ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಜೀವನ, ಹೋರಾಟ ಮತ್ತು ರಾಜಕೀಯ ಪಯಣವನ್ನು ಒಳಗೊಂಡಿರುವ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಇದೀಗ ಈ ಪುಸ್ತಕವನ್ನು ಆಧರಿಸಿ ಸಿನಿಮಾ ನಿರ್ಮಿಸಲು ತೆಲಂಗಾಣ ಕಾಂಗ್ರೆಸ್ ಮುಂದಾಗಿದೆ. ಈ ಕುರಿತು ತೆಲಂಗಾಣ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷ ಜಗ್ಗಾ ರೆಡ್ಡಿ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಸಂಗಾರೆಡ್ಡಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಜಗ್ಗಾ ರೆಡ್ಡಿ, ಸೋನಿಯಾ ಗಾಂಧಿ ಅವರ ಜೀವನವನ್ನು ಸಿನಿಮಾ ರೂಪದಲ್ಲಿ ಜನರ ಮುಂದಿಡುವ ಉದ್ದೇಶವಿದೆ ಎಂದು ತಿಳಿಸಿದ್ದಾರೆ. ಚಿತ್ರ ನಿರ್ಮಾಣಕ್ಕೆ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಆರ್ಥಿಕವಾಗಿ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಮಾತನಾಡಿದ ಸಂಗಾರೆಡ್ಡಿ ಕ್ಷೇತ್ರದ ಕಾಂಗ್ರೆಸ್ ಸಂಚಾಲಕ ಜೂಲಕಂತಿ ಆಂಜನೇಯಲು, ಸೋನಿಯಾ ಗಾಂಧಿ ಅವರ ಜೀವನಾಧಾರಿತ ಸಿನಿಮಾ ನಿರ್ಮಾಣಕ್ಕಾಗಿ ₹2 ಕೋಟಿ ಹಣದ ಕೊಡುಗೆ ನೀಡುವುದಾಗಿ ಘೋಷಿಸಿದ್ದಾರೆ. ಚಿತ್ರ ನಿರ್ಮಾಣದ ಸಿದ್ಧತೆಗಳನ್ನು ಕೈಗೊಳ್ಳಲು 50 ಸದಸ್ಯರ ಸಮಿತಿಯನ್ನು ರಚಿಸುವಂತೆ ಜಗ್ಗಾ ರೆಡ್ಡಿ ಸಲಹೆ ನೀಡಿದ್ದಾರೆ.
ಈ ಸಮಿತಿಯ ಜವಾಬ್ದಾರಿಯನ್ನು ಗಾಂಧಿ ಭವನದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹರಿಪ್ರಸಾದ್ ವಹಿಸಿಕೊಳ್ಳಲಿದ್ದಾರೆ. ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ನಿಧಿ ಸಂಗ್ರಹಕ್ಕೆ ಮುಂದಾಗಬೇಕು ಎಂದು ಕರೆ ನೀಡಿದ ಜಗ್ಗಾ ರೆಡ್ಡಿ, ಚುನಾವಣೆಗೆ ಖರ್ಚು ಮಾಡುವ ರೀತಿಯಲ್ಲೇ ಈ ಚಿತ್ರ ನಿರ್ಮಾಣಕ್ಕೂ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ. ಒಟ್ಟಾರೆ ಬಜೆಟ್ ಸಿದ್ಧಪಡಿಸಿ ಉತ್ತಮ ನಿರ್ದೇಶಕರನ್ನು ಆಯ್ಕೆ ಮಾಡುವ ಉದ್ದೇಶವನ್ನೂ ಅವರು ವ್ಯಕ್ತಪಡಿಸಿದ್ದಾರೆ.

ಸಿಎಂ ರೇವಂತ್ ರೆಡ್ಡಿ ಸಮ್ಮುಖದಲ್ಲಿ ಚಿತ್ರೀಕರಣಕ್ಕೆ ಚಾಲನೆ?
ಚಿತ್ರ ನಿರ್ಮಾಣದ ಪೂರ್ವಸಿದ್ಧತೆಗಳು ಪೂರ್ಣಗೊಂಡ ಬಳಿಕ ಮುಖ್ಯಮಂತ್ರಿ ರೇವಂತ್ ರೆಡ್ಡಿ ಹಾಗೂ ತೆಲಂಗಾಣ ಕಾಂಗ್ರೆಸ್ ಅಧ್ಯಕ್ಷ ಮಹೇಶ್ ಕುಮಾರ್ ಗೌಡ್ ಅವರನ್ನು ಆಹ್ವಾನಿಸಿ ಚಿತ್ರೀಕರಣಕ್ಕೆ ಚಾಲನೆ ನೀಡಲು ಯೋಜಿಸಲಾಗಿದೆ ಎಂದು ಜಗ್ಗಾ ರೆಡ್ಡಿ ತಿಳಿಸಿದ್ದಾರೆ.ಇದರ ಜೊತೆಗೆ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆಯ ಪ್ರತಿಗಳನ್ನು ತರಿಸಿ ಪಕ್ಷದ ಕಾರ್ಯಕರ್ತರಿಗೆ ಹಂಚಲಾಗುವುದು. ಪುಸ್ತಕದ ಮೂಲಕ ಅವರ ಜೀವನದ ವಿವಿಧ ಹಂತಗಳು, ಅನುಭವಗಳು ಮತ್ತು ಹೋರಾಟಗಳನ್ನು ಕಾರ್ಯಕರ್ತರು ತಿಳಿದುಕೊಳ್ಳಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಸೋನಿಯಾ ಗಾಂಧಿ ಅವರ ಜೀವನದಲ್ಲಿ ಎದುರಾದ ಕೌಟುಂಬಿಕ ದುರಂತಗಳು, ವೈಯಕ್ತಿಕ ಸವಾಲುಗಳು ಹಾಗೂ ರಾಜಕೀಯ ಪಯಣವನ್ನು ಚಿತ್ರದಲ್ಲಿ ಕಟ್ಟಿಕೊಡುವ ಉದ್ದೇಶವಿದೆ. ಇಂದಿರಾ ಗಾಂಧಿಯವರ ಸೊಸೆಯಾಗಿ, ರಾಜೀವ್ ಗಾಂಧಿಯವರ ಪತ್ನಿಯಾಗಿ ಹಾಗೂ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ತಾಯಿಯಾಗಿ ಅವರು ಜೀವನದ ವಿವಿಧ ಹಂತಗಳಲ್ಲಿ ಎದುರಿಸಿದ ಅನುಭವಗಳು ಚಿತ್ರದಲ್ಲಿ ಪ್ರಮುಖವಾಗಿ ಮೂಡಿಬರಲಿವೆ.
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಹತ್ಯೆಗಳ ಬಳಿಕ ಕುಟುಂಬ ಎದುರಿಸಿದ ಸಂಕಷ್ಟಗಳು, ಮಕ್ಕಳನ್ನು ಬೆಳೆಸಿದ ರೀತಿ, ರಾಜಕೀಯ ಪ್ರವೇಶ ಹಾಗೂ ಕಾಂಗ್ರೆಸ್ ಪಕ್ಷದ ನಾಯಕತ್ವದಲ್ಲಿ ವಹಿಸಿದ ಪಾತ್ರ ಸೇರಿದಂತೆ ಹಲವು ಪ್ರಮುಖ ಘಟನೆಗಳನ್ನು ಸಿನಿಮಾ ಒಳಗೊಂಡಿರಲಿದೆ ಎಂದು ಜಗ್ಗಾ ರೆಡ್ಡಿ ತಿಳಿಸಿದ್ದಾರೆ.ಪುಸ್ತಕದ ಆಧಾರದಲ್ಲಿ ಸಿನಿಮಾ ನಿರ್ಮಾಣ ಮಾಡುವ ತೆಲಂಗಾಣ ಕಾಂಗ್ರೆಸ್‌ನ ಈ ಯೋಜನೆ ಇದೀಗ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಕುತೂಹಲ ಮೂಡಿಸಿದೆ.





