ಬೆಂಗಳೂರು : ಜೂ.1: ಮುಂಬರುವ ಬಿಬಿಎಂಪಿ ಚುನಾವಣೆಗೆ ಜೆಡಿಎಸ್ ಪಕ್ಷವನ್ನು ಸಜ್ಜುಗೊಳಿಸುವ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬೆಂಗಳೂರು ಮಹಾನಗರದ ಎಲ್ಲಾ 28 ಕ್ಷೇತ್ರಗಳ ಪ್ರಮುಖ ಮುಖಂಡರ ಜತೆ ಇಂದು ಮಹತ್ವದ ಸಮಾಲೋಚನೆ ನಡೆಸಿದರು.
ಬಿಡದಿಯ ತೋಟದಲ್ಲಿ ಕರೆದಿದ್ದ ಈ ಸಭೆಯಲ್ಲಿ ಪಕ್ಷ ಸಂಘಟನೆ ಹಾಗೂ ಪಾಲಿಕೆ ಚುನಾವಣೆಯ ಬಗ್ಗೆ ಮಾಜಿ ಮುಖ್ಯಮಂತ್ರಿ ಅವರು ಮುಖಂಡರಿಗೆ ಕೆಲ ಗಂಭೀರ ಸೂಚನೆಗಳನ್ನು ನೀಡಿದರು.
ವಿಧಾನಸಭೆ ಚುನಾವಣೆಯ ಸೋಲಿನ ಕಾರಣಗಳನ್ನು ಮುಂದಿಟ್ಟುಕೊಂಡು ಕೆಲ ಮುಖಂಡರನ್ನು ತರಾಟೆಗೆ ತೆಗೆದುಕೊಂಡ ಮಾಜಿ ಮುಖ್ಯಮಂತ್ರಿಗಳು; ಗುಂಪುಗಾರಿಕೆ ಬೇಡ, ಕೆಲಸ ಮಾಡುವವರಷ್ಟೇ ಬೇಕು, ಯಾವುದೇ ಕಾರಣಕ್ಕೂ ಗುಂಪುಗಾರಿಕೆ ಸಹಿಸುವ ಪ್ರಶ್ನೆ ಇಲ್ಲ. ಯಾರು ಯಾರನ್ನೂ ಮೆಚ್ಚಿಸುವ ರೀತಿಯಲ್ಲಿ ಕೆಲಸ ಮಾಡುವ ಅಗತ್ಯವಿಲ್ಲ, ಪಕ್ಷವನ್ನು ಇನ್ನೂ ಅಧೋಗತಿಗೆ ತಳ್ಳುವುದು ಬೇಡ. ಪಕ್ಷದ ನೆಲೆ ಇರುವ ವಾರ್ಡುಗಳಲ್ಲಿ ಉತ್ತಮವಾಗಿ ಕೆಲಸ ಮಾಡಿ. ಜನರ ಸಂಪರ್ಕದಲ್ಲಿರಿ ಹಾಗೂ ಅವರಲ್ಲಿ ವಿಶ್ವಾಸ ಮೂಡಿಸಿ ಎಂದು ತಾಕೀತು ಮಾಡಿದರು.
ಪ್ರತಿ ವಾರ್ಡಿನ, ಪ್ರತಿ ಮತಗಟ್ಟೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಬೆಳೆಸಿ, ಜನರು ಹೆಚ್ಚೆಚ್ಚು ಪಕ್ಷಕ್ಕೆ ಸೇರಿಸಿಕೊಳ್ಳುವ ವಾತಾವರಣವನ್ನು ಸೃಷ್ಟಿ ಮಾಡಿ. ಜನರಲ್ಲಿ ಪಕ್ಷದ ಪರ ಒಲವು ವ್ಯಕ್ತವಾಗುವ ರೀತಿಯಲ್ಲಿ ಕೆಲಸ ಮಾಡಿ ಎಂದು ಮಾಜಿ ಮುಖ್ಯಮಂತ್ರಿಗಳು ಮುಖಂಡರಿಗೆ ಕಿವಿಮಾತು ಹೇಳಿದರು.
ಯಾವುದೇ ಕ್ಷಣದಲ್ಲಿ ಬಿಬಿಎಂಪಿ ಚುನಾವಣೆ ಘೋಷಣೆ ಆಗುವ ಸಾಧ್ಯತೆ ಇದೆ. ಚುನಾವಣೆ ಯಾವಾಗ ಬೇಕಾದರೂ ಬರಲಿ. ನಮ್ಮ ಸಿದ್ಧತೆಗಳನ್ನು ನಾವು ಮಾಡಿಕೊಳ್ಳೋಣ. ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದೇವೆ ಎನ್ನುವ ಅಧೈರ್ಯ ಬೇಡ. ಅನೇಕ ಸೋಲುಗಳನ್ನು ದಾಟಿಕೊಂಡು ಜೆಡಿಎಸ್ ಪಕ್ಷ ಫೀನಿಕ್ಸ್ ಪಕ್ಷಿಯಂತೆ ಮೇಲೆದ್ದು ಬಂದಿದೆ ಎಂದು ಮುಖಂಡರಿಗೆ ಸ್ಥೈರ್ಯ ತುಂಬಿದರು.
ಪಕ್ಷ ಸಂಘಟನೆ ದೃಷ್ಟಿಯಿಂದ ಕಠಿಣ ಸೂಚನೆಗಳನ್ನು ಕೊಟ್ಟ ಕುಮಾರಸ್ವಾಮಿ ಅವರು, ವಿಧಾನಸಭೆ ಚುನಾವಣೆ ವೈಫಲ್ಯಗಳಿಂದ ಪಾಠ ಕಲಿಯುವಂತೆ ಹೇಳಿದರಲ್ಲದೆ, ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಬೇಡಿ ಎಂದು ಎಚ್ಚರಿಕೆ ನೀಡಿದರು. ವಿಧಾನ ಪರಿಷತ್ ಸದಸ್ಯ ಕೆ.ಎನ್.ತಿಪ್ಪೇಸ್ವಾಮಿ, ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ 28 ವಿಧಾನಸಭೆ ಕ್ಷೇತ್ರಗಳ ಪ್ರಮುಖ ಮುಖಂಡರು ಸಭೆಯಲ್ಲಿ ಭಾಗಿಯಾಗಿದ್ದರು.