ಮೈಸೂರು: ಹೊಸ ವರ್ಷಕ್ಕೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ತಿರುಪತಿ ಮಾದರಿಯ ಲಡ್ಡು ತಯಾರಾಗುತ್ತಿದೆ. ಮೈಸೂರಿನ ವಿಜಯನಗರದಲ್ಲಿರುವ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗಾಗಿ ಲಾಡುಗಳನ್ನು ತಯಾರಿ ಮಾಡಲಾಗುತ್ತಿದೆ. ವಿಶೇಷವಾಗಿ ತಿರುಪತಿ ಮಾದರಿಯಲ್ಲಿ 2 ಕೆ.ಜಿ. ತೂಕದ ಲಾಡುಗಳನ್ನ ಸಿದ್ಧಪಡಿಸಲಾಗ್ತಿದ್ದು, ಸುಮಾರು 60ಕ್ಕೂ ಹೆಚ್ಚು ಬಾಣಸಿಗರಿಂದ ಲಾಡು ತಯಾರಿ ನಡೆದಿದೆ.
ಜನವರಿ 1ರಂದು ದೇವಾಲಯದಲ್ಲಿ ಲಾಡು ವಿತರಣೆ ನಡೆಯಲಿದೆ. ಹೊಸ ವರ್ಷದಂದು ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ದೇವಾಲಯಕ್ಕೆ ಬರುವ ಭಕ್ತರು ಕೋವಿಡ್ ನಿಯಮ ಪಾಲಿಸಬೇಕು ಎಂದು ಆಡಳಿತ ಮಂಡಳಿ ಮನವಿ ಮಾಡಿದೆ. ಎಲ್ಲರಿಗೂ ಜನವರಿ 1 ಇಡೀ ದಿನ ಲಾಡು ವಿತರಿಸಲಾಗುತ್ತದೆ.ಇದಕ್ಕಾಗಿ 60ಕ್ಕೂ ಹೆಚ್ಚು ಬಾಣಸಿಗರಿಂದ ಲಡ್ಡು ತಯಾರು ಮಾಡಲಾಗ್ತಿದೆ. ಕಳೆದ 28 ವರ್ಷದಿಂದ ನಿರಂತರವಾಗಿ ಲಾಡು ಹಂಚುವ ಕಾರ್ಯಕ್ರಮ ಮಾಡಲಾಗುತ್ತಿದ್ದು, ಯಾವುದೇ ಭೇದಭಾವ ಇಲ್ಲದೆ ಎಲ್ಲರಿಗೂ ಹಂಚಲಾಗುತ್ತದೆ.
ದೇವಸ್ಥಾನದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಸಿದ್ದತಾ ಕಾರ್ಯ ನೆರವೇರುತ್ತಿದೆ. ಹೊಸ ವರ್ಷದಂದು ಮುಂಜಾನೆ ಸುಮಾರು 4 ಗಂಟೆಗೆ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಪ್ರಸಾದವಾಗಿ ಲಡ್ಡು ವಿತರಣೆ ಆರಂಭವಾಗಲಿದೆ. 2 ಕೆ.ಜಿ. ತೂಕದ 10 ಸಾವಿರ ಲಡ್ಡುಗಳು, 150 ಗ್ರಾಂ ತೂಕದ ಎರಡು ಲಕ್ಷ ಲಾಡುಗಳು ತಯಾರಾಗುತ್ತಿದೆ.