ಸಾಂಕ್ರಾಮಿಕ ರೋಗದ ಮೂರನೆ ಅಲೆಯ ಕುರಿತು ಆತಂಕದೊಂದಿಗೆ ಕರೋನಾ ಎರಡನೇ ಅಲೆಯಿಂದ ಭಾರತ ನಿಧಾನಕ್ಕೆ ಚೇತರಿಸುತ್ತಿದೆ. ಅನೇಕ ರಾಜ್ಯಗಳು ಸಂಭಾವ್ಯ ಮೂರನೆ ಅಲೆಯಿಂದ ತಪ್ಪಿಸಿಕೊಳ್ಳಲು, ಅಪಾಯದ ಪ್ರಮಾಣವನ್ನು ತಗ್ಗಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ.
ಮೊದಲನೆ ಹಾಗೂ ಎರಡನೇ ಅಲೆಗೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸದ ಕಾರಣ ತತ್ತರಿಸಿದ ಸರ್ಕಾರ, ಮತ್ತೊಮ್ಮೆ ಇದೇ ತಪ್ಪು ಮಾಡದಿರುವುದು ಬುದ್ದಿವಂತಿಕೆ. ಕೇರಳ ಸರ್ಕಾರ ಅಂತಹ ಮುನ್ನೆಚ್ಚರಿಕೆಯನ್ನು ವಹಿಸುತ್ತಿರುವುದು ಶ್ಲಾಘನೀಯ.

ಭಾರತದಲ್ಲಿ ಮೊದಲ ಕರೋನಾ ಪ್ರಕರಣ ಕಾಣಿಸಿಕೊಂಡ ಕೇರಳ, ಇದೀಗ ಮೂರನೆ ಅಲೆ ಎದುರಿಸಲು ತನ್ನನ್ನು ತಾನು ಸನ್ನದ್ದುಗೊಳಿಸುತ್ತಿದೆ. ಮುಚ್ಚಲ್ಪಟ್ಟಿದ್ದ ಕಾರ್ಖಾನೆಯೊಂದನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಡಿಸಿದೆ.
ಈ ಕುರಿತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಟ್ವಿಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಪಾಲಕ್ಕಾಡ್ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸದೆ ಇರುವ ಕೊಕಾ-ಕೊಲಾ ಘಟಕವನ್ನು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡುಗೊಳಿಸಲಾಗಿದೆ ಎಂದಿದ್ದಾರೆ.
1.1 ಕೋಟಿ ರುಪಾಯಿ ವೆಚ್ಚದಲ್ಲಿ ತಯಾರಿಸಿದ ಈ ಘಟಕದಲ್ಲಿ 550 ಹಾಸಿಗೆಗಳನ್ನು ಹಾಕಲಾಗಿದ್ದು, ಅದರಲ್ಲಿ 100 ಆಕ್ಸಿಜನ್ ಸಹಿತ ಹಾಸಿಗೆಗಳಿರುತ್ತವೆ. 50 ಐಸಿಯು ಬೆಡ್‌ಗಳು ಹಾಗೂ ವೆಂಟಿಲೇಟರ್ ವ್ಯವಸ್ಥೆಯ 20 ಬೆಡ್‌ಗಳನ್ನು ನಿರ್ಮಿಸಲಾಗಿದೆ. ಕೇರಳವು ಮೂರನೇ ಅಲೆ ಎದುರಿಸಲು ಸನ್ನದ್ದವಾಗಿದೆ ಎಂದು ವಿಜಯನ್ ತಿಳಿಸಿದ್ದಾರೆ.

2000ದ ಆರಂಭದ ಹೊತ್ತಿನಲ್ಲಿ ಈ ಕೊಕ-ಕೊಲಾ ಘಟಕವನ್ನು ಸ್ಥಳೀಯ ನಾಗರಿಕರು ಪ್ರತಿಭಟನೆ ನಡೆಸಿ ಮುಚ್ಚುವಂತೆ ಮಾಡಿದ್ದರು. ಇಲ್ಲಿ ಘಟಕ ಆರಂಭಿಸಿದಂದಿನಿಂದ, ಸ್ಥಳೀಯ ಪ್ರದೇಶದ ಬಾವಿ ನೀರುಗಳೆಲ್ಲಾ ಒಣಗಿ ಹೋಗಿದ್ದು, ನೀರು ವಿಷಕಾರಿಯಾಗಿದೆಯೆಂದು ಆರೋಪಿಸಿ ಬೃಹತ್ ಪ್ರತಿಭಟನೆಗಳ ಸರಣಿಯನ್ನು ನಡೆಸಲಾಗಿತ್ತು. ಪ್ರತಿಭಟನೆಯ ತೀವ್ರತೆಗೆ ಘಟಕವನ್ನು ಸ್ಥಗಿತಗೊಳಿಸಲಾಗಿತ್ತು.
ತೀವ್ರ ಒತ್ತಡದ ನಡುವೆ ಸ್ಥಳೀಯ ಪಂಚಾಯತ್ ಸ್ಥಾವರ ಪರವಾನಗಿಯನ್ನು ಹಿಂತೆಗೆದುಕೊಂಡಿತು. ಇದರ ವಿರುದ್ಧದ ಸುದೀರ್ಘ ಕಾನೂನು ಹೋರಾಟದ ನಂತರ, 2018 ರಲ್ಲಿ ಕಂಪನಿಯು ಅಧಿಕೃತವಾಗಿ ಕಾರ್ಖಾನೆಯನ್ನು ಮುಚ್ಚುವುದಾಗಿ ಘೋಷಿಸಿತ್ತು.





