ಲಿ ನಮಗೆ ಮಹಿಳಾ ಸಮಾನತೆಯನ್ನು ಬಲವಾಗಿ ಪ್ರತಿಪಾದಿಸಿದ ಗಾಂಧಿ, ಠಾಗೋರ್‌, ಪೆರಿಯಾರ್‌, ಫುಲೆ ದಂಪತಿಗಳು ಎದುರಾಗುತ್ತಾರೆ.

ಮತಾಂಧತೆ-ಜಾತಿ ಶ್ರೇಷ್ಠತೆ-ಆರ್ಥಿಕ ಸಿರಿವಂತಿಕೆ ಇವೆಲ್ಲವೂ ಸಹ ಈ ದೇಶದ ತಳಸಮಾಜಕ್ಕೆ, ವಿಶೇಷವಾಗಿ ಮಹಿಳಾ ಸಂಕುಲಕ್ಕೆ ಅಪಾಯಕಾರಿಯಾಗಿಯೇ ಕಾಣುತ್ತವೆ. ಮೇಲ್ಜಾತಿಯ ಮಹಿಳೆ ಸಾಮಾಜಿಕ ಹಿತವಲಯದಲ್ಲಿದ್ದರೂ, ಆರ್ಥಿಕವಾಗಿ, ಸಾಂಸ್ಕೃತಿಕವಾಗಿ, ಧಾರ್ಮಿಕವಾಗಿ ನಿರಂತರ ತಾರತಮ್ಯ, ದೌರ್ಜನ್ಯಗಳಿಗೆ ಒಳಗಾಗುತ್ತಲೇ ಇರುವುದನ್ನು ಗಮನಿಸಬೇಕಿದೆ. ಮಹಿಳೆಯ ಆರ್ಥಿಕ-ರಾಜಕೀಯ ಸಬಲೀಕರಣ ಮಹಿಳಾ ಸಂಕುಲವನ್ನು ದೌರ್ಜನ್ಯಮುಕ್ತ ಮಾಡಲು ಸಾಧ್ಯವಾಗಿಲ್ಲ. ಅಂದರೆ ಸಾಂವಿಧಾನಿಕ ನೆಲೆಯಲ್ಲಿ ಅಂಬೇಡ್ಕರರ ಆಶಯಗಳನ್ನು ಸಾಕಾರಗೊಳಿಸುವಲ್ಲಿ ನಾವು ವಿಫಲರಾಗಿದ್ದೇವೆ ಎಂದೇ ಅರ್ಥ ಅಲ್ಲವೇ ? ಮಹಿಳಾ ಪ್ರಾತಿನಿಧ್ಯ ಎನ್ನುವುದು ಕೇವಲ ಶಾಸನಸಭೆಗಳಿಗೆ, ಪಂಚಾಯತ್‌ ಆಡಳಿತಕ್ಕೆ ಅಥವಾ ಹಿತವಲಯದ ಔದ್ಯೋಗಿಕ ನೆಲೆಗಳಿಗೆ ಸೀಮಿತವಾಗಕೂಡದು. ದಲಿತ ಚಳುವಳಿಯನ್ನೂ ಒಳಗೊಂಡಂತೆ, ಸಂವಿಧಾನವನ್ನು ಎದೆಗಪ್ಪಿಕೊಂಡು ಅನುಸರಿಸುವ ಎಡಪಂಥೀಯ, ಪ್ರಜಾಪ್ರಭುತ್ವೀಯ, ಪ್ರಗತಿಪರ ವೇದಿಕೆಗಳಲ್ಲೂ ಸಾಂಸ್ಥಿಕವಾಗಿ-ಸಾಂಘಿಕವಾಗಿ ಮಹಿಳಾ ಪ್ರಾತಿನಿಧ್ಯಕ್ಕೆ ಪ್ರಾಶಸ್ತ್ಯ ನೀಡಬೇಕಿದೆ. ಈಗ ನಾವು ಇದನ್ನು ಎಲ್ಲೂ ಸಹ ಕಾಣುತ್ತಿಲ್ಲ. ಇದು ಸಾಧ್ಯವಾದಾಗಲೇ ಆಗಲೇ ನಾವು ಅಂಬೇಡ್ಕರರ ಅನುಯಾಯಿಗಳು ಅಥವಾ ಅವರ ತತ್ವಗಳನ್ನು ಪಾಲಿಸುವವರು ಎಂಬ ನೈತಿಕತೆಯನ್ನು ಉಳಿಸಿಕೊಳ್ಳಲು ಸಾಧ್ಯ. ಈ ಕೊರತೆಯನ್ನು ನಾವು ನೀಗಬೇಕಿದೆ.

ಸಿಕ್ಕು-ಸವಾಲುಗಳನ್ನು ದಾಟುವುದು ಹೇಗೆ ?

ವರ್ತಮಾನ ಭಾರತ ಈ ಸವಾಲುಗಳನ್ನು ಗೆದ್ದು ಮುಂದೆ ಸಾಗುವುದಕ್ಕೆ ಅಡ್ಡಿಯಾಗಿರುವ ಮತದ್ವೇಷ, ಜಾತಿ ದ್ವೇಷ, ಇವೆರಡಕ್ಕೂ ಮೂಲಕ ಕಾರಣವಾದ ಶ್ರೇಷ್ಠತೆಯ ಪರಿಕಲ್ಪನೆಯನ್ನು ಹೋಗಲಾಡಿಸದೆ ಹೋದರೆ ನಮಗೆ ಅಂಬೇಡ್ಕರ್‌ ಅರ್ಥವಾಗಿಲ್ಲ ಅಥವಾ ನಾವು ಬೌದ್ಧಿಕವಾಗಿ ಅಂಬೇಡ್ಕರರನ್ನು ಅಂತರ್ಗತ ಮಾಡಿಕೊಂಡಿಲ್ಲ (ಒಳಗಿಳಿಸಿಕೊಂಡಿಲ್ಲ) ಎಂದೇ ಅರ್ಥ. ಈ ಶ್ರೇಷ್ಠತೆಯ ಹಿರಿಮೆ/ಮೇಲರಿಗೆ ಪಿತೃಪ್ರಧಾನತೆಯೊಂದಿಗೆ ಸೇರಿಕೊಂಡಾಗ, ಪುರುಷಾಧಿಪತ್ಯ ಸಹಜವಾಗಿ ಮೇಲುಗೈ ಸಾಧಿಸುತ್ತದೆ. ಅಂಬೇಡ್ಕರರರನ್ನು ವಿಮೋಚಕನ ರೂಪದಲ್ಲಿ ಕಾಣುವುದೇ ಆದರೆ ನಾವು ಈ ಪುರುಷಾಧಿಪತ್ಯದ ನೆಲೆಗಳನ್ನೂ ಭಂಜಿಸಬೇಕಾಗುತ್ತದೆ. ಅದನ್ನು ಪೋಷಿಸುವಂತಹ ಪ್ರಾಚೀನ ಆಚರಣೆಗಳನ್ನು, ಕಲ್ಪನೆಗಳನ್ನು ಮತ್ತು ತಾತ್ವಿಕ ನೆಲೆಗಳನ್ನು ಪ್ರಶ್ನಿಸುತ್ತಲೇ ನಿರಾಕರಿಸಬೇಕಾಗುತ್ತದೆ. ಅಂಬೇಡ್ಕರ್‌ ಕೇವಲ ಮೂರ್ತಿ ಭಂಜಕರಷ್ಟೇ ಅಲ್ಲ, ಸಮಾಜವನ್ನು ನಿಯಂತ್ರಿಸಿ ನಿರ್ದೇಶಿಸುವ ಎಲ್ಲ ರೀತಿಯ ಆಧಿಪತ್ಯಗಳ ಭಂಜಕರು ಎನ್ನುವುದನ್ನು ವರ್ತಮಾನ ಭಾರತ ಅರ್ಥಮಾಡಿಕೊಳ್ಳಬೇಕಿದೆ.

ಈ ದೃಷ್ಟಿಯಿಂದಲೇ ಆರಂಭದಲ್ಲಿ ನಾನು ಆರಾಧನೆ, ವೈಭವೀಕರಣ, Romanticisation ಮೊದಲಾದ ಪದಗಳನ್ನು ನಿರ್ವಚಿಸಿದ್ದೇನೆ. ನಿತ್ಯ ಬದುಕಿನ ಆಚರಣೆಗಳಲ್ಲಿ ನಾವು ಪ್ರಾಚೀನತೆಯತ್ತ ಹೊರಳಿದಷ್ಟೂ ವೈಚಾರಿಕತೆ ನಶಿಸುತ್ತಾ ಹೋಗುತ್ತದೆ. ವೈಜ್ಞಾನಿಕ ಮನೋಭಾವ ಇಲ್ಲವಾಗುತ್ತಾ ಹೋಗುತ್ತದೆ. ಶ್ರದ್ಧೆ, ನಂಬಿಕೆ ಮತ್ತು ಆಚರಣೆ ಈ ಮೂರೂ ವಿದ್ಯಮಾನಗಳನ್ನು ಪ್ರಶ್ನಾತೀತವಾಗಿಸಿದಷ್ಟೂ ಸಮಾಜ ಹಿಂದಕ್ಕೆ ಚಲಿಸುತ್ತಿರುತ್ತದೆ. ವ್ಯಕ್ತಿಗತ ನೆಲೆಯಲ್ಲಿ ಈ ಮೂರೂ ಅಂಶಗಳನ್ನು ಗೌರವಿಸುವುದೇನೂ ತಪ್ಪಲ್ಲ ಆದರೆ, ಸಮಷ್ಟಿ ನೆಲೆಯಲ್ಲಿ, ಅಂದರೆ ವಿಶಾಲ ಸಮಾಜದ ನಡುವೆ ನಿಂತು ನೋಡಿದಾಗ, ಈ ಲಕ್ಷಣಗಳು, ಸಹಮಾನವರ ಮತ್ತು ಎಲ್ಲ ಸಮುದಾಯಗಳ ಮುನ್ನಡೆಗೆ ಕಂಟಕಗಳಾಗಕೂಡದು. ಅಂಬೇಡ್ಕರರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಉಪಾಸನಾ ಸ್ವಾತಂತ್ರ್ಯದ ಪರಿಕಲ್ಪನೆಯ ಹಿಂದೆ ಇರುವುದು ಈ ಉನ್ನತ ಧ್ಯೇಯವೇ ಎನ್ನುವುದನ್ನು ನಾವು ನೆನಪಿಡಬೇಕಿದೆ.

Ravi krishna reddy:ಅನ್ಯಾಯವಾದ ಕನ್ನಡಿಗನಿಗೆ ಸಾಂತ್ವನ ಹೇಳಿದ ರವಿ ಕೃಷ್ಣಾರೆಡ್ಡಿ#pratidhvani

ವಿಮೋಚಕರಾಗಿ ಅಂಬೇಡ್ಕರ್‌

ಈ ಎಲ್ಲ ಆಯಾಮಗಳಿಂದ ನೋಡಿದಾಗ ನಮಗೆ ವರ್ತಮಾನ ಭಾರತದಲ್ಲಿ ಅಂಬೇಡ್ಕರ್‌ ಏಕೆ ಮತ್ತು ಹೇಗೆ ಪ್ರಸ್ತುತ ಎಂದು ಅರ್ಥವಾಗಲಿಕ್ಕೆ ಸಾಧ್ಯ. ಇದಕ್ಕೆ ಸಂವಿಧಾನ ಪಠಣ ಅಥವಾ ಸಂವಿಧಾನ ಪೀಠಿಕೆಯ ಪುನರುಚ್ಛಾರಗಳಷ್ಟೇ ಸಾಲದು. ಇದನ್ನು ದಾಟಿ ನಾವು ವಿಶಾಲ ಸಮಾಜದತ್ತ ದೃಷ್ಟಿ ಹಾಯಿಸಬೇಕಿದೆ. ಇದನ್ನೇ ನಾನು ಆರಂಭದಲ್ಲಿ “ಅಂಬೇಡ್ಕರರನ್ನು ಪ್ರತಿಮೆಗಳಿಂದಾಚೆ” ನೋಡಬೇಕು ಎಂದು ಹೇಳಿದ್ದು. ಚುನಾಯಿತ ಜನಪ್ರತಿನಿಧಿಗಳು ತಮ್ಮ ಸಾಂವಿಧಾನಿಕ ನೈತಿಕತೆಯನ್ನು ಕಳೆದುಕೊಳ್ಳುತ್ತಿರುವಾಗ, ಬೌದ್ಧಿಕ ನೆಲೆಗಳೆಲ್ಲವೂ , ವಿಶೇ಼ಷವಾಗಿ ಅಕಾಡೆಮಿಕ್-ವಿಶ್ವವಿದ್ಯಾಲಯಗಳು, ವಾಣಿಜ್ಯೀಕರಣಕ್ಕೊಳಗಾಗಿ ಕಾರ್ಪೋರೇಟ್‌ ಸಂಸ್ಕೃತಿಗೆ ಒಳಗಾಗುತ್ತಿರುವಾಗ, ದೇಶದ ಸಕಲ ಸಂಪತ್ತು ನಮ್ಮ ನೆಲಮೂಲದ ಸಾಮಾನ್ಯ ಜನರ ಕೈಜಾರಿ ಕಾರ್ಪೋರೇಟ್‌ ಮಾರುಕಟ್ಟೆಯ ವಶವಾಗುತ್ತಿರುವಾಗ, ಪ್ರಜಾಪ್ರಭುತ್ವದ ಮೌಲ್ಯಗಳು ಸತತವಾಗಿ ನಶಿಸುತ್ತಿರುವಾಗ, ರಾಜಕೀಯ ಎನ್ನುವುದು ಉಳ್ಳವರ ಆಡುಂಬೊಲವಾಗಿರುವಾಗ, ಅಂಬೇಡ್ಕರ್‌ ನಮಗೆ ಹೇಗೆ     ಕಾಣಬೇಕು ?

ಸಾರ್ವತ್ರಿಕ ವಿಮೋಚಕರಾಗಿ (Universal Liberator) ಕಾಣಬೇಕು ಎನ್ನುವುದು ಸಿದ್ಧ ಉತ್ತರ. ಆದರೆ ಅದಕ್ಕೂ ಮೀರಿ ಎಲ್ಲರನ್ನೂ ಒಳಗೊಳ್ಳುವ, ಎಲ್ಲ ಚಿಂತನೆಗಳನ್ನೂ ಆದರಿಸುವ ಮತ್ತು ಸಮ ಸಮಾಜವನ್ನು ತಳಮಟ್ಟದಿಂದಲೇ ಸಾಕಾರಗೊಳಿಸುವ ಒಂದು ಸಾಂವಿಧಾನಿಕ ಶಕ್ತಿಯಾಗಿ ಕಾಣಬೇಕಲ್ಲವೇ ? ಇದಕ್ಕಾಗಿ ವರ್ತಮಾನ ಭಾರತದ ಯುವ ತಲೆಮಾರು ಅಂಬೇಡ್ಕರರನ್ನು ಓದಬೇಕು, ಅವರ ಚಿಂತನೆಗಳನ್ನು ಒಳಗಿಳಿಸಿಕೊಳ್ಳಬೇಕು, ಅವರ ಚಿಂತನೆಗಳ ವಾಹಕ ಶಕ್ತಿಯಾಗಬೇಕು, ಭವಿಷ್ಯದ ತಲೆಮಾರಿಗಾಗಿ ಈ ಉದಾತ್ತ ಚಿಂತನೆಗಳನ್ನು ಕಾಪಿಡುವ ಭದ್ರ ಕೋಟೆಗಳಾಗಬೇಕು. ಇದನ್ನು ಆಗುಮಾಡುವ ಜವಾಬ್ದಾರಿ ನಮ್ಮಂತಹ ಹಿರಿಯ ತಲೆಮಾರಿನ ಮೇಲಿದೆ, ಮುಂದಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ಮಿಲೆನಿಯಂ ಮಕ್ಕಳ ಮೇಲಿದೆ. ರಥಾರೂಢ ಅಂಬೇಡ್ಕರರಿಗಿಂತೂ ನಮಗೆ ಮುಖ್ಯವಾಗಿ ಬೇಕಿರುವುದು ಗ್ರಂಥಾಲಯದೊಳಗಿನ ಅಂಬೇಡ್ಕರ್‌, ತಳಸಮಾಜದ ನೊಂದ ಜನರ ನಡುವೆ ಅಮೂರ್ತ ನೆಲೆಯಲ್ಲಿ ನಿಂತ ಅಂಬೇಡ್ಕರ್ ಮತ್ತು ಶೋಷಣೆಯ ಮೂಲ ಅಡಿಪಾಯವನ್ನೇ ಕಿತ್ತೊಗೆಯುವ ಅಂಬೇಡ್ಕರ್.‌

ಈ ಅಂಬೇಡ್ಕರರನ್ನು ಗಾಂಧಿ, ಮಾರ್ಕ್ಸ್‌, ಲೋಹಿಯಾ, ಪೆರಿಯಾರ್‌, ಠಾಗೋರ್‌, ಫುಲೆ ದಂಪತಿಗಳೊಂದಿಗೆ ಒಟ್ಟಿಗೆ ಕರೆದೊಯ್ಯುವ ಸಂಕಲ್ಪ ಮಾಡಬೇಕಿದೆ. ನೊಂದವರ ದಮನಿತರ ಕೇರಿಗಳಲ್ಲಿ ರಥಬೀದಿಗಳನ್ನು ಕಟ್ಟುವ ಬದಲು, ಅರಿವು-ಪ್ರಜ್ಞೆ ಮೂಡಿಸುವ ಗ್ರಂಥಗಳ ಕಣಜಗಳನ್ನಾಗಿ ಪರಿವರ್ತಿಸಲು ಸಂಕಲ್ಪ ಮಾಡಬೇಕಿದೆ. ಆಗ ಮಾತ್ರ ನಾವು ಆಚರಿಸುತ್ತಿರುವ                            ʼ ಅಂಬೇಡ್ಕರ್‌ ಜಯಂತಿ ʼ ಸಾರ್ಥಕವಾಗುತ್ತದೆ.

ಎಲ್ಲರಿಗೂ ಮತ್ತೊಮ್ಮೆ ಅಂಬೇಡ್ಕರ್‌ ಜಯಂತಿಯ ಶುಭಾಶಯಗಳು.

-೦-೦-೦-೦-

Tags: 10 lines on dr br ambedkar10 lines on dr br ambedkar in englishAmbedkarambedkar jayantibabasaheb ambedkarbhimrao ambedkarBR AmbedkarDr AmbedkarDr B R Ambedkardr babasaheb ambedkardr bhimrao ambedkardr bhimrao ambedkar 10 lines in englishdr bhimrao ambedkar essay in englishdr br ambedkaressay on bhimrao ambedkaressay on dr bhimrao ambedkaressay on dr bhimrao ambedkar in englishessay on dr br ambedkar in english
Previous Post

ಕ್ರಿಕೆಟ್‌ ಲೋಕದ ಕಿಂಗ್‌ ವಿರಾಟ್‌ ಕೊಹ್ಲಿ ಬಯೋಪಿಕ್‌ನಲ್ಲಿ ಸಿಂಬು..?

Next Post

ಇಂದು ಬೆಂಗಳೂರಲ್ಲಿ RCB – CSK ಕಾಳಗ !ಚೆನ್ನೈಗೆ ಪಂದ್ಯ ಗೆದ್ದರೂ ಸಿಗಲ್ಲ ಪ್ಲೇ ಆಫ್ ಎಂಟ್ರಿ ! 

Related Posts

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ
Uncategorized

ರಾಜ್ಯ ಭ್ರಷ್ಟಾಚಾರ, ಕಮೀಶನ್ ಹಾವಳಿಯಿಂದ ತತ್ತರಿಸುತ್ತಿದೆ; ಹೆಚ್.ಡಿ. ಕುಮಾರಸ್ವಾಮಿ

by ಪ್ರತಿಧ್ವನಿ
June 20, 2025
0

ಬಿ.ಆರ್. ಪಾಟೀಲ್, ಕೃಷ್ಣಭೈರೇಗೌಡ ಇದ್ದಿದ್ದನ್ನೇ ಹೇಳಿದ್ದಾರೆ ಎಂದು ಕಿಡಿ ಡಿಕೆಶಿಗೆ ಮನುಷ್ಯತ್ವದ ದಾರಿದ್ರ್ಯ ಇದೆ; ಆ ವ್ಯಕ್ತಿಯಿಂದ ಬಟ್ಟೆ ಹೊಲಿಸಿಕೊಳ್ಳುವ ದಾರಿದ್ರ್ಯ ನನಗಿಲ್ಲ ಎಂದು ಕಿಡಿ ಭೂಮಿ...

Read moreDetails
ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

ಕೆಪಿಟಿಸಿಎಲ್ ನೌಕರರ ಸಂಘದ ವಜ್ರಮಹೋತ್ಸವ ಸಮಾರಂಭ*

June 18, 2025

ಮೈಷುಗರ್ ಪ್ರೌಢಶಾಲೆಯ ಅಮೃತ ಮಹೋತ್ಸವ ಕಾರ್ಯಕ್ರಮದ ನೇರಪ್ರಸಾರ

June 7, 2025
ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

ಕೆಲವೇ ಕ್ಷಣದಲ್ಲಿ ಬೆಂಗಳೂರಿಗೆ RCB ಬಾಯ್ಸ್ – ಓಪನ್ ವಿಕ್ಟರಿ ಪರೇಡ್ ಕ್ಯಾನ್ಸಲ್ ಆಗಿದ್ದೇಕೆ .?! 

June 4, 2025

ನಿವೃತ್ತ ಯೋಧರಿಂದ ಬಿಡುಗಡೆಯಾಯಿತು ಬಹು ನಿರೀಕ್ಷಿತ “ಕುಲದಲ್ಲಿ ಕೀಳ್ಯಾವುದೋ” ಚಿತ್ರದ ಟ್ರೇಲರ್ .

May 11, 2025
Next Post
ಲೀಗ್‌ ಹಂತದಲ್ಲೇ CSK ಔಟ್..?! ಪ್ಲೇಆಫ್ ಎಂಟ್ರಿ ಕನಸು ನಿಜಕ್ಕೂ ಸಾಧ್ಯನಾ..?! 

ಇಂದು ಬೆಂಗಳೂರಲ್ಲಿ RCB - CSK ಕಾಳಗ !ಚೆನ್ನೈಗೆ ಪಂದ್ಯ ಗೆದ್ದರೂ ಸಿಗಲ್ಲ ಪ್ಲೇ ಆಫ್ ಎಂಟ್ರಿ ! 

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ
Top Story

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

by ಪ್ರತಿಧ್ವನಿ
July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌
Top Story

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

by ಪ್ರತಿಧ್ವನಿ
July 1, 2025
ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 
Top Story

ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ.. ಅವನನ್ನು ಸೋನಿಯಾಗೆ ಭೇಟಿ ಮಾಡಿದಿದ್ದೇ ನಾನು : ಬಿ.ಆರ್ ಪಾಟೀಲ್ 

by Chetan
July 1, 2025
ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ
Top Story

ಸ್ಮಾರ್ಟ್‌ ಸಿಟಿ ಎಂಬ ಕನಸು ಮತ್ತು ವಾಸ್ತವ

by ನಾ ದಿವಾಕರ
July 1, 2025
ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
Top Story

ದುಬೈನಲ್ಲಿ ರಾಸ್ ಅಲ್ ಖೈಮಾಹ್‌ʼದ ಆಡಳಿತಗಾರರನ್ನು ಭೇಟಿಯಾದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ

by ಪ್ರತಿಧ್ವನಿ
July 1, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

ಶಿಕ್ಷಕರ ಸಮಸ್ಯೆಗಳ ಪರಿಹಾರಕ್ಕೆ ಮತ್ತು ಶೈಕ್ಷಣಿಕ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮ

July 1, 2025
ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರದಿಂದ ಕ್ರಾಂತಿಕಾರಕ ಯೋಜನೆ ಜಾರಿ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌

July 1, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada